ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿರುವ ಕಾರಣಕ್ಕೆ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಯಾವುದೇ ಲಾಕ್ಡೌನ್ ಅಥವಾ ನೈಟ್ ಕರ್ಫ್ಯೂ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ ಥಿಯೇಟರ್ಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 6-9ನೇ ತರಗತಿಗಳು ಬಂದ್, ಜಿಮ್, ಈಜುಕೊಳ ಬಂದ್ ಮಾಡಲಾಗಿದೆ. ಜೊತೆಗೆ ಸಾಮಾಜಿಕ ಅಥವಾ ಧಾರ್ಮಿಕ ಸಮಾರಂಭಗಳು, ರಾಜಕೀಯ ಸಭೆ ಅಥವಾ ರ್ಯಾಲಿಗಳು ಸೇರುವುದಾದರೆ ಅತೀ ಕಡಿಮೆ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಸರ್ಕಾರ ಆದೇಶಿಸಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಬಿಬಿಎಂಪಿ ಸೇರಿದಂತೆ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳ ಸಿನಿಮಾ ಹಾಲ್ಗಳಲ್ಲಿ ಶೇ.50 ರಷ್ಟು ಮಾತ್ರ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರವು ಏಕಾಏಕಿ ಸಿನಿಮಾ ಥಿಯೇಟರ್ಗಲ್ಲಿ ಶೇ.50 ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆ ಮಾಡಿರುವುದಕ್ಕೆ ಸ್ಯಾಂಡಲ್ವುಡ್ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಸ್ಟಾರ್ ನಟರ ಸಾಲು-ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ನಿನ್ನೆ ತಾನೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿದೆ. ಈಗ ಸರ್ಕಾರ ಏಕಾಏಕಿ ಶೇ.50ರಷ್ಟು ಸೀಟಿಂಗ್ ವ್ಯವಸ್ಥೆ ಮಾಡಿರುವುದರಿಂದ ಸಿನಿಮಾ ತಂಡ ಆಕ್ಷೇಪ ವ್ಯಕ್ತಪಡಿಸಿದೆ.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಪವರ್ ಸ್ಟಾರ್ ರಾಜ್ಕುಮಾರ್, ಸರ್ಕಾರದ ಏಕಾಏಕಿ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ನಿನ್ನೆ ತಾನೆ ಯುವರತ್ನ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾಗೆ ಈಗಾಗಲೇ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಈಗ ಇದ್ದಕ್ಕಿದ್ದ ಹಾಗೆ ಸರ್ಕಾರ ಈ ರೀತಿ ಹೊಸ ನಿಯಮ ಜಾರಿಗೆ ತಂದರೆ ಏನು ಮಾಡೋದು ಎಂದು ಪ್ರಶ್ನಿಸಿದ್ದಾರೆ.
Coronavirus Guidelines: ಥಿಯೇಟರ್ಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್; ಜಿಮ್, ಈಜುಕೊಳ ಬಂದ್
ಸಿನಿಮಾ ನೋಡಲು ಬರುವ ಎಲ್ಲರೂ ಸಹ ಕೊರೋನಾ ನಿಯಮಗಳನ್ನು ಅನುಸರಿಸುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ, ಸ್ಯಾನಿಟೈಜರ್ ಬಳಸುತ್ತಿದ್ದಾರೆ. ನಿನ್ನೆ, ಇವತ್ತು ಸಿನಿಮಾ ಥಿಯೇಟರ್ಗೆ ಮಕ್ಕಳು ಹಾಗೂ ಹಿರಿಯರನ್ನು ಕರೆದುಕೊಂಡು ಬಂದಿದ್ದರು. ಮಾಸ್ಕ್ ಧರಿಸಿಯೇ ಸಿನಿಮಾ ನೋಡ್ತಿದ್ದಾರೆ. ಹೀಗಾಗಿ ಸರ್ಕಾರ ದಯವಿಟ್ಟು ಶೆ.50ರಷ್ಟು ಮಾತ್ರ ಸೀಟಿಂಗ್ ವ್ಯವಸ್ಥೆಯನ್ನು ತೆಗೆದುಹಾಕಬೇಕು ಎಂದು ಮನವಿ ಮಾಡಿದ್ದಾರೆ.
ಮೊದಲನೆಯದಾಗಿ ನಾವು ಸಿಟಿಜನ್ ಆಗಿ ಮಾತನಾಡಬೇಕು. ಕನಿಷ್ಟ ನಮಗೆ ಮೂರ್ನಾಲ್ಕು ದಿನ ಮುಂಚಿತವಾಗಿ ಆದ್ರೂ ಮಾಹಿತಿ ನೀಡಬೇಕಿತ್ತು. ಈಗಾಗಲೇ ಭಾನುವಾರದ ತನಕ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಈಗ ಈ ರೀತಿ ನಿರ್ಧಾರಗಳನ್ನ ತೆಗೆದುಕೊಂಡಾಗ ನಮಗೆ ಕಷ್ಟ ಆಗುತ್ತೆ. ನಮಗೂ ಕೂಡ ಸರ್ಕಾರದ ನಿರ್ಧಾರದಿಂದ ಶಾಕ್ ಆಗಿದೆ ಎಂದರು.
ಮೊನ್ನೆ ಮೊನ್ನೆ ಮೀಟಿಂಗ್ ನಡೆದ ಸಭೆ ಬಳಿಕ ಕೂಡ ಯಾವುದೇ ತೀರ್ಮಾನ ಮಾಡಿರಲಿಲ್ಲ. ಹೀಗಾಗಿ ನಾವು ಸಿನಿಮಾ ರಿಲೀಸ್ ಮಾಡುವ ನಿರ್ಧಾರ ಮಾಡಿದ್ದೆವು. ಈಗ ಏಕಾಏಕಿ ನಾಳೆ ಇಂದ ಸಿನಿಮಾ ಥಿಯೇಟರ್ 50% ಅಂದ್ರೆ ಹೇಗಾಗಬೇಡ? ನಿನ್ನೆ ಸಿನಿಮಾ ರಿಲೀಸ್ ಆಗಿದೆ, ಒಳ್ಳೆ ರೆಸ್ಪಾನ್ಸ್ ಬರ್ತಿದೆ . ಇವತ್ತು ಸಿನಿಮಾ ಒಳ್ಳೆ ಪಿಕಪ್ ಆಗಿದೆ. ಫ್ಯಾಮಿಲಿ ಆಡಿಯನ್ಸ್ ಕೂಡ ಥಿಯೇಟರ್ ಕಡೆಗೆ ಬರ್ತಿದ್ದಾರೆ. ಈ ವೇಳೆ ಈ ರೀತಿ ನಿಯಮ ತಂದಿರೋದು ಒಂದು ಒಳ್ಳೆ ಸಿನಿಮಾ ಕೊಂದು ಹಾಕಿದಂತೆ ಆಗಿದೆ. ಇದು ನ್ಯಾಯ ಅಲ್ಲ, ಸರ್ಕಾರಕ್ಕೆ ನಾವು ಮನವಿ ಮಾಡುತ್ತೇವೆ ಎಂದಿದ್ದಾರೆ.
ಸಿಎಂಗೆ ವೈಯಕ್ತಿಕವಾಗಿ ಮನವಿ ಮಾಡುತ್ತೇನೆ ಎಂದು ಪುನೀತ್ ರಾಜ್ಕುಮಾರ್ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಸಿಎಂಗೆ ನಾನು ಖಂಡಿತ ಮನವಿ ಮಾಡುತ್ತೇನೆ. ಈ ನಿರ್ಧಾರವನ್ನ ವಾಪಸ್ ಪಡೆಯಿರಿ. ನಾಳೆ ಚಿತ್ರರಂಗ ಯಾವ ರೀತಿ ನಡೆದುಕೊಳ್ತಾರೋ ಅದಕ್ಕೆ ಬದ್ಧರಾಗಿ ಇರುತ್ತೇವೆ. ನಾಳೆ ಫಿಲ್ಮ್ ಚೇಂಬರ್ ನಲ್ಲಿ ಮೀಟಿಂಗ್ ನಡೆಯೋ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಮೊದಲೇ ಹೇಳಿದ್ದರೆ, ನಾವು ಸಿನಿಮಾವನ್ನೇ ರಿಲೀಸ್ ಮಾಡುತ್ತಿರಲಿಲ್ಲ. ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ಪ್ರೇಕ್ಷಕರು ಕೊರೋನಾ ನಿಯಮಗಳನ್ನು ಪಾಲಿಸುತ್ತಿರುವುದರಿಂದ ಶೇ.100ರಷ್ಟು ಸೀಟಿಂಗ್ ವ್ಯವಸ್ಥೆಯನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕೊರೋನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ದಿನೇ ದಿನೇ ಹೆಚ್ಚೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಅಂದರೆ ಇಂದು, ರಾಜ್ಯದಲ್ಲಿ 5 ಸಾವಿರ ಸನಿಹಕ್ಕೆ ಕೊರೋನಾ ಕೇಸ್ ತಲುಪಿವೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆ, ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ