• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಶಕೀಲಾ ಬಯೋಪಿಕ್; ಹೆಣ್ಣುಲಿಯಂತೆ ಗರ್ಜಿಸಿ, ಗುಡುಗಿ ಮಿಂಚಿ ಮರೆಯಾದ ಪಾರ್ನ್ ನಟಿಯ ನಿಜ ಜೀವನ ದರ್ಶನ

ಶಕೀಲಾ ಬಯೋಪಿಕ್; ಹೆಣ್ಣುಲಿಯಂತೆ ಗರ್ಜಿಸಿ, ಗುಡುಗಿ ಮಿಂಚಿ ಮರೆಯಾದ ಪಾರ್ನ್ ನಟಿಯ ನಿಜ ಜೀವನ ದರ್ಶನ

ಶಕೀಲಾ

ಶಕೀಲಾ

ಶಕೀಲಾ ಅವರ ಜೀವನದ ಬಗ್ಗೆ, ಶಕೀಲಾ ಹಾಗೂ ಸಿಲ್ಕ್‌ ಸ್ಮಿತಾ ನಡುವಿನ ಜಗಳ, ಸಿನಿಮಾ ರಂಗದ ಬಗ್ಗೆ, ಸ್ಟಾರ್‌, ಸೂಪರ್‌ಸ್ಟಾರ್‌ಗಳ ಕುರಿತು, ಪ್ರತಿ ಸಿನಿಮಾ ಹಿಂದೆ ನಡೆಯುವ ಮತ್ತೊಂದು ಕಥೆಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವವರು, ಎಲ್ಲದಕ್ಕೂ ಹೆಚ್ಚಾಗಿ ಲಾಕ್‌ಡೌನ್‌ ಬಳಿಕ ಕನ್ನಡದ ನಿರ್ದೇಶಕರೊಬ್ಬರು ಧೈರ್ಯ ಮಾಡಿ ತಮ್ಮ ಸಿನಿಮಾವನ್ನು ಪಂಚಭಾಷೆಗಳಲ್ಲಿ ರಿಲೀಸ್‌ ಮಾಡಿರುವ ಕಾರಣಕ್ಕಾದರೂ ಶಕೀಲಾ ಬಯೋಪಿಕ್‌ ನೋಡಬಹುದು.

ಮುಂದೆ ಓದಿ ...
  • Share this:

ಬೆಂಗಳೂರು; ಕೊರೋನಾ ಕಾಟದಿಂದ ಬೇಸತ್ತಿರುವ ಸಿನಿಮಾ ಮಂದಿ ಥಿಯೇಟರ್‌ಗೆ ಜನ ಬರುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿ ಇನ್ನೂ ಹೊಸ ಸಿನಿಮಾಗಳ ರಿಲೀಸ್‌ಗೆ ಮನಸ್ಸೇ ಮಾಡುತ್ತಿಲ್ಲ. ಅದರ ನಡುವೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌, ಪಂಚಭಾಷೆಗಳಲ್ಲಿ ಶಕೀಲಾ ಬಯೋಪಿಕ್‌ಅನ್ನು ರಿಲೀಸ್‌ ಮಾಡಿದ್ದಾರೆ. ವಿಶ್ವದಾದ್ಯಂತ ಬರೋಬ್ಬರಿ 2 ಸಾವಿರ ಸ್ಕ್ರೀನ್‌ಗಳಲ್ಲಿ ಶಕೀಲಾ ಬಯೋಪಿಕ್‌ ಇಂದು ರಿಲೀಸ್‌ ಆಗಿದೆ. ಆ ಮೂಲಕ ಬೇರೆ ಸಿನಿಮಾ ಮಂದಿಗೂ ಇಂದ್ರಜಿತ್‌ ಲಂಕೇಶ್‌ ಮಾದರಿಯಾಗಿದ್ದಾರೆ.


ಶಕೀಲಾ ಬಯೋಪಿಕ್‌ ಬರುತ್ತಿದೆ ಅಂದಾಕ್ಷಣ ಎಲ್ಲರಲ್ಲೂ ಸಾಮಾನ್ಯವಾಗಿ ಮೂಡಿದ್ದ ಪ್ರಶ್ನೆ, ಈ ಕಥೆ ಬೇಕಿತ್ತಾ? ಪಾರ್ನ್‌ ಸ್ಟಾರ್‌ ನಟಿಯೊಬ್ಬಳ ಸ್ಟೋರಿ ಹೇಳುವ ಅವಶ್ಯಕತೆ ಇತ್ತಾ ಎಂಬುದು. ಆದರೆ ಶಕೀಲಾ ಸಿನಿಮಾ ನೋಡಿದ ಬಳಿಕ ಎಲ್ಲರಿಗೂ ಉತ್ತರ ದೊರೆಯುತ್ತದೆ. ಯಾಕೆಂದರೆ ಇಲ್ಲಿ ಕೇವಲ ಶಕೀಲಾರ ಹಸಿಹಸಿ ದೃಶ್ಯಗಳಿಲ್ಲ, ಬಿಸಿಬಿಸಿ ಮಾದಕತೆಯ ನೋಟವಿಲ್ಲ, ತುಂಡುಡುಗೆಯ ಚಿತ್ತಾರವಿಲ್ಲ… ಬದಲಾಗಿ ಪುರುಷಪ್ರಧಾನ ಸಮಾಜ, ಪುರುಷ ಪ್ರಧಾನ ಚಿತ್ರರಂಗದಲ್ಲಿ ಒಬ್ಬಂಟಿಯಾಗಿ ಹೋರಾಡುವ ಗಟ್ಟಿಗಿತ್ತಿಯ ಕಥೆಯಿದೆ. ನೋವಿನಲ್ಲೂ ನಗುವ, ಸೋಲಿನಲ್ಲೂ ಗೆಲುವಿನ ಛಲ ತೋರುವ, ಸುಳಿಯಲ್ಲೂ ಈಜುವ ಹೋರಾಟಗಾರ್ತಿಯ ಜೀವನಗಾಥೆಯಿದೆ.


ಕೇರಳದ ಸಣ್ಣ ಹಳ್ಳಿಯೊಂದರಲ್ಲಿ ಬಡ ಕುಟುಂಬದಲ್ಲಿ ಹುಟ್ಟುವ ಹುಡುಗಿ ಶಕೀಲಾ. ಅಪ್ಪ, ಅಮ್ಮ ಆರು ಜನ ಮಕ್ಕಳು. ಈಕೆಯೆ ಹಿರಿಯ ಮಗಳು. ಹೀಗಾಗಿ ಈಕೆಯ ಮೇಲೆ ಮನೆಯ ಜವಾಬ್ದಾರಿ ಕೂಡ ಹೆಚ್ಚು. ಶಾಲೆಯ ನಾಟಕೋತ್ಸವದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಳ್ಳುವ ಬಾಲಕಿ ಶಕೀಲಾಗೆ ನಟಿಯಾಗಬೇಕು ಎಂಬುದು ಬಾಲ್ಯದ ಕನಸು. ಮುಂದೊಂದು ದಿನ ಆ ಕನಸು ಈಡೇರುತ್ತದೆ. ಅದರಿಂದಲೇ ಪ್ರಖ್ಯಾತಿ, ಕುಖ್ಯಾತಿ ಎರಡನ್ನೂ ಗಳಿಸುತ್ತೇನೆ ಎಂಬುದರ ಅರಿವು ಆಕೆಗೆ ಇರುವುದಿಲ್ಲ. ದ್ರೌಪದಿ ಪಾತ್ರದಲ್ಲಿ ನಟಿಸಿ ಪ್ರಶಸ್ತಿ ಗೆದ್ದು ನಗುತ್ತಾ ಮನೆಯತ್ತ ಓಡಿ ಬರುವ ಶಕೀಲಾಗೆ ಮನೆ ಬಳಿ ಬರುತ್ತಲೇ ಬರಸಿಡಿಲು ಬಡಿದಂತಾಗುತ್ತದೆ. ಆಕೆಯ ತಂದೆ ವಿಧಿವಶರಾಗಿರುತ್ತಾರೆ. ಕೊನೆಗೆ ಊರಿನಲ್ಲಿ ಇರಲಾಗದೇ ಶಕೀಲಾ ತಾಯಿ ಮಕ್ಕಳೊಂದಿಗೆ ಕೊಚ್ಚಿಗೆ ಬರುತ್ತಾರೆ. ಮದುವೆಗೂ ಮುನ್ನ ಸೈಡ್‌ ರೋಲ್‌ಗಳಲ್ಲಿ ನಟಿಸುತ್ತಿದ್ದ ಆಕೆ, ಮತ್ತೆ ಅವಕಾಶಗಳಿಗಾಗಿ ಅಲೆಯಲಾರಂಭಿಸುತ್ತಾಳೆ. ಆಗ ಶಕೀಲಾಳನ್ನು ನೋಡುವ ನಿರ್ಮಾಪಕ, ಅಮ್ಮನ ಬದಲು ಮಗಳಿಗೆ ರೋಲ್‌ ಕೊಡುತ್ತಾನೆ. ಓದುತ್ತಾ, ಆಟವಾಡುತ್ತಾ  ನಲಿಯಬೇಕಿದ್ದ ಟೀನೇಜ್‌ ಹುಡುಗಿ ಶಕೀಲಾ, ಪಾರ್ನ್‌ ನಟಿಯಾಗುತ್ತಾಳೆ.


ಬರೋಬ್ಬರಿ 150 ಪಾರ್ನ್‌ ಸಿನಿಮಾಗಳಲ್ಲಿ ನಟಿಸಿ, ದಕ್ಷಿಣ ಭಾರತದಾದ್ಯಂತ ಸ್ಟಾರ್‌, ಸೂಪರ್‌ಸ್ಟಾರ್‌ಗಳನ್ನೂ ಮೀರಿಸುವ ಶಕೀಲಾಳ ಸಕ್ಸಸ್‌ ಕಂಡು ಹಲವರ ಕಣ್ಣು ಕುಕ್ಕುತ್ತದೆ. ಹೀಗಾಗಿಯೇ ಆಕೆಯ ವಿರುದ್ಧ ಮಸಲತ್ತು ನಡೆಸುತ್ತಾರೆ. ಆಕೆಯನ್ನು ಹಣಿಯಲು ನಾನಾ ಐಡಿಯಾಗಳನ್ನು ಮಾಡುತ್ತಾರೆ. ಕೊನೆಗೆ ಶಕೀಲಾಳನ್ನು ಸಿನಿಮಾಗಳಿಂದಲೇ ಬ್ಯಾನ್‌ ಮಾಡಿಸುತ್ತಾರೆ. ನಿರ್ಮಾಪಕರನ್ನು ಕರೆದು ಅವರಿಂದ ಸಿನಿಮಾಗಾಗಿ ಪಡೆದಿದ್ದ ಹಣವನ್ನು ವಾಪಸ್‌ ನೀಡುತ್ತಾಳೆ. ಕೊನೆಗೆ ಕೌಟುಂಬಿಕ ಸಿನಿಮಾ ಮಾಡು ಎಂಬ ಸವಾಲು ಸ್ವೀಕರಿಸಿ ತನ್ನದೇ ಜೀವನದ ಕಥೆ ಹೇಳಲು ಮುಂದಾಗುವ ಶಕೀಲಾ ಅದರಿಂದ ತನ್ನ ವೈಯಕ್ತಿಕ ಬದುಕನ್ನೇ ಒತ್ತೆಯಿಟ್ಟುಬಿಡುತ್ತಾಳೆ.


ಶಕೀಲಾ ಚಿತ್ರದ ಪೋಸ್ಟರ್.


ಪುರುಷಪ್ರಧಾನ ಸಿನಿಮಾ ಇಂಡಸ್ಟ್ರಿಯಲ್ಲಿ ಎಲ್ಲ ಸ್ಟಾರ್‌ಗಳ ಹುಟ್ಟಡಗಿಸಿ, ಹೆಣ್ಣುಲಿಯಂತೆ ಗರ್ಜಿಸಿ, ಸಿಡಿಲಿನಂತೆ ಬಂದು, ಗುಡುಗಿ ಮಿಂಚಿ ಮರೆಯಾದ ಶಕೀಲಾರ ನಿಜ ಜೀವನದ ದರ್ಶನ ಮಾಡಿಸುತ್ತದೆ ಈ ಬಯೋಪಿಕ್‌. ಶಕೀಲಾ ಪಾತ್ರಕ್ಕೆ ರಿಚಾ ಛಡ್ಡಾ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಆನ್‌ಸ್ಕ್ರೀನ್‌ ಮತ್ತು ಸಾರ್ವಜನಿಕವಾಗಿ ಒಂದು, ನಾಲ್ಕು ಗೋಡೆಗಳ ಮಧ್ಯೆ ಮತ್ತೊಂದು ಮುಖ ಹೊಂದಿರುವ ಸೂಪರ್‌ಸ್ಟಾರ್‌ ಸಲೀಮ್‌ ಪಾತ್ರದಲ್ಲಿ ಪಂಕಜ್‌ ತ್ರಿಪಾಠಿ, ಹೆತ್ತ ತಾಯಿ, ರಕ್ತ ಹಂಚಿಕೊಂಡು ಹುಟ್ಟಿದ ಸಹೋದರಿಯರೇ ಕೈಬಿಟ್ಟಾಗಿ ಶಕೀಲಾ ಜೊತೆಗೆ ನಿಲ್ಲುವ ಸಹೋದರಿಯಾಗಿ ಎಸ್ತರ್‌ ನರೋನ್ಹಾ, ನಿರ್ಮಾಪಕನಾಗಿ ಸುಚೇಂದ್ರ ಪ್ರಸಾದ್‌, ಬಾಲ್ಯದ ಗೆಳೆಯ ಅರ್ಜುನ್‌ ಪಾತ್ರದಲ್ಲಿ ರಾಜೀವ್‌ ಪಿಳ್ಳೈ ನಟನೆ ಗಮನ ಸೆಳೆಯುವಂತಿದೆ.


ಇದನ್ನು ಓದಿ: ಜೈಲಿನಿಂದ ಆಸ್ಪತ್ರೆಗೆ ದಾಖಲಾದ ನಟಿ ರಾಗಿಣಿ ದ್ವಿವೇದಿ


ಅತ್ತ ಹೆಚ್ಚಾಗಿ ಮಸಾಲೆ ತುಂಬಿ ಕಮರ್ಷಿಯಲ್‌ ಆಗಿಸದೇ, ಇತ್ತ ಡಾಕ್ಯುಮೆಂಟರಿಯಂತೆಯೂ ಸಪ್ಪೆಯಾಗಿಸದೇ, ಆರ್ಡಿನರಿ ಹೆಣ್ಣುಮಗಳೊಬ್ಬಳ ಎಕ್ಸ್‌ಟ್ರಾಆರ್ಡಿನರಿ ಕಥೆಯನ್ನು ಹೆಣೆದು ಹದವಾಗಿ ಕಣ್ಣಮುಂದೆ ತಂದಿದ್ದಾರೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌. ಪಾರ್ನ್‌ ಸ್ಟಾರ್‌ ನಟಿ ಕುರಿತ ಸಿನಿಮಾ ಆಗಿದ್ದರೂ ಡಬಲ್‌ ಮೀನಿಂಗ್‌ ಡೈಲಾಗ್‌ಗಳಿಲ್ಲ, ಪೋಲಿ ಮಾತುಗಳಿಲ್ಲ. ಖಾಲಿ ಪೀಲಿ ಸೀನ್‌ಗಳೂ ಇಲ್ಲ. ಶಕೀಲಾರ ಜೀವನ ಕಣ್ಣ ಮುಂದೆ ನಡೆದಂತೆ ಸರಳವಾಗಿ ಹೇಳಿದ್ದಾರೆ ಇಂದ್ರಜಿತ್‌. ಸಂತೋಷ್‌ ರೈ ಪಾತಾಜೆ ಎಂದಿನಂತೆ ತಮ್ಮ ಕ್ಯಾಮರಾ ಕೈಚಳಕ ತೋರಿದ್ದಾರೆ. ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲವಾದರೂ ವೀರ್‌ ಸಮರ್ಥ್‌ ಅವರ ಹಿನ್ನೆಲೆ ಸಂಗೀತ ಸರಾಗವಾಗಿ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.


ಒಟ್ಟಾರೆ ಶಕೀಲಾ ಅವರ ಜೀವನದ ಬಗ್ಗೆ, ಶಕೀಲಾ ಹಾಗೂ ಸಿಲ್ಕ್‌ ಸ್ಮಿತಾ ನಡುವಿನ ಜಗಳ, ಸಿನಿಮಾ ರಂಗದ ಬಗ್ಗೆ, ಸ್ಟಾರ್‌, ಸೂಪರ್‌ಸ್ಟಾರ್‌ಗಳ ಕುರಿತು, ಪ್ರತಿ ಸಿನಿಮಾ ಹಿಂದೆ ನಡೆಯುವ ಮತ್ತೊಂದು ಕಥೆಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವವರು, ಎಲ್ಲದಕ್ಕೂ ಹೆಚ್ಚಾಗಿ ಲಾಕ್‌ಡೌನ್‌ ಬಳಿಕ ಕನ್ನಡದ ನಿರ್ದೇಶಕರೊಬ್ಬರು ಧೈರ್ಯ ಮಾಡಿ ತಮ್ಮ ಸಿನಿಮಾವನ್ನು ಪಂಚಭಾಷೆಗಳಲ್ಲಿ ರಿಲೀಸ್‌ ಮಾಡಿರುವ ಕಾರಣಕ್ಕಾದರೂ ಶಕೀಲಾ ಬಯೋಪಿಕ್‌ ನೋಡಬಹುದು.

top videos
    First published: