ಸಂಗೀತ ದಿಗ್ಗಜ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ರಾಜಕೀಯ ಗಣ್ಯರ ಸಂತಾಪ

ಎಸ್ ಪಿ ಬಾಲಸುಬ್ರಹ್ಮಣ್ಯಂ

ಎಸ್ ಪಿ ಬಾಲಸುಬ್ರಹ್ಮಣ್ಯಂ

ಅವರ ಹಾಡುಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದೆ. ಅವರ ನಿಧನದಿಂದ ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದ್ದಾರೆ.

  • Share this:

    ಬೆಂಗಳೂರು(ಸೆ.25): ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರು ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ. ಕೊರೋನಾ ಸೋಂಕು ತಗುಲಿ ಕಳೆದ ತಿಂಗಳು ಆಸ್ಪತ್ರೆ ಸೇರಿದ್ದ ಎಸ್​ಪಿಬಿ ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನ ಆಸ್ಪತ್ರೆಯಲ್ಲಿ ಇಂದು ಎಲ್ಲರನ್ನೂ ಅಗಲಿದ್ದಾರೆ.  ಖ್ಯಾತ ಸಂಗೀತ ದಿಗ್ಗಜ, ಗಾಯಕರಾದ ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಲನ ಚಿತ್ರರಂಗದ ಶ್ರೇಷ್ಠ ಗಾಯಕರಾಗಿದ್ದ ಅವರು, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರ ಗೀತೆಗಳಿಗೆ ಹಿನ್ನೆಲೆ ಗಾಯನ ಮಾಡಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ನಟನೆ, ಸಂಗೀತ ಸಂಯೋಜನೆ, ಸಂಗೀತ ಕಾರ್ಯಕ್ರಮಗಳ ನಿರ್ವಹಣೆಯನ್ನೂ ಮಾಡಿ ಸಂಗೀತ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ್ದರು ಎಂದು ಸಿಎಂ ಸ್ಮರಿಸಿದ್ದಾರೆ.


    ಹತ್ತಕ್ಕಿಂತ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಮೀರಿ ಹಾಡುಗಳನ್ನು ಹಾಡಿದ ಕೀರ್ತಿ ಅವರದ್ದು. ಕನ್ನಡ ಮತ್ತು ಕನ್ನಡಿಗರ ಬಗ್ಗೆ ವಿಶೇಷ ಅಭಿಮಾನವನ್ನು ಹೊಂದಿದ್ದರು. ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ ಗೌರವಗಳನ್ನು ಪಡೆದ ಸುಪ್ರಸಿದ್ಧ ಗಾಯಕರು. ಅವರ ಹಾಡುಗಳು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದೆ. ಅವರ ನಿಧನದಿಂದ ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.


    ಅಂಗಳದಲ್ಲೇ ಭತ್ತದ ಕೃಷಿ ಬೆಳೆದು ಮಾದರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು


    ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ಮತ್ತು ಕೋಟ್ಯಾಂತರ ಅಭಿಮಾನಿಗಳಿಗೆ ಭಗವಂತ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


    ಇನ್ನು, ಎಸ್​​ಪಿಬಿ ನಿಧನಕ್ಕೆ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಕೂಡ ಸಂತಾಪ ಸೂಚಿಸಿದ್ದಾರೆ. ಗಾನ ಗಂಧರ್ವ ಡಾ. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಇತ್ತೀಚೆಗಷ್ಟೇ ಕೋವಿಡ್ ಸೋಂಕಿಗೆ ಗುರಿಯಾಗಿ ಚಿಕಿತ್ಸೆ  ಪಡೆದಿದ್ದ ಎಸ್ ಪಿ ಬಿ ಅವರನ್ನು ಕಳೆದುಕೊಂಡ ಸಂಗೀತ ಕ್ಷೇತ್ರ ತುಂಬಾ ಬಡವಾಗಿದೆ. ಬಹುಭಾಷಾ ಗಾಯಕರಾಗಿದ್ದ ಕಂಚಿನ ಕಂಠದ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು 16 ಭಾರತೀಯ ಭಾಷೆಗಳಲ್ಲಿ 40 ಸಾವಿಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ‌ ಬರೆದ ಗಾಯಕ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.


    ಸರಸ್ವತಿ ಪುತ್ರರಾಗಿದ್ದ ಎಸ್ ಪಿ ಬಿ ಸಂಗೀತ ಮಾಂತ್ರಿಕರಾಗಿದ್ದರು. ಅವರು ಹಾಡಿದ ಹಾಡುಗಳನ್ನು ಕೇಳುತ್ತಾ ಬೆಳೆದ ನಾವು ಅವರ ಅಗಲಿಕೆಯನ್ನೂ ನೋಡಬೇಕಾದ ಸಂದರ್ಭ ಬಂದಿದ್ದು ದುರ್ದೈವ. ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ ಕುಟುಂಬದ ಸದಸ್ಯರಿಗೆ, ಅಪಾರ ಸಂಗೀತ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.


    ಹಾಡಿನಿಂದ ಅಮರರಾದ ಎಸ್.ಪಿ.ಬಿ: ಡಿಸಿಎಂ ಸವದಿ ಶೋಕ


    ಗಾನಗಂಧರ್ವ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ಅಸ್ತಂಗತರಾಗುವುದರೊಂದಿಗೆ ಚಲನಚಿತ್ರ ಸಂಗೀತದ ಒಂದು ಯುಗವೇ ಅಂತ್ಯವಾಯಿತು ಎಂದು ಹೇಳಲು ನನಗೆ ತೀವ್ರ ದುಃಖವಾಗುತ್ತಿದೆ. ಎಸ್.ಪಿ.ಬಿ. ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರ ಮಾಧುರ್ಯ ಸಿರಿಕಂಠದ ಗೀತ, ಸಂಗೀತಗಳಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರಿಗೆ ಸಂಗೀತವೇ ಸರ್ವಸ್ವವಾಗಿತ್ತು.


    ನಿನ್ನ ನೀನು ಮರೆತರೇನು ಸುಖವಿದೆ ?... ತನ್ನತನವ ತೊರೆದರೇನು ಸೊಗಸಿದೆ?... ಎಂದು ಅತ್ಯಂತ ಸೊಗಸಾಗಿ ಬದುಕಿನ ಅರ್ಥ ಸ್ಫುರಿಸುವಂತೆ ಹಾಡಿದ ಎಸ್.ಪಿ.ಬಿ. ಅವರು ನಿಜಕ್ಕೂ ಅಮರರಾಗಿದ್ದಾರೆ. ಎಸ್.ಪಿ.ಬಿ. ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಎಂದರೆ ಅವರ ಸೃಜನಶೀಲತೆಯ ಅಂತಃಸತ್ವ ಎಷ್ಟೊಂದು ಸಮರ್ಥವಾಗಿತ್ತು ಎಂಬುದನ್ನು ಅರ್ಥೈಸಿಕೊಳ್ಳಬಹುದು. ಆದರೆ ಅವರ ಮೊದಲ ಪ್ರೀತಿ ಮತ್ತು ಒಲವು ಕನ್ನಡದ ಬಗ್ಗೆ ಇತ್ತು ಎಂಬುದು ಹೆಮ್ಮೆಯ ಸಂಗತಿ. ಅನೇಕ ಗೌರವ ಡಾಕ್ಟರೇಟ್ ಗಳಿಂದ ಹಿಡಿದು ಪದ್ಮ ಪ್ರಶಸ್ತಿವರೆಗೆ ಅನೇಕ ಪುರಸ್ಕಾರಗಳು ಅವರ ಪ್ರತಿಭೆಗೆ ಸಂದಿದ್ದವು.


    ಹೀಗೆ ಸರಸ್ವತಿಯ ಪುತ್ರರಾಗಿದ್ದ ಎಸ್.ಪಿ.ಬಿ. ಅವರ ಪ್ರತಿಭೆಗೆ ಅವರೇ ಸಾಟಿ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅಗಲಿದ ಅವರ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ. ಅವರ ಕುಟುಂಬದವರಿಗೆ ಮತ್ತು ಅಪಾರ ಅಭಿಮಾನಿಗಳಿಗೆ ನನ್ನ ಸಾಂತ್ವನಗಳು.


    ಕೊರೋನಾ ಮಹಾಮಾರಿಯಿಂದಾಗಿ ನಮ್ಮ ನಾಡು ಇತ್ತೀಚೆಗೆ ಹಲವು ಗಣ್ಯರನ್ನು ಕಳೆದುಕೊಂಡು ಆತಂಕದಲ್ಲಿದೆ. ಇವರ ಅಗಲಿಕೆಯನ್ನು ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ದೇವರು ಕೊರೋನಾ ಪಿಡುಗಿಗೆ ಮುಕ್ತಿ ನೀಡಿ ನಾಡಿನ ಜನರಲ್ಲಿ ಸುಖ-ಶಾಂತಿ ಸಮಾಧಾನ ನೆಲೆಸುವಂತೆ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.


    ಎಸ್​​​​​ಪಿಬಿ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ:



    ಎಸ್.ಪಿ.ಬಿ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಂತಾಪ:


    ಎಸ್.ಪಿ.ಬಿ ನಿಧನಕ್ಕೆ ಬೈರತಿ ಬಸವರಾಜ ಶೋಕ:


    ತಮ್ಮ ಗಾಯನದಿಂದಲ್ಲೇ ಭಾರತದ ಸಂಗೀತ ರಸಿಕರನ್ನು ಮುಗ್ದಗೊಳಿಸಿದ್ದ ಎಸ್.ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಚೆನ್ನೈನ ಎಂ ಜಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುವುದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸ್ವರ ಭಾಸ್ಕರ ಎಂದೇ ಹೆಸರಾಗಿದ್ದ ಬಾಲಸುಬ್ರಹ್ಮಣ್ಯಂ ಅವರ ನಿಧನ ಚಿತ್ರರಂಗಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಆಘಾತವಾಗಿದೆ. ಅವರ ಹಾಡುಗಳನ್ನು ಕೇಳುವ ಮೂಲಕ ಅವರ ಬಗ್ಗೆ ಅಭಿಮಾನವನ್ನು ಇಟ್ಟುಕೊಂಡಿದ್ದ ನನಗೆ ನಿಜಕ್ಕೂ ದುಃಖ ಇಮ್ಮಡಿಸಿದೆ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗೆ, ಅಪ್ತ ಬಳಗಕ್ಕೆ, ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.


    ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಡಿ.ಕೆ ಶಿವಕುಮಾರ್ ಸಂತಾಪ


    ಖ್ಯಾತ ಬಹುಭಾಷಾ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ. ಅವರು ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು. ಲಕ್ಷಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ಯಮ ನಿಷ್ಕರುಣಿ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ.


    ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮ ಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ .


    ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್ ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಅದ್ಭುತ ಯುಗವೇ ಅಂತ್ಯವಾದಂತಾಗಿದೆ. ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ.


    ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಎಸ್​​​ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಅಮಿತ್ ಶಾ ಸಂತಾಪ:



    ಎಸ್​​ಪಿಬಿ ನಿಧನಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ



    ಹಲವು ರಾಜಕೀಯ ಗಣ್ಯರು ಎಸ್​​​ಪಿ ಬಾಲಸುಬ್ರಹ್ಮಣಂ ನಿಧನಕ್ಕೆ ರಾಜ್ಯ ಹಾಗೂ ರಾಷ್ಟ್ರ ನಾಯಕರು ಸಂತಾಪ ಸೂಚಿಸಿದ್ದಾರೆ.

    Published by:Latha CG
    First published: