ಪವನ್ ಕಲ್ಯಾಣ್ ಜನ್ಮದಿನ ಆಚರಣೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರ ಸಾವು; 4 ಲಕ್ಷ ರೂ. ಪರಿಹಾರ ಘೋಷಣೆ
ಕೊರೋನಾ ಹೆಚ್ಚಿರುವುದರಿಂದ ಜನ್ಮದಿನವನ್ನು ಆಚರಣೆ ಮಾಡಬೇಡಿ ಎಂದು ಪವನ್ ಕಲ್ಯಾಣ್ ಅಭಿಮಾನಿಗಳ ಬಳಿ ಕೋರಿದ್ದರು. ಆದಾಗ್ಯೂ, ಅಭಿಮಾನಿಗಳು ಸಂಭ್ರಮದಿಂದ ಜನ್ಮದಿನ ಆಚರಣೆ ಮಾಡುವುದರಲ್ಲಿ ತೊಡಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಜನ್ಮದಿನ ಆಚರಣೆ ನಿಮಿತ್ತ ಬ್ಯಾನರ್ ಕಟ್ಟಲು ಹೋಗಿದ್ದ ಮೂವರು ವಿದ್ಯುತ್ ತಂತಿ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ. ಪವನ್ ಮುಂದಿನ ಚಿತ್ರ ವಕೀಲ್ ಸಾಬ್ ತಂಡ ಹಾಗೂ ಪವನ್ ಕಲ್ಯಾಣ್ ಜನಶಕ್ತಿ ಪಕ್ಷ ಮೃತರ ಕುಟುಂಬಕ್ಕೆ ಒಟ್ಟು 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿವೆ.
ಆಂಧ್ರ ಪ್ರದೇಶದ ಚಿತ್ತೂರ್ ಜಿಲ್ಲೆಯ ಶಾಂತಿಪುರಂನಲ್ಲಿ ಈ ಘಟನೆ ನಡೆದಿದೆ. ಇಂದು ಪವನ್ ಕಲ್ಯಾಣ್ ಜನ್ಮದಿನ. ಹೀಗಾಗಿ ಆರು ಜನ ಪವನ್ ಬೆಂಬಲಿಗರು ಊರಿನಲ್ಲಿ ಬ್ಯಾನರ್ ಹಾಕುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಬ್ಯಾನರ್ಗೆ ವಿದ್ಯುತ್ ತಂತಿ ತುಗಲಿದೆ. ಸೋಮಶೇಖರ್, ರಾಜೇಂದ್ರ ಹಾಗೂ ಅರುಣಾಚಲಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಮೂವರಿಗೆ ಗಾಯಗಳಾಗಿವೆ.
ಇನ್ನು, ಪವನ್ ಕಲ್ಯಾಣ್ ನೇತೃತ್ವದ ಜನಶಕ್ತಿ ಪಕ್ಷ ಮೃತರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಈ ಬಾರಿ ಕೊರೋನಾ ಹೆಚ್ಚಿರುವುದರಿಂದ ಜನ್ಮದಿನವನ್ನು ಆಚರಣೆ ಮಾಡಬೇಡಿ ಎಂದು ಪವನ್ ಕಲ್ಯಾಣ್ ಅಭಿಮಾನಿಗಳ ಬಳಿ ಕೋರಿದ್ದರು. ಆದಾಗ್ಯೂ, ಅಭಿಮಾನಿಗಳು ಸಂಭ್ರಮದಿಂದ ಜನ್ಮದಿನ ಆಚರಣೆ ಮಾಡುವುದರಲ್ಲಿ ತೊಡಗಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.