ಶಾರುಖ್ ಖಾನ್ (Shah Rukh Khan) ಬಾಲಿವುಡ್‌ನಲ್ಲಿ (Bollywood) ಬಾದ್‌ಷಾ ಎಂಬ ಬಿರುದಿನಿಂದಲೇ ಖ್ಯಾತರಾದವರು. 57 ರ ಹರೆಯದ ಕಿಂಗ್ ಖಾನ್ ಪಠಾಣ್ (Pathaan) ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಬಾಲಿವುಡ್‌ನಲ್ಲಿ ಹಿಂದಿನ ವರ್ಚಸ್ಸನ್ನು ಮರಳಿ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪಠಾಣ್‌ಗಾಗಿ ದೇಹ ದಂಡನೆ ಮಾಡಿದ್ದಾರೆ. ಬೆವರಿಳಿಸಿದ್ದಾರೆ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸಲ್ಮಾನ್, ಶಾರುಖ್ ಖಾನ್, ಅಮೀರ್ ಖಾನ್ (Salman Khan), ಅಕ್ಷಯ್ ಕುಮಾರ್ ಈ ಎಲ್ಲಾ ತಾರೆಯರು ಒಂದೊಮ್ಮೆ ಬಾಲಿವುಡ್ ಅನ್ನು ಆಳಿದ ಪ್ರತಿಭಾವಂತರು. ಈ ಎಲ್ಲಾ ತಾರೆಯರಿಗೂ ವಯಸ್ಸು ಎಂಬುದು ಬರಿ ಸಂಖ್ಯೆ ಮಾತ್ರ ಅನ್ನೋದು ನಿಜವೇ. ಹೊಸಬರ ಪೈಪೋಟಿಯ ನಡುವೆಯೂ ಚಿತ್ರಗಳಲ್ಲಿ ವಿಭಿನ್ನವಾಗಿ ನಟಿಸುವುದನ್ನು ಈ ತಾರೆಯರು ಮರೆತಿಲ್ಲ. ತೀವ್ರ ಪೈಪೋಟಿಯ ನಡುವೆ ಕೂಡ ತಮ್ಮ ತಾರಾ ವರ್ಚಸ್ಸನ್ನು ಈ ನಟರು ಬಿಟ್ಟುಕೊಟ್ಟಿಲ್ಲ.
ಬಾಲಿವುಡ್ ಇತ್ತೀಚಿನ ದಿನಗಳಲ್ಲಿ ಸತತ ಸೋಲುಗಳನ್ನೇ ಕಾಣುತ್ತಿದೆ. ಅದರಲ್ಲೂ ಚಿತ್ರ ಬಿಡುಗಡೆಗೂ ಮುನ್ನ ಬಾಯ್‌ಕಾಟ್ ಟ್ರೆಂಡ್ ಅಧಿಕವಾಗುತ್ತಿದೆ. ಯಾವುದಾದರೊಂದು ವಿಷಯಕ್ಕೆ ಚಿತ್ರದಲ್ಲಿರುವ ಸನ್ನಿವೇಶ, ಪಾತ್ರ, ಕಥೆ ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ ಕೂಡಲೇ ಚಿತ್ರವನ್ನು ಬಹಿಷ್ಕರಿಸುವ ಕಾರ್ಯ ಆರಂಭವಾಗುತ್ತದೆ. ಸಾಮಾಜಿಕ ತಾಣದಲ್ಲೂ ಬಾಯ್‌ಕಾಟ್ ಹ್ಯಾಶ್‌ಟ್ಯಾಗ್‌ಗಳೇ ರಾರಾಜಿಸುತ್ತವೆ.
ಬಾಲಿವುಡ್ ಅದೃಷ್ಟ ಬದಲಾಯಿಸುವ ಪಠಾಣ್
ಆದರೆ ಇದೆಲ್ಲದಕ್ಕೂ ಮುಕ್ತಾಯ ಎಂಬಂತೆ ಪಠಾಣ್ ಬಾಲಿವುಡ್‌ನಲ್ಲಿ ರಾರಾಜಿಸುತ್ತಿದೆ. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿಯೇ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಕಲೆಕ್ಶನ್ ಮಾಡಿದೆ. ಜೊತೆಗೆ ಶಾರುಖ್ ಖಾನ್‌ರ ಬಾದ್‌ಷಾ ಕೀರ್ತಿಯನ್ನು ಮರಳಿ ತಂದುಕೊಟ್ಟಿದೆ. ಪಠಾಣ್ ಚಿತ್ರವನ್ನೇ ಉದಾಹರಣೆಯಾಗಿ ತೆಗೆದುಕೊಂಡಾಗ ಶಾರುಖ್ ತಮಗೆ ವಯಸ್ಸಾಯಿತು ಎಂಬುದನ್ನೇ ಸುಳ್ಳಾಗಿಸಿ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾರೆ.
ಕಾರು, ಹೆಲಿಕಾಪ್ಟರ್, ಬುಲ್ಲೆಟ್‌ಗಳಲ್ಲಿ ನಡೆಸುವ ಚೇಸಿಂಗ್ ದೃಶ್ಯಗಳಾಗಿರಬಹುದು, ಫೈಟಿಂಗ್ ದೃಶ್ಯಗಳಾಗಿರಬಹುದು ಪ್ರತಿಯೊಂದು ಸನ್ನಿವೇಶದಲ್ಲಿ ಶಾರುಖ್ ನವ ಯುವಕರಂತೆ ಮಿಂಚಿದ್ದಾರೆ. ತಮ್ಮ ಹುರಿಗಟ್ಟಿದ ಮೈಕಟ್ಟು ಹಾಗೂ ನಟನಾ ಖದರ್ ಅನ್ನು ಪ್ರದರ್ಶಿಸಿದ್ದಾರೆ. ಬಾಲಿವುಡ್ ಬಾದ್‌ಷಾನಿಗೆ ವಯಸ್ಸಾಯಿತು ಎಂದು ಹೇಳಿದವರೇ ನಿಬ್ಬೆರಗಾಗುವಂತೆ ಚಿತ್ರದಲ್ಲಿ ನಟಿಸಿದ್ದಾರೆ.
ಭಿನ್ನವಾಗಿ ಕಂಡುಬಂದಿರುವ ಶಾರುಖ್ ಖಾನ್
ರೊಮ್ಯಾಂಟಿಕ್ ಚಿತ್ರಗಳಿಂದಲೇ ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಪ್ರಿಯರಾಗಿದ್ದ ಶಾರುಖ್ ಪಠಾಣ್ ಚಿತ್ರದಲ್ಲಿ ಹಿಂದೆಂದೆಗಿಂತಲೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜೇಮ್ಸ್ ಬಾಂಡ್ ಶೈಲಿಯಲ್ಲೇ ಪಠಾಣ್ ಮೂಡಿಬಂದಿದ್ದು, ಪಾತ್ರದಲ್ಲಿ ಪೂರ್ತಿಯಾಗಿ ಶಾರುಖ್ ಮೈ ಮರೆತು ನಟಿಸಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಹಿಂದಿನ ಚಿತ್ರಗಳಲ್ಲಿಯೂ ಶಾರುಖ್ ಅದ್ಭುತವಾಗಿ ನಟಿಸುತ್ತಿದ್ದರು ಎಂಬುದು ಸತ್ಯವಾದರೂ ಪಠಾಣ್ ತುಂಬಾ ವಿಭಿನ್ನವಾಗಿದೆ.
ಶಾರುಖ್ ದ್ವೇಷಿಗಳಿಗೆ ಈ ಚಿತ್ರ ಉತ್ತರವಾಗಿದೆ
ಪಠಾಣ್ ಚಿತ್ರ ದೇಶಭಕ್ತಿ ಪ್ರಧಾನ ಚಿತ್ರವಾಗಿದ್ದರೂ ಭಿನ್ನವಾಗಿದೆ. ಸೈನಿಕರ ತ್ಯಾಗ, ದೇಶದ ಮೇಲೆ ಅವರಿಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದೆ. ದೇಶವು ತನಗೆ ಏನು ಮಾಡಿದೆ ಎಂಬುದನ್ನು ಯೋಚಿಸದೇ ತಾನು ದೇಶಕ್ಕೆ ಏನು ಮಾಡಬಹುದು ಎಂಬುದನ್ನು ಸೈನಿಕ ಯೋಚಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದೆ. ಸೈನಿಕ ಪ್ರಧಾನ ಚಿತ್ರಗಳು ಬಾಲಿವುಡ್‌ನಲ್ಲಿ ಈ ಹಿಂದೆ ಬಂದಿದ್ದರೂ ಪಠಾಣ್ ಕಥೆ ಭಿನ್ನವಾಗಿದೆ.
ಶಾರುಖ್‌ರನ್ನು ಅವಹೇಳನ ಮಾಡುತ್ತಿದ್ದ ಹಾಗೂ ದ್ವೇಷಿಸುತ್ತಿದ್ದವರಿಗೆಲ್ಲಾ ಪಠಾಣ್ ಉತ್ತರ ನೀಡಿದೆ. ಯಾವುದೇ ಧರ್ಮಕ್ಕೆ ತಾನು ಬದ್ಧನಾಗಿಲ್ಲ ಎಂಬ ಅಂಶವನ್ನು ಶಾರುಖ್ ಮನದಟ್ಟುಮಾಡಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪಠಾಣ್ ಬಿಡುಗಡೆಯಾಗಿ ಐದು ದಿನದಲ್ಲಿ ರೂ 280 ಕೋಟಿ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಹಿಟ್ ಎಂದೆನಿಸಿದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಪಠಾಣ್ ನಾಗಾಲೋಟ ಮುಂದುವರಿದಿದೆ.
ಇದನ್ನೂ ಓದಿ: Pathaan-Shah Rukh Khan: ವೀಕೆಂಡ್ನಲ್ಲಿ ಪಠಾಣ್ ಭರ್ಜರಿ ಕಲೆಕ್ಷನ್, 500 ಕೋಟಿ ಗಡಿ ದಾಟಿದೆ ಶಾರುಖ್ ಮೂವಿ
ಸೋಲಿನ ಕಹಿ ಉಂಡಿದ್ದವರಿಗೆ ಗೆಲುವಿನ ಸಿಹಿ
ತಮ್ಮ ಝೀರೋ ಚಿತ್ರದ ಸೋಲಿನ ನಂತರ ಬರೋಬ್ಬರಿ ಐದು ವರ್ಷಗಳ ಬಳಿಕ ಶಾರುಖ್ ಪಠಾಣ್ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ಚಿತ್ರದಲ್ಲಿ ತಮ್ಮ ಅಮೋಘ ನಟನೆಯಿಂದ ಚಿತ್ರ ರಸಿಕರ ಮನಗೆದ್ದಿರುವ ಶಾರುಖ್, ಆರಂಭದಲ್ಲಿ ಚಿತ್ರಕ್ಕಿದ್ದ ಋಣಾತ್ಮಕ ಅನಿಸಿಕೆಗಳು, ಬಹಿಷ್ಕಾರಗಳು, ಹಲವಾರು ಸಂಘಟನೆಗಳು ವಿರೋಧಗಳ ನಡುವೆಯೂ ವೀಕ್ಷಕ ಪ್ರಭುವಿನ ಮನಗೆಲ್ಲುವಲ್ಲಿ ಸಫಲವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ