ಒಳ್ಳೆ ಹುಡುಗ ಪ್ರಥಮ್ ಮನಸ್ಸಿಗೆ ಬಂದದ್ದನ್ನು ನೇರವಾಗಿ ಹೇಳುವ 'ದೇವ್ರಂಥ ಮನುಷ್ಯ'. ಅದರಲ್ಲೂ ಬಿಗ್ ಬಾಸ್ ವಿನ್ನರ್ನ ಮಾತಿನಲ್ಲಿ ಹಾಸ್ಯದೊಂದಿಗೆ ಒಂದು ಸಂದೇಶವಿರುತ್ತದೆ. ಸದ್ಯ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ 'ನಟಭಯಂಕರ'. ಅಂದರೆ ಮನೆಯಲ್ಲಿಯೇ ಕೂತು ಕಾಲ ಕಳೆದಿಲ್ಲ. ಬದಲಾಗಿ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿ ನೆರವಿನ ಹಸ್ತ ಕೂಡ ಚಾಚಿದ್ದಾರೆ.
ಈ ಸಂದರ್ಭದಲ್ಲಿ ಪ್ರಥಮ್ ಹೇಳಿದ ಒಂದು ಮಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದಿನಸಿ ಪದಾರ್ಥಗಳನ್ನು ವಿತರಿಸುವ ವೇಳೆ ವಾಟರ್ ಬೇಕಾದ್ರೆ ಕೊಡ್ತೀನಿ ಆದರೆ ಕ್ವಾಟರ್ ಮಾತ್ರ ಕೊಡಲ್ಲ ಎಂದಿದ್ದರು. ಆದರೆ ಆ ಬಳಿಕ ಸರ್ಕಾರವೇ ಕ್ವಾಟರ್ ಕೊಡಲು ಲಾಕ್ಡೌನ್ ಸಡಿಲಿಕೆ ಮಾಡಿದ್ದು ಬೇರೆ ವಿಷಯ. ಇದೀಗ ಮತ್ತೊಮ್ಮೆ ತನ್ನ ಹಾಸ್ಯಭರಿತ ಮಾತಿನೊಂದಿಗೆ ಸರ್ಕಾರ ನಡೆಗೆ ಬಗ್ಗೆ ಚಾಟಿ ಬೀಸಿದ್ದಾರೆ ಒಳ್ಳೆ ಹುಡುಗ.
ಹೌದು, ಕೊರೋನಾ ಲಾಕ್ಡೌನ್ನಿಂದ ಈಗ ಎಲವೂ ಆನ್ ಲೈನ್ನಲ್ಲಿಯೇ ನಡೆಯುತ್ತಿದೆ. ಶಾಲೆಗಳು ಆನ್ಲೈನ್ ಟೀಚಿಂಗ್ ಶುರುಮಾಡಿವೆ. ಶಿಕ್ಷಕರು ಮಾಡುವ ಪಾಠ, ಅಸೈನ್ಮೆಂಟ್, ಹೋಂವರ್ಕ್ ಮತ್ತು ಪರೀಕ್ಷೆಗಳೂ ಈಗ ಆನ್ ಲೈನ್ನಲ್ಲಿಯೇ ಮಕ್ಕಳು ಕೇಳಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ.
'ಮುಖದ ಮುಂದೆ ಪಾಠ ಮಾಡಿದ್ರೆ ತಲೆಗೆ ಹತ್ತೋದು ಕಷ್ಟ. ಇನ್ನು ಆನ್ಲೈನ್ ಕ್ಲಾಸ್ ಕೇಳಿ ಪರೀಕ್ಷೆ ಬರೆದರೆ ದೇವ್ರಿಗೇ ಪ್ರೀತಿ. ಹಳ್ಳಿಯಲ್ಲಿ ನೆಟ್ವರ್ಕ್ ಸಮಸ್ಯೆ ಇರುತ್ತೆ. ಆನ್ಲೈನ್ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?' ಎಂದು ಸರ್ಕಾರದ ನಡೆಯನ್ನು ವ್ಯಂಗ್ಯದೊಂದಿಗೆ ಪ್ರಶ್ನಿಸಿದ್ದಾರೆ ಪ್ರಥಮ್. ಸದ್ಯ ಒಳ್ಳೆ ಹುಡುಗ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೆಯೇ 'ದೇವ್ರಂಥ ಮನುಷ್ಯ' ಹೇಳಿದ ಮಾತಿನಲ್ಲೂ ಪಾಯಿಂಟ್ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ