Seema.RSeema.R
|
news18-kannada Updated:October 7, 2020, 7:40 AM IST
ಪುನೀತ್ ರಾಜ್ಕುಮಾರ್
ಪುನೀತ್ ರಾಜಕುಮಾರ್ ಯುವ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವ ನಟ. ಪಿಆರ್ಕೆ ಎಂಬ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರುವ ಪವರ್ಸ್ಟಾರ್, ಈ ಮೂಲಕ ಹೊಸ ನಟ-ನಟಿಯರಿಗೆ ಅವಕಾಶದ ವೇದಿಕೆ ನೀಡುತ್ತಿದ್ದಾರೆ. ಬಾಲಿವುಡ್ನಲ್ಲಿ 'ನೆಪೊಟಿಸಂ' ಸದ್ದು ಮಾಡಿದಾಗ ಪುನೀತ್ ರಾಜ್ಕುಮಾರ್ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು. ಇದಕ್ಕೆ ಕಾರಣ ಕೂಡ ಅವರು ಯುವ ಕಲಾವಿದರಿಗೆ ಪ್ರೋತ್ಸಾಹಿಸುತ್ತಿರುವುದು. ದೊಡ್ಡ ಸಿನಿ ಕುಟುಂಬವಾದರೂ ಯಾವುದೇ ಗುಂಪುಗಾರಿಕೆ, ಸ್ವಜನ ಹಿತಾಸಕ್ತಿ ಮಾಡದೇ ಎಲ್ಲರನ್ನು ಪ್ರೋತ್ಸಾಹಿಸುವ ದೃಷ್ಟಿ. ಸಿನಿಮಾದಲ್ಲಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಎಷ್ಟೋ ಪ್ರತಿಭೆಗಳಿಗಾಗಿ ಸಿನಿಮಾ ನಿರ್ಮಾಣ ಮಾಡಿದೆ ಈ ಪಿಆರ್ಕೆ ನಿರ್ಮಾಣ ಸಂಸ್ಥೆ. ಈಗ ಈ ಸಂಸ್ಥೆ ಸಾಮಾನ್ಯ ಪ್ರತಿಭೆಗೂ ಕೂಡ ಅವಕಾಶ ನೀಡಲು ಮುಂದಾಗಿದೆ.
ಅಚ್ಚರಿಯಾದರೂ ಹೌದು. ನಿಮ್ಮಲ್ಲಿ ನಿಜಕ್ಕೂ ಉತ್ತಮ ಕಲಾವಿದರಿದ್ದರೆ ಅದಕ್ಕೆ ವೇದಿಕೆ ಕಲ್ಪಿಸಲು ಪಿಆರ್ಕೆ ನಿರ್ಮಾಣ ಸಂಸ್ಥೆ ಮುಂದಾಗಿದೆ. ಸದ್ಯ 'ಫ್ಯಾಮಿಲಿ ಪ್ಯಾಕ್' ಚಿತ್ರ ನಿರ್ಮಾಣ ಮಾಡುತ್ತಿರುವ ಸಂಸ್ಥೆ ಇದಕ್ಕಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಮಾಡಬೇಕಿರುವುದು ಇಷ್ಟೇ. ನಿಮ್ಮ ಅಭಿನಯದ ಒಂದು ನಿಮಿಷದ ವಿಡಿಯೋವನ್ನು ಕಳುಹಿಸುವುದು.
'ಸಂಕಷ್ಟಕರ ಗಣಪತಿ' ಸಿನಿಮಾ ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್ 'ಫ್ಯಾಮಿಲಿ ಪ್ಯಾಕ್' ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ 'ಸಂಕಷ್ಟಕರ ಗಣಪತಿ' ಚಿತ್ರದ ನಾಯಕನಾಗಿದ್ದ ಲಿಖಿತ್ ಶೆಟ್ಟಿ ಹೀರೋ. ಈ ಚಿತ್ರದಲ್ಲಿ ಸಾಮಾನ್ಯ ಪ್ರತಿಭೆಗಳಿಗೂ ಅವಕಾಶ ನೀಡಲು ಪಿಆರ್ಕೆ ಸಂಸ್ಥೆ ಮುಂದಾಗಿದೆ.
ಪುನೀತ್ ರಾಜ್ಕುಮಾರ್ ಹೆಂಡತಿ ಅಶ್ವಿನಿ ಈ ನಿರ್ಮಾಣ ಸಂಸ್ಥೆ ಮುನ್ನಡೆಸುತ್ತಿದ್ದು, ಇದುವರೆಗೂ ನಾಲ್ಕು ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ ಈ ಎಲ್ಲಾ ಚಿತ್ರಗಳಲ್ಲಿ ಹೊಸಬರಿಗಎ ಅವಕಾಶ ನೀಡಿರುವುದು. 'ಕವಲುದಾರಿ' ಚಿತ್ರದಲ್ಲಿ ರಿಷಿ ಹೀರೋ. 'ಮಾಯಾ ಬಜಾರ್'ನಲ್ಲಿ ರಾಜ್ ಬಿ. ಶೆಟ್ಟಿ ನಟಿಸಿದ್ದರು. 'ಲಾ' ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಮತ್ತು 'ಫ್ರೆಂಚ್ ಬಿರಿಯಾನಿ' ಚಿತ್ರವನ್ನು ಪನ್ನಗಭರಣ ನಿರ್ದೇಶಿಸಿದ್ದು, ಡ್ಯಾನೀಶ್ ಸೇಠ್ ಮಿಂಚಿದ್ದರು.
Published by:
Seema R
First published:
October 7, 2020, 7:16 AM IST