ಮೀರಾ ಚೋಪ್ರಾ. ನಟಿ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ. ಪರಿಣೀತಿ ಚೋಪ್ರಾ, ಮನ್ನಾರಾ ಚೋಪ್ರಾಗಿಂತಲೂ ಮುಂಚೆಯೇ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಚೆಲುವೆ. 2005 ರಲ್ಲೇ ತಮಿಳು ಚಿತ್ರ ಅನ್ಬೇ ಆರುಯಿರೇ ಮೂಲಕ ಬಣ್ಣ ಹಚ್ಚಿದ ಮೀರಾ ಚೋಪ್ರಾ ೨೦೦೮ರವರೆಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದರು. ತಮಿಳಿನ ಜಾಂಬವನ್, ಲೀ, ಮಾರುದಮಲೈ, ಕಾಲೈ ಚಿತ್ರಗಳ ಜೊತೆಗೆ ತೆಲುಗಿನಲ್ಲಿ ಬಂಗಾರ ಹಾಗೂ ವಾನ ಚಿತ್ರಗಳಲ್ಲಿ ಮಿಂಚಿದ್ದರು. ಮಾತ್ರವಲ್ಲ ೨೦೦೮ರಲ್ಲಿ ತೆರೆಗೆ ಬಂದ ಡಿಬಾಸ್ ದರ್ಶನ್ ಅವರ ಅರ್ಜುನ್ ಚಿತ್ರದಲ್ಲೂ ಚಾಲೆಂಜಿಂಗ್ ಸ್ಟಾರ್ಗೆ ನಾಯಕಿಯಾಗಿದ್ದರು ಮೀರಾ ಚೋಪ್ರಾ.
ಆದರೆ 2008 ರ ಬಳಿಕ ಮೀರಾಗೆ ಅದೃಷ್ಟ ಕೈಕೊಟ್ಟಿತ್ತು, ಬರೋಬ್ಬರಿ ಐದು ವರ್ಷಗಳ ಕಾಲ ಕೆಲಸವಿಲ್ಲದೇ ಕೂರಬೇಕಾಯಿತು. ನಂತರ ೨೦೧೩ರಲ್ಲಿ ಮಾರೂ ಮೂಲಕ ಮತ್ತೆ ಬಣ್ಣ ಹಚ್ಚಿದ ಮೀರಾ, 2014ರಲ್ಲಿ ಗ್ಯಾಂಗ್ ಆಫ್ ಘೋಸ್ಟ್ ಚಿತ್ರದ ಮುಖೇನ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಆ ಬಳಿಕ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಮಿಂಚತೊಡಗಿದ ಮೀರಾ 2019ರಲ್ಲಿ ತೆರೆಗೆ ಬಂದ ಸೆಕ್ಷನ್ 375 ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ.
ಸದ್ಯ ಅವರ ಬಳಿ ನಾಸ್ತಿಕ್, ಮೊಗಲಿ ಪುವ್ವು ಎಂಬ ಎರಡು ಚಿತ್ರಗಳಿದ್ದು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿವೆ. ಜೊತೆಗೆ ದಿ ಟಾಟೂ ಮರ್ಡರ್ಸ್ ಎಂಬ ವೆಬ್ ಸರಣಿಯಲ್ಲೂ ಮೀರಾ ಚೋಪ್ರಾ ನಟಿಸಿದ್ದಾರೆ. ಹೀಗೆ ಕಳೆದ 16 ವರ್ಷಗಳಲ್ಲಿ 15 ಚಿತ್ರಗಳಲ್ಲಿ ನಟಿಸಿರುವ ಮೀರಾ ಚೋಪ್ರಾ ಈಗಲೂ ಚಿತ್ರರಂಗದಲ್ಲಿ ಸ್ಟ್ರಗಲ್ ಮಾಡುತ್ತಿದ್ದಾರಂತೆ. ಅವರ ಸಹೋದರ ಸಂಬಂಧಿ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ದೂರದ ಹಾಲಿವುಡ್ಗೆ ಹೋಗಿ ಅಲ್ಲೂ ತಮ್ಮದೇ ಛಾಪು ಮೂಡಿಸುತ್ತಿದ್ದು, ಅವರಿಂದ ಮೀರಾ ಚೋಪ್ರಾಗೆ ಯಾವುದೇ ಉಪಯೋಗವಾಗಿಲ್ಲವಂತೆ.
ಹೌದು, ಈ ಬಗ್ಗೆ ಖುದ್ದು ಮೀರಾ ಚೋಪ್ರಾ ಅವರೇ ಹೇಳಿಕೊಂಡಿದ್ದಾರೆ. `ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಪ್ರಿಯಾಂಕಾ ಚೋಪ್ರಾ ತಂಗಿ ಬರುತ್ತಿದ್ದಾರಂತೆ ಎಂಬ ಸುದ್ದಿ ಹರಡಿತ್ತು ನಿಜ. ಆದರೆ ನನಗೂ, ಪ್ರಿಯಾಂಕಾ ಚೋಪ್ರಾಗೂ ಹೋಲಿಕೆ ಮಾಡಿದ್ದನ್ನು ನಾನು ನೋಡಲಿಲ್ಲ. ನನಗೆ ಪ್ರಿಯಾಂಕಾ ಚೋಪ್ರಾ ಹೆಸರಿನಿಂದ ಯಾವೊಂದು ಅವಕಾಶ ಕೂಡ ಸಿಕ್ಕಿಲ್ಲ. ನಾನು ಪ್ರಿಯಾಂಕಾ ಚೋಪ್ರಾ ತಂಗಿ ಅಂತ ಯಾವೊಬ್ಬ ನಿರ್ಮಾಪಕ ಅಥವಾ ನಿರ್ದೇಶಕ ನನ್ನನ್ನು ಕರೆದು ಅವರ ಚಿತ್ರದಲ್ಲಿ ಅವಕಾಶ ಕೊಟ್ಟಿಲ್ಲ.
ಇದನ್ನೂ ಓದಿ: ನನ್ನ ದೇಶ ನರಳುತ್ತಿದೆ ಸಹಾಯ ಮಾಡಿ.. ಭಾರತಕ್ಕಾಗಿ ವಿಶ್ವದೆದುರು ಮೊರೆಯಿಟ್ಟ ನಟಿ ಪ್ರಿಯಾಂಕ ಚೋಪ್ರಾ..!
ಆಕೆಯ ಸಂಬಂಧಿಯಾಗಿರುವುದರಿಂದ ನನಗೆ ಚಿತ್ರರಂಗದಲ್ಲಿ ಯಾವುದೇ ಸಹಾಯ ಆಗಿಲ್ಲ ನಿಜ, ಆದರೆ ಸಿನಿಮಾ ಹಿನ್ನಲೆಯ ಕುಟುಂಬ ಎಂಬುದು ಗೊತ್ತಿದ್ದ ಕಾರಣ ಎಲ್ಲರೂ ನನ್ನನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿದ್ದರು. ಅದೊಂದನ್ನು ಬಿಟ್ಟರೆ ಪ್ರಿಯಾಂಕಾ ಚೋಪ್ರಾರಿಂದ ನನಗೆ ಯಾವುದೇ ಸಹಾಯ ಆಗಿಲ್ಲ. ಚಿತ್ರರಂಗಕ್ಕೆ ಕನಸು ಹೊತ್ತು ಬರುವ ಪ್ರತಿಯೊಬ್ಬ ಹೊಸಬರಂತೆಯೇ ನಾನೂ ಆಡಿಷನ್ಗಳಿಗೆ ಹೋಗಿ, ಹೋರಾಟದ ಮೂಲಕವೇ ಅವಕಾಶ ಪಡೆದಿದ್ದು. ಈ ಬಗ್ಗೆ ನನಗೆ ಹೆಮ್ಮೆಯಿದೆ.' ಎಂದು ಮನಬಿಚ್ಚಿ ಮಾತನಾಡಿದ್ದಾರೆ ಮೀರಾ ಚೋಪ್ರಾ.
ಪ್ರಿಯಾಂಕಾ ಚೋಪ್ರಾ, ಪರಿಣೀತಿ ಚೋಪ್ರಾ, ಮನ್ನಾರಾ ಚೋಪ್ರಾ ಹಾಗೂ ಮೀರಾ ಚೋಪ್ರಾ, ಹೀಗೆ ನಾಲ್ವರು ಚೋಪ್ರಾ ಸಹೋದರಿಯರು ಸದ್ಯ ವಿವಿಧ ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ. ಪ್ರಿಯಾಂಕಾ ಬಾಲಿವುಡ್ ಹಾಗೂ ಹಾಲಿವುಡ್ನಲ್ಲಿ ಮಿಂಚುತ್ತಿದ್ದರೆ, ಪರಿಣೀತಿ ಚೋಪ್ರಾ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇನ್ನು ಮನ್ನಾರಾ ಚೋಪ್ರಾ ಹಾಗೂ ಮೀರಾ ಚೋಪ್ರಾ ಕನ್ನಡದಲ್ಲೂ ನಟಿಸಿದ್ದು, ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ