Chikkamagaluru: ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಟ; ವೃದ್ಧೆಯನ್ನು ಆಸ್ಪತ್ರೆಗೆ ಜೋಳಿಗೆಯಲ್ಲಿ ಹೊತ್ತೊಯ್ದು ಸಂಬಂಧಿಕರು!

ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಟಮ್ಮನವರಿಗೆ ಕಳೆದೊಂದು ವಾರದಿಂದಲೂ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ಯಲು ರಸ್ತೆ ಇಲ್ಲದ ಕಾರಣ ಸ್ಥಳೀಯರು ಹಾಗೂ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಜೋಳಿಗೆಯಲ್ಲಿ ವೃದ್ಧೆಯನ್ನು ಹೊತ್ತುಕೊಂಡು ಹೋದ ಗ್ರಾಮಸ್ಥರು

ಜೋಳಿಗೆಯಲ್ಲಿ ವೃದ್ಧೆಯನ್ನು ಹೊತ್ತುಕೊಂಡು ಹೋದ ಗ್ರಾಮಸ್ಥರು

  • Share this:
ಚಿಕ್ಕಮಗಳೂರು:  ಒಮ್ಮೆ ಈ ಸುದ್ದಿಯನ್ನ ನೋಡಿದ್ರೆ ನಾವಿನ್ನೂ ಯಾವ ಕಾಲಮಾನದಲ್ಲಿ ಇದ್ದೇವೆ ಅನ್ನೋ ಯಕ್ಷಪ್ರಶ್ನೆ ಮೂಡದೆ ಇರೋದಿಲ್ಲ. ಓಡಾಡಕ್ಕೆ ರಸ್ತೆನೂ ಇಲ್ಲ (No Road). ಸಕಾಲಕ್ಕೆ ಚಿಕಿತ್ಸೆಯೂ ಇಲ್ಲ. ಇದು ಕಾಫಿನಾಡ ಮಲೆನಾಡು ಭಾಗದ ಹಲವು ಗ್ರಾಮಗಳ (Villages) ದುಸ್ಥಿತಿ. ಒಂದಲ್ಲ-ಎರಡಲ್ಲ ಹತ್ತಾರು ಬಾರಿ ಮನವಿ ಮಾಡಿದ್ರು ಕ್ಯಾರೆ ಅನ್ನೋರು ಇಲ್ಲ. ಅಷ್ಟಕ್ಕೂ ಈ ಪರಿ ಸಂಕಟ ಪಡುತ್ತಿರುವುದು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ (Gantemakki) ಗ್ರಾಮದಲ್ಲಿ. ಕಳೆದ 3 ವರ್ಷಗಳಿಂದಲೂ ಜಿಲ್ಲೆಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಲ್ಲೂ ಸ್ವಾತಂತ್ರ್ಯ ಸಿಕ್ಕಿ ದಶಕಗಳೇ ಕಳೆದರು ಇನ್ನೂ ರಸ್ತೆಯನ್ನೇ ಕಾಣದ ಗ್ರಾಮಗಳ ಪರಿಸ್ಥಿತಿಯಂತು ಹೇಳತೀರದಾಗಿದೆ. ಯಾವ ಮಟ್ಟಿಗೆ ಅಂದ್ರೆ ಬೇಗನೆ ಆಸ್ಪತ್ರೆಗೆ ಹೋಗಿ ಜೀವ ಉಳಿಸಿಕೊಳ್ಳಬೇಕು ಅಂದ್ರೆ ಜೋಳಿಗೆ ಹೊತ್ತು ಕುಟುಂಬಸ್ಥರೇ ಸಾಗಿಸುವ ಸ್ಥಿತಿ ಎದುರಾಗಿದೆ.

ರಸ್ತೆಗಾಗಿ ದಶಕಗಳಿಂದ ಜನರ ಹೋರಾಟ

ಇದರಿಂದ ರೋಸಿ ಹೋಗಿರುವ ಗ್ರಾಮಸ್ಥರು ಸರ್ಕಾರ ಹಾಗೂ ಸಂಬಂಧ ಪಟ್ಟ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 2021 ರಲ್ಲಿ ಸ್ವಾಮಿ, ರಸ್ತೆ ಮಾಡಿಸಿಕೊಡಿ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಆರ್. ಅಶೋಕ್ ಗೆ ವೃದ್ಧೆ ವೆಂಕಮ್ಮ ಮನವಿ ಮಾಡಿದ್ರು. ತಾಲೂಕು-ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಮನವಿ ಮಾಡಿದರು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಅನ್ನೋದು ಇವರ ಆಕ್ರೋಶ.ಅಷ್ಟಕ್ಕೂ ಇಲ್ಲಿ ಸೃಷ್ಟಿಯಾಗಿರುವ ಸಮಸ್ಯೆ ಏನು ಅಂದ್ರೆ, ಸುತ್ತಲೂ ನೂರಾರು ಎಕರೆ ಜಮೀನಿದೆ. 8-10 ಕುಟುಂಬಗಳ ಗಂಟೆಮಕ್ಕಿ ಎಂಬ ಗ್ರಾಮವೂ ಇದೆ. ಇವರೆಲ್ಲಾ ದಶಕಗಳಿಂದಲೂ ಇಲ್ಲೇ ಜೀವನ ಸಾಗಿಸುತ್ತಿದ್ದಾರೆ. ನಮ್ಮಜ್ಜಿ ಕಾಲದಿಂದಲೂ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಲ್ಲಿಸಿ ಸಾಕಾಗಿ ಹೋಗಿದೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಣು ತೆರೆಯುತ್ತಿಲ್ಲ. ಗದ್ದೆ-ಹೊಲದ ಕಾಲು ದಾರಿಯಲ್ಲಿ ನಮ್ಮಓಡಾಟಕ್ಕೆ ಕಷ್ಟ ಆಗಿರುವಾಗ ವೃದ್ಧರ ಪಾಡೇನು ಎಂದು ಕುಟುಂಬಸ್ಥರು ನೋವು ಹೊರಹಾಕುತ್ತಿದ್ದಾರೆ.

ಜೋಳಿಗೆಯಲ್ಲಿ ವೃದ್ಧೆ ಹೊತ್ತು ಹೊಯ್ದ ಕುಟುಂಬಸ್ಥರು

60 ವರ್ಷಗಳಿಂದ ಇಲ್ಲಿ ಜೀವನ ಮಾಡಿದ್ರು ನಮ್ಮ ಗೋಳು ಕೇಳೋರು ಯಾರು ಇಲ್ಲ. ಆದಿವಾಸಿಗಳ ಭಾವನೆಗಳಿಗೆ ಸರ್ಕಾರ ಬೆಲೆ ಕೊಡುತ್ತಿಲ್ಲ ಅಂತ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ನೋವು ತೋಡಿಕೊಳ್ಳುತ್ತಿದ್ದಾರೆ. ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಟಮ್ಮನವರಿಗೆ ಕಳೆದೊಂದು ವಾರದಿಂದಲೂ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ಯಲು ದಾರಿ ಇಲ್ಲದೆ ಕುಟುಂಬಸ್ಥರು ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟಾಗ ಸ್ಥಳೀಯರು ಹಾಗೂ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ: Bhima River: ಉಜನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು; ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ

ಮನವಿ ಮಾಡಿದ್ರು ತಲೆಕೆಡಿಸಿಕೊಳ್ಳದ ಅಧಿಕಾರಿಗಳು :

ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಮ್ಮ ಕಳೆದ 65-70 ವರ್ಷಗಳಿಂದಲೂ ಗಂಟೆಮಕ್ಕಿ ಗ್ರಾಮದಲ್ಲೇ ವಾಸವಿದ್ದಾರೆ. ಇಲ್ಲಿ ಸುಮಾರು 8-10 ಮನೆಗಳಿದ್ದು, ಯಾರಿಗೂ ಓಡಾಡಲು ಜಾಗವಿಲ್ಲ. ಜಮೀನಿಗೆ ಹೋಗಲು ದಾರಿ ಇಲ್ಲ. ಹೊಲ-ಗದ್ದೆಗಳಿಗೆ ಗೊಬ್ಬರ, ಮನೆಗೆ ರೇಷನ್ ಎಲ್ಲವನ್ನು ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಸ್ಥಳೀಯರು ಹತ್ತಾರು ವರ್ಷಗಳಿಂದ ರಸ್ತೆ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನೂರಾರು ಮನವಿ ನೀಡಿದ್ದಾರೆ. ಆದರೆ ಈವರೆಗೂ ಯಾರೊಬ್ಬರೂ ಕೂಡ ಇವರ ನೋವಿಗೆ ಸ್ಪಂದಿಸಿಲ್ಲ.
ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಹಸಿಲ್ದಾರ್, ಎಸಿ ಹಾಗೂ ಡಿಸಿಗೂ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.2021ರಲ್ಲಿ ಖುದ್ದು ವೆಂಕಮ್ಮನವರೇ ಕಂದಾಯ ಸಚಿವ ಆರ್.ಅಶೋಕ್ ಗೆ ಮನವಿ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭೇಟಿ ನೀಡಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡುತ್ತಾರೆ. ಆದರೆ, ಈವರೆಗೂ ಯಾರು ರಸ್ತೆ ನಿರ್ಮಿಸಿ ಕೊಡುವ ಗೋಜಿಗೆ ಹೋಗಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡರೆ ಅಧಿಕಾರಿಗಳು ಅಕ್ಕಪಕ್ಕದ ಜಮೀನು, ಮಾಲೀಕರ ಬಳಿ ಜಾಗ ಬಿಡಿಸಿಕೊಟ್ಟರೆ ರಸ್ತೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾರಂತೆ. ಆದರೆ, ಅಕ್ಕಪಕ್ಕದ ಜಮೀನುಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಮುಂದಾಗುತ್ತಿಲ್ಲ. ಹಾಗಾಗಿ, ಗಂಟೆಮಕ್ಕಿ ಗ್ರಾಮದ ಎಂಟತ್ತು ಕುಟುಂಬಗಳು ಕಳೆದ 65-70 ವರ್ಷಗಳಿಂದಲೂ ಇದೇ ರೀತಿಯಾಗಿ ಬದುಕುತ್ತಿದ್ದಾರೆ.

ಇದನ್ನೂ ಓದಿ: BBMP: ವಿಪ್ರೋ ಮುಂದೆ ಮಂಡಿಯೂರಿದ್ರಾ ಬಿಬಿಎಂಪಿ, ಕಂದಾಯ ಇಲಾಖೆ ಅಧಿಕಾರಿಗಳು?

ರಸ್ತೆ ಇಲ್ಲದೆ ಜನರ ಪರದಾಟ:

ಮಲೆನಾಡಿನ ಕಳಸ ತಾಲೂಕಿನ ಜನರು ರಸ್ತೆ ಸಂಪರ್ಕ ಇಲ್ಲದೆ ನಿತ್ಯ ಗೋಳು ಅನುಭವಿಸುತ್ತಿದ್ದಾರೆ‌. ಕಳಸ ತಾಲೂಕಿನ ಜನರು ಒಂದಲ್ಲ ಸಮಸ್ಯೆ ಯಿಂದ ಬಳಲುತ್ತಿದ್ದಾರೆ‌. ಈ ಆಧುನಿಕ ಭಾರತದಲ್ಲೂ ರಸ್ತೆ ಸಂಪರ್ಕ ಇಲ್ಲದೆ ನರಕಯಾತನೆ ಅನುಭವಿಸುವಂತಹ ಪರಿಸ್ಥಿತಿ ಕೆಲ ಜನರಿಗೆ ಎದುರಾಗಿದೆ‌. ರಸ್ತೆ ಮಾಡಿಸಿಕೊಡಿ ಎಂದು ಎಷ್ಟೇ ಮನವಿ ಮಾಡಿದ್ರು ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
Published by:ಪಾವನ ಎಚ್ ಎಸ್
First published: