ಕೆಲ ದಿನಗಳ ಹಿಂದಷ್ಟೇ ನ್ಯೂಸ್ 18 ಕನ್ನಡ ವಾಹಿನಿ ಗಾಂಧಿನಗರದ ಮೇನಕಾ ಚಿತ್ರಮಂದಿರ ಬಂದ್ ಆಗಲಿರುವ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಮಾರ್ಚ್ 2020ರಂದು ಬಾಗಿಲು ಹಾಕಿದ ಮೇನಕಾ ಚಿತ್ರಮಂದಿರ ಮತ್ತೆ ಶೇಕಡಾ 50ರಷ್ಟು ಹಾಗೂ ಹೌಸ್ಫುಲ್ ಪ್ರದರ್ಶನಕ್ಕೆ ಅವಕಾಶ ಕೊಟ್ಟಾಗಲೂ ಮತ್ತೆ ಬಾಗಿಲು ತೆರೆದಿರಲಿಲ್ಲ. ಉತ್ತಮ ಕನ್ನಡ ಚಿತ್ರಗಳು ಥಿಯೇಟರ್ನಲ್ಲಿ ರಿಲೀಸ್ ಮಾಡಲು ಮುಂದಾಗದ ಕಾರಣ ಕಳೆದ 15 ತಿಂಗಳಿನಿಂದ ಮೇನಕಾ ಬಂದ್ ಆಗಿತ್ತು. ಇದರಿಂದಾಗಿ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 20 ಮಂದಿಗೆ ಆಗಿನಿಂದಲೂ ಸಂಬಳವಿರಲಿಲ್ಲ. ಕೆಲವರು ಬೇರೆ ಕೆಲಸಗಳತ್ತ ಮುಖ ಮಾಡಿದರು. ಆದರೆ ಮೇನಕಾ ಥಿಯೇಟರ್ ಮ್ಯಾನೇಜರ್ ರಾಮ್ ಕುಮಾರ್ ಕೆಲಸವೂ ಸಿಗದೆ, ಸಂಬಳವೂ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಗ್ಗೆ ನ್ಯೂಸ್ 18 ಕನ್ನಡ ವರದಿ ಮಾಡಿಬೆಳಕು ಚೆಲ್ಲಿತ್ತು.
ಕಾರ್ಯಕ್ರಮವನ್ನು ನೋಡಿದ ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ತಕ್ಷಣ ಕಾರ್ಯಪ್ರವೃತ್ತರಾದರು. ಕಳೆದ ಮೂರು ತಿಂಗಳಿನಿಂದ 20 ಸಾವಿರಕ್ಕೂ ಅಧಿಕ ಜನರಿಗೆ ದಿನಸಿ ಕಿಟ್ಗಳನ್ನು ವಿತರಿಸಿ, ಮೊಬೈಲ್ ಆಕ್ಸಿಜನ್ ಸೆಂಟರ್, ಉಚಿತ ಔಷಧ ಸರಬರಾಜು, ವ್ಯಾಕ್ಸಿನೇಷನ್ ಡ್ರೈವ್, ಕೊರೋನಾ ಬಗ್ಗೆ ಜಾಗೃತಿ ಅಂತ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಸುತ್ತಾಡಿರುವ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಅವರು ರಾಮ್ ಕುಮಾರ್ಗೆ ಸಹಾಯ ಹಸ್ತ ಚಾಚಿದ್ದಾರೆ.
ಹಷಿರ್ಕಾ ಹಾಗೂ ಭುವನ್ ಅವರು ರಾಮ್ ಕುಮಾರ್ ಅವರಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಗೆಳೆಯ ಸಿಎಸ್ ವಾಟರ್ ಪ್ರೂಫಿಂಗ್ ಸಲ್ಯೂಷನ್ಸ್ನ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಅವರ ಗಮನಕ್ಕೂ ರಾಮ್ ಕುಮಾರ್ ಅವರ ವಿಷಯವನ್ನು ತಂದಿದ್ದಾರೆ.
ಇತ್ತೀಚೆಗಷ್ಟೆ ಆರ್ಆರ್ ನಗರದಲ್ಲಿರುವ ಮೇನಕಾ ಥಿಯೇಟರ್ ಮ್ಯಾನೇಜರ್ ಆಗಿದ್ದ ರಾಮ್ ಕುಮಾರ್ ಅವರ ಮನೆಗೆ ಭೇಟಿ ನೀಡಿದ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಹಾಗೂ ಸಿಎಸ್ ವಾಟರ್ ಪ್ರೂಫಿಂಗ್ ಸಲ್ಯೂಷನ್ಸ್ನ ಎಂಡಿ ಶಂಕರ್ ಅವರು ಸಹಾಯ ಹಸ್ತ ಚಾಚಿದ್ದಾರೆ. ಒಂದು ತಿಂಗಳಿಗೆ ಕುಟುಂಬಕ್ಕೆ ಆಗುವಷ್ಟು ದಿನಸಿ ಕಿಟ್ ಜೊತೆಗೆ 10 ಸಾವಿರ ರೂಪಾಯಿಯಷ್ಟು ಧನಸಹಾಯ ಕೂಡ ಮಾಡಿದ್ದಾರೆ.
ಮಾತ್ರವಲ್ಲ ಶಂಕರ್ ಅವರು ತಮ್ಮ ಒಡೆತನದ ಸಿಎಸ್ ವಾಟರ್ ಪ್ರೂಫಿಂಗ್ ಸಲ್ಯೂಷನ್ಸ್ನಲ್ಲಿಯೇ ಕೆಲಸದ ಆಫರ್ ಅನ್ನೂ ಕೊಟ್ಟಿದ್ದಾರೆ. ಆಫರ್ ಲೆಟರ್ ಜೊತೆಗೆ ಬಂದಿದ್ದ ಭುವನ್, ಹರ್ಷಿಕಾ ಮತ್ತು ಶಂಕರ್, ಅದನ್ನು ರಾಮ್ ಕುಮಾರ್ ಅವರಿಗೆ ನೀಡಿದರು.
ಇದನ್ನೂ ಓದಿ: Samantha Akkineni: ವೈರಲ್ ಆಗುತ್ತಿರುವ ಸಮಂತಾರ ಬ್ಯಾಕ್ಲೆಸ್ ಫೋಟೋ ನೋಡಿ ಸುಸ್ತಾದ ರಾಕುಲ್ ಪ್ರೀತ್ ಸಿಂಗ್..!
ನ್ಯೂಸ್ 18 ಕನ್ನಡ ವಾಹಿನಿಯ ಕಳಕಳಿಯ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಮೆಚ್ಚುಗೆ ವ್ಯಕ್ತಪಡಿಸಿದರು. ನಟ ಭುವನ್ ಪೊನ್ನಣ್ಣ, ವಾಹಿನಿಯ ಯಾವುದೇ ಸಮಾಜ ಮುಖಿ ಕೆಲಸಗಳಿಗೂ ಜೊತೆಯಾಗಿ ನಿಲ್ಲುವ ಭರವಸೆ ನೀಡಿದರು. ಇನ್ನು ಬಡತನ, ಹಸಿವು ಎಲ್ಲವನ್ನೂ ತುಂಬಾ ಹತ್ತಿರದಿಂದ ನೋಡಿದವನು, ಅನುಭವಿಸಿದವನು ನಾನು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಎಂದಿಗೂ ಸಿದ್ಧ ಎಂದು ಸಿಎಸ್ ವಾಟರ್ ಪ್ರೂಫಿಂಗ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ಶಂಕರ್ ಅವರೂ ಆಶ್ವಾಸನೆ ನೀಡಿದರು. ಹೀಗೆ ಎಲ್ಲರ ಸಹಾಯ ಪಡೆದ ರಾಮ್ ಕುಮಾರ್ ಅವರು ಮುಂದಿನ ಸೋಮವಾರವೇ ಬೊಮ್ಮನಹಳ್ಳಿಯಲ್ಲಿರುವ ಕಚೇರಿಗೆ ಬಂದು ಕೆಲಸಕ್ಕೆ ಸೇರುವುದಾಗಿ ಧನ್ಯವಾದ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ