'ಕೆ.ಜಿ.ಎಫ್ ಚಾಪ್ಟರ್ 2' ಯಾವಾಗ ಶುರು: ಇದೇ ಡಿಸೆಂಬರ್​ಗೆ ರಿಲೀಸ್ ಆಗುತ್ತಾ ಭಾಗ-2..?

'ಕೆ.ಜಿ.ಎಫ್- 2' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು, ಏಪ್ರಿಲ್ ಮಧ್ಯದಲ್ಲಿ ಶೂಟಿಂಗ್ ಶುರುವಾಗಲಿದೆಯಂತೆ. ಕೋಲಾರ ಸ್ಟೋರಿ ಅಂತ್ಯವಾಗಿರುವ ಕಾರಣ ರಾಕಿ ಭಾಯ್ ಹೊಸ ಸ್ಟೋರಿ ಪ್ರಾರಂಭವಾಗಲಿದೆ.

Anitha E | news18
Updated:February 7, 2019, 4:30 PM IST
'ಕೆ.ಜಿ.ಎಫ್ ಚಾಪ್ಟರ್ 2' ಯಾವಾಗ ಶುರು: ಇದೇ ಡಿಸೆಂಬರ್​ಗೆ ರಿಲೀಸ್ ಆಗುತ್ತಾ ಭಾಗ-2..?
'ಕೆ.ಜಿ.ಎಫ್​ ಚಾಪ್ಟರ್​ 2'
Anitha E | news18
Updated: February 7, 2019, 4:30 PM IST
-ಹರ್ಷವರ್ಧನ್, 

'ಕೆ.ಜಿ.ಎಫ್'.... ಕೋಲಾರ್ ಗೋಲ್ಡ್ ಫೀಲ್ಡ್ಸ್ ಅಂತ ಟೈಟಲ್ ಇಟ್ಟಿದ್ದರೂ, ಕರ್ನಾಟಕದ ಗೋಲ್ಡನ್ ಫಿಲ್ಮ್ ಎಂದು ಕರೆಸಿಕೊಳ್ಳುತ್ತಿರುವ ಚಿತ್ರ. ಈ ಸಿನಿಮಾ ಈಗಲೂ ರಾಜ್ಯ ಮಾತ್ರವಲ್ಲ, ದೇಶ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಹೀಗಾಗಿಯೇ 'ಕೆ.ಜಿ.ಎಫ್ ಚಾಪ್ಟರ್ 2' ಮೇಲೂ ಕುತೂಹಲ, ನಿರೀಕ್ಷೆಗಳು ಗರಿಗೆದರಿವೆ. ಹಾಗಾದರೆ ಚಾಪ್ಟರ್​ 2 ಈಗ ಯಾವ ಹಂತದಲ್ಲಿದೆ? ಶೂಟಿಂಗ್ ಯಾವಾಗ ಶುರು? ರಿಲೀಸ್ ಯಾವಾಗ? ಇಲ್ಲಿದೆ ನೋಡಿ ಎಕ್ಸ್‍ಕ್ಲೂಸಿವ್ ಮಾಹಿತಿ...

ಇದನ್ನೂ ಓದಿ: Movie Review: 'ನಾಟ್ಯಸಾರ್ವಭೌಮ'ನಾಗಿ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟ 'ನಟಸಾರ್ವಭೌಮ'

2018ರ ಡಿಸೆಂಬರ್ 21ರಂದು ರಿಲೀಸ್ ಆದ ಕೆಜಿಎಫ್ ಇದೇ ಫೆಬ್ರವರಿ 8ರಂದು 50 ದಿನಗಳನ್ನು ಪೂರೈಸಲಿದೆ. ಅದರ ಜತೆಗೆ ಬರೋಬ್ಬರಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡು ಸೂಪರ್ ಸಕ್ಸಸ್‍ನೊಂದಿಗೆ ಬೀಗುತ್ತಿದೆ. 'ಕೆ.ಜಿ.ಎಫ್' ಮುರಿದ ಹಳೆಯ ದಾಖಲೆಗಳೆಷ್ಟೋ, ಸೃಷ್ಟಿಸಿದ ಹೊಸ ರೆಕಾರ್ಡ್‍ಗಳೆಷ್ಟೋ... ಕನ್ನಡ ಮಾತ್ರವಲ್ಲ ಸೌತ್ ಇಂಡಸ್ಟ್ರಿ ಅಂದ್ರೆ ಸಾಕು ಈಗ 'ಕೆ.ಜಿ.ಎಫ್' ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ 'ಕೆಜಿಎಫ್' ಹವಾ ಭಾರತದಾದ್ಯಂತ ಮನೆ ಮಾಡಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆದ 'ಕೆ.ಜಿ.ಎಫ್', ಕನ್ನಡ ಒಂದರಲ್ಲೇ ಬರೋಬ್ಬರಿ 140 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ. ಇನ್ನು ಹಿಂದಿಯಲ್ಲಿ 50 ಕೋಟಿ ರೂಪಾಯಿ, ತೆಲುಗಿನಲ್ಲಿ 20 ಕೋಟಿ ಹಾಗೂ ತಮಿಳಿನಲ್ಲಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡಿದೆ ಕೆಜಿಎಫ್. ಈ ಮೂಲಕ 100 ಕೋಟಿ ದಾಟಿದ ಮೊದಲ ಕನ್ನಡ ಚಿತ್ರ ಅನ್ನೋ ಇತಿಹಾಸ ಸೃಷ್ಟಿಸಿರುವ ಕೆಜಿಎಫ್, ಉಳಿದ ನಾಲ್ಕೂ ಪರಭಾಷೆಗಳಲ್ಲೂ ಡಬ್ ಆಗಿ ಹೆಚ್ಚು ಕಲೆಕ್ಷನ್ ಮಾಡಿಕೊಂಡ ಕನ್ನಡ ಚಿತ್ರ ಎಂಬ ಖ್ಯಾತಿಯನ್ನೂ ಪಡೆದಿದೆ.

ಇನ್ನು ವಿದೇಶಗಳಲ್ಲಿ ಇದೇ ಫೆಬ್ರವರಿ 1ರಿಂದ ರೀರಿಲೀಸ್ ಆಗಿರುವ ಕೆಜಿಎಫ್, ಓವರ್‍ಸೀಸ್‍ನಿಂದಲೇ 6 ಕೋಟಿ ರೂಪಾಯಿಗೂ ಹೆಚ್ಚು ಹಣ ಲೂಟಿ ಮಾಡಿದೆ. ಹೀಗೆ ಬಜೆಟ್, ಮೇಕಿಂಗ್, ರಿಲೀಸ್, ಕಲೆಕ್ಷನ್ ಎಲ್ಲ ವಿಷಯಗಳನ್ನೂ ಕೆಜಿಎಫ್ ಕನ್ನಡ ಚಿತ್ರರಂಗಕ್ಕೆ ಹೊನ್ನ ಕಳಶವಾಗಿದೆ. ಇದ್ರ ನಡುವೆಯೇ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ 2 ಕುರಿತು ತಲೆ ಕೆಡಿಸಿಕೊಂಡಿದ್ದಾರೆ. ಚಾಪ್ಟರ್ 1ಗಿಂತ ದೊಡ್ಡ ಮಟ್ಟದಲ್ಲಿ ಈ ಸೀಕ್ವಲ್ ಮಾಡಬೇಕು ಅಂತ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

'ಕೆ.ಜಿ.ಎಫ್' ಚಿತ್ರ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ಬರೋಬ್ಬರಿ 5 ವರ್ಷಗಳ ಸಮಯ ತೆಗೆದುಕೊಂಡಿದ್ದರು. ಇನ್ನು ಮೊದಲ ಚಿತ್ರಕ್ಕೆ ಸಿಕ್ಕ ಸೂಪರ್ ಸಕ್ಸಸ್‍ನಿಂದ ಅವr ಮೇಲೆ ಜವಾಬ್ದಾರಿ ಇನ್ನೂ ಹೆಚ್ಚಿದೆ. ಮಾತ್ರವಲ್ಲ 80 ಕೋಟಿ ರೂಪಾಯಿ ಬಜೆಟ್ ಹಾಕಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ಸಹ, ಈ ಯಶಸ್ಸಿನ ಬೆನ್ನೇರಿ 'ಚಾಪ್ಟರ್ 2' ಅನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಜೋಷ್‍ನಲ್ಲಿದ್ದಾರೆ. ಹಾಗೇ ಚಿತ್ರಕ್ಕಾಗಿ ಹಾಗೂ ತಮ್ಮ ಪಾತ್ರಕ್ಕಾಗಿ ಗಡ್ಡ ಬಿಟ್ಟುಕೊಂಡು ಸುಮಾರು ಎರಡು ವರ್ಷಗಳ ಕಾಲ 'ಕೆ.ಜಿ.ಎಫ್‍'ಗಾಗಿ ದುಡಿದಿದ್ದ ರಾಕಿ ಭಾಯ್ ಯಶ್ ಕೂಡ 'ಚಾಪ್ಟರ್ 2' ತಂಡದ ಹೊಸ ಹುರುಪಿನೊಂದಿಗೆ ಸಿದ್ಧತೆ ಪ್ರಾರಂಭಿಸಿದ್ದಾರೆ.
Loading...

'ಕೆ.ಜಿ.ಎಫ್' ಪ್ರೀಪ್ರೊಡಕ್ಷನ್ ಅದಾಗಲೇ ಶುರುವಾಗಿದ್ದು, ಫೆಬ್ರವರಿಯಲ್ಲಿ ಶೂಟಿಂಗ್ ಪ್ರಾರಂಭ. ಆರು ತಿಂಗಳಲ್ಲಿ ಅರ್ಥಾತ್ ಆಗಸ್ಟ್ ಹೊತ್ತಿಗೆ ಕುಂಬಳಕಾಯಿ ಹೊಡೆದು ಶೂಟಿಂಗ್ ಪ್ಯಾಕಪ್ ಮಾಡಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗುತ್ತವೆ. 2018ರಲ್ಲಿ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು, 2019ರ ಡಿಸೆಂಬರ್​ಗೆ 'ಕೆಜಿಎಫ್ ಚಾಪ್ಟರ್ 2' ರಿಲೀಸ್ ಪಕ್ಕಾ ಎಂದೇ ಸುದ್ದಿಗಳು ಗಾಂಧಿನಗರದ ಗಲ್ಲಿಗಳಲ್ಲಿ ರೆಕ್ಕೆ ಬಿಚ್ಚಿದ್ದವು. 'ಕೆ.ಜಿ.ಎಫ್' ಹವಾ ಕಡಿಮೆಯಾಗುವುದರ ಒಳಗೆ ಸೀಕ್ವಲ್‍ಅನ್ನೂ ರಿಲೀಸ್ ಮಾಡುವ ಪ್ಲ್ಯಾನ್ ಅನ್ನೋ ಲೆಕ್ಕಾಚಾರ ಎನ್ನಲಾಗಿತ್ತು. ಆದರೆ ಈಗ ಎಲ್ಲ ಉಲ್ಟಾ ಆಗಿದೆ.

ಇದನ್ನೂ ಓದಿ: PHOTOS: ಬೆಂಗಳೂರಿನ ದೇವಾಲಯಗಳಿಗೆ ಭೇಟಿ ನೀಡಿದ 'ನಟಸಾರ್ವಭೌಮ'

ಸದ್ಯದ ಮಾಹಿತಿ ಪ್ರಕಾರ 'ಕೆ.ಜಿ.ಎಫ್- 2' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಪ್ರಾರಂಭವಾಗಿದ್ದು, ಏಪ್ರಿಲ್ ಮಧ್ಯದಲ್ಲಿ ಶೂಟಿಂಗ್ ಶುರುವಾಗಲಿದೆಯಂತೆ. ಕೋಲಾರ ಸ್ಟೋರಿ ಅಂತ್ಯವಾಗಿರುವ ಕಾರಣ ರಾಕಿ ಭಾಯ್ ಹೊಸ ಸ್ಟೋರಿ ಪ್ರಾರಂಭವಾಗಲಿದೆ. ಎಲ್ಲವೂ ಅಂದುಕೊಂಡಂತಾದರೆ ಅಕ್ಟೋಬರ್​ಗೆ 'ಕೆ.ಜಿ.ಎಫ್ 2' ಚಿತ್ರೀಕರಣ ಮುಗಿಯಲಿದೆ. ಆ ಬಳಿಕ ಮೊದಲು ಕನ್ನಡದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯಲಿದ್ದು, ನಂತರವಷ್ಟೇ ಒಂದೊಂದಾಗಿ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್‍ಗಳ ಚಿತ್ರೀಕರಣೋತ್ತರ ಕೆಲಸಗಳು ನಡೆಯಲಿವೆ. ಒಂದೊಂದು ಭಾಷೆಗೆ ಒಂದೊಂದು ತಿಂಗಳು ಅಂತ ಚಿತ್ರತಂಡ ಮೀಸಲಿಟ್ಟಿದ್ದು, ಮಾರ್ಚ್ ಹೊತ್ತಿಗೆ ಪಂಚಭಾಷೆಗಳಲ್ಲೂ 'ಕೆ.ಜಿ.ಎಫ್ ಚಾಪ್ಟರ್ 2' ಫಸ್ಟ್ ಪ್ರಿಂಟ್ ರೆಡಿಯಾಗಿರುತ್ತದೆಯಂತೆ.

ಹೀಗೆ ಶೆಡ್ಯುಲ್ ಪ್ಲ್ಯಾನ್ ಮಾಡಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, 2020ರ ಏಪ್ರಿಲ್‍ನ ಬೇಸಗೆ ರಜೆಯ ಹೊತ್ತಿಗೆ 'ಕೆ.ಜಿ.ಎಫ್' ಸೀಕ್ವಲ್ ರಿಲೀಸ್‍ಗೆ ಐಡಿಯಾ ಮಾಡಿದ್ದಾರೆ. ಒಟ್ಟಾರೆ ಮೊದಲ ಚಿತ್ರದ ಮೂಲಕವೇ ಮ್ಯಾಜಿಕ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು, 'ಕೆ.ಜಿ.ಎಫ್- 2'ಗೆ ಇನ್ನೇನು ಮೋಡಿ ಮಾಡ್ತಾರೆ ಅಂತ ನೋಡೋಕೆ ಇನ್ನೂ ಒಂದೂವರೆ ವರ್ಷ ಕಾಯಲೇಬೇಕು.

ನಟಸಾರ್ವಭೌಮನಿಗೆ ಫಿದಾ ಆದ ಪ್ರೇಕ್ಷಕ: ಅಭಿಮಾನಿಗಳಿಗೆ ಚಿರಋಣಿ ಎಂದ ಅಪ್ಪು..! 

 
First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...