Yuganthara Serial: ಕಿರುತೆರೆಯಲ್ಲಿ ಐಎಎಸ್ ಅಧಿಕಾರಿ ಕಥೆ - ಯುಗಾಂತರದಲ್ಲಿದೆಯಾ ರೋಹಿಣಿ ಸಿಂಧೂರಿ ಜೀವನಗಾಥೆ?

Kannada Serial Updates: ಇನ್ನು ಈ ಧಾರಾವಾಹಿ ರೋಹಿಣಿ ಸಿಂಧೂರಿ ಅವರ ವೃತ್ತಿ ಜೀವನ ಆಧಾರಿತ ಎನ್ನುವ ಕುರಿತು ಸೇತುರಾಂ ಆಗಲಿ ಅಥವಾ ಸಿರಿ ಕನ್ನಡ ವಾಹಿನಿಯಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಯುಗಾಂತರ ಸೀರಿಯಲ್​

ಯುಗಾಂತರ ಸೀರಿಯಲ್​

  • Share this:
ರೋಹಿಣಿ ಸಿಂಧೂರಿ (Rohini Sindhuri) , ಕರ್ನಾಟಕದ (Karnataka) ಪ್ರತಿ ಮನೆಗಳಲ್ಲಿ ಇವರ ಹೆಸರು ಜನಜನಿತ. ಖಡಕ್ ಐಎಎಸ್ ಅಧಿಕಾರಿಯಾಗಿ (IAS Officer)  ಪ್ರಚಲಿತದಲ್ಲಿದ್ದವರು. ಆದರೆ ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದ ಹೆಚ್ಚು ಹೆಸರು ಪಡೆದವರು. ಇನ್ನು ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿಯವರ ಮೇಲೆ ಬಂದ ಆರೋಪಗಳೇನು ಕಡಿಮೆ ಇಲ್ಲ. ಅಕ್ರಮ ಆಸ್ತಿ ವಿಚಾರದಿಂದ ಹಿಡಿದು ಹಲವಾರು ಆರೋಪಗಳಲ್ಲಿ ಅಲ್ಲಿನ ಸ್ಥಳೀಯ ರಾಜಕೀಯ ಮುಖಂಡರು ಮಾಡಿದ್ದರು. ಈ ಎಲ್ಲಾ ಆರೋಪ, ಪ್ರತ್ಯಾರೋಪಗಳ ಬೆನ್ನಲ್ಲೆ ಸರ್ಕಾರ ಅವರನ್ನು ಮುಜರಾಯಿ ಇಲಾಖೆ ಆಯುಕ್ತೆಯಾಗಿ ನೇಮಕ ಮಾಡಿದ್ದು, ಈಗಲೂ ಸಹ ಇದೇ ಇಲಾಖೆಯಲ್ಲಿ ರೋಹಿಣಿ ಸಿಂಧೂರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಆರೋಪಗಳ ಬಗ್ಗೆ ತನಿಖೆ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿದ್ದು, ಇಂಥಹ ಅಧಿಕಾರಿಯ ಬಗ್ಗೆ ಧಾರಾವಾಹಿಯೊಂದು (Serial)  ಆರಂಭವಾಗಿದೆ ಎಂದರೆ ಹೇಗಿರುತ್ತದೆ. ಅರೇ, ಅದ್ಯಾವುದು ಧಾರಾವಾಹಿ ಅಂತೀರಾ, ಈ ಸ್ಟೋರಿ ಓದಿ.

ಇತ್ತೀಚಿಗೆ ಸಿರಿ ಕನ್ನಡ ಎನ್ನುವ ವಾಹಿನಿಯಲ್ಲಿ ಹೊಸದಾಗಿ 3 ಧಾರಾವಾಹಿಗಳು ಆರಂಭವಾಗಿದೆ. ಅದರಲ್ಲಿ ಎಸ್‌ ಎನ್ ಸೇತುರಾಂ ನಿರ್ದೇಶನದ ಯುಗಾಂತರ ಧಾರಾವಾಹಿ ಕೂಡ ಒಂದು. ಈಗಾಗಲೇ ಅಂದರೆ ಮೇ 23ರಿಂದ ಈ ಧಾರಾವಾಹಿ ಆರಂಭವಾಗಿದ್ದು, ಇದರ ಪ್ರೋಮೋ ನೋಡಿದವರಲ್ಲಿ ಸಣ್ಣ ಕುತೂಹಲ ಹುಟ್ಟಿಕೊಂಡಿದೆ, ಅದು ಈ ಧಾರಾವಾಹಿ ಯಾರ ಜೀವನ ಆಧಾರಿತ ಎಂದು.
ಯುಗಾಂತರ' ಧಾರಾವಾಹಿ ಖಡಕ್ ಅಧಿಕಾರಿ ರೋಹಿಣಿ ಸಿಂಧೂರಿಯವರ ವೃತ್ತಿ ಬದುಕನ್ನೇ ಆಧರಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ತಕ್ಕಂತೆ ಈ ಧಾರಾವಾಹಿಯ ಪ್ರೋಮೋ ಕೂಡ ಇದೆ ಎನ್ನುತ್ತಿದ್ದಾರೆ ಜನಗಳು.

ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದ ತಂಡ, ಇದು ಅರುಂಧತಿ ಎಂಬ ಜಿಲ್ಲಾಧಿಕಾರಿ ಪಾತ್ರದ ಸುತ್ತ ನಡೆಯುವ ಧಾರಾವಾಹಿಯಾಗಿದ್ದು, ಸಾಮಾಜಿಕ ಹಾಗೂ ಭಾವ ಸಂಘರ್ಷದ ಸುತ್ತ ನಡೆಯುವ ಕಥೆ ಎಂದು ಮಾಹಿತಿ ನೀಡಿತ್ತು. ಈ ಕಾರಣಕ್ಕೆ ಹಲವಾರು ಜನರು ಈ 'ಯುಗಾಂತರ' ಧಾರಾವಾಹಿ ರೋಹಿಣಿ ಸಿಂಧೂರಿಯವರ ಜೀವನ ಆಧಾರಿತ ಎಂದು ಹೇಳುತ್ತಿದ್ದು, ಕೆಲ ಸೀನ್ಗಳು ಅದಕ್ಕೆ ಸೂಕ್ತವಾಗುತ್ತಿದೆ ಎಂಬುದು ಅವರ ವಾದ.

ಇದನ್ನೂ ಓದಿ: ರಾ, ರಾ ರಕ್ಕಮ್ಮ ಎಂದ ಕಿಚ್ಚ - ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ

ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅಂದರೆ ಜಿಲ್ಲಾಧಿಕಾರಿ ಅರುಂಧತಿ ಪಾತ್ರದಲ್ಲಿ ನಟಿ ದಿವ್ಯ ಕಾರಂತ್ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿ ಅವರ ಮಾತಿನ ಶೈಲಿ ಹಾಗೂ ಉಡುಗೆ ಸಹ ರೋಹಿಣಿ ಸಿಂಧೂರಿಯನ್ನು ಹೋಲುತ್ತಿದೆ ಎನ್ನಲಾಗುತ್ತಿದೆ.

ಇನ್ನು ಪ್ರೋಮೋದಲ್ಲಿ "ನಾನು ಜಿಲ್ಲಾಧಿಕಾರಿ ಮಾತ್ರ ಅಲ್ಲ. ದಂಡಾಧಿಕಾರಿ ಕೂಡ, ನಾನು ಬಂದಿರುವುದು ಕಾಯೋಕೆ ಮೇಯೋಕೆ ಅಲ್ಲ ಎನ್ನುವ ಜಿಲ್ಲಾಧಿಕಾರಿಯ ಡೈಲಾಗ್ ಹಲವಾರು ವಿಚಾರಗಳನ್ನು ಬಿಚ್ಚಿಡುತ್ತದೆ.

ಸೇತುರಾಂ ಅವರ ಧಾರಾವಾಹಿ ಎಂದರೆ ಡೈಲಾಗ್ಗಳ ಮೂಲಕ ಫೇಮಸ್, ಒಂದು ಮಾತಿನ ಹಿಂದೆ ಸಾವಿರಾರು ಅರ್ಥಗಳನ್ನು ಅಡಗಿಸಿ ಹೇಳುವ ಅವರ ಪರಿ ಜನರಿಗೆ ಇಷ್ಟ. ಹಾಗಾಗಿ ಈ ಹೊಸ ಧಾರಾವಾಹಿಯ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದ್ದು, ಜನರಿಗೆ ಹತ್ತಿರವಾಗುವ ಎಲ್ಲಾ ಅಂಶಗಳು ಈ ಧಾರಾವಾಹಿಯಲ್ಲಿ ಇದೆ ಎನ್ನಬಹುದು.

ಇದನ್ನೂ ಓದಿ: ಉಪ್ಪಿ ಹೊಸಾ ಸಿನಿಮಾ ಜೂನ್ 3 ಕ್ಕೆ ಶುರು, ರಿಯಲ್ ಸ್ಟಾರ್‌ ನಿರ್ದೇಶನಕ್ಕೆ ರೆಡಿಯಾಗಿ!

ಇನ್ನು ಈ ಧಾರಾವಾಹಿ ರೋಹಿಣಿ ಸಿಂಧೂರಿ ಅವರ ವೃತ್ತಿ ಜೀವನ ಆಧಾರಿತ ಎನ್ನುವ ಕುರಿತು ಸೇತುರಾಂ ಆಗಲಿ ಅಥವಾ ಸಿರಿ ಕನ್ನಡ ವಾಹಿನಿಯಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Published by:Sandhya M
First published: