news18-kannada Updated:June 4, 2020, 3:34 PM IST
ಸಾಂದರ್ಭಿಕ ಚಿತ್ರ
ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣ ಹೆಚ್ಚುತ್ತಲೇ ಇದೆ. ಈ ಬಗ್ಗೆ ಅರಿವು ಮೂಡಿಸುವ ಬಗ್ಗೆ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಇನ್ನು, ಅನೇಕ ನಟ-ನಟಿಯರು ಈ ಅಪರಾಧದ ವಿರುಧ್ಧ ಧ್ವನಿ ಎತ್ತಿದ್ದಾರೆ. ವಿಚಿತ್ರ ಎಂದರೆ, ಈಗ ಬಾಲಿವುಡ್ನ ಸ್ಟಾರ್ ನಟನ ತಮ್ಮನ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಅದು ಬೇರೆ ಯಾರೂ ಅಲ್ಲ ನವಾಜುದ್ದೀನ್ ಸಿದ್ಧಿಕಿ ತಮ್ಮ ಮಿನಾಜುದ್ದಿನ್ ಸಿದ್ಧಿಕಿ. ವಿಚಿತ್ರ ಎಂದರೆ, ಹೀಗೊಂದು ಆರೋಪ ಮಾಡಿದ್ದು ಬೇರಾರು ಅಲ್ಲ ನವಾಜುದ್ದೀನ್ ಸೋದರ ಸೊಸೆ. ಸಂದರ್ಶನವೊಂದರಲ್ಲಿ ಅವರು ತಮಗಾದ ಕಹಿ ಘಟನೆ ಬಗ್ಗೆ ನೆನೆದಿದ್ದಾರೆ.
ಅವರು ಹೇಳೋ ಪ್ರಕಾರ ಆಕೆಗೆ 9 ವರ್ಷ ಇದ್ದಾಗಲೇ ಮಿನಾಜುದ್ದೀನ್ ಲೈಂಗಿಕ ಕಿರುಕುಳ ನೀಡಿದ್ದರಂತೆ. “ನನಗೆ ಈಗ ವಯಸ್ಸು 20. ಆದರೆ, ನನಗಾದ ಕಹಿ ಘಟನೆ ನಡೆಯುವಾಗ ನನ್ನ ವಯಸ್ಸು 9 ವರ್ಷ ಆಗಿತ್ತು. ಮಿನಾಜುದ್ದಿನ್ ಮನೆಗೆ ಬಂದಾಗ ನನ್ನ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದರು. ಆಗ ನನಗೆ ಏನು ಅರ್ಥವೇ ಆಗುತ್ತಿರಲಿಲ್ಲ. ಆದರೆ, ಬರುಬರುತ್ತಾ ಆ ಬಗ್ಗೆ ನನಗೆ ಅರ್ಥವಾಗಿತ್ತು,” ಎಂದು ಕಹಿ ಘಟನೆ ನೆನೆದಿದ್ದಾರೆ.
ಇದನ್ನೂ ಓದಿ: ಕೊರೋನಾ ನಿಧಿ ಸಂಗ್ರಹಕ್ಕೆ ತನ್ನ ನಗ್ನ ಫೋಟೋ ಹರಾಜಿಗಿಟ್ಟ ನಟಿ!
“2017ರಲ್ಲಿ ನಾನು ನನ್ನ ಮನೆಯಲ್ಲಿ ಕೂತಿದ್ದೆ. ಈ ವೇಳೆ ಮಿನಾಜುದ್ದಿನ್ ಆಗಮಿಸಿದ್ದರು. ಬಂದವರೇ ನನ್ನ ದೇಹದ ಖಾಸಗಿ ಜಾಗಗಳನ್ನು ಮುಟ್ಟಲು ಆರಂಭಿಸಿದ್ದರು. ಈ ವೇಳೆ ನಾನು ಕೂಗಿಕೊಂಡಿದ್ದೆ. ಆಗ ನನಗೆ ಅವರು ಬೆಲ್ಟ್ ನಿಂದ ಹೊಡೆದಿದ್ದರು,” ಎನ್ನುತ್ತಾರೆ ಸಂತ್ರಸ್ತೆ.
ಈ ಘಟನೆ ಬಗ್ಗೆ ಎಲ್ಲರಿಗೂ ಗೊತ್ತಿದ್ದು ಸುಮ್ಮನಿದ್ದಾರೆ ಎಂಬುದು ಸಂತ್ರಸ್ತೆಯ ಆರೋಪ. “ನನಗಾದ ಕಿರುಕುಳದ ಬಗ್ಗೆ ಮನೆಯಲ್ಲಿ ಹೇಳಿಕೊಂಡಿದ್ದೇನೆ. ಆದರೆ, ಅದನ್ನು ಯಾರೂ ನಂಬಲು ಸಿದ್ಧರಿಲ್ಲ. ಎಲ್ಲರೂ ಮಿನಾಜುದ್ದಿನ್ ಬೆಂಬಲಕ್ಕೆ ನಿಲ್ಲುತ್ತಾರೆ. ನವಾಜುದ್ದಿನ್ ಕೂಡ ನನ್ನ ತಮ್ಮ ಆ ರೀತಿ ಮಾಡಲು ಸಾಧ್ಯವೇ ಇಲ್ಲ. ನೀನೇ ಸುಳ್ಳು ಆರೋಪ ಮಾಡುತ್ತಿದ್ದೀಯ ಎನ್ನುತ್ತಾರೆ. ಈ ವಿಚಾರವಾಗಿ ನಾನು ಠಾಣೆ ಮೆಟ್ಟಿಲೇರಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ,” ಎಂದು ಬೇಸರ ಹೊರಹಾಕುತ್ತಾರೆ ಅವರು.
First published:
June 4, 2020, 3:34 PM IST