Sanchari Vijay: ಸಂಚಾರಿ ವಿಜಯ್​ನ್ನು ಹುಡುಕಿಕೊಂಡು ಬಂದ ಮೊದಲ ಪಾತ್ರ ‘ನಾನು ಅವನಲ್ಲ ಅವಳು’

Sanchari Vijay: ತನ್ನನ್ನು ಹುಡುಕಿಕೊಂಡು ಬಂದ ಮೊದಲ ಪಾತ್ರ, ತಾನು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಅಪ್ರತಿಮ ಪ್ರತಿಭೆ ಸಂಚಾರಿ ವಿಜಯ್.  

ಸಂಚಾರಿ ವಿಜಯ್

ಸಂಚಾರಿ ವಿಜಯ್

  • Share this:
Sanchari Vijay: ಅದುವರಗೆ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಸಂಚಾರಿ ವಿಜಯ್ ನಾನು ಅವನಲ್ಲ ಅವಳು ಚಿತ್ರದ ಮೂಲಕ ಮನೆಮಾತಾದರು. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು, ಇದೇ ಚಿತ್ರ ಅವರಿಗೆ ರಾಷ್ಟ್ರಪ್ರಶಸ್ತಿಯ ಗರಿಯನ್ನೂ ಮುಡಿಗೇರಿಸಿತು. ಆದರೆ ಸಾಧನೆಯ ಹಾದಿ ವಿಜಯ್ ಪಾಲಿಗೆ ಕಷ್ಟದ್ದೇ ಆಗಿತ್ತು. ಅವರೇ ಹಿಂದೊಮ್ಮೆ ಹೇಳಿರುವಂತೆ ‘ನಾನು ಅವನಲ್ಲ, ಅವಳು’ ತಮ್ಮನ್ನು ಮುಖ್ಯ ಪಾತ್ರಕ್ಕೆ ಹುಡುಕಿಕೊಂಡು ಬಂದ ಮೊದಲ ಸಿನಿಮಾ ಆಫರ್. ಅದಕ್ಕಿಂತ ಹಿಂದನ ಪಾತ್ರಗಳೆಲ್ಲಾ ಇವರೇ ಕೇಳಿಕೊಂಡು ಹೋಗಿ, ಅವಕಾಶ ಕೋರಿ ಮಾಡಿದಂಥದ್ದೇ ಆಗಿದ್ದವಂತೆ.

ಲೇಖಕ ವಸುಧೇಂದ್ರ ತಗಣಿ ಎನ್ನುವ ಕತೆಯೊಂದನ್ನು ಬರೆದಿದ್ದಾರೆ. ಆ ಕತೆ ನಟ ನಿರ್ದೇಶಕ ಪ್ರಕಾಶ್ ರೈ ಗೆ ಭಾರೀ ಇಷ್ಟವಾಗಿಬಿಟ್ಟಿತಂತೆ. ಅದನ್ನೊಂದು ಸಿನಿಮಾ ಮಾಡಬೇಕೆಂದು ಅವರು ನಿರ್ಧರಿಸಿದರೂ ಅಲ್ಲಿವರಗೆ ಕಾಯುವುದು ಬೇಡ ಎಂದು ತಮ್ಮ ಒಗ್ಗರಣೆ ಚಿತ್ರದಲ್ಲಿ ಸಣ್ಣದೊಂದು ಪಾತ್ರದ ಮೂಲಕ ಆ ಕತೆಗೊಂದು ಟೀಸರ್ ರೀತಿ ಅಳವಡಿಸಿದ್ರು. ಅದರ ಹಿಜಡಾ ಪಾತ್ರವನ್ನು ನಿರ್ವಹಿಸಿದ್ದು ಸಂಚಾರಿ ವಿಜಯ್. ತೆರೆ ಮೇಲೆ ತೃತೀಯ ಲಿಂಗಿಯ ಪಾತ್ರವನ್ನು ಅವರು ಮೊದಲ ಬಾರಿಗೆ ನಿರ್ವಹಿಸಿದ್ದರು.

ಇದೆಲ್ಲಾ ಆಗಿ ಸ್ವಲ್ಪ ಸಮಯದ ನಂತರ ನಿರ್ದೇಶಕ ಲಿಂಗದೇವರು ಹೊಸಾ ಚಿತ್ರದ ಕತೆಯೊಂದನ್ನು ರೆಡಿ ಇಟ್ಟುಕೊಂಡು ಅದಕ್ಕಾಗಿ ಕಲಾವಿದರನ್ನು ಹುಡುಕುತ್ತಾ ಇದ್ದರಂತೆ. ಅದೇ ‘ನಾನು ಅವನಲ್ಲ ಅವಳು’. ಮುಖ್ಯ ಭೂಮಿಕೆಗೆ ಸರಿಹೊಂದುವಂಥಾ ಕಲಾವಿದರ ಅನ್ವೇಷಣೆ ನಡೆದೇ ಇತ್ತು. ಲಿಂಗದೇವರು ಕೆಲವು ಕಲಾವಿದರನ್ನು ಸಂಪರ್ಕಿಸಿದ್ದರು, ಆದರೆ ತೃತೀಯ ಲಿಂಗಿಯ ಪಾತ್ರ ಎನ್ನುವ ಕಾರಣಕ್ಕೆ ನಿರಾಕರಿಸಿದ್ದರಂತೆ. ಆಗ ಲಿಂಗದೇವರು ಗೆಳೆಯರೊಬ್ಬರು ಒಗ್ಗರಣೆ ಚಿತ್ರದಲ್ಲಿ ಪುಟ್ಟ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದ್ದ ಸಂಚಾರಿ ವಿಜಯ್ ಬಗ್ಗೆ ಹೇಳಿದ್ದಾರೆ. ಆಗ ನಿರ್ದೇಶಕ ಲಿಂಗದೇವರು ವಿಜಯ್​ರನ್ನು ಸಂಪರ್ಕಿಸಿದ್ದರಂತೆ.

ಇದನ್ನೂ ಓದಿ: Brain Stem Failure: ಹಾಗೆಂದರೇನು? ಸಂಚಾರಿ ವಿಜಯ್ ಮತ್ತೆ ಮೊದಲಿನಂತೆ ಆಗದೇ ಇರಲು ಇದೇ ಕಾರಣ, ವೈದ್ಯರ ವಿವರಣೆ ಇಲ್ಲಿದೆ..

ವಿಜಯ್ ಆಗ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಸಹಕಲಾವಿದ. ಲಿಂಗದೇವರು ಭೇಟಿಯಾಗಿ ಇಡೀ ಚಿತ್ರದ ಕತೆ ಹೇಳಿದ್ದಾರೆ. ಕತೆ ಕೇಳಿ ಖುಷಿಯಾದ ವಿಜಯ್ ಇದರಲ್ಲಿ ತನ್ನ ಪಾತ್ರ ಯಾವುದು ಎಂದು ಕೇಳಿದ್ದಾರೆ. ಮುಖ್ಯಪಾತ್ರಧಾರಿಯ ಗೆಳೆಯನೋ ಅಣ್ಣ ತಮ್ಮನದ್ದೋ ಪಾತ್ರ ತನ್ನದಾಗುತ್ತದೆ ಎಂದು ಕಾದು ಕುಳಿತಿದ್ದ ವಿಜಯ್ ಗೆ ‘ಪ್ರಮುಖ ಪಾತ್ರವೇ ನಿನ್ನದು’ ಎಂದರಂತೆ ನಿರ್ದೇಶಕರು. ಒಂದು ಕ್ಷಣ ತನಗೆ ನಂಬಲು ಸಾಧ್ಯವೇ ಆಗಲಿಲ್ಲ ಎನ್ನುತ್ತಾರೆ ವಿಜಯ್.

ಆದರೆ ವಿಜಯ್ ಒಂದು ಕ್ಷಣ ಪೀಕಲಾಟಕ್ಕೂ ಬಿದ್ದಿದ್ದರಂತೆ. ಒಂದು ಕಡೆ ತನಗೆ ಮೊದಲ ಬಾರಿಗೆ ಪ್ರಧಾನ ಪಾತ್ರ ಸಿಕ್ಕಿದ್ದಕ್ಕೆ ಖುಷಿ ಪಡಬೇಕೋ ಅಥವಾ ತೃತೀಯ ಲಿಂಗಿಯ ಪಾತ್ರ ಸಿಕ್ಕಿದ್ದಕ್ಕೆ ಬೇಸರ ಪಡಬೇಕೋ ತಿಳಿಯದಂಥಾ ಪರಿಸ್ಥಿತಿ. ಮತ್ತೇನಾದರೂ ಇವೇ ಪಾತ್ರಗಳಿಗೆ ತಾನು ಬ್ರಾಂಡ್ ಆಗಿಬಿಟ್ಟರೆ ಎನ್ನುವ ಆತಂಕವೂ ಜೊತೆಯಲ್ಲೇ. ಎರಡು ದಿನ ಸಮಯ ಕೊಡಿ ಎಂದು ಅಲ್ಲಿಂದ ಹೊರಟರಂತೆ. ನಂತರ ವಿಜಯ್ ನೇರವಾಗಿ ತನ್ನ ಆಪ್ತ ಸ್ನೇಹಿತನ ಬಳಿ ಹೋಗಿದ್ದಾರೆ. ಹೀಗೊಂದು ಪಾತ್ರವಿದೆ, ಏನ್ಮಾಡ್ಲಿ ಎಂದು ಕೇಳಿದ್ದಾರೆ. ಆಗ ಆ ಗೆಳೆಯ, ಈಗಂತೂ ನಿನ್ನ ಬಳಿ ಹೇಳಿಕೊಳ್ಳುವಂಥಾ ಕೆಲಸವಿಲ್ಲ, ಹಣದ ಸಮಸ್ಯೆಯೂ ಇದೆ. ನಿನಗೆ ಎರಡು ವರ್ಷಗಳತನಕ ಮನೆ ಬಾಡಿಗೆ, ಊಟ ಮುಂತಾದ ಅತ್ಯವಶ್ಯಕ ಖರ್ಚುಗಳಿಗೆ ಬೇಕಾಗುವಷ್ಟು ಹಣವನ್ನು ಸಂಭಾವನೆಯಾಗಿ ಕೇಳು, ಅದಕ್ಕೆ ಒಪ್ಪಿಕೊಂಡ್ರೆ ಈ ಪಾತ್ರ ಮಾಡು. ಉಳಿದಿದ್ದನ್ನು ಆಮೇಲೆ ಯೋಚಿಸೋಣ ಎಂದರಂತೆ.

ಇದು ಸರಿ ಎನಿಸಿ ವಿಜಯ್ ಲಿಂಗದೇವರ ಬಳಿ ಹೋಗಿ ತಮ್ಮ ಬೇಡಿಕೆ ಇಟ್ಟಿದ್ದಾರೆ. ಇದು ಕಡಿಮೆ ಬಜೆಟ್​ನಲ್ಲಿ ತಯಾರಾಗ್ತಿರೋ ಚಿತ್ರ. ನೀವು ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲ. ಈ ಚಿತ್ರ ಗೆದ್ದರೆ ಆಗ ಖಂಡಿತಾ ನಿಮ್ಮ ಬೇಡಿಕೆ ಈಡೇರಿಸುತ್ತೇನೆ, ಈಗ ಇಷ್ಟೇ ಕೊಡಲು ಸಾಧ್ಯ ಎಂದು ಒಂದು ಮೊತ್ತ ಹೇಳಿದ್ದಾರೆ. ಸ್ವಲ್ಪ ಯೋಚಿಸಿದ ವಿಜಯ್ ಬಿಟ್ಟರೆ ಈ ಪಾತ್ರವೂ ಕೈತಪ್ಪಿ ಹೋದರೆ ಕಷ್ಟ ಎಂದು ಒಕೆ ಎಂದರಂತೆ. ನಂತರ ತಯಾರಾದದ್ದೇ ‘ನಾನು ಅವನಲ್ಲ, ಅವಳು’ ಎನ್ನುವ ರಾಷ್ಟ್ರಪ್ರಶಸ್ತಿ ಗೆದ್ದ ಚಿತ್ರ, ಉಳಿದದ್ದೆಲ್ಲಾ ಈಗ ಇತಿಹಾಸ. ತನ್ನನ್ನು ಹುಡುಕಿಕೊಂಡು ಬಂದ ಮೊದಲ ಪಾತ್ರ, ತಾನು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಅಪ್ರತಿಮ ಪ್ರತಿಭೆ ಸಂಚಾರಿ ವಿಜಯ್.
Published by:Soumya KN
First published: