ಬೆಂಗಳೂರು(ಸೆಪ್ಟೆಂಬರ್ 25): ನನ್ನ ಸಿನಿಮಾ ಸಂಗಾತಿ ರವಿಚಂದ್ರನ್, ನನ್ನ ಸಂಗೀತದ ಸಂಗಾತಿ ಎಸ್.ಪಿ.ಬಿ ಅವರಿಲ್ಲದೆ ಉಳಿದ ಜೀವನ ಬದುಕುವುದು ತುಂಬಾ ಕಷ್ಟ. ನಾನು ಚಿತ್ರರಂಗಕ್ಕೆ ಬಂದಾಗ ಒಂದು ಸಿಸ್ಟಮ್ ಇತ್ತು, ಆಗ ಸಿಕ್ಕಿದ್ದು ಎಸ್ ಪಿಬಿ ಯವರು. ದಕ್ಷಿಣ ಚಲನಚಿತ್ರ ಸಂಗೀತ ಪ್ರಪಂಚಕ್ಕೆ ಅತಿ ದೊಡ್ಡ ನ್ಯಾಯಾಧೀಶರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಒಬ್ಬರು ಎಂದು ನಾದಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಭಾವುಕರಾಗಿ ನುಡಿದಿದ್ದಾರೆ. ತುಂಬಾ ಭಾವುಕ ವಿಷಯ. ಇದು ಹುಟ್ಟು ಒಂದೆ ಟೇಕ್, ಸಾವು ಒಂದೇ ಟೇಕ್. ಹಿಮಾಲಯ ಕರಗುವುದಿಲ್ಲ ಅಂದುಕೊಂಡಿದ್ವಿ ಆದರೆ, ಕರಗಿಬಿಟ್ಟಿದೆ. ಎಸ್ ಪಿಬಿಯವರು ಯೂನಿವರ್ಸ್ ಗೆ ಸುಂದರ ಗಾಯಕ, ವಿದ್ಯೆಯಲ್ಲಿ ವಿದ್ಯಾವಂತ, ಪ್ರತಿಭಾವಂತ ಗಾಯಕ ಪ್ರತಿಭೆ ದೇವರು ಕೊಟ್ಟಿದ್ದು, ಅದನ್ನು ಸ್ವಲ್ಪ ಸ್ವಲ್ಪನೇ ಖರ್ಚು ಮಾಡಿಕೊಂಡು ಬದುಕಬೇಕು ಅಂತ ಗುರುಗಳು ಹೇಳಿದ್ದರು. ಜಾಣತನದಿಂದ ಪ್ರತಿಭೆ ಖರ್ಚು ಮಾಡುತ್ತಾ ಚೆನ್ನಾಗಿ ಬದುಕಬೇಕು ಎಂದು ಎಸ್ಪಿಬಿ ಹೇಳಿದ್ದರು.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನ ಮೊದಲು ಗುರುತು ಹಿಡಿದಿದ್ದು ಜಾನಕಮ್ಮ. ಸಂಗೀತ ಸ್ಪರ್ಧೆಯಲ್ಲಿ ಎರಡನೇ ಪ್ರಶಸ್ತಿಯನ್ನು ಎಸ್ ಪಿಬಿ ಪಡೆದಿದ್ದರು. ಆದರೂ ಅವರನ್ನು ಕರೆತಂದು ಅವಕಾಶ ನೀಡಿದರು ಎಂದು ತಿಳಿಸಿದರು.
ಎಸ್ ಪಿಬಿ ಅಂಥವರು 500 ವರ್ಷಕ್ಕೆ ಒಮ್ಮೆ ಹುಟ್ಟುತ್ತಾರೆ. ಅವರನ್ನು ಹೋಗಿ ನೋಡುವುದಕ್ಕೆ ಆಗದಿರುವಂತಹ ಸ್ಥಿತಿಯಲ್ಲಿದ್ದೇವೆ. ಈ ಹಾಳು ಕೊರೋನಾ ಮೂರನೇ ಮಹಾಯುದ್ಧಕ್ಕಿಂತ ಹಾಳಾದುದು. ಆದರೆ, ಅದೆಲ್ಲಕ್ಕಿಂತ ದೊಡ್ಡ ದುರಂತ ಎಸ್ ಪಿಬಿಯವರ ಸಾವು. ಅವರಿಲ್ಲದೆ ನಾನಿಲ್ಲ. ರವಿಚಂದ್ರನ್ ಅವರ ಪ್ರಯೋಗ ಅಷ್ಟು ದೊಡ್ಡ ಯಶಸ್ಸು ಕಾಣಲು ಎಸ್ ಪಿಬಿ ಮೊದಲ ಕಾರಣ ಎಂದರು.
ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಹಿಂದಿ ಯಾವುದೇ ಭಾಷೆಯಾಗಲಿ ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಕನ್ನಡದಲ್ಲೇ ಹಾಡುವಾಗ ಎಸ್ಪಿಬಿಯವರು ಸಾಹಿತ್ಯದಲ್ಲಿ ಎಷ್ಟೋ ತಪ್ಪುಗಳನ್ನು ಸರಿಪಡಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : S P Balasubrahmanyam: 16 ಭಾಷೆಗಳಲ್ಲಿ ಹಾಡಿರುವ ಗಾನ ದಿಗ್ಗಜ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ
ನನ್ನ ಹೆಂಡತಿಯನ್ನು ಎಸ್ಪಿಬಿಯವರು ಸೆಕರೇಟರಿ ಅಂತ ಕರೆಯುತ್ತಿದ್ದರು. ಅವರ ಜತೆ ಹಾಡುವಾಗ ಲತಾ ತುಂಬಾ ಹೆದರುತ್ತಿದ್ದಳು. ಆಗ ತಮಾಷೆಗಾಗಿ ಆ ರೀತಿ ಕರೆಯುತ್ತಿದ್ದರು. ಅವರ ಶಿಸ್ತು ಇನ್ನೊಬ್ಬ ಗಾಯಕನಲ್ಲಿ ಬರುವುದಕ್ಕೆ ಸಾಧ್ಯವೇ ಇಲ್ಲ. 50 ವರ್ಷಗಳಿಂದ ಹಾಡಿರುವ ಎಲ್ಲ ಹಾಡುಗಳ ಕಾಪಿಗಳನ್ನು ಇಟ್ಟುಕೊಂಡಿದ್ದಾರೆ. ಅವರ ನೆನಪಿನ ಶಕ್ತಿ ಅಗಾಧವಾದದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ