Nabha Natesh: ಬಾಲಿವುಡ್​ಗೆ ಕನ್ನಡದ ಮತ್ತೊಬ್ಬ ನಟಿ: ಹೃತಿಕ್​​ಗೆ ಜೋಡಿ ಆಗ್ತಾರಂತೆ ನಭಾ ನಟೇಶ್..!

Nabha Natesh - Hrithik Roshan: ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ನಟಿಸಲಿರುವ ವೆಬ್ ಸರಣಿಯಲ್ಲಿ ಕನ್ನಡತಿ ನಭಾ ನಟೇಶ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಆಯ್ಕೆಯಾಗಿದ್ದಾರಂತೆ.

ನಭಾ ನಟೇಶ್​ - ಹೃತಿಕ್​ ರೋಷನ್​

ನಭಾ ನಟೇಶ್​ - ಹೃತಿಕ್​ ರೋಷನ್​

  • Share this:
ಪರಭಾಷೆ ಸಿನಿಮಾಗಳಲ್ಲಿ ಮಿಂಚುತ್ತಿರುವ ಕನ್ನಡದ ಸುಂದರಿಯರ ಸಾಲು ದೊಡ್ಡದಿದೆ. ಐಶ್ವರ್ಯಾ ರೈ ಕನ್ನಡ ಸಿನಿಮಾಗಳಲ್ಲಿ ನಟಿಸದೇಯಿದ್ದರೂ ಕರ್ನಾಟಕ ಮೂಲದವರು. ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ ಹುಟ್ಟು ಬೆಳೆದಿದ್ದು ಕರ್ನಾಟಕದಲ್ಲೇ. ಈಗಂತೂ ಕರ್ನಾಟಕದ ಕ್ರಷ್ ರಶ್ಮಿಕಾ ಮಂದಣ್ಣ ಟಾಲಿವುಡ್, ಕಾಲಿವುಡ್ ಸೇರಿದಂತೆ ಬಾಲಿವುಡ್‌ನಲ್ಲೂ ಸದ್ದು ಮಾಡುತ್ತಿದ್ದಾರೆ. ಅವರ ಬೆನ್ನಲ್ಲೇ ನಟಿ ಪ್ರಣೀತಾ ಸುಭಾಷ್ ಕೂಡ ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳಲ್ಲಿ ನಟಿಸಿದ್ದು, ರಿಲೀಸ್‌ಗಾಗಿ ಎದುರು ನೋಡುತ್ತಿದ್ದಾರೆ. ಅವರ ಬೆನ್ನಲ್ಲೇ ತೆಲುಗು ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಮತ್ತೊಬ್ಬ ಕನ್ನಡದ ಚೆಲುವೆ ನಭಾ ನಟೇಶ್ ಕೂಡ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ.

ಹೌದು, ಮೂಲಗಳ ಪ್ರಕಾರ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ನಟಿಸಲಿರುವ ವೆಬ್ ಸರಣಿಯಲ್ಲಿ ಕನ್ನಡತಿ ನಭಾ ನಟೇಶ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಆಯ್ಕೆಯಾಗಿದ್ದಾರಂತೆ. ಜಗತ್ತಿನಾದ್ಯಂತ ಹೆಸರು ಮಾಡಿರುವ `ದಿ ನೈಟ್ ಮ್ಯಾನೇಜರ್' ಎಂದು ಇಂಗ್ಲೀಷ್ ವೆಬ್ ಸಿರೀಸ್‌ನ ಹಿಂದಿ ರಿಮೇಕ್‌ನಲ್ಲಿ ಹೃತಿಕ್ ರೋಷನ್ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದು, ಅದರಲ್ಲಿ ನಭಾ ನಟೇಶ್ ಹೃತಿಕ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ರಕುಲ್ ಪ್ರೀತ್ ಸಿಂಗ್, ಪ್ರಗ್ಯಾ ಜೈಸ್ವಾಲ್, ಶಾಲಿನಿ ಪಾಂಡೆ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ಹಲವಾರು ಸುಂದರಿಯರು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿ, ನಂತರ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ ನಭಾ ನಟೇಶ್ ಕೂಡ ಕನ್ನಡದಿಂದ ತೆಲುಗಿಗೆ ಹೋಗಿ, ಈಗ ಅಲ್ಲಿಂದ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಾರೆ.

ಎ. ಹರ್ಷ ನಿರ್ದೇಶನದ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಾಯಕನಾಗಿದ್ದ ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ನಭಾ ನಟೇಶ್ ಪಟಾಕಾ ಪಾರ್ವತಿ ಪಾತ್ರದಲ್ಲಿ ಬಿಂದಾಸ್ ಆಗಿ ನಟಿಸಿ ತಮ್ಮ ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದರು. ವಜ್ರಕಾಯ ಚಿತ್ರದ ಸಕ್ಸಸ್ ಬಳಿಕ ಸುಮಂತ್ ಶೈಲೇಂದ್ರಬಾಬುಗೆ ಜೋಡಿಯಾಗಿ ಲೀ ಚಿತ್ರದಲ್ಲಿ ನಟಿಸಿದ್ದರು. ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್‌ಗೆ ನಾಯಕನಾಗಿದ್ದ ಸಾಹೇಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಆ ಬಳಿಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಭಾ ನಟೇಶ್ ಮತ್ತೆ ಹಿಂದಿರುಗಿ ನೋಡಿಲ್ಲ.

ಇದನ್ನೂ ಓದಿ: Kichcha Sudeep: 133 ವರ್ಷ ಹಳೆಯ ಸರ್ಕಾರಿ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್..!

ನನ್ನು ದೋಚುಕುಂಡುವಟೆ ಮೂಲಕ ಟಾಲಿವುಡ್‌ನಲ್ಲಿ ಸಿನಿ ಜರ್ನಿ ಆರಂಭಿಸಿದ ನಭಾ ನಟೇಶ್ ಅಧುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜ, ಅಲ್ಲುಡು ಅಧುರ್ಸ್... ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ, ಸ್ಟಾರ್ ಸೂಪರ್‌ಸ್ಟಾರ್ ನಟರೊಂದಿಗೆ ಕಾಣಿಸಿಕೊಂಡರು. ಮೆಗಾಸ್ಟಾರ್ ಚಿರಂಜೀವಿ ಸಂಬಂಧಿ ಸಾಯಿ ಧರಮ್ ತೇಜ್ ಹೀರೋ ಆಗಿರುವ ಸೋಲೋ ಬ್ರತುಕೆ ಸೋ ಬೆಟರ್ ಎನ್ನುವ ಚಿತ್ರದಲ್ಲೂ ನಭಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದ ರಾಮ್ ಪೋತಿನೇನಿ ನಾಯಕನಾಗಿದ್ದ ಇಸ್ಮಾರ್ಟ್ ಶಂಕರ್ ಚಿತ್ರವಂತೂ ಬಾಕ್ಸಾಫೀಸ್ ಲೂಟಿ ಮಾಡಿ ಬರೋಬ್ಬರಿ 75 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಕೆ ಮಾಡಿತ್ತು. ಹೀಗೆ ನಭಾ ನಟೇಶ್ ನಟಿಸಿರುವ ತೆಲುಗು ಚಿತ್ರಗಳ ಗಳಿಕೆ ಕಡಿಮೆ ಅಂದರೂ 250 ಕೋಟಿ ಮುಟ್ಟುತ್ತದೆ.

ಇಷ್ಟು ಕಡಿಮೆ ಅವಧಿಯ ಒಳಗೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಭಾ ನಟೇಶ್ ಸದ್ಯ ಬಾಲಿವುಡ್‌ನಲ್ಲೂ ಖಾತೆ ತೆರೆಯುವ ಹಂತದಲ್ಲಿದ್ದಾರೆ. ಈಗಾಗಲೇ ಪ್ರಿಯಾಮಣಿ, ಸಮಂತಾ ರುತ್ ಪ್ರಭು ಅಂತಹ ಸ್ಟಾರ್ ನಟಿಯರು ಹಾಗೂ ಅಭಿಷೇಕ್ ಬಚ್ಚನ್, ಸೈಫ್ ಅಲಿ ಖಾನ್ ಅವರಂತಹ ಸ್ಟಾರ್ ನಟರು ಸಹ ವೆಬ್ ಸರಣಿಗಳಲ್ಲಿ ನಟಿಸಿದ್ದು ಈಗ ಆ ಸಾಲಿಗೆ ಹೃತಿಕ್ ರೋಷನ್ ಮತ್ತು ನಭಾ ನಟೇಶ್ ಕೂಡ ಸೇರಿಕೊಳ್ಳಲಿದ್ದಾರೆ.
Published by:Kavya V
First published: