ಆಗೊಮ್ಮೆ ಈಗೊಮ್ಮೆ ಬಾಲಿವುಡ್ನಲ್ಲಿ ಮೀಟೂ ಪ್ರಕರಣಗಳು ಸದ್ದು ಮಾಡುತ್ತಿರುತ್ತವೆ. 2018ರಲ್ಲಿ ಹಾಲಿವುಡ್ನಲ್ಲಿ ಮೀಟೂ ಆನ್ಲೈನ್ ಕ್ಯಾಂಪೇನ್ ಶುರುವಾದಾಗ ಹಲವಾರು ಸೆಲೆಬ್ರಿಟಿಗಳು ತಮ್ಮ ಜೊತೆ ಅಶ್ಲೀಲವಾಗಿ ನಡೆದುಕೊಂಡ, ಕಿರುಕುಳ ನೀಡಿದ, ದೌರ್ಜನ್ಯ ಎಸಗಿದ ನಿರ್ದೇಶಕರು, ನಟರು ಹಾಗೂ ನಿರ್ಮಾಪಕರ ಕುರಿತು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು.
ಅದೇ ರೀತಿ ಬಾಲಿವುಡ್ನಲ್ಲೂ ಕೆಲ ನಟಿಮಣಿಯರು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡರು. ಆಗ ನಿರ್ದೇಶಕ ಸಾಜಿದ್ ಖಾನ್ ಹೆಸರೂ ಕೂಡ ಕೇಳಿಬಂದಿತ್ತು. ಆ ಸಮಯದಲ್ಲಿ ಹೌಸ್ಫುಲ್ 4 ಚಿತ್ರವನ್ನು ನಿರ್ದೇಶಿಸುತ್ತಿದ್ದ ಸಾಜಿದ್, ತಕ್ಷಣ ಚಿತ್ರತಂಡದಿಂದ ಹೊರನಡೆಯಬೇಕಾಗಿತ್ತು. ಮಾಡೆಲ್ಗಳಾದ ಸಲೋನಿ ಚೋಪ್ರಾ, ರಾಷೆಲ್ ವೈಟ್ ಹಾಗೂ ಪತ್ರಕರ್ತೆಯೊಬ್ಬರು ಸಾಜಿದ್ ಖಾನ್ ಮೇಲೆ ಆಗ ಗಂಭೀರ ಆರೋಪ ಮಾಡಿದ್ದರು. ಮಾತ್ರವಲ್ಲದೆ, ಬಿಟೌನ್ ಸುಂದರಿಯರಾದ ಬಿಪಾಶಾ ಬಸು, ದಿಯಾ ಮಿರ್ಜಾ ಕೂಡ ಸಾಜಿದ್ ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದರು.
ಎರಡು ವರ್ಷಗಳಿಂದ ಸೈಲೆಂಟಾಗಿ ಮೂಲೆಗುಂಪಾಗಿದ್ದ ಸಾಜಿದ್ ಖಾನ್, ಈಗ ಎಲ್ಲರೂ ಮೀಟೂ ಪ್ರಕರಣಗಳನ್ನು ಮರೆತಿರುತ್ತಾರೆ, ಲಾಕ್ಡೌನ್ ಮುಗಿಯುತ್ತಲೇ ಹೊಸ ಸಿನಿಮಾ ಶುರು ಮಾಡಬಹುದು ಅಂತ ಲೆಕ್ಕಾಚಾರದಲ್ಲಿ ತೊಡಗಿದ್ದರು. ಆದರೆ ಹೊಸ ಮೀಟೂ ಆರೋಪ ಅವರ ಆ ಆಸೆಯ ಮೇಲೂ ತಣ್ಣೀರು ಎರಚಿದೆ. ಹೌದು, ಮಾಡೆಲ್ ಡಿಂಪಲ್ ಪೌಲ್ ಎಂಬ ಮಾಡೆಲ್ ಒಬ್ಬರು ಸಾಜಿದ್ ಖಾನ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ನನ್ನೊಂದಿಗೆ ಅಸಹ್ಯವಾಗಿ ಮಾತನಾಡಿದ. ನನ್ನನ್ನು ಎಲ್ಲೆಂದರಲ್ಲಿ ಮುಟ್ಟಲು ಪ್ರಯತ್ನಿಸಿದ. ಹೌಸ್ಫುಲ್ ಸಿನಿಮಾದಲ್ಲಿ ನಟಿಸಲು ಅವಕಾಶ ಬೇಕಾದರೆ ಬಟ್ಟೆ ಬಿಚ್ಚು ಅಂತಲೂ ಹೇಳಿದ್ದ. ಇದೇ ರೀತಿ ಅದೆಷ್ಟು ಹುಡುಗಿಯರೊಂದಿಗೆ ನಡೆದುಕೊಂಡಿದ್ದಾನೋ ಆ ದೇವರೇ ಬಲ್ಲ, ಎಂದು ಡಿಂಪಲ್ ಪೌಲ್ ಗಂಭೀರ ಆರೋಪವೆಸಗಿದ್ದಾರೆ. ಅಂಹಹಾಗೆ ತಮ್ಮ 17ನೇ ವಯಸ್ಸಿನಲ್ಲಿ ಪೌಲ್ ಹೌಸ್ಫುಲ್ 4 ಚಿತ್ರದ ಆಡಿಷನ್ಗೆ ಹೋಗಿದ್ದಾಗ ಈ ಘಟನೆ ನಡೆದಿತ್ತಂತೆ.
ಕಾಸ್ಟಿಂಗ್ ಕೌಚ್ ಮಾಡುವ, ಹುಡುಗಿಯರನ್ನು ದುರುಪಯೋಗ ಪಡಿಸಿಕೊಂಡು ಅವರ ಕನಸುಗಳನ್ನು ಕಿತ್ತುಕೊಳ್ಳುವ ಸಾಜಿದ್ ಖಾನ್ನಂತವರನ್ನು ಜೈಲಿಗೆ ಹಾಕಬೇಕು ಎಂದು ಡಿಂಪಲ್ ಪೌಲ್ ಒತ್ತಾಯಿಸಿದ್ದಾರೆ. ಯಾರೂ ಗಾಡ್ಫಾದರ್ ಇಲ್ಲದ ಕಾರಣ, ಮರ್ಯಾದೆಗೆ ಅಂಜಿ ಇಷ್ಟು ದಿನ ಸುಮ್ಮನಿದ್ದರಂತೆ ಡಿಂಪಲ್. ಆದರೆ ಮತ್ತಷ್ಟು ಹುಡುಗಿಯರ ಜೀವನ ಹಾಳು ಮಾಡುವ ಆತಂಕದಲ್ಲಿ ಈಗ ಮೌನ ಮುರಿದಿದ್ದೇನೆ ಎಂದೂ ಅವರು ಎರಡು ವರ್ಷ ತಡವಾಗಿ ಸಾಜಿದ್ ಖಾನ್ ಮೇಲೆ ಆರೋಪ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
49 ವರ್ಷದ ಸಾಜಿದ್ ಖಾನ್ ತಮ್ಮ 15 ವರ್ಷಗಳ ಸಿನಿ ಕರಿಯರ್ನಲ್ಲಿ ಡರ್ನಾ ಜರೂರಿ ಹೈ, ಹೇ ಬೇಬಿ, ಹೌಸ್ಫುಲ್, ಹೌಸ್ಫುಲ್ 2, ಹಿಮ್ಮತ್ವಾಲಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಆದರೆ ಸಿನಿಮಾಗಳಿಗಿಂತ ಹೆಚ್ಚಾಗಿ ಈ ಮೀಟೂ ವಿವಾದದಿಂದಾಗಿಯೇ ಸುದ್ದಿಯಲ್ಲಿದ್ದು, ಅವರನ್ನು ಬಂಧಿಸಬೇಕು ಅಂತ ಆನ್ಲೈನ್ನಲ್ಲಿ ಹೋರಾಟವೂ ಶುರುವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ