news18-kannada Updated:April 7, 2021, 5:58 PM IST
ಮಿರಾಜ್ ಕಪ್ರಿ
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ದುಡ್ಡು ಕಳೆದುಕೊಂಡು ಮೈತುಂಬಾ ಸಾಲ ಮಾಡಿಕೊಂಡಿದ್ದ ಕಿರುತೆರೆ ನಟನೊಬ್ಬ, ಸರಗಳತನಕ್ಕಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಡ್ಡದಾರಿಯಲ್ಲಿ ಕಳೆದುಕೊಂಡ ಹಣವನ್ನ ಅಡ್ಡದಾರಿಯಲ್ಲೇ ಸಂಪಾದಿಸಬೇಕು ಅಂತ ಸರಗಳ್ಳತನಕ್ಕೆ ಇಳಿದಿದ್ದ ಆರೋಪ ಸದ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಕಂಬಿ ಎಣಿಸುವಂತಾಗಿದೆ. ಹೌದು, ಭಾರತದಲ್ಲೇ ಅತ್ಯಂತ ಯಶಸ್ವೀ ಧಾರಾವಾಹಿಗಳಲ್ಲಿ ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಕೂಡ ಒಂದು. ಇದೇ ಧಾರಾವಾಹಿಯಲ್ಲಿ ನಟ ಮಿರಾಜ್ ಕಪ್ರಿ ನಟಿಸುತ್ತಿದ್ದರು. ಅಷ್ಟೇಅಲ್ಲ ಥಪ್ಕೀ ಪ್ಯಾರ್ ಕೀ, ಮೇರೆ ಅಂಗನೇ ಮೇ ಸೇರಿದಂತೆ ಇನ್ನೂ ಕೆಲ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಮಿರಾಜ್ ಕಪ್ರಿ ಕಾಣಿಸಿಕೊಂಡಿದ್ದ. ಆದರೆ ಇತ್ತೀಚೆಗಷ್ಟೇ ನಡೆದ ಭಾರತ ಮತ್ತು ಇಂಗ್ಲೆಂಡ್ ಸರಣಿಯ ಸಮಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ. ಸರಣಿಯಲ್ಲಿ ಅಂದುಕೊಂಡಿದ್ದೆಲ್ಲ ಉಲ್ಟಾ ಹೊಡೆದು ಬರೋಬ್ಬರಿ 30 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದರು ಮಿರಾಜ್ ಕಪ್ರಿ. ಬೆಟ್ಟಿಂಗ್ ಹಣ ನೀಡಲು ಗೆಳೆಯರು, ಸಂಬಂಧಿಕರು, ಹೀಗೆ ಸಿಕ್ಕ ಸಿಕ್ಕವರ ಬಳಿ ಮೈ ತುಂಬ ಸಾಲ ಮಾಡಿಕೊಂಡಿದ್ದರು.
ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅವಕಾಶಗಳೂ ಕಡಿಮೆಯಾಗಿದ್ದ ಕಾರಣ, ಮಿರಾಜ್ ಕಪ್ರಿ ಆದಾಯವೂ ನಿಂತಿತ್ತು. ಹಾಗಂತ ಬೇರೇನಾದರೂ ಕೆಲಸಕ್ಕೆ ಸೇರಿದರೂ ಬರುವ ಸಂಬಳದಲ್ಲಿ ಇರುವ ಬೆಟ್ಟದಷ್ಟು ಸಾಲ ತೀರಿಸುವುದು ಕನಸಿನ ಮಾತು ಎಂಬುದು ಆತನಿಗೂ ಗೊತ್ತಾಗಿತ್ತು. ಹೀಗಾಗಿಯೇ ಅಡ್ಡದಾರಿ ತುಳಿದ ಮಿರಾಜ್ ಕಪ್ರಿ ವೈಭವ್ ಜಾಧವ್ ಎಂಬ ತನ್ನ ಗೆಳೆಯನ ಜೊತೆ ಸೇರಿ ಸರಗಳ್ಳತನ ಮಾಡತೊಡಗಿದರು.

ಮಿರಾಜ್ ಕಪ್ರಿ
ಮುಂಬೈನಲ್ಲಿ ಚೈನ್ ಸ್ನ್ಯಾಚಿಂಗ್ ಹಾಗೂ ಮನೆಗಳಲ್ಲಿ ಕಳ್ಳತನ ಮಾಡುವುದು, ಸಿಕ್ಕ ಒಡವೆಗಳು, ದುಬಾರಿ ವಸ್ತುಗಳನ್ನು ಗುಜರಾತ್ನ ಸೂರತ್ಗೆ ತೆರಳಿ ಅಲ್ಲಿ ತಮಗೆ ಪರಿಚಯವಿರುವ ಚಿನ್ನದ ವ್ಯಾಪಾರಿಯ ಮೂಲಕ ಮಾರುವುದು. ಹೀಗೆ ಹಲವು ದಿನಗಳ ಕಾಲ ಮುಂಬೈ ಹಾಗೂ ಸೂರತ್ ನಡುವೆ ಓಡಾಡಿಕೊಂಡಿದ್ದ ಮಿರಾಜ್ ಕಪ್ರಿ ಮತ್ತು ವೈಭವ್ ಜಾಧವ್ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ಸ್ಟನ್ನಿಂಗ್ ಲುಕ್ಸ್ನಲ್ಲಿ ಸ್ಟೈಲ್ ಐಕಾನ್ ಸೋನಮ್ ಕಪೂರ್..!
ಪೊಲೀಸರ ವಿಚಾರಣೆಯಲ್ಲಿ ಮಿರಾಜ್ ಕಪ್ರಿ ಮತ್ತು ವೈಭವ್ ಜಾಧವ್ ಬಾಯಿಬಿಟ್ಟಿದ್ದಾರೆ. ಇದುವರೆಗೂ ಮಾಡಿರುವ ಕಳ್ಳತನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಿರಾಜ್ ಕಪ್ರಿ ಹಾಗೂ ವೈಭವ್ ಜಾಧವ್ ಬಳಿಯಿದ್ದ ಸುಮಾರು 2.54 ಲಕ್ಷ ರೂಪಾಯಿ ಮೌಲ್ಯದ ಬೈಕ್ಗಳು, ಚಿನ್ನದ ಸರಗಳು ಹಾಗೂ ಮೊಬೈಲ್ಗಳನ್ನ ವಶಪಡಿಸಿಕೊಂಡಿರುವ ಪೊಲೀಸರು, ಅವರು ಕದ್ದ ಚಿನ್ನದ ಸರಗಳನ್ನ ಅಡವಿಟ್ಟುಕೊಳ್ಳುತ್ತಿದ್ದ ಸೂರತ್ನ ಒಡವೆ ಅಂಗಡಿ ಮಾಲೀಕನ ಹುಡುಕಾಟದಲ್ಲಿ ತೊಡಗಿದ್ದಾರೆ. ಆ ಒಡವೆ ಅಂಗಡಿ ಮಾಲೀಕನ ಮೂಲಕ ಎಷ್ಟು ಕದ್ದ ಚಿನ್ನದ ಸರಗಳನ್ನು ಅಡವಿಟ್ಟಿದ್ದಾರೆ, ಅವುಗಳ ಮೌಲ್ಯವೆಷ್ಟು, ಎಲ್ಲೆಲ್ಲಿ ಕದ್ದಿರುವ ಸರಗಳು, ಒಟ್ಟು ಎಷ್ಟು ಪ್ರಕರಣಗಳಲ್ಲಿ ಮಿರಾಜ್ ಕಪ್ರಿ ಮತ್ತು ವೈಭವ್ ಜಾಧವ್ ಭಾಗಿಯಾಗಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಸಿಗಲಿದೆ. ಹೀಗಾಗಿಯೇ ಇದೇ ನಿಟ್ಟಿನಲ್ಲಿ ಮುಂಬೈ ಪೊಲೀಸರೂ ಸಹ ತನಿಖೆ ಮುಂದುವರೆಸಿದ್ದಾರೆ.
Published by:
Anitha E
First published:
April 7, 2021, 5:58 PM IST