ಸ್ಯಾಂಡಲ್‍ವುಡ್ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ನಿಧನರಾಗಿ ಮೂರು ವಾರಗಳು ಕಳೆದರೂ ಅವರ ನೆನಪು ಇನ್ನೂ ಕಾಡುತ್ತಲೇ ಇದೆ. ಅದರಲ್ಲೂ ಅವರ ಪತ್ನಿ, ನಟಿ ಮೇಘನಾ ರಾಜ್ ಅವರನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಇತ್ತೀಚೆಗಷ್ಟೆ ಚಿರು ಅಗಲಿಕೆಯ ನೆನಪಿನಲ್ಲಿಯೇ ಮೇಘನಾ ರಾಜ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರು. ಇದರ ಜೊತೆಗೆ ಸದ್ಯ ಮೇಘನಾ ರಾಜ್ ಅವರು ಸಾಹಸಿಂಹ ವಿಷ್ಟುವರ್ಧನ್ ಜೊತೆ ತೆಗೆಸಿಕೊಂಡ ಫೋಟೋ ಕೂಡ ವೈರಲ್ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ. ಮೊದಲಿನಿಂದಲೂ ಸುಂದರ್ರಾಜ್, ಪ್ರಮಿಳಾ ಜೋಷಾಯ್ ಕುಟುಂಬಕ್ಕೂ ವಿಷ್ಣು ಕುಟುಂಬಕ್ಕೂ ಬಹಳ ಆತ್ಮೀಯತೆ ಇದೆ. ಮೇಘನಾ ಚಿಕ್ಕ ಹುಡುಗಿ ಆದಾಗಿನಿಂದ ವಿಷ್ಣುವರ್ಧನ್ ಅವರನ್ನು ಎತ್ತಿ ಬೆಳೆಸಿದ್ದರು.
ಡಾ. ವಿಷ್ಣುವರ್ಧನ್ ಹಾಗೂ ಭಾರತಿ ಇಬ್ಬರೂ ಮೇಘನಾ ಅವರನ್ನು ತಮ್ಮ ಮಕ್ಕಳಂತೆಯೇ ಇಷ್ಟಪಡುತ್ತಿದ್ದರು. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಸಾಹಸಸಿಂಹ ನಿಧನರಾದಾಗ ಅವರು ಧರಿಸುತ್ತಿದ್ದ ದುಬಾರಿ ಬೆಲೆಯ ವಾಚ್ವೊಂದನ್ನು ಕೀರ್ತಿ ತಮ್ಮ ಬಳಿ ಇರಿಸಿಕೊಂಡಿದ್ದರು. ಆದರೆ ನಂತರ ಅದನ್ನು ಅಪ್ಪಾಜಿ ನೆನೆಪಿಗಾಗಿ ಮೇಘನಾ ಅವರಿಗೆ ನೀಡಿದ್ದರು.
ಈ ಹಿಂದೆ ವಿಷ್ಟು ಅವರು ಧರಿಸುತ್ತಿದ್ದ ದುಬಾರಿ ಬೆಲೆಯ ವಾಚ್ ಹಾಕಿಕೊಂಡು ಮೇಘನಾ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಈಗಲೂ ಕೂಡಾ ಮೇಘನಾ ಕುಟುಂಬ ವಿಷ್ಣು ಮನೆಗೆ ಹೋದರೆ ಭಾರತಿ ಅವರು ಮೇಘನಾಗೆ ಕೈ ತುತ್ತು ನೀಡುತ್ತಾರಂತೆ. ಈ ಎರಡು ಕುಟುಂಬ ಅಷ್ಟೊಂದು ಆತ್ಮೀಯತೆಹೊಂದಿದೆ. ಇನ್ನೂ ಇತ್ತೀಚೆಗೆ ಚಿರು ನಿಧನರಾದ ಸಂದರ್ಭ ಭಾರತಿ ವಿಷ್ಣುವರ್ಧನ್, ಕೀರ್ತಿ ಹಾಗೂ ಅನಿರುಧ್ಧ್ ಅವರು ಮೇಘನಾ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದರು.
ಮೊನ್ನೆಯಷ್ಟೆ ಮೇಘನಾ ಅವರು ತನ್ನ ಅಧಿಕೃತ ಫೇಸ್‍ಬುಕ್ ಪೇಜಿನಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ್ದರು. ಚಿರು ಮತ್ತು ಮೇಘನಾ ಕಾರಿನಲ್ಲಿ ಕುಳಿತು, ಇಬ್ಬರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡ ನೂತನ ಫೋಟೋ ಅಪ್‍ಡೇಟ್ ಮಾಡಿದ್ದರು. ಅಲ್ಲದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೇಘ ಎಸ್ ರಾಜ್ ಬದಲು ಮೇಘನಾ ರಾಜ್ ಸರ್ಜಾ ಎಂದು ಹೆಸರು ಬದಲಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‍ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ