ಬಾಲಿವುಡ್‌ನಲ್ಲಿ ಈ ನಟ ಮತ್ತು ನಟಿಯರು ಒಂದು ಸಿನೆಮಾ ಪಾತ್ರಕ್ಕೆ ಯಾವ ರೀತಿಯಾಗಿ ಫಿಟ್ನೆಸ್ ಬೇಕೋ, ಆ ರೀತಿಯಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಮತ್ತು ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಗಂಟೆ ಗಟ್ಟಲೆ ಈ ಜಿಮ್ ಗಳಲ್ಲಿ ಕಠಿಣ ತಾಲೀಮು ಮಾಡುವುದಾಗಲಿ ಮತ್ತು ದಿನದ ಒಂದೆರಡು ಊಟಗಳನ್ನು ಬಿಟ್ಟು ಬರೀ ಜ್ಯೂಸ್‌ಗಳನ್ನು ಕುಡಿದುಕೊಂಡು ಇರುತ್ತಾರೆ. ಆದರೆ ಇಲ್ಲೊಬ್ಬ ನಟ ಒಂದಲ್ಲ, ಎರಡಲ್ಲ.. ಬರೋಬ್ಬರಿ 13-14 ವರ್ಷಗಳಿಂದ ರಾತ್ರಿ ಹೊತ್ತು ಊಟಾನೇ ಮಾಡಿಲ್ವಂತೆ ಅಂತ ಹೇಳಿದರೆ ನೀವು ಗ್ಯಾರೆಂಟಿ ಶಾಕ್ ಆಗ್ತೀರಾ. ಆದರೆ ಖುದ್ದು ನಟ ಮನೋಜ್ ಬಾಜಪೇಯಿ ಅವರೇ ಕಳೆದ 13-14 ವರ್ಷಗಳಿಂದ ರಾತ್ರಿ ಹೊತ್ತಿನಲ್ಲಿ ಊಟ ಮಾಡಿಲ್ಲ ಎಂದು ಬಹಿರಂಗಪಡಿಸಿದ್ದಾರೆ.
ಅಜ್ಜನ ಫಿಟ್ನೆಸ್ ಮಂತ್ರವನ್ನು ಫಾಲೋ ಮಾಡಿದ್ರಂತೆ ನಟ
ಅತ್ಯಂತ ಫಿಟ್ ಮತ್ತು ಆರೋಗ್ಯಕರವಾಗಿದ್ದ ತನ್ನ ಅಜ್ಜನ ಆಹಾರ ಕ್ರಮವನ್ನು ಇವರು ಅನುಸರಿಸಬೇಕೆಂದು ಹಠ ತೊಟ್ಟು ನಟ ಮೊದಲ ಕೆಲವು ಆರಂಭದ ವರ್ಷಗಳಲ್ಲಿ ತಮ್ಮ ಆಹಾರಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರಂತೆ ಮತ್ತು 12-14 ಗಂಟೆಗಳ ಉಪವಾಸವನ್ನು ಮಾಡಲು ಶುರು ಮಾಡಿದರಂತೆ. ನಂತರ ಕ್ರಮೇಣ ರಾತ್ರಿ ಹೊತ್ತಿನ ಊಟವನ್ನು ಸಂಪೂರ್ಣವಾಗಿ ನಿಲ್ಲಿಸಿದರು ಎಂದು ಮನೋಜ್ ಹೇಳಿದರು. "ಮಧ್ಯಾಹ್ನದ ಊಟದ ನಂತರ, ಅಡುಗೆಮನೆ ಸಂಪೂರ್ಣವಾಗಿ ಬಂದ್ ಆದಂತೆ" ಎಂದು ಅವರು ಮುಂದುವರಿಸಿದರು.
ತಮ್ಮ ಡಯಟ್ ನ ಬಗ್ಗೆ ಏನ್ ಹೇಳ್ತಾರೆ ನಟ ಮನೋಜ್ ನೋಡಿ
"ನನ್ನ ಅಜ್ಜ ತುಂಬಾನೇ ತೆಳ್ಳಗೆ ಮತ್ತು ಆರೋಗ್ಯಕರವಾಗಿದ್ದರು, ಅವರು ಅನುಸರಿಸಿದ ಡಯಟ್ ಅನ್ನು ನಾನು ಸಹ ಮೊದಲಿಗೆ ಫಾಲೋ ಮಾಡಿದೆ. ಸಂಜೆ ಬೇಗನೆ ಊಟ ಮಾಡುತ್ತಿದ್ದೆ. ಕೆಲವೊಮ್ಮೆ ನಾನು 12 ಗಂಟೆ, ಇನ್ನೂ ಕೆಲವೊಮ್ಮೆ 14 ಗಂಟೆಗಳ ಸಮಯದವರೆಗೆ ಉಪವಾಸ ಮಾಡಲು ಶುರು ಮಾಡಿದೆ. ನಂತರ ವೈದ್ಯರು ಸಹ ಸಂಜೆ ಬೇಗನೆ ಊಟ ಮಾಡುವ ಅಭ್ಯಾಸ ಒಳ್ಳೆಯದು ಅಂತ ಹೇಳಿದರು. ಅಲ್ಲಿಂದ ನಾನು ನಿಧಾನವಾಗಿ ರಾತ್ರಿ ಊಟವನ್ನು ಬಿಟ್ಟೆ. ನಮ್ಮ ಮನೆಯಲ್ಲಿ ಮಧ್ಯಾಹ್ನದ ಊಟದ ನಂತರ, ಅಡುಗೆಮನೆ ಬಂದ್ ಆಗುತ್ತದೆ. ನಮ್ಮ ಮಗಳು ಹಾಸ್ಟೆಲ್ ನಿಂದ ಹಿಂದಿರುಗಿದಾಗ ಮಾತ್ರ ರಾತ್ರಿ ಆಕೆಗೆ ಅಡುಗೆ ಮಾಡಿ ಕೊಡುತ್ತಾರೆ" ಎಂದು ಮನೋಜ್ ಹೇಳಿದರು.
ಆದಾಗ್ಯೂ, ಒಂದು ಸಂದರ್ಶನದಲ್ಲಿ, 54 ವರ್ಷದ ನಟ ಆರಂಭದಲ್ಲಿ ಈ ಡಯಟ್ ಅನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟವಾಯಿತು ಅಂತ ಒಪ್ಪಿಕೊಂಡರು. "ಒಂದು ವಾರ ನನಗೆ ತುಂಬಾ ಕಷ್ಟವಾಯಿತು. ನಾನು ಏನು ಮಾಡುತ್ತಿದ್ದೆನೆಂದರೆ, ನನಗೆ ಹಸಿವಾದಾಗ ಸುಮಾರು ಎರಡು ಬಿಸ್ಕತ್ತುಗಳನ್ನು ತಿನ್ನುತ್ತಿದ್ದೆ ಮತ್ತು ಸಾಕಷ್ಟು ನೀರು ಕುಡಿಯುತ್ತಿದ್ದೆ. ಮೊದಲಿಗೆ ನಾನು ಶೂಟಿಂಗ್ ಮುಗಿಸಿ ರಾತ್ರಿ ಬಂದು ಊಟ ಮಾಡಲು ಅಭ್ಯಾಸ ಮಾಡಿಕೊಂಡಿದ್ದರಿಂದ, ಈ ಡಯಟ್ ಶುರು ಮಾಡಿದಾಗ ಸಂಜೆ ನನಗೆ ತುಂಬಾನೇ ಹಸಿವಾಗೋದು" ಎಂದು ಮನೋಜ್ ಹೇಳಿದರು.
ಮನೋಜ್ ಈಗ 14-18 ತಾಸು ಏನು ತಿನ್ನಲ್ವಂತೆ..
ಅವರು ಈಗ 18 ಗಂಟೆಗಳ ಕಾಲ ಮಧ್ಯಂತರ ಉಪವಾಸವನ್ನು ಅಭ್ಯಾಸ ಮಾಡುತ್ತಾರೆ ಎಂದು ಅವರು ಹಂಚಿಕೊಂಡರು. "ನನ್ನ ಮುಂದಿನ ಚಿತ್ರಕ್ಕಾಗಿ ನಾನು ತುಂಬಾನೇ ಫಿಟ್ ಆಗಿರಬೇಕಾಗಿದೆ. ನನ್ನ ಅಗತ್ಯಗಳಿಗೆ ಅನುಗುಣವಾಗಿ ನನ್ನ ಉಪವಾಸ 14-18 ಗಂಟೆಗಳ ನಡುವೆ ಏರಿಳಿತಗೊಳ್ಳುತ್ತದೆ. ಆದ್ದರಿಂದ, ನಾನು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಚೆನ್ನಾಗಿ ತಿನ್ನುತ್ತೇನೆ. ನಾನು ಆರೋಗ್ಯಕರ ಆಹಾರವನ್ನು ಮಾತ್ರ ತೆಗೆದುಕೊಳ್ಳುತ್ತೇನೆ" ಎಂದು ಮನೋಜ್ ಹೇಳಿದರು.
ಹೀಗೆ ರಾತ್ರಿ ಊಟ ಮಾಡದಿರುವುದು ಆರೋಗ್ಯಕರವೇ?
ಬೆಳಿಗ್ಗೆ ಮೊದಲ ಊಟವನ್ನು ಬಿಟ್ಟುಬಿಡುವುದಕ್ಕಿಂತ ರಾತ್ರಿ ಊಟವನ್ನು ಬಿಟ್ಟು ರಾತ್ರಿ ಉಪವಾಸ ಮಾಡುವುದು ಸುಲಭ ಎಂದು ತಜ್ಞರು ಸೂಚಿಸುತ್ತಾರೆ. "ನೀವು ಬೆಳಿಗ್ಗೆ ಎದ್ದು ಹೊಟ್ಟೆ ತುಂಬಾ ತಿನ್ನಬಹುದು ಮತ್ತು ನಂತರದಲ್ಲಿ ನಿಮ್ಮ ಮಧ್ಯಂತರ ಉಪವಾಸವನ್ನು ಶುರು ಮಾಡಬಹುದು. ಅಲ್ಲದೆ, ಸುಧಾರಿತ ಜೀರ್ಣಕ್ರಿಯೆಗಾಗಿ ಮತ್ತು ತಡರಾತ್ರಿ ಊಟ ಮಾಡುವುದಕ್ಕಿಂತ ಸಂಜೆ ಹೊತ್ತಿನಲ್ಲಿ ಬೇಗನೆ ಊಟ ಮಾಡುವುದು ಯಾವಾಗಲೂ ಉತ್ತಮ" ಎಂದು ಡಯಟಿಷಿಯನ್ ಗರಿಮಾ ಗೋಯಲ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ: Bollywood Stars: ಲವ್ ಮ್ಯಾರೇಜ್ ಬೆಸ್ಟಾ? ಅರೇಂಜ್ ಮ್ಯಾರೇಜ್ ಬೆಸ್ಟಾ? ಈ ಬಗ್ಗೆ ಏನ್ ಹೇಳ್ತಾರೆ ಬಾಲಿವುಡ್ ಮಂದಿ?
ಈ ಡಯಟ್ ಎಲ್ಲರಿಗೂ ಕೆಲಸ ಮಾಡುತ್ತದೆಯೇ?
ರಾತ್ರಿ ಹೊತ್ತಿನಲ್ಲಿ ಊಟವನ್ನು ಬಿಟ್ಟುಬಿಡುವುದು ಎಲ್ಲರಿಗೂ ವಿಭಿನ್ನವಾಗಿ ಕೆಲಸ ಮಾಡುತ್ತದೆ. "ನೀವು ಸಂಜೆ ವ್ಯಾಯಾಮ ಮಾಡುತ್ತೀರಿ ಅಂತಾದರೆ ನಂತರ ಊಟದ ಸಮಯದಲ್ಲಿ ಉಪವಾಸ ಮಾಡುವುದರಿಂದ ನಿಮಗೆ ಹಾನಿಯಾಗಬಹುದು. ಅಲ್ಲದೆ, ಖಾಲಿ ಹೊಟ್ಟೆಯ ವ್ಯಾಯಾಮಗಳು ಸ್ನಾಯು ಗಾಯಗಳ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ ಒಬ್ಬರ ವೈಯಕ್ತಿಕ ಆರೋಗ್ಯ ಸ್ಥಿತಿ ಮತ್ತು ಅವರ ಜೀವನಶೈಲಿಗೆ ಅನುಗುಣವಾಗಿ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು ಉತ್ತಮ" ಎಂದು ಗೋಯಲ್ ಹೇಳಿದರು.
ಅಹಮದಾಬಾದ್ ನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಆಹಾರ ತಜ್ಞೆಯಾದ ಡಾ. ಶೃತಿ ಭಾರದ್ವಾಜ್ ಅವರ ಪ್ರಕಾರ, ಮಧ್ಯಂತರ ಉಪವಾಸವು ಎಲ್ಲರಿಗೂ ಸೂಕ್ತವಲ್ಲ ಮತ್ತು ತಲೆನೋವು, ತಲೆ ತಿರುಗುವಿಕೆ, ಚರ್ಮದ ಸಮಸ್ಯೆಗಳು, ಕೂದಲು ಉದುರುವಿಕೆ, ಸೂಕ್ಷ್ಮ ಪೋಷಕಾಂಶಗಳ ಕೊರತೆಯಂತಹ ಹೆಚ್ಚಿನ ಸಮಸ್ಯೆಗಳನ್ನು ತಪ್ಪಿಸಲು ಯಾವುದೇ ಹೊಸ ಆಹಾರ ಯೋಜನೆಯನ್ನು ಪ್ರಾರಂಭಿಸುವ ಮೊದಲು ಸರಿಯಾದ ವೃತ್ತಿಪರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ