ಪೊಲೀಸ್ ಕಂಟ್ರೋಲ್ ರೂಮ್ಗೆ (Police Control Room) ಸಾಮಾನ್ಯವಾಗಿ ದಿನನಿತ್ಯ ಅನೇಕ ಕರೆಗಳು ಬರುತ್ತವೆ, ಇಲ್ಲಿ ಒಂದು ಅಪಘಾತವಾಗಿದೆ, ಇಲ್ಲಿ ಒಂದು ಶವ ಬಿದ್ದಿದೆ. ಹೀಗೆ ಅನೇಕ ತರಹದ ಮಾಹಿತಿಗಳನ್ನು ಪೊಲೀಸರಿಗೆ ತಿಳಿಸಲು ಜನರು ಕರೆ ಮಾಡುತ್ತಲೇ ಇರುತ್ತಾರೆ. ಈ ಕರೆಗಳಲ್ಲಿ ಹುಸಿ ಬೆದರಿಕೆ ಕರೆಗಳು ಸಹ ಬರುತ್ತವೆ.ಇದೇ ರೀತಿಯಾಗಿ ಜನವರಿ 6 ರಂದು ಮಹಾರಾಷ್ಟ್ರ (Maharashtra) ಕಂಟ್ರೋಲ್ ರೂಂಗೆ ಒಬ್ಬ ವ್ಯಕ್ತಿ ಕರೆ ಮಾಡಿ ಮುಂಬೈಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan) ಅವರ ಮನ್ನತ್ ಬಂಗಲೆಯನ್ನು(Mannath bungalow) ಒಳಗೊಂಡಂತೆ ಹಲವಾರು ಸ್ಥಳಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದು, ಆತನನ್ನು ಇದೀಗ ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಪರಮಾಣು ಬಾಂಬ್ ದಾಳಿ ಬೆದರಿಕೆ
ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್ ಖಾನ್ ಅವರ ಮನ್ನತ್ ಹೆಸರಿರುವ ಭವ್ಯ ಬಂಗಲೆ ನಗರದ ಒಂದು ಪ್ರಮುಖವಾದ ಲ್ಯಾಂಡ್ ಮಾರ್ಕ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮುಂಬೈ ಪೊಲೀಸರ ಪ್ರಕಾರ, ಜನವರಿ 6 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ನಗರದ ಹಲವಾರು ಸ್ಥಳಗಳನ್ನು 'ಪರಮಾಣು ಬಾಂಬ್'ಗಳಿಂದ ಸ್ಫೋಟಿಸುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇವನು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ), ಕುರ್ಲಾ ರೈಲ್ವೆ ನಿಲ್ದಾಣ, ನಟ ಶಾರುಖ್ ಖಾನ್ ಅವರ ಬಂಗಲೆ ಬಳಿ ಮತ್ತು ನೆರೆಯ ನವಿ ಮುಂಬೈನ ಖಾರ್ಘರ್ ನಲ್ಲಿ ಗುರುದ್ವಾರ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ಸಿಎಸ್ಪಿ ಅಲೋಕ್ ಶರ್ಮಾ ಅವರು "ಭಯೋತ್ಪಾದಕ ದಾಳಿಗಳನ್ನು ನಡೆಸುವುದಾಗಿ ಹೇಳಿ ಮಧ್ಯಪ್ರದೇಶ ರಾಜ್ಯದಲ್ಲಿರುವ ಜಬಲ್ಪುರದಿಂದ ಕರೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರಿಂದ ನಮಗೆ ಕರೆ ಬಂದಿದೆ ಎಂದು ವರದಿಯಾಗಿದೆ. ಆ ವ್ಯಕ್ತಿಯನ್ನು ಬಂಧಿಸಲು ಅವರು ನಮ್ಮ ಸಹಾಯ ಕೋರಿದರು. ನಾವು ಆ ವ್ಯಕ್ತಿಯನ್ನು ಶನಿವಾರದಂದು ಬಂಧಿಸಿದ್ದೇವೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ" ಎಂದು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.
ಜಿತೇಶ್ ಠಾಕೂರ್ ಎಂಬ ವ್ಯಕ್ತಿ ಬಂಧನ
ಮಹಾರಾಷ್ಟ್ರ ಪೊಲೀಸರು ಆ ವ್ಯಕ್ತಿಯು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಮೊಬೈಲ್ ಸಂಖ್ಯೆಯನ್ನು ಮಧ್ಯಪ್ರದೇಶದ ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ, ಅದರ ಆಧಾರದ ಮೇಲೆ 35 ವರ್ಷದ ಜಿತೇಶ್ ಠಾಕೂರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಬಲ್ಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್ ಖಂಡೇಲ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆರೋಪಿ ಒಬ್ಬ ಕುಡುಕನಾಗಿದ್ದು ಮತ್ತು ಈ ಹಿಂದೆಯೂ ಸಹ ಪೊಲೀಸ್ ಕಂಟ್ರೋಲ್ ರೂಂಗೆ ಇದೇ ರೀತಿಯ ಹುಸಿ ಕರೆಗಳನ್ನು ಮಾಡಿದ್ದಾರೆ ಮತ್ತು ಪೊಲೀಸ್ ಎಸ್ಒಎಸ್ ಸೇವೆಯಾದ ಡಯಲ್ 100 ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾನೆ ಎಂದು ಖಂಡೇಲ್ ಬಹಿರಂಗಪಡಿಸಿದ್ದಾರೆ.
ಪ್ರಕರಣ ದಾಖಲು
ಆ ವ್ಯಕ್ತಿಯು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬೆದರಿಕೆ ಹಾಕಿದ ನಂತರ, ತಕ್ಷಣವೇ ಈ ಸ್ಥಳಗಳಲ್ಲಿ ಪೊಲೀಸರು ಹೋಗಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಆದರೆ ಅವರಿಗೆ ಆ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡು ಬಂದಿಲ್ಲ, ನಂತರ ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಒಬ್ಬರನ್ನು ಬೆದರಿಸಿದ ಮತ್ತು ಸಾರ್ವಜನಿಕ ಸೇವಕನಿಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಜಿತೇಶ್ ಠಾಕೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಖಂಡೇಲ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಈ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಅವರು ಹೇಳಿದರು.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ