ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತೆಲುಗು ಚಿತ್ರರಂಗದಲ್ಲೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರತಿ ಸಿನಿಮಾಗೂ ಕೋಟಿ ಕೋಟಿ ಹಣ ಸಂಭಾವನೆ ಸಿಗುವಾಗ ಶೂಟಿಂಗ್ ಸೆಟ್‍ನಲ್ಲಿ ರೆಸ್ಟ್ ಮಾಡಲು ಒಂದೊಳ್ಳೆ ಕ್ಯಾರವಾನ್ ಇಲ್ಲದಿದ್ದರೆ ಹೇಗೆ ಹೇಳಿ? ಹೀಗಾಗಿಯೇ ಆಗಾಗ ಪ್ರಿನ್ಸ್ ಮಹೇಶ್ ಬಾಬು ತಮ್ಮ ಕ್ಯಾರವಾನ್‍ಗಳನ್ನು ಬದಲಿಸುತ್ತಿರುತ್ತಾರೆ. ಉತ್ತಮ ಗುಣಮಟ್ಟದ, ಅತ್ಯುತ್ತಮ ಸೌಲಭ್ಯಗಳಿರುವ ಹೊಸ ಹೊಸ ಕ್ಯಾರವಾನ್‍ಗಳನ್ನು ಬಳಸುತ್ತಾರೆ. ಈಗ ಸಹ ಪ್ರಿನ್ಸ್ ಮಹೇಶ್ ಬಾಬು ಮತ್ತೆ ಹೊಸ ಕ್ಯಾರವಾನ್ ಖರೀದಿಸಿದ್ದಾರೆ. ಅದರ ಬೆಲೆ ಬರೋಬ್ಬರಿ 6.5 ಕೋಟಿ ರೂಪಾಯಿ ಎನ್ನಲಾಗಿದೆ. ಇದೊಂಥರಾ 4 ಚಕ್ರಗಳಲ್ಲಿ ಚಲಿಸುವ ಐಷಾರಾಮಿ ಬಂಗಲೆ ಅಂದರೂ ತಪ್ಪಿಲ್ಲ. ಅಷ್ಟರ ಮಟ್ಟಿಗೆ ಸೌಲಭ್ಯಗಳನ್ನ ಒಳಗೊಂಡಿದೆ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಕ್ಯಾರವಾನ್.
ಹೌದು, ಮುಂಬೈ ಮೂಲದ ಇಂಟೀರಿಯರ್ ಡಿಸೈನರ್ ಮೂಲಕ ವಿಶೇಷವಾಗಿ ಕ್ಯಾರವಾನ್ ಅನ್ನು ಡಿಸೈನ್ ಮಾಡಿಸಿಕೊಂಡಿದ್ದಾರೆ ಟಾಲಿವುಡ್ ಪ್ರಿನ್ಸ್. ಶೂಟಿಂಗ್ ಬ್ರೇಕ್‍ನಲ್ಲಿ ರೆಸ್ಟ್ ಪಡೆಯಲು ಮಾತ್ರವಲ್ಲ ತಮ್ಮ ಕುಟುಂಬದವರು, ಆಪ್ತರು, ಸ್ನೇಹಿತರು ಬಂದಾಗ ಕುಳಿತು ಕೆಲ ಹೊತ್ತು ಮಾತನಾಡಲೂ ಹೆಚ್ಚು ಸ್ಥಳಾವಕಾಶವಿರುವಂತೆ ವಿಶೇಷವಾಗಿ ವಿನ್ಯಾಸ ಮಾಡಿಸಲಾಗಿದೆ. ಜೊತೆಗೊಂದು ಟಿವಿ, ಎಸಿ, ಸೋಫಾ, ಮಂಚ, ಶೌಚಾಲಯ, ಮೇಕಪ್‍ಗಾಗಿ ಕನ್ನಡಿ ಮತ್ತು ಸ್ಪೆಷಲ್ ಲೈಟ್ಸ್, ಬಟ್ಟೆಗಳನ್ನಿಡಲು ವಾರ್ಡ್‍ರೋಬ್, ವೈಫೈ... ಹೀಗೆ ಈ ಹೊಸ ಕ್ಯಾರವಾನ್‍ನಲ್ಲಿ ಹತ್ತು ಹಲವು ಸೌಲಭ್ಯಗಳಿವೆ.
ಇನ್ನು, ಸಿನಿಮಾಗಳ ವಿಷಯಕ್ಕೆ ಬಂದರೆ ಪ್ರಿನ್ಸ್ ಮಹೇಶ್ ಬಾಬು ಇದೇ ಮಾರ್ಚ್ 16ರಿಂದ 'ಸರ್ಕಾರು ವಾರಿ ಪಾಟ' ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಲಿದ್ದಾರೆ. ಈ ಸಿನಿಮಾದಿಂದಲೇ ಹೊಸ ಕ್ಯಾರವಾನ್ ಬಳಸಲಿದ್ದಾರೆ ಮಹೇಶ್ ಬಾಬು. ಪರಶುರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಮಹಾನಟಿ ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ. ಈಗಾಗಲೇ ಚಿತ್ರದ ಮೊದಲ ಶೆಡ್ಯೂಲ್ ಪೂರ್ಣಗೊಂಡಿದ್ದು, ಸದ್ಯ ಎರಡನೇ ಶೆಡ್ಯೂಲ್ ಶೂಟಿಂಗ್‍ಗೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. 2022ರ ಸಂಕ್ರಾಂತಿ ಹಬ್ಬಕ್ಕೆ ಈ ಆಕ್ಷನ್ ಸಿನಿಮಾ ರಿಲೀಸ್ ಆಗಲಿದೆ.
ಅದರ ಜೊತೆ ಜೊತೆಗೇ ಪ್ರಿನ್ಸ್ ಮಹೇಶ್ ಬಾಬು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಬೆಂಗಳೂರಿನ ಸಂದೀಪ್ ಉನ್ನಿಕೃಷ್ಣನ್ ಜೀವನಾಧಾರಿತ ಮೇಜರ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆದಿವಿಶೇಷ್, ಶೋಭಿತಾ ಧುಲಿಪಲ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ, ಶಶಿ ಕಿರಣ್ ಟಿಕ್ಕಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.
(ವರದಿ: ಬ್ಯಾಡನೂರು ಹರ್ಷವರ್ಧನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ