'ಕಿರಿಕ್' ಹುಡುಗಿ ರಶ್ಮಿಕಾ ಮಂದಣ್ಣ (Rashmika Mandanna) ದಕ್ಷಿಣ ಭಾರತದಲ್ಲಿ ಫೇಮಸ್ ನಟಿಯೆಂದೇ ಖ್ಯಾತಿಪಡೆದವರು. ಒಂದಿಲ್ಲೊಂದು ವಿವಾದಗಳ ಮೂಲಕ ಹಾಗೂ ಕೆಲವೊಂಟು ಕಮೆಂಟ್ಗಳನ್ನು (Comments) ಮಾಡುವ ಮೂಲಕ ಸಿನಿ ಪ್ರಿಯರ ಕಣ್ಣು ಕೆಂಪಗಾಗಿಸಿದ್ದರೂ ಇಂದಿಗೂ ನಂಬರ್ 1 ಸ್ಥಾನದಲ್ಲಿ ಕೊಡಗಿನ (Kodagu) ಬ್ಯೂಟಿ ರಾರಾಜಿಸುತ್ತಿದ್ದಾರೆ.
ಎಲೆಯಲ್ಲಿ ರಶ್ಮಿಕಾರ ಮುಖಾರವಿಂದ
ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ದೊಡ್ಡ ದೊಡ್ಡ ಹೀರೋಗಳಿಗೆ ನಾಯಕಿಯಾಗುತ್ತಿರುವ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂಬುದು ಬಾಲಿವುಡ್ ಪರಿಣಿತರ ಅಭಿಪ್ರಾಯವಾಗಿದೆ.
ಇದೀಗ ಕೇರಳದ ಪ್ರತಿಭಾವಂತ ಅಭಿಮಾನಿ 22 ರ ಹರೆಯದ ಮೆಲ್ಬಿನ್ ರಶ್ಮಿಕಾರ ನಗುತ್ತಿರುವ ಸುಂದರ ಮುಖಾರವಿಂದವನ್ನು ಎಲೆಯಲ್ಲಿ ಮೂಡಿಸಿದ್ದು, ರಶ್ಮಿಕಾ ತಮ್ಮ ಅಭಿಮಾನಿಯ ಕಲಾ ಕೈಚಳಕಕ್ಕೆ ಮೆಚ್ಚುಗೆ ಸೂಚಿಸಿ ಇನ್ಸ್ಟಾದಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾರ ನಗುತ್ತಿರುವ ಮೂರು ಮುಖಗಳು ಎಲೆಯಲ್ಲಿ ಸುಂದರವಾಗಿ ಮೂಡಿಬಂದಿದ್ದು, ಎಲೆಯನ್ನು ಬೆಳಕಿಗೆ ಹಿಡಿದಾಗ ರಶ್ಮಿಕಾರ ಮುಖಾರವಿಂದ ಕಾಣಿಸುತ್ತದೆ.
ಮೆಲ್ಬಿನ್ನ ಸಂತೋಷಕ್ಕೆ ಪಾರವಿಲ್ಲ
ತಮ್ಮ ಮೆಚ್ಚಿನ ನಟಿ ತನ್ನ ಪ್ರತಿಭೆಯನ್ನು ಮೆಚ್ಚಿಕೊಂಡಿರುವುದಕ್ಕೆ ಹುಚ್ಚೆದ್ದು ಕುಣಿದಿರುವ ಮೆಲ್ವಿನ್ ತಮಗಾದ ಸಂತೋಷವನ್ನು ಸುದ್ದಿಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ರಶ್ಮಿಕಾರ ಕಾಮೆಂಟ್ಗೆ ಪ್ರತಿಕ್ರಿಯೆ ನೀಡಿರುವ ಮೆಲ್ಬಿನ್, ಉತ್ತರ ನೀಡಿದ್ದಕ್ಕೆ ಧನ್ಯವಾದಗಳು. ನೀವು ನನ್ನ ಈ ದಿನವನ್ನು ಸುಂದರವಾಗಿಸಿರುವಿರಿ. ನೀವು ಕಾಮೆಂಟ್ ಮಾಡುತ್ತೀರೆಂದು ನಿರೀಕ್ಷಿಸಿರಲಿಲ್ಲ ಎಂದು ಮೆಲ್ಬಿನ್ ಬರೆದುಕೊಂಡಿದ್ದಾರೆ.
View this post on Instagram
ಎಲೆಯಲ್ಲಿ ರಶ್ಮಿಕಾರ ನಗುತ್ತಿರುವ ಮುಖವನ್ನು ಮೆಲ್ಬಿನ್ ಬಿಡಿಸಿದ್ದು ತರಬೇತಿ ಪಡೆದ ಕಲಾಕಾರನೇನಲ್ಲ. ಏನಾದರೂ ವಿಭಿನ್ನವಾಗಿರುವುದನ್ನು ಮಾಡಬೇಕು ಎಂದು ಬಯಸಿದ್ದ ಮೆಲ್ಬಿನ್ ಎರಡು ವರ್ಷಗಳ ಹಿಂದೆ ಎಲೆಯಲ್ಲಿ ಚಿತ್ರ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು.
ಸೆಲೆಬ್ರಿಟಿಗಳಿಗೆ ಮೆಲ್ಬಿನ್ ಆರ್ಟ್ ಇಷ್ಟ
ಹೀಗೆ ಪ್ರಯತ್ನದಲ್ಲಿಯೇ ಒಂದೊಂದೇ ಸಾಧನೆ ಮಾಡಿದ ಮೇಲ್ಬಿನ್ ಆರಂಭದಲ್ಲಿ ಪ್ರಾಣಿಗಳ ಮುಖಗಳನ್ನು ರೂಪಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಅದೂ ಅಲ್ಲದೆ, ಹೆಸರು, ಪ್ರಾಣಿಗಳ ಆಕೃತಿ, ನಿಸರ್ಗದ ಅಂಶಗಳನ್ನು ಎಲೆಗಳಲ್ಲಿ ಚಿತ್ರಿಸಲಾರಂಭಿಸಿದರು. ನಿಧಾನವಾಗಿ ವ್ಯಕ್ತಿಗಳ ಚಿತ್ರಣಗಳನ್ನು ರಚಿಸಲಾರಂಭಿಸಿದರು ಎಂದು ತಿಳಿಸಿರುವ ಮೆಲ್ಬಿನ್ ಮಲಯಾಳಮ್ ನಟ ಮಮ್ಮೂಟಿಯವರ ಚಿತ್ರವನ್ನು ಎಲೆಯಲ್ಲಿ ಬಿಡಿಸಿಸಿರುವುದಾಗಿ ತಿಳಿಸಿದ್ದಾರೆ.
ಹೆಚ್ಚಿನ ಸೆಲೆಬ್ರಿಟಿಗಳು, ಅವರ ಕೆಲಸವನ್ನು ಮೆಚ್ಚಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಹೀಗೆ ಸ್ಫೂರ್ತಿ ಪಡೆದ ಮೆಲ್ಬಿನ್ ಮೋಹನ್ಲಾಲ್, ಎಸ್ಪಿ ಬಾಲಸುಬ್ರಹ್ಮಣ್ಯಂ, ಮರಡೋನಾ, ಯಶ್, ವಿಜಯ್ ದೇವರಕೊಂಡ, ಪೃಥ್ವಿರಾಜ್, ಸೂರ್ಯ, ವಿಜಯ್, ದುಲ್ಖರ್ ಸಲ್ಮಾನ್ ಹೀಗೆ ಇನ್ನಿತರ ಸೆಲೆಬ್ರಿಟಿಗಳ ಚಿತ್ರಗಳನ್ನು ಎಲೆಯಲ್ಲಿ ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೆಲ್ಬಿನ್ ಎಲೆಯಲ್ಲಿ ಚಿತ್ರ ಹೇಗೆ ಮೂಡಿಸುತ್ತಾರೆ?
ಮೆಲ್ವಿನ್ ಈ ಕಲೆಯಲ್ಲಿ ಅಷ್ಟೊಂದು ತರಬೇತಿ ಪಡೆದುಕೊಳ್ಳದೇ ಇರುವುದರಿಂದ ಮೊದಲಿಗೆ ಎಲೆಯ ಮೇಲೆ ವ್ಯಕ್ತಿಗಳ ರೇಖಾಚಿತ್ರವನ್ನು ರಚಿಸುತ್ತಾರೆ ನಂತರ ಅದನ್ನು ಕತ್ತರಿಸಿ ಬೇಡವಾದುದನ್ನು ತೆಗೆದುಹಾಕುತ್ತಾರೆ ಎಂದು ತಿಳಿಸಿದ್ದಾರೆ.
ಕಲಾಕೃತಿಗಳನ್ನು ಮೂಡಿಸಲು ಆಯ್ದುಕೊಳ್ಳುವ ಎಲೆಗಳು
ಮೆಲ್ಬಿನ್ ಬೇರೆ ಬೇರೆ ಎಲೆಗಳಲ್ಲಿ ಕಲಾಕೃತಿಗಳನ್ನು ರಚಿಸುವಲ್ಲಿ ಸಮರ್ಥರು. ಕಾಡು ಹಲಸಿನ ಎಲೆ, ಹಲಸಿನ ಮರದ ಎಲೆ, ಆಲದ ಮರದ ಎಲೆ, ತೆಂಗಿನ ತಾಳೆ ಗರಿಗಳ ಮೇಲೂ ತಮ್ಮ ಕಲಾವೈವಿಧ್ಯವನ್ನು ಪ್ರದರ್ಶಿಸಿದ್ದಾರೆ.
ಇನ್ನು ರಚನೆಗೆ ತಗುಲುವ ಸಮಯವೆಷ್ಟು ಎಂದು ಕೇಳಿದಾಗ ಇದು ರಚಿಸುವ ಕಲೆ ಹಾಗೂ ಎಲೆಯನ್ನು ಆಧರಿಸಿರುತ್ತದೆ ಎಂದು ತಿಳಿಸುವ ಅವರು ಒಟ್ಟು 8 ರಿಂದ 10 ಗಂಟೆಗಳ ಸಮಯ ತಗುಲುತ್ತದೆ ಎಂದು ತಿಳಿಸುತ್ತಾರೆ.
ಕಲಾಕೃತಿಗಳನ್ನು ರಚಿಸಲು ಮೆಲ್ಬಿನ್ ಹೆಚ್ಚಾಗಿ ಆಲದ ಮರ, ಹಲಸಿನ ಹಣ್ಣಿನ ಎಲೆ ಮತ್ತು ಕಾಡುಮರದ ಎಲೆಗಳನ್ನು ಬಳಸುತ್ತೇನೆ ಎಂದು ತಿಳಿಸಿದ್ದಾರೆ.
ಮೆಲ್ಬಿನ್ಗೆ ಚಿತ್ರ ರಚಿಸಲು ಬೇಡಿಕೆ ಹೆಚ್ಚಾಗಿದೆ
ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮೆಲ್ಬಿನ್ ಕಲಾಕೃತಿಯನ್ನು ಹಂಚಿಕೊಂಡ ನಂತರ ಬಹಳಷ್ಟು ಕಲಾಕೃತಿಗಳನ್ನು ರಚಿಸಲು ಆರ್ಡರ್ಗಳು ದೊರೆಯುತ್ತಿವೆ ಎಂದು ತಿಳಿಸಿದ್ದಾರೆ. ಕಲಾಕೃತಿಗಳನ್ನು ರಾಸಾಯನಿಕ ದ್ರವದಿಂದ ಲೇಪಿಸಿದ ನಂತರ ಫ್ರೇಮ್ ಮಾಡುತ್ತೇನೆ ಎಂದು ತಿಳಿಸುವ ಮೆಲ್ಬಿನ್ ಎಲೆಗಳನ್ನು ಫ್ರೇಮ್ ಮಾಡಿದ ನಂತರ ಅದು ಇದುವರೆಗೆ ಹಾನಿಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ