LAW: ಲಾ ಸಿನಿಮಾ ಕಥೆಯನ್ನು ಪುನೀತ್​ ಇಷ್ಟಪಟ್ಟಿದ್ದೇಕೆ?; ಗುಟ್ಟು ಬಿಚ್ಚಿಟ್ಟ ನಿರ್ದೇಶಕ ರಘು ಸಮರ್ಥ್​

Raghu Samarth: ಕೊರೋನಾ ವೈರಸ್​ ಸಂದರ್ಭದಲ್ಲಿ ಸಾಕಷ್ಟು ಚಿತ್ರಗಳು ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಆಗುತ್ತಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ರಘು ಸಮರ್ಥ್.

news18-kannada
Updated:July 16, 2020, 7:09 PM IST
LAW: ಲಾ ಸಿನಿಮಾ ಕಥೆಯನ್ನು ಪುನೀತ್​ ಇಷ್ಟಪಟ್ಟಿದ್ದೇಕೆ?; ಗುಟ್ಟು ಬಿಚ್ಚಿಟ್ಟ ನಿರ್ದೇಶಕ ರಘು ಸಮರ್ಥ್​
ರಘು ಸಮರ್ಥ್
  • Share this:
ರೊಮ್ಯಾಂಟಿಕ್​ ಕಾಮಿಡಿ ಮಾದರಿಯ ಸಿನಿಮಾಗಳನ್ನು ಮಾಡಿದ ನಂತರ ನಿರ್ದೇಶಕರು ಅದೇ ಮಾದರಿಯ ಚಿತ್ರಗಳತ್ತ ಒಲವು ತೋರುತ್ತಾರೆ. ಆದರೆ, ನಿರ್ದೇಶಕ ರಘು ಸಮರ್ಥ್​ ಈ ವಿಚಾರದಲ್ಲಿ ಭಿನ್ನ. ಈ ಮೊದಲು ‘ಸ್ಮೈಲ್​ ಪ್ಲೀಸ್​’ ಹೆಸರಿನ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಮಾಡಿದ್ದ ಅವರು, ಈಗ ಗಂಭೀರ ಕಥೆ ಹೇಳಲು ಹೊರಟಿದ್ದಾರೆ. ಅವರ ನಿರ್ದೇಶನದ 'ಲಾ' ಸಿನಿಮಾ ಶುಕ್ರವಾರ (ಜು.17) ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ. ಈ ಚಿತ್ರಕ್ಕೆ ಪುನೀತ್​ ರಾಜ್​ಕುಮಾರ್​ ಒಡೆತನದ ಪಿಆರ್​ಕೆ ಪ್ರೊಡಕ್ಷನ್​ ಬಂಡವಾಳ ಹೂಡಿರೋದು ವಿಶೇಷ.

ಅಂದಹಾಗೆ, ಈ ಸಿನಿಮಾ ಮಾಡೋಕೆ ಕಥೆ ಹೊಳೆದುದ್ದು ಹೇಗೆ ಎನ್ನುವ ಬಗ್ಗೆ ಅವರು ಹೇಳೋದು ಹೀಗೆ. “ನನಗೆ ಒಂದೇ ಮಾದರಿಯ ಸಿನಿಮಾ ಮಾಡಲು ಇಷ್ಟವಿಲ್ಲ. ಹೀಗಾಗಿ, ಹೊಸದೇನಾದರೂ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದೆ. ಈ ವೇಳೆ ಒಂದು ಕ್ರೈಮ್​ ಸುದ್ದಿ ಓದುವಾಗ ಲಾ ಸಿನಿಮಾ ಕಥೆ ಹೊಳೆಯಿತು. ಅದಕ್ಕೆ ಸಾಕಷ್ಟು ವಿಚಾರಗಳನ್ನು ಸೇರಿಸಿ ಸಿನಿಮಾ ಮಾಡಿದೆ,” ಎನ್ನುತ್ತಾರೆ ರಘು.

ಈ ಸಿನಿಮಾ ಕಥೆಯಲ್ಲಿ ಸಾಕಷ್ಟು ಕಾನೂನಿನ ಅಂಶಗಳು ಬರುತ್ತವೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದಾರೆ ರಘು. “ಈ ಸಿನಿಮಾ ಸಾಮಾನ್ಯ ಸಿನಿಮಾ ಮಾಡಿದಂತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ನಾನು ಕಥೆಗೆ ಸಂಬಂಧಿಸಿದಂತೆ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಪೊಲೀಸರು, ನ್ಯಾಯಾಧೀಶರನ್ನು ಭೇಟಿ ಮಾಡಿ ಅವರ ಜೊತೆ ಚರ್ಚೆ ನಡೆಸಿದ್ದೇವೆ. ಈ ಮೂಲಕ ಕಥೆಗೆ ಸಂಪೂರ್ಣ ನ್ಯಾಯ ಒದಗಿಸಿದ್ದೇವೆ,” ಎನ್ನುತ್ತಾರೆ ರಘು.

ಪಿಆರ್​ಕೆ ಈ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸುವ ರಘು, “ಪುನೀತ್​ ಅವರು ನನಗೆ ಮೊದಲಿನಿಂದಲೂ ಪರಿಚಯ. ಮಾಯಾಬಝಾರ್​ ಶೂಟಿಂಗ್​ ವೇಳೆ ಅವರಿಗೆ ಕಥೆ ಹೇಳಿದ್ದೆ. ತುಂಬಾನೇ ಇಷ್ಟಪಟ್ಟರು. ಅವರ ಬೆಂಬಲ ಇರುವುದಕ್ಕೆ ಸಿನಿಮಾ ಇಷ್ಟು ಉತ್ತಮವಾಗಿ ಮೂಡಿ ಬಂದಿದೆ,” ಎನ್ನುತ್ತಾರೆ ಅವರು.

ಕಥೆಯಲ್ಲೊಂದು ವಿಶೇಷತೆ ಇದೆ:

“ಹೆಣ್ಣು ಮಕ್ಕಳು ಮಾತನಾಡಬಾರದು, ಆಕೆ ಪ್ರಶ್ನೆ ಮಾಡಬಾರದು, ಆಕೆ ಗಂಡು ಹೇಳಿದ್ದನ್ನು ಕೇಳುತ್ತಾ ಇರಬೇಕು ಹೀಗೆ ಸಾಕಷ್ಟು ಕಟ್ಟಳೆಗಳು ಮೊದಲಿನಿಂದ ನಡೆದುಕೊಂಡು ಬಂದಿವೆ. ಈ ಕಟ್ಟಳೆಗಳನ್ನು ಸಿನಿಮಾದ ಕಥೆ ಪ್ರಶ್ನೆ ಮಾಡಲಿದೆಯಂತೆ. “ಒಂದು ಹೆಣ್ಣು ಸಮಾಜದ ವಿರುದ್ಧ ತಿರುಗಿ ಬಿದ್ದರೆ ಏನೆಲ್ಲ ಆಗುತ್ತದೆ. ಹೀಗೆ ಸಮಾಜವನ್ನು ಪ್ರಶ್ನೆ ಮಾಡಲು ಆಕೆ ಹೇಗೆಲ್ಲ ಸಿದ್ಧತೆ ನಡೆಸುತ್ತಾಳೆ ಎನ್ನುವ ಕಥೆ ಸಿನಿಮಾದಲ್ಲಿದೆ. ಈ ಚಿತ್ರ ಸಾಕಷ್ಟು ಮನರಂಜನೆ ಜೊತೆಗೆ ಒಂದೊಳ್ಳೆಯ ಸಂದೇಶ ಕೂಡ ನೀಡಲಿದೆ,” ಎಂದರು ರಘು.

ಸ್ಯಾಂಡಲ್​ವುಡ್​ಗೆ ರಾಗಿಣಿ ಚಂದ್ರನ್:'ಲಾ' ಚಿತ್ರದಲ್ಲಿ ರಾಗಿಣಿ ಚಂದ್ರನ್​ ಮುಖ್ಯಭೂಮಿಕೆ ನಿರ್ವಹಿಸಿದ್ದು, ಈ ಸಿನಿಮಾ ಮೂಲಕ ಅವರು ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡುತ್ತಿದ್ದಾರೆ. ಉಳಿದಂತೆ ಅಚ್ಯುತ್​ ಕುಮಾರ್ ಸೇರಿ ಸಾಕಷ್ಟು ಹಿರಿಯ ನಾಯಕರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಶೂಟಿಂಗ್​ ವೇಳೆ ಹೊಸಬರು ಮತ್ತೆ ಹಿರಿಯರ ಕಲಾವಿದರನ್ನು ಇಬ್ಬರನ್ನೂ ಒಟ್ಟಿಗೆ ನಿರ್ವಹಿಸಿಕೊಂಡು ಹೋಗಿದ್ದು ಕಷ್ಟ ಆಗಲೇ ಇಲ್ಲ ಎನ್ನುತ್ತಾರೆ ರಘು.

“ನಮ್ಮ ಸಿನಿಮಾಗೆ ಹೊಸ ಮುಖ ಬೇಕಿತ್ತು. ಕಥೆಗೆ ರಾಗಿಣಿ ಚಂದ್ರನ್​ ಸೂಕ್ತ ಎಂದು ನನಗೆ ಅನ್ನಿಸಿತು. ಸಿನಿಮಾ ಕಥೆ ಕೇಳಿ ಅವರು ಕೂಡ ಥ್ರಿಲ್​ ಆದರು. ಸಿನಿಮಾ ಶೂಟಿಂಗ್​ಗೂ ಮೊದಲು ಎರಡುವಾರ ನಾವು ತರಬೇತಿ ನೀಡಿದ್ದೆವು. ಇದು ಶೂಟಿಂಗ್​ ವೇಳೆ ತುಂಬಾನೇ ಸಹಕಾರಿ ಆಯಿತು.” ಎನ್ನುತ್ತಾರೆ ರಘು.

ಈ ಸಮಯದಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ ಬೆಸ್ಟ್​​:

ಲಾ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗುತ್ತಿದೆ. ಕೊರೋನಾ ವೈರಸ್​ ಸಂದರ್ಭದಲ್ಲಿ ಸಾಕಷ್ಟು ಚಿತ್ರಗಳು ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಆಗುತ್ತಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ರಘು ಸಮರ್ಥ್​.

“ಕೊರೋನಾ ಸಂದರ್ಭದಲ್ಲಿ ಚಿತ್ರಮಂದಿರ ಓಪನ್​ ಆದರೂ ಜನರು ಸಿನಿಮಾ ನೋಡಲು ಬರುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್​ ಮಾಡೋಕೆ ಒಟಿಟಿ ಒಳ್ಳೆಯ ಪ್ಲಾಟ್​ಫಾರ್ಮ್​. ಎಲ್ಲವೂ ಸರಿಯಾದ ನಂತರ ಸಿನಿಮಾಗಳು ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
Published by: Rajesh Duggumane
First published: July 16, 2020, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading