DBoss Darshan: ಶತಕೋಟಿ ಸರದಾರನಾದ ದರ್ಶನ್ : ದಚ್ಚು ಈಗ ಹಲವು ಬಿರುದುಗಳ `ಒಡೆಯ !

Darshan: ಕುರುಕ್ಷೇತ್ರ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗಿದೆ. ಬಾಕ್ಸಾಫಿಸ್‍ನಲ್ಲಿ ಶತಕೋಟಿ ಗಳಿಸಿ ಮುನ್ನುಗ್ತಿದೆ. ಕುರುಕ್ಷೇತ್ರ ಸಿನಿಮಾ ಶತಕೋಟಿ ಕ್ಲಬ್ ಸೇರಿದ್ದೇ ತಡ, ದರ್ಶನ್ ಅಭಿಮಾನಿಗಳು ಗೌರಿ ಗಣೇಶ ಹಬ್ಬಕ್ಕೆ ಕಡುಬು ಸಿಕ್ಕಷ್ಟೇ ಖುಷಿಯಾಗಿದ್ದಾರೆ. ಗಣೇಶ ಹಬ್ಬಕ್ಕಿಂತ ಅದ್ಧೂರಿಯಾಗಿ ಕುರುಕ್ಷೇತ್ರದ ಗೆಲುವನ್ನ ಸಂಭ್ರಮಿಸ್ತಿದ್ದಾರೆ. ಇದೇ ಸಂಭ್ರಮದಲ್ಲಿ ಬಾಕ್ಸಾಫಿಸ್ ಸುಲ್ತಾನನಿಗೆ ಹೊಸದೊಂದು ಟೈಟಲ್ ಕೊಟ್ಟಿದ್ದಾರೆ ಅಭಿಮಾನಿಗಳು.

news18-kannada
Updated:September 5, 2019, 10:45 AM IST
DBoss Darshan: ಶತಕೋಟಿ ಸರದಾರನಾದ ದರ್ಶನ್ : ದಚ್ಚು ಈಗ ಹಲವು ಬಿರುದುಗಳ `ಒಡೆಯ !
ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್​
  • Share this:
ಚಾಲೆಂಜಿಂಗ್ ಸ್ಟಾರ್, ಬಾಕ್ಸಾಫಿಸ್ ಸುಲ್ತಾನ್, ಡಿಬಾಸ್, ನಯಾ ಯಜಮಾನ... ಅಬ್ಬಾ ಇದು ದರ್ಶನ್‍ಗಿರೋ ಟೈಟಲ್​ಗಳು. ಇದಿಷ್ಟು ಸ್ಯಾಂಪಲ್ ಅಷ್ಟೇ ಅವರಿಗೆ ಡಜನ್‍ಗಟ್ಟಲೆ ಬಿರುದುಗಳು ಈಗಾಗಲೇ ಸಿಕ್ಕಿವೆ. ಅದಕ್ಕೀಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ.

ಮೆಜೆಸ್ಟಿಕ್ ಸಿನಿಮಾದ ಟೈಟಲ್ ಕಾರ್ಡ್‍ನಲ್ಲಿ `ದರ್ಶನ್ ತೂಗುದೀಪ್' ಅಂತ ನಾಡಿನ ಜನರಿಗೆ ಪರಿಚಯವಾದ ದರ್ಶನ್ ಇಂದು ಸಂಪಾದಿಸಿರೋ ಹೆಸರು ಅಪಾರ. ನಿರ್ಮಾಪಕರ ಡಾರ್ಲಿಂಗ್​, ನಿರ್ದೇಶಕರ ನೆಚ್ಚಿನ ನಟನಿಗೆ ದಾಖಲೆಗಳು ತೀರಾ ಆಪ್ತ ಆಪ್ತ. ಇಂತಹ ದರ್ಶನ್ 'ಕುರುಕ್ಷೇತ್ರ' ಮೂಲಕ ಧೂಳೆಬ್ಬಿಸುತ್ತಾ, ಬಾಕ್ಸಾಫಿಸ್‍ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

Darshan and his friends celebrated Kurukshetra movie success
'ಕುರುಕ್ಷೇತ್ರ' ಚಿತ್ರದ ಯಸಸ್ಸಿನ ಸಂಭ್ರಮದಲ್ಲಿ ದರ್ಶನ್​


ದುರ್ಯೋಧನನಾಗಿ ದರ್ಶನ್ ಗತ್ತು, ಗೈರತ್ತಿಗೆ ಚಿತ್ರಪ್ರೇಮಿಗಳು ಸಾಹೋ ಎಂದಿದ್ದಾರೆ. ಕೌರವೇಶ್ವರನ ಅವತಾರ ನೋಡಲು ಮತ್ತೆ ಮತ್ತೆ ಚಿತ್ರ ಮಂದಿರಗಳತ್ತ ದಾಂಗುಡಿ ಇಡ್ತಿದ್ದಾರೆ. ಅದರ ಪರಿಣಾಮ 'ಕುರುಕ್ಷೇತ್ರ' ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಆಗಿದೆ. ಬಾಕ್ಸಾಫಿಸ್‍ನಲ್ಲಿ ಶತಕೋಟಿ ಗಳಿಸಿ ಮುನ್ನುಗ್ತಿದೆ. 'ಕುರುಕ್ಷೇತ್ರ' ಸಿನಿಮಾ ಶತಕೋಟಿ ಕ್ಲಬ್ ಸೇರಿದ್ದೇ ತಡ, ದರ್ಶನ್ ಅಭಿಮಾನಿಗಳು ಗೌರಿ ಗಣೇಶ ಹಬ್ಬಕ್ಕೆ ಕಡುಬು ಸಿಕ್ಕಷ್ಟೇ ಖುಷಿಯಾಗಿದ್ದಾರೆ. ಗಣೇಶ ಹಬ್ಬಕ್ಕಿಂತ ಅದ್ಧೂರಿಯಾಗಿ 'ಕುರುಕ್ಷೇತ್ರ'ದ ಗೆಲುವನ್ನ ಸಂಭ್ರಮಿಸ್ತಿದ್ದಾರೆ. ಇದೇ ಸಂಭ್ರಮದಲ್ಲಿ ಬಾಕ್ಸಾಫಿಸ್ ಸುಲ್ತಾನನಿಗೆ ಹೊಸದೊಂದು ಟೈಟಲ್ ಕೊಟ್ಟಿದ್ದಾರೆ ಅಭಿಮಾನಿಗಳು.

ಅಂದಹಾಗೆ ಈ ಬಾರಿ ದರ್ಶನ್‍ಗೆ ಹೊಸ ಹೆಸರು ಕೊಟ್ಟಿರೋದು ಮಹಿಳಾ ಅಭಿಮಾನಿಗಳು. ಹೌದು, ನಾನಾ ಬಿರುದುಗಳಿಂದ ಕರೆಸಿಕೊಳ್ಳೋ ದರ್ಶನ್‍ಗೆ ಈಗ ಸಿಕ್ಕಿರೋ ಹೊಸ ಬಿರುದು 'ಶತಕೋಟಿ ಸರದಾರ'. ದರ್ಶನ್ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಶತಕೋಟಿ ಸರದಾರ ಅನ್ನೋ ಸ್ಮರಣಿಕೆ ಕೊಟ್ಟು, ಡಿಬಾಸ್‍ರನ್ನು 'ಶತಕೋಟಿ ಸರದಾರ'ನನ್ನಾಗಿಸಿದ್ದಾರೆ ಮಹಿಳಾ ಅಭಿಮಾನಿಗಳು.

ದರ್ಶನ್ ತೂಗುದೀಪ ಅಂತ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ದರ್ಶನ್‍ಗೆ ಸದ್ಯಕ್ಕೆ ಡಜನ್‍ಗಿಂತಲೂ ಹೆಚ್ಚು ಬಿರುದುಗಳಿವೆ. ಅದರಲ್ಲಿ ಅವರಿಗೆ ಮೊದಲ ಬಿರುದು ಅಥವಾ ಸ್ಟಾರ್ ಅನ್ನೋ ಪಟ್ಟ ಸಿಕ್ಕಿದ್ದು 'ದಾ'ಸ ಸಿನಿಮಾ ಮೂಲಕ. 'ದಾಸ' ಸಿನಿಮಾದಲ್ಲಿ ದರ್ಶನ್ ಅವರನ್ನ 'ಚಾಲೆಂಜಿಂಗ್ ಹೀರೋ' ಅಂತ ಪರಿಚಯಿಸಲಾಗಿತ್ತು. ವೃತ್ತಿ ಜೀವನದ ಉದ್ದಕ್ಕೂ ಸವಾಲುಗಳನ್ನೇ ಎದುರಿಸಿ, ಸವಾಲಿಗೂ ಸವಾಲಾಗಿ ನಿಂತ ದರ್ಶನ್‍ಗೆ ಈ ಹೆಸರು ಹೇಳಿ ಮಾಡಿಸಿದಂತಿತ್ತು. ಇನ್ನು ಈ ಸಿನಿಮಾ ನೂರು ದಿನ ಪ್ರದರ್ಶನ ಕಂಡು ಸೂಪರ್ ಹಿಟ್ ಆದ ಮೇಲೆ ಅಧಿಕೃತವಾಗಿ ಅಭಿಮಾನಿಗಳೇ ಚಾಲೆಂಜಿಂಗ್ ಸ್ಟಾರ್ ಅಂತ ದರ್ಶನ್‍ಗೆ ಬಿರುದು ಕೊಟ್ಟರು.'ದಾಸ' ನಂತರ ದರ್ಶನ್ ಅವರ ಎಲ್ಲ ಸಿನಿಮಾ ಟೈಟಲ್ ಕಾರ್ಡ್‍ನಲ್ಲೂ ಚಾಲೆಂಜಿಂಗ್ ಸ್ಟಾರ್ ಅಂತ ಹಾಕ್ತಿರೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ 'ಸಾರಥಿ' ಸಿನಿಮಾದಲ್ಲಿ ದರ್ಶನ್‍ಗೆ 'ಬಾಕ್ಸಾಫಿಸ್ ಸುಲ್ತಾನ್' ಅಂತ ಟೈಟಲ್ ಕೊಡಲಾಗಿತ್ತು. ಅದಕ್ಕೆ ತಕ್ಕಂತೆ ಆ ಸಿನಿಮಾ ಬಾಕ್ಸಾಫಿಸ್ ಚಿಂದಿ ಉಡಾಯಿಸಿತು. 50 ಕೋಟಿಗೂ ಅಧಿಕ ಹಣ ಬಾಚುವ ಮೂಲಕ ದರ್ಶನ್ ಕೆರಿಯರ್​ಗೆ ಮತ್ತೊಂದು ಮಹತ್ವದ ತಿರುವು ನೀಡಿತು.

ದರ್ಶನ್ ಜತೆ ಸಿನಿಮಾ ಮಾಡಿದರೆ ಮೋಸ ಇಲ್ಲ ಅನ್ನೋದು ಗಾಂಧಿನಗರದಲ್ಲಿ ಬ್ರ್ಯಾಂಡ್​ ಆಗಿತ್ತು. ಆದರೆ ಬಾಕ್ಸಾಫಿಸ್‍ನಲ್ಲಿ ಕೋಟಿ ಕೋಟಿ ಹಣ ನೋಡಬಹುದು ಅನ್ನೋದು 'ಸಾರಥಿ' ಚಿತ್ರದಿಂದ್ಲೇ ಸಾಬೀತಾಗಿದ್ದು. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ಆಗಿದ್ದ ದರ್ಶನ್, ನಿಜಕ್ಕೂ 'ಬಾಕ್ಸಾಫಿಸ್ ಸುಲ್ತಾನೇ' ಆದರು.

ಇದನ್ನೂ ಓದಿ: Kurukshetra Collection: ಕುರುಕ್ಷೇತ್ರ ಸಿನಿಮಾದ ಯಶಸ್ಸನ್ನು ಗೆಳೆಯರೊಂದಿಗೆ ಸಂಭ್ರಮಿಸಿದ ದರ್ಶನ್​..!

'ಚಾಲೆಂಜಿಂಗ್ ಸ್ಟಾರ್', 'ಬಾಕ್ಸಾಫಿಸ್ ಸುಲ್ತಾನ್', ಪಟ್ಟದ ನಡುವೆ ದರ್ಶನ್‍ಗೆ ಅಭಿಮಾನಿಗಳು ಪ್ರೀತಿಯಿಂದ 'ಡಿಬಾಸ್' ಅಂತ ಕರೆಯೋದು ಎಲ್ಲರಿಗೂ ಗೊತ್ತಿದೆ. ಈ 'ಡಿ-ಬಾಸ್' ಅನ್ನೋದು ಯಾವಾಗ ಹುಟ್ಟಿಕೊಂಡಿತು ಅಂತ ನಿಖರವಾಗಿ ಹೇಳೋಕೆ ಆಗುವುದಿಲ್ಲವಾದ್ರೂ, ಸುಮಾರು ಐದಾರು ವರ್ಷಗಳಿಂದ ಅಭಿಮಾನಿಗಳು 'ಡಿಬಾಸ್' ಅನ್ನೋದನ್ನ ಒಂದು ಬ್ರ್ಯಾಂಡ್ ಮಾಡಿಬಿಟ್ಟಿದ್ದಾರೆ. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಬಾಸ್ ವಾರ್ ಶುರುವಾದಾಗಲೂ, ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದರು. ಸ್ಯಾಂಡಲ್‍ವುಡ್‍ಗೆ ದರ್ಶನ್ ಒಬ್ಬರೇ ಬಾಸ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಶುರು ಮಾಡಿದ್ದರು.

ಇವಿಷ್ಟೇ ಅಲ್ಲದೆ ದರ್ಶನ್‍ಗೆ 'ಶತಸೋದರಾಗ್ರಜ ಶರವೀರ' ಅನ್ನೋ ಬಿರುದು ಸಹ ಇದೆ. ಇದನ್ನ ಕವಿರತ್ನ ನಾಗೇಂದ್ರ ಪ್ರಸಾದ್ ಕೊಟ್ಟಿದ್ದಾರೆ. ಈ ಟೈಟಲ್ ಕೂಡ ದರ್ಶನ್ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತದೆ. ಯಾರೇ ಬಂದರೂ ಪ್ರೀತಿ ಹಂಚೋ 'ಯಜಮಾನ', ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸ್ನೇಹಿತರನ್ನ ಗಳಿಸಿದ್ದಾರೆ. ಅದರಲ್ಲೂ ಎಲ್ಲರನ್ನೂ ಸೋದರಭಾವದಿ ಕಾಣ್ತಾರೆ. ದರ್ಶನ್ ಅವರ ಸ್ನೇಹ ಬಳಗ, ಆತ್ಮೀಯ ಬಳಗ ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಮಟ್ಟದಲ್ಲಿಯೇ ಇದೆ. ಹೀಗಾಗಿಯೇ 'ಶತಸೋದರಾಗ್ರಜ ಶರವೀರ' ಅನ್ನೋದು ಹೆಚ್ಚುಗಾರಿಕೆ ಅನಿಸೋದಿಲ್ಲ.

ಇದನ್ನೂ ಓದಿ: ಮುಂಬೈನಲ್ಲಿ 'ಪೈಲ್ವಾನ್'​ ಅಬ್ಬರ: ಕಿಚ್ಚನನ್ನು ಕೊಂಡಾಡಿದ  ಪಾರುಲ್​ ಯಾದವ್​..!

ಆಗಲೇ ಹೇಳಿದಂತೆ 'ಚಾಲೆಂಜಿಂಗ್ ಸ್ಟಾರ್' ಬಿರುದುಗಳು ಒಂದು ಡಜನ್ ದಾಟುತ್ತವೆ. ಅದರಲ್ಲಿ ಮತ್ತೊಂದು ಪ್ರಮುಖ ಟೈಟಲ್ ಅಂದರೆ 'ಸುಲ್ತಾನ್ ಆಫ್ ಸ್ಯಾಂಡಲ್‍ವುಡ್'. ಇದನ್ನ ನಟಿ ತಾರಾ ಅವರು 'ಸಿಂಗ' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕೊಟ್ಟಿದ್ದು. ದರ್ಶನ್ ನನ್ನ ದೊಡ್ಮಗ ಅಂತ ಬಾಯ್ತುಂಬ ಕರೆದ ಹಿರಿಯ ನಟಿ ತಾರಾ, 'ಸುಲ್ತಾನ್ ಆಫ್ ಸ್ಯಾಂಡಲ್‍ವುಡ್' ಅಂತ ಡಿಬಾಸ್‍ಗೆ ಕರೆದಿದ್ದರು.

ಮಂಡ್ಯ ಗೌಡ್ತಿ, ರೆಬೆಲ್ ಪತ್ನಿ ಸುಮಲತಾ ಸಹ ದರ್ಶನ್‍ರನ್ನ ತನ್ನ ದೊಡ್ಮಗ ಅಂತ್ಲೇ ಕರೆಯೋದು. ಇಂತಹ ಸುಮಲತಾ 'ಕುರುಕ್ಷೇತ್ರ' ನೋಡಿ ಹೊರ ಬಂದಾಗ ದರ್ಶನ್ ಬಗ್ಗೆ ಬಾಯ್ತುಂಬ ಹೊಗಳಿದ್ದರು. ದುರ್ಯೋಧನನ ಪಾತ್ರವನ್ನ ದರ್ಶನ್ ಬಿಟ್ಟು, ಇನ್ಯಾರು ಮಾಡೋಕೆ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಮಾಡಿದ್ದಾನೆ. ಇನ್ಮುಂದೆ 'ಡಿಬಾಸ್' ಮಾತ್ರ ಅಲ್ಲ 'ದುರ್ಯೋಧನ ಬಾಸ್' ಅಂತೇಳಿ ಹೊಸ ಟೈಟಲ್ ಕೊಟ್ಟಿದ್ದರು.

ಇದನ್ನೂ ಓದಿ: ರಾಜಕೀಯ ಪ್ರವೇಶ ಕುರಿತು ಮೌನ ಮುರಿದ ಪ್ರಿನ್ಸ್​ ಮಹೇಶ್​ ಬಾಬು

ಇನ್ನು ದರ್ಶನ್ ಅವರಿಗೆ ಅವರ ಸಿನಿಮಾ ಹೆಸರುಗಳೇ ಟೈಟಲ್ ಆಗಿ ಸಿಕ್ಕಿವೆ. 'ಯಜಮಾನ' ಸಿನಿಮಾ ಬಂದ ನಂತರ ದರ್ಶನ್‍ರನ್ನ ಅಭಿಮಾನಿಗಳು 'ನಯಾ ಯಜಮಾನ' ಅಂತಾರೆ. ಹಾಗೆ 'ಒಡೆಯ' ಸಿನಿಮಾ ಪ್ರಕಟವಾದಾಗಿನಿಂದ ಪ್ರೀತಿಯ ಒಡೆಯ ಅಂತಲೂ ಸಾಕಷ್ಟು ಅಭಿಮಾನಿಗಳು ಕರೆಯುತ್ತಾರೆ. ಇನ್ನು 'ರಾಬರ್ಟ್' ನಂತರ 'ರಾಬರ್ಟ್ ದರ್ಶನ್' ಎಂದೂ ದರ್ಶನ್ ಜನಪ್ರಿಯರಾದರೆ ಅದು ಅಭಿಮಾನಿಗಳ ಪ್ರೀತಿ, ಅಭಿಮಾನ. ಅಕ್ಕರೆ ಅಷ್ಟೆ. ಒಟ್ಟಾರೆ ತಂದೆ ತಾಯಿ ಇಡೋ ಹೆಸರಿನ ನಡುವೆ, ಜನರ ಪ್ರೀತಿ ಅಭಿಮಾನದಿ ಹುಟ್ಟೋ ಹಲವು ಹೆಸರುಗಳೇ ನಮ್ಮ ಸಾಧನೆ.

 

 

Regina Cassandra: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಎವರು ಸಿನಿಮಾ ಖ್ಯಾತಿಯ ಹಾಟ್​ ನಟಿ ರೆಜಿನಾ..!


First published: September 4, 2019, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading