ತಾಂತ್ರಿಕ ಸಮಸ್ಯೆಯಿಂದಾಗಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಇಂದು ತೆರೆ ಕಾಣಲಿಲ್ಲ. ಆಯುಧಪೂಜೆ ಪ್ರಯುಕ್ತ ಬೆಳ್ಳಿತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಡಲು ತಯಾರಿ ನಡೆಸಿಕೊಂಡಿದ್ದ ಕೋಟಿಗೊಬ್ಬ 3 ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಎಲ್ಲ ಸರಿಯಾಗಿ ಇದ್ದಿದ್ದರೆ ಇಂದು ಬೆಳಗಿನಿಂದ ಸುದೀಪ್ ಅಭಿಮಾನಿಗಳು ಸಂಭ್ರಮದಿಂದ ಚಿತ್ರಮಂದಿರಗಳಲ್ಲಿ ಹಬ್ಬ ಆಚರಿಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಸಿನಿಮಾ ಇವತ್ತು ರಿಲೀಸ್ ಆಗಿಲ್ಲ. ಇನ್ನು ಬೆಳಗಿನಿಂದ ಚಿತ್ರಮಂದಿರಗಳ ಬಳಿ ಬಂದು ಸಿನಿಮಾ ನೋಡಲು ಕಾಯುತ್ತಿರುವ ಸಿನಿಪ್ರಿಯರು ಬೇಸದಿಂದ ಮನೆಯತ್ತ ಮರಳುತ್ತಿದ್ದಾರೆ. ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಸಿನಿಮಾ ಪ್ರದರ್ಶನ ಈಗ ಆರಂಭವಾಗಲಿದೆ, ಆಗ ಶುರುವಾಗಲಿದೆ ಎಂದು ಕಾಯುತ್ತಿದ್ದವರು ನಿರಾಸೆಯಿಂದ ಮನೆಯತ್ತ ಮರಳುತ್ತಿದ್ದಾರೆ.
ಇನ್ನು, ಕಾರಣಾಂತರದಿಂದಾಗಿ 'ಕೋಟಿಗೊಬ್ಬ 3' ಚಿತ್ರ ರಿಲೀಸ್ ಆಗದೇ ಇರುವುದಕ್ಕೆ ನಟ ಕಿಚ್ಚ ಸುದೀಪ್ ಕ್ಷಮೆ ಯಾಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಆಗಿರುವ ಸಮಸ್ಯೆಗೆ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
'ಚಿತ್ರಮಂದಿರಗಳ ಬಳಿ ಕಾಯುತ್ತಿರುವ ಎಲ್ಲ ಸ್ನೇಹಿತರಿಗೆ ಈ ಬಗ್ಗೆ ತಿಳಿಸುವ ಜವಾಬ್ದಾರಿ ನನ್ನದು. ಕಾರಣಾಂತರಗಳಿಂದಾಗಿ ಸಿನಿಮಾ ಪ್ರದರ್ಶನದಲ್ಲಿ ವ್ಯತ್ಯಯವಾಗಿದೆ. ಇದಕ್ಕೂ ಚಿತ್ರಮಂದಿರದವರಿಗೂ ಯಾವುದೇ ಸಂಬಂಧವಿಲ್ಲ. ಅವರ ಬಳಿ ಕೆಟ್ಟದಾಗಿ ಅಥವಾ ಸಿಟ್ಟಿನಿಂದ ನಡೆದುಕೊಳ್ಳಬೇಡಿ' ಎಂದು ಸುದೀಪ್ ಮನವಿ ಮಾಡಿದ್ದಾರೆ.
'ನನಗೂ ಸಿನಿಮಾವನ್ನು ರಿಲೀಸ್ ಮಾಡಲು ಕಾತರನಾಗಿದ್ದೇನೆ. ಇಷ್ಟು ದೊಡ್ಡ ಗ್ಯಾಪ್ ನಂತರ ಚಿತ್ರವನ್ನು ತೆರೆಗೆ ತರುವ ಸಂಭ್ರಮದಲ್ಲಿದ್ದೇವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಕೊಂಚ ತಾಳ್ಮೆ ಇರಲಿ. ದಯವಿಟ್ಟು ಚಿತ್ರಮಂದಿರ ಹಾಗೂ ಬಂದಿರುವ ಪ್ರೇಕ್ಷಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸಿನಿಮಾ ರಿಲೀಸ್ ಹಾಗೂ ಪ್ರದರ್ಶನದ ಸಮಯ ಕುರಿತಂತೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Kotigobba 3 ಚಿತ್ರದ 10 ಗಂಟೆ ಶೋ ಕ್ಯಾನ್ಸಲ್: ಬುಕ್ ಮೈ ಶೋದಲ್ಲೂ ಕಾಣುತ್ತಿಲ್ಲ ಸಿನಿಮಾ ಹೆಸರು..!
ನಾಳೆ ಬೆಳಗ್ಗೆ 'ಕೋಟಿಗೊಬ್ಬ- 3' ಚಿತ್ರ ರಿಲೀಸ್ ಆಗಲಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಕಿಚ್ಚನ ಆರ್ಭಟ ಶುರು. ಕೋಟಿಗೊಬ್ಬ- 3 ಚಿತ್ರಕ್ಕೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಇಂದು ಸಂಜೆಯೊಳಗೆ ತಾಂತ್ರಿಕ ಸಮಸ್ಯೆ ಪರಿಹಾರವಾಗಲಿದೆ. ನಾಳೆ ಬೆಳಗ್ಗೆಯೇ ಕೋಟಿಗೊಬ್ಬ- 3 ಚಿತ್ರ ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಮಾಹಿತಿ ನೀಡಿದ್ದಾರೆ.
ಭೂಮಿಕಾ ಚಿತ್ರಮಂದಿರಕ್ಕೆ ಪೊಲೀಸ್ ಭದ್ರತೆ
ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಭೂಮಿಕಾ ಥಿಯೇಟರ್ ಅನ್ನೇ ಮುಖ್ಯ ಸಿನಿಮಾ ಮಂದಿರವನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಇಂದು ಸಿನಿಮಾ ರಿಲೀಸ್ ಆಗದೇ ಇರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭೂಮಿಕಾ ಥಿಯೇಟರ್ಗೆ ಪೊಲೀಸರ ಭದ್ರತೆ ನೀಡಲಾಗಿದೆ. ಸದ್ಯ ಥಿಯೇಟರ್ ಬಳಿ ಇದ್ದ ಅಭಿಮಾನಿಗಳನ್ನು ಪೊಲೀಸರು ಮನೆಗಳಿಗೆ ಕಳುಹಿಸಿದ್ದಾರೆ.
ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಸಿನಿಮಾವನ್ನು ಸೂರಪ್ಪ ಬಾಬು ಅವರು ನಿರ್ಮಿಸಿದ್ದು, ಅದ್ಧೂರಿ ಸೆಟ್ಗಳು ಕಣ್ಮನ ಸೆಳೆಯುವ ಲೊಕೇಷನ್, ಸಖತ್ ಆ್ಯಕ್ಷನ್ ಸೀಕ್ವೆನ್ಸ್ಗಳು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿವೆ ಎನ್ನಬಹುದು. ಜೊತೆಗೆ ಬಾಲಿವುಡ್ ನಟರು ಸಿನಿಮಾಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಅಫ್ತಾಬ್ ಶಿವದಾಸಾನಿ ಕೋಟಿಗೊಬ್ಬ 3 ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಖಾತೆ ತೆರೆದಿದ್ದಾರೆ. ಶ್ರದ್ಧಾ ದಾಸ್, ತಬಲಾ ನಾಣಿ, ರವಿಶಂಕರ್, ರಾಜೇಶ್ ನಟರಂಗ ತಾರಾಗಣದಲ್ಲಿದ್ದಾರೆ. ಆಶಿಕಾ ರಂಗನಾಥ್ ಅವರ ಸ್ಪೆಷರ್ ಅಪಿಯರೆನ್ಸ್ ಸಹ ಈ ಸಿನಿಮಾದಲ್ಲಿದೆ.
ಇದನ್ನೂ ಓದಿ: ಸಂತೋಷ್ನಿಂದ ತ್ರಿವೇಣಿ ಚಿತ್ರಮಂದಿರಕ್ಕೆ ಹೋದ Salaga: 300 ಚಿತ್ರಮಂದಿರಗಳಲ್ಲಿ 1,200 ಶೋಗಳು..!
ಕೋಟಿಗೊಬ್ಬ ಸಿನಿಮಾದಲ್ಲಿ ಕಿಚ್ಚ ಸುದೀಪ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇವರದ್ದು ದ್ವಿಪಾತ್ರವೇ ಅಥವಾ ಒಬ್ಬರೇ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರಾ ಅನ್ನೋ ಕುತೂಹಲಕ್ಕೆ ಟ್ರೇಲರ್ ಸಹ ಬ್ರೇಕ್ ಹಾಕಿಲ್ಲ. ಇನ್ನು ಸಿನಿಮಾದ ವಿಲನ್ ನವಾಬ್ ಶಾ, ವೈರಸ್ ಒಂದನ್ನು ಪ್ರಯೋಗಿಸಿ ಜನರನ್ನು ಕೊಲ್ಲುವ ಸಂಚು ರೂಪಿಸುತ್ತಾನೆ. ಅಫ್ತಾಬ್ ಶಿವದಾಸನಿ ಪೊಲೀಸ್ ಆಗಿದ್ದು ಸುದೀಪ್ ಅವರನ್ನು ಬಂಧಿಸುವ ಪ್ರಯತ್ನದಲ್ಲಿರುತ್ತಾರೆ. ಒಟ್ಟಾರೆ ಸಿನಿಮಾದ ಟ್ರೇಲರ್ ಚಿತ್ರದ ಬಗೆಗಿನ ಕೂತೂಹಲವನ್ನು ದುಪ್ಪಟ್ಟು ಮಾಡಿದೆ ಎಂದರೆ ತಪ್ಪಾಗದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ