Kotigobba 3: ಮುಂದುವರಿದ ನಿರ್ಮಾಪಕ-ವಿತರಕರ ನಡುವಿನ ಜಟಾಪಟಿ, ಅಗ್ರಿಮೆಂಟ್ ಪೇಪರ್ ರಿಲೀಸ್ ಮಾಡಿದ ಸೂರಪ್ಪ ಬಾಬು

Sandalwood: ಖಾಜಾಪೀರ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಲೇ ಇತ್ತ ನಿರ್ಮಾಪಕ ಸೂರಪ್ಪ ಬಾಬು, ಕೋಟಿಗೊಬ್ಬ 3 ಸಿನಿಮಾದ ವಿತರಣೆ ಸಂಬಂಧ ತಮ್ಮ ಹಾಗೂ ಖಾಜಾಪೀರ್ ನಡುವೆ ಆಗಿದ್ದ ಅಗ್ರೀಮೆಂಟ್‍ಅನ್ನೇ ಬಹಿರಂಗಪಡಿಸಿದ್ದಾರೆ.

ಕೋಟಿಗೊಬ್ಬ 3 ಪೋಸ್ಟರ್

ಕೋಟಿಗೊಬ್ಬ 3 ಪೋಸ್ಟರ್

  • Share this:
ಕೋಟಿಗೊಬ್ಬ 3(Kotigobba) ಚಿತ್ರದ ನಿರ್ಮಾಪಕರು ಹಾಗೂ ವಿತರಕರ ನಡುವಿನ ಜಗಳ ತಾರಕಕ್ಕೇರಿದೆ. ಇತ್ತ ಸೂರಪ್ಪ ಬಾಬು(Surappa Babu) ಓಪನ್ ಲೆಟರ್ ಮೂಲಕ ವಿತರಕರ ವಿರುದ್ಧ ಹರಿಹಾಯ್ದರೆ, ಅತ್ತ ವಿತರಕರೊಬ್ಬರು ಸೂರಪ್ಪ ಧಮಕಿ ಹಾಕಿದ್ರು ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸೂರಪ್ಪ ಬಾಬು, ತಮ್ಮ ಮತ್ತು ವಿತರಕರ ನಡುವೆ ಆಗಿದ್ದ ಅಗ್ರೀಮೆಂಟ್‍ಅನ್ನೇ ರಿಲೀಸ್ ಮಾಡಿದ್ದಾರೆ.

ಹೌದು, ಇದೇ ಅಕ್ಟೋಬರ್ 14ರ ಆಯುಧ ಪೂಜೆಯ ದಿನ ಕೋಟಿಗೊಬ್ಬ 3 ರಿಲೀಸ್ ಆಗಬೇಕಿತ್ತು. ಆದರೆ ಅಗ್ರೀಮೆಂಟ್ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದ ಕೆಲ ವಿತರಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಹಣ ಕೊಡದ ಕಾರಣ, ಫೈನಾನ್ಶಿಯರ್‍ರಿಂದ ಎನ್‍ಓಸಿ ಪಡೆಯದೇ ಒಂದು ದಿನ ತಡವಾಗಿ ಸಿನಿಮಾ ರಿಲೀಸ್ ಮಾಡಬೇಕಾಯ್ತು ಎಂದು ನಿರ್ಮಾಪಕ ಸೂರಪ್ಪ ಬಾಬು ಕಿಚ್ಚ ಸುದೀಪ್ ಅಭಿಮಾನಿಗಳನ್ನು ಕೈ ಮುಗಿದು ಕೇಳಿಕೊಂಡಿದ್ದರು. ಆಗ ಅಖಾಡಕ್ಕಿಳಿದ ನಟ ಸುದೀಪ್ ಈ ಹಿಂದೆ ಅಗ್ರೀಮೆಂಟ್ ಮಾಡಿಕೊಂಡು ಕೈಕೊಟ್ಟ ವಿತರಕರನ್ನು ಕೈಬಿಟ್ಟು ಹೊಸ ವಿತರಕರ ಮೂಲಕ ವಿಜಯದಶಮಿ ಹಬ್ಬ ದಿನ ಸಿನಿಮಾ ರಿಲೀಸ್ ಮಾಡಿಸಿದರು.

ಇದನ್ನೂ ಓದಿ: Kotigobba 3 ಸಿನಿಮಾ ಪ್ರದರ್ಶನ ಆರಂಭ: ಕಿಚ್ಚನ ಕಟೌಟ್​​ಗೆ ಹಾಲಿನ ಅಭಿಷೇಕ

ಅದಾಗುತ್ತಲೇ ನಿನ್ನೆಯಷ್ಟೇ ಸೂರಪ್ಪ ಬಾಬು ಕೊನೆ ಕ್ಷಣದಲ್ಲಿ ಇದೇ ವಿತರಕರು ಕೈ ಕೊಟ್ಟಿದ್ದು ಅಂತ ಓಪನ್ ಲೆಟರ್ ಮೂಲಕ ಮೆಹರ್ ಫಿಲ್ಮ್ಸ್‍ನ ಗೌತಮ್ ಚಂದ್, ಖಾಜಾಪೀರ್, ಕುಮಾರ್ ಎಂಬ ವಿತರಕರ ಹೆಸರನ್ನು ಬರೆದು, ಕಾನೂನು ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ವಿತರಕ ಖಾಜಾಪೀರ್, 50 ಲಕ್ಷ ರೂಪಾಯಿ ಹಣ ಪಡೆದಿರುವ ಸೂರಪ್ಪ ಬಾಬು ಸಿನಿಮಾ ರಿಲೀಸ್ ಲೈಸೆನ್ಸ್ ಕೊಡದೇ, ಬೇರೆ ವಿತರಕರ ಮೂಲಕ ಸಿನಿಮಾ ಬಿಡುಗಡೆ ಮಾಡಿಸಿದ್ದು, ಈಗ ಕೊಟ್ಟಿರುವ ಹಣ ವಾಪಸ್ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅತ್ತ ಖಾಜಾಪೀರ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಲೇ ಇತ್ತ ನಿರ್ಮಾಪಕ ಸೂರಪ್ಪ ಬಾಬು, ಕೋಟಿಗೊಬ್ಬ 3 ಸಿನಿಮಾದ ವಿತರಣೆ ಸಂಬಂಧ ತಮ್ಮ ಹಾಗೂ ಖಾಜಾಪೀರ್ ನಡುವೆ ಆಗಿದ್ದ ಅಗ್ರೀಮೆಂಟ್‍ಅನ್ನೇ ಬಹಿರಂಗಪಡಿಸಿದ್ದಾರೆ. ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಗಳ ವಿತರಣೆ ಹಕ್ಕುಗಳನ್ನು 2 ಕೋಟಿ 90 ಲಕ್ಷ ರೂಪಾಯಿಗೆ ನೀಡಲಾಗುತ್ತಿದೆ ಖಾಜಾಪೀರ್ ಅವರಿಗೆ ನೀಡುವುದರ ಬಗ್ಗೆ ಇದೇ ಮಾರ್ಚ್ 31ರಂದು ಮಾಡಿಕೊಂಡಿದ್ದ ಅಗ್ರೀಮೆಂಟ್ ಇದಾಗಿದೆ.

ಒಪ್ಪಂದದ ಸಮಯದಲ್ಲಿ ಖಾಜಾಪೀರ್ ಅವರು 50 ಲಕ್ಷ ರೂಪಾಯಿ ಹಣ ನೀಡಿದ್ದು, ಏಪ್ರಿಲ್ 15ರ ಒಳಗೆ 50 ಲಕ್ಷ ಹಾಗೂ ಏಪ್ರಿಲ್ 21ರ ಒಳಗೆ 50 ಲಕ್ಷ, ಹಾಗೂ ಉಳಿದ 1 ಕೋಟಿ 40 ಲಕ್ಷ ರೂಪಾಯಿಯನ್ನು ಸಿನಿಮಾ ರಿಲೀಸ್ ಆಗುವ 4 ದಿನ ಮೊದಲು ನೀಡುವಂತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್: ಬದಲಾದ್ರು Kotigobba 3 ಸಿನಿಮಾದ ವಿತರಕರು

ಒಟ್ಟಾರೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಕೋಟಿಗೊಬ್ಬ 3 ರಿಲೀಸ್ ಸಮಸ್ಯೆ, ಸದ್ಯ ಸಿನಿಮಾ ತೆರೆಗೆ ಬಂದ ಮೇಲೂ ಮುಂದುವರಿದಿದೆ. ಕೋಟಿಗೊಬ್ಬ 3 ಚಿತ್ರದಲ್ಲಿ ಇರುವಂತೆಯೇ ಹೊಸ ಹೊಸ ಟ್ವಿಸ್ಟ್, ಟರ್ನ್ ಪಡೆಯುತ್ತಿದೆ. ಅದೇನೇ ಇರಲಿ ಆದಷ್ಟು ಬೇಗ ಈ ವಿವಾದ ಬಗೆಹರಿಯಲಿ ಹಾಗೂ ಮುಂದಿನ ದಿನಗಳಲ್ಲಿ ಬೇರೆ ಯಾರ ಚಿತ್ರಕ್ಕೂ ಕೋಟಿಗೊಬ್ಬ 3ಗೆ ಆದಂತೆ ಸಮಸ್ಯೆಗಳು ಎದುರಾಗದಿರಲಿ ಎಂಬುದೇ ಕಿಚ್ಚ ಸುದೀಪ್ ಅಭಿಮಾನಿಗಳ ಹಾಗೂ ಸಿನಿಪ್ರೇಕ್ಷಕರ ಆಶಯ.

ವರದಿ: ಹರ್ಷವರ್ಧನ್ ಎಸ್.
Published by:Sandhya M
First published: