ವಿದೇಶದಿಂದ ಆಮದು ಮಾಡಿಕೊಂಡ ಐಷಾರಾಮಿ ರೋಲ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಕಾಲಿವುಡ್ ನಟ ಧನುಷ್ರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದೆ. ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿ ನೀಡುವಂತೆ ಈ ಹಿಂದೆ ನಟ ಧನುಷ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ 48 ಗಂಟೆಯೊಳಗೆ 30.30 ಲಕ್ಷ ರೂ. ಪಾವತಿಸುವಂತೆಯೂ ನಿರ್ದೇಶಿಸಿದೆ. ಧನುಷ್ನಂತಹ ಸೆಲೆಬ್ರಿಟಿಗಳಿಗಿಂತ ಕಡಿಮೆ ಆದಾಯ ಹೊಂದಿರುವವರು ತೆರಿಗೆ ಪಾವತಿಸುತ್ತಿದ್ದಾರೆ. ಈ ಹಿನ್ನೆಲೆ ಪರಿಹಾರಕ್ಕಾಗಿ ನ್ಯಾಯಾಂಗದ ಬಾಗಿಲು ತಟ್ಟಬೇಡಿ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ ಸುಬ್ರಮಣ್ಯಂ ನಿರ್ದೇಶಿಸಿದ್ದಾರೆ.
ನೀವು ತೆರಿಗೆದಾರರ ಹಣವನ್ನು ಬಳಸಿಕೊಂಡು ರಸ್ತೆಗಳಲ್ಲಿ ಐಷಾರಾಮಿ ಕಾರನ್ನು ಚಲಾಯಿಸುತ್ತೀರಿ. ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕರು ಕೂಡ ಅವರು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್ಗೆ ತೆರಿಗೆ ಪಾವತಿಸುತ್ತಿದ್ದಾರೆ ಎಂದೂ ನ್ಯಾಯಮೂರ್ತಿ ಧನುಷ್ಗೆ ಛೀಮಾರಿ ಹಾಕಿದ್ದಾರೆ.
[caption id="attachment_586109" align="alignnone" width="1200"] ನಟ ಧನುಷ್[/caption]
ಅದೇ ನ್ಯಾಯಮೂರ್ತಿಗಳು ಈ ಹಿಂದೆಯೂ ಆಮದು ಮಾಡಿದ ರೋಲ್ಸ್ ರಾಯ್ಸ್ ಘೋಸ್ಟ್ಗಾಗಿ ಪ್ರವೇಶ ತೆರಿಗೆ ವಿಧಿಸುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ನಟ ವಿಜಯ್ರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: Bigg Boss Kannada 8: ವೈಷ್ಣವಿಗೆ ಮರುನಾಮಕರಣ: ಹೆಸರು ಕೂಡ ನಿರ್ಧರಿಸಿದ್ದಾರೆ ರೇಷ್ಮಕ್ಕನ ತಾಯಿ..!
2015ರಲ್ಲಿ ಧನುಷ್ ಇಂಗ್ಲೆಂಡಿನಿಂದ 2.15 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಆಮದು ಮಾಡಿಕೊಂಡಿದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿಯು ಈ ಕಾರನ್ನು ನೋಂದಾಯಿಸುವ ಮೊದಲು ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವಂತೆ ಸೂಚಿಸಿದರು. NOCಗಾಗಿ ಧನುಷ್ ತೆರಿಗೆ ಇಲಾಖೆಯ ಮೊರೆ ಹೋದ ಬಳಿಕ ಇಲಾಖೆಯು 60.66 ಲಕ್ಷ ರೂ. ಪ್ರವೇಶ ತೆರಿಗೆ ಪಾವತಿಸುವಂತೆ ಕೇಳಿತ್ತು. ನಂತರ ನಟ ಇಲಾಖೆಗೆ ಪ್ರವೇಶ ತೆರಿಗೆಯ ಬೇಡಿಕೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಸಮಯದಲ್ಲಿ ನ್ಯಾಯಾಲಯವು 14 ದಿನಗಳ ಒಳಗೆ ನಟ ಆರ್ಟಿಒಗೆ ತೆರಿಗೆ ಮೊತ್ತದ ಶೇ. 50 ಪ್ರತಿಶತವನ್ನು ಪಾವತಿಸಿದರೆ ಮಾತ್ರ ಎನ್ಒಸಿ ನೀಡುವಂತೆ ಹೇಳಿತ್ತು.
ಧನುಷ್ ಪರ ವಕೀಲರು 2015ರ ಅರ್ಜಿಯನ್ನು ಹಿಂಪಡೆಯಲು ಬಯಸಿದ್ದ ನಂತರ ಪ್ರಕರಣವು ಮತ್ತೆ ಮುಂಚೂಣಿಗೆ ಬಂದಿತು. ಉಳಿದ ತೆರಿಗೆಯನ್ನು ಪಾವತಿಸಲು ನಟ ಸಿದ್ಧ ಎಂದು ಹೇಳಿದರು. ಆದರೂ, ಗುರುವಾರ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯವು ಅನುಮತಿಸಲಿಲ್ಲ ಮತ್ತು ನಿಮ್ಮ ಉದ್ದೇಶಗಳು ನಿಜವಾದರೆ 2018ರಲ್ಲಿ ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಇತ್ಯರ್ಥಗೊಳಿಸಿದ ನಂತರವಾದರೂ ನೀವು ತೆರಿಗೆಯನ್ನು ಪಾವತಿಸಬೇಕಿತ್ತು. ಈಗ ಹೈಕೋರ್ಟ್ ಈ ವಿಷಯವನ್ನು ಆದೇಶಗಳಿಗಾಗಿ ಪಟ್ಟಿ ಮಾಡಿದ ನಂತರ, ನೀವು ಹಿಂತೆಗೆದುಕೊಳ್ಳಲು ಬಯಸುತ್ತಿದ್ದೀರಿ ಎಂದಿದೆ.
ನ್ಯಾಯಾಲಯದ ಮೊರೆ ಹೋಗುವುದು ನಿಮ್ಮ ಹಕ್ಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ, 2018ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಇತ್ಯರ್ಥಪಡಿಸಿದ ನಂತರವಾದರೂ ನೀವು ತೆರಿಗೆ ಪಾವತಿಸಿ, ನಂತರ ಅರ್ಜಿಯನ್ನು ಹಿಂಪಡೆಯಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಹಲವು ವರ್ಷಗಳ ಹಿಂದೆ ಆಮದು ಮಾಡಿಕೊಂಡ ಕಾರುಗಳು ರಾಜ್ಯಕ್ಕೆ ಪ್ರವೇಶ ತೆರಿಗೆ ಪಾವತಿಸದೆ ರಸ್ತೆಗಳಲ್ಲಿ ಸಂಚರಿಸುತ್ತಿವೆ ಎಂದು ನ್ಯಾಯಾಲಯವು ಗಮನಿಸಿದೆ. ಇನ್ನು, ತಮ್ಮ ನೈಜ ಕುಂದುಕೊರತೆ ಪರಿಹಾರಕ್ಕಾಗಿ ಈ ನ್ಯಾಯಾಲಯವನ್ನು ಸಂಪರ್ಕಿಸುವುದನ್ನು ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆ ಎಂದು ಪರಿಗಣಿಸಿ, ಸಾಂವಿಧಾನಿಕ ದೃಷ್ಟಿಕೋನಗಳು ಮತ್ತು ರಿಟ್ ಅರ್ಜಿಗಳನ್ನು ಸಲ್ಲಿಸುವ ರೀತಿಯನ್ನು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಹಿತಾಸಕ್ತಿಗಾಗಿ ವ್ಯವಹರಿಸಬೇಕು ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Bigg Boss Kannada 8: ಕೊನೆಗೂ ಮನದ ಮಾತು ಹೇಳಿಕೊಂಡ ದಿವ್ಯಾ ಸುರೇಶ್: ಮೂಕವಿಸ್ಮಿತರಾದ ಮಂಜು ಪಾವಗಡ..!
"ಪ್ರಜೆಯ ಮೂಲಭೂತ ಕರ್ತವ್ಯವನ್ನು ನೆನಪಿಸುವುದು ಹೈಕೋರ್ಟ್ನ ಸಾಂವಿಧಾನಿಕ ಕರ್ತವ್ಯವಾಗಿದೆ. ಈ ನ್ಯಾಯಾಲಯವು ಆದೇಶಗಳನ್ನು ನೀಡುವುದು, ನಾಗರಿಕರಿಗೆ ಅರಿವು ಮೂಡಿಸುವುದು, ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಕರ್ತವ್ಯಗಳನ್ನು ಗೌರವಿಸಲು ಬದ್ಧರಾಗಿರುತ್ತಾರೆ ಎಂಬುದನ್ನು ನಾಗರಿಕರಿಗೆ ನೆನಪಿಸುವುದು ಸೂಕ್ತವೆಂದು ಭಾವಿಸಿದೆ'' ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ