ಕಾಂತಾರ ಸಿನಿಮಾ (Kantara Movie) ನೋಡಿದವರು ನಟ ಕಿಶೋರ್ ಪಾತ್ರ ಮರೆಯುವುದಿಲ್ಲ. ಕಾಂತಾರ ಸಿನಿಮಾ ಮೂಲಕ ಕಿಶೋರ್ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ. ಕನ್ನಡ ಅಷ್ಟೇ ಅಲ್ಲ ಇತರ ಭಾಷೆಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಿಶೋರ್ (Kishore) ಬ್ಯುಸಿ ಆಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ (Social Media) ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಹಲವು ವಿಷಯಗಳ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾರೆ. ದೈವ ಬಗ್ಗೆ ವೈರಲ್ ವಿಡಿಯೋ (Viral Video) ಹರಿದಾಡುತ್ತಿದ್ದು, ಈ ವಿಡಿಯೋ ಬಗ್ಗೆ ಇದೀಗ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ದೈವದ ಬಗ್ಗೆ ನಟ ಕಿಶೋರ್ ಮಾತು
ಕಾಂತಾರ ಚಿತ್ರದ ಕಂಪ್ಲೀಟ್ ಕಥೆಯನ್ನು ದೈವಾರಾಧನೆ ಮೇಲೆಯೇ ಎಣೆಯಲಾಗಿದ್ದು, ಇದರಲ್ಲಿ ನಟ ಕಿಶೋರ್ ಕೂಡ ಅಭಿನಯಿಸಿದ್ದಾರೆ. ಇದೀಗ ದೈವದಲ್ಲಿ ನಂಬಿಕೆ ಇರಲಿ ಆದ್ರೆ ಮೂಡನಂಬಿಕೆ ಬೇಡ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಿಶೋರ್ ಈ ಮಾತು ಕೂಡ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್
ಇತ್ತೀಚೆಗಷ್ಟೇ ಕಾಂತಾರ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸತ್ತ ಅನ್ನೋ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ಕಿಶೋರ್ ಅವರು, ನಂಬಿಕೆ ಇರಲಿ ಮೂಢನಂಬಿಕೆ ಬೇಡ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕೊಲ್ಲುವ ದೈವಕ್ಕೆ ಮನಃಪರಿವರ್ತನೆ ಮಾಡುವ ಶಕ್ತಿ ಇಲ್ವಾ!?
ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೋ ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗಿದೆ. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೋ, ದೆವ್ವವೋ ಒಂದು ಸಾಧನವಷ್ಟೆ. ಸಿನಿಮಾವಾಗಲಿ ಪುರಾಣವಾಗಲಿ’ ಎಂದು ಬರಹ ಕಿಶೋರ್ ಬರೆದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
View this post on Instagram
ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಬೇಡ ಎಂದು ಕಿಶೋರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಿಶೋರ್ ಟ್ವಿಟರ್ ಖಾತೆ ಸಸ್ಪೆಂಡ್
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ನಟ ಕಿಶೋರ್, ಸಾಮಾಜಿಕ ವಿಚಾರಗಳು ಹಾಗೂ ಅನ್ಯಾಯಗಳ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಪೋಸ್ಟ್ಗಳ ಮೂಲಕ ತಿಳಿಸುತ್ತಿದ್ದಾರೆ. ಇದೀಗ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ನಟನೆ ಜೊತೆಗೆ ಕೃಷಿ, ಪರಿಸರ ಪರ ಕಾರ್ಯ ಮಾಡುತ್ತಿರುವ ನಟ ಕಿಶೋರ್, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಖಾಸಗೀಕರಣದ ವಿರುದ್ಧ, ಅಭಿವೃದ್ಧಿ ಹೆಸರಲ್ಲಿ ಮಾಡಲಾಗುತ್ತಿರುವ ಮೋಸ, ಕಾರ್ಪೊರೇಟ್ ಸಂಸ್ಥೆಗಳ ಕೃತ್ರಿಮಗಳ ಕುರಿತು ಜಾಗೃತೆ ಮೂಡಿಸುವ ಕಾರ್ಯ ಮಾಡುತ್ತಿದ್ದರು. ನಟ ಕಿಶೋರ್ರ ಟ್ವಿಟ್ಟರ್ ಖಾತೆ ಸರ್ಚ್ ಮಾಡಿದರೆ ಅಕೌಂಟ್ ಸಸ್ಪೆಂಡೆಡ್' ಎಂದು ಬರುತ್ತಿದೆ. ಟ್ವಿಟ್ಟರ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಈ ಖಾತೆಯನ್ನು ರದ್ದು ಮಾಡಲಾಗಿದೆ ಎಂದು ಟ್ವಿಟ್ಟರ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ