Aamir Khan Divorce – ಕಿರಣ್ ರಾವ್, ಆಮೀರ್ ಖಾನ್ ವಿಚ್ಛೇದನ ನಿರ್ಧಾರ; ಸ್ನೇಹಿತರಾಗಿ ಉಳಿಯಲಿರುವ ಸ್ಟಾರ್ ಜೋಡಿ

ಕೆಲ ಕಾಲದಿಂದ ನಾವು ಯೋಜಿತ ವಿಚ್ಛೇದನಕ್ಕೆ ತಯಾರಿ ನಡೆಸಿದೆವು. ನಾವು ಇನ್ಮುಂದೆ ಪ್ರತ್ಯೇಕವಾಗಿ ವಾಸಿಸಿದರೂ ವಿಸ್ತೃತ ಕುಟುಂಬದ ರೀತಿಯಲ್ಲಿ ನಮ್ಮ ಜೀವನವನ್ನು ಹಂಚಿಕೊಳ್ಳುತ್ತೇವೆ ಎಂದು ಆಮೀರ್ ಖಾನ್ ಮತ್ತು ಕಿರಣ್ ರಾವ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಿರಣ್ ರಾವ್ ಮತ್ತು ಆಮೀರ್ ಖಾನ್

ಕಿರಣ್ ರಾವ್ ಮತ್ತು ಆಮೀರ್ ಖಾನ್

  • News18
  • Last Updated :
  • Share this:
ಮುಂಬೈ (ಜುಲೈ 03): ಹಲವು ದಿನಗಳಿಂದ ವದಂತಿಗಳಂತೆ ಅಪ್ಪಳಿಸುತ್ತಿದ್ದ ಸಂಗತಿಗೆ ಇಂದು ಸ್ಪಷ್ಟತೆ ಸಿಕ್ಕಿದೆ. ಸ್ಟಾರ್ ದಂಪತಿ ಎನಿಸಿದ್ದ ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಂದು ಇಬ್ಬರೂ ಜಂಟಿ ಹೇಳಿಕೆ ನೀಡಿ ತಮ್ಮ ಡಿವೋರ್ಸ್ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ, ದಾಂಪತ್ಯ ಅಂತ್ಯವಾದರೂ ಅವರಿಬ್ಬರ ಸಂಬಂಧ ಪರೋಕ್ಷ ರೀತಿಯಲ್ಲಿ ಮುಂದುವರಿಯಲಿರುವುದು ಗಮನಾರ್ಹ ಸಂಗತಿ. ಅವರಿಗೆ ಜನಿಸಿದ ಆಜಾದ್ ಅನ್ನು ಇಬ್ಬರೂ ಸೇರಿ ಪೋಷಿಸುವ ಜವಾಬ್ದಾರಿಯನ್ನು ಹಂಚಿಕೊಂಡಿದ್ಧಾರೆ. ಹಾಗೆಯೇ, ಪಾನಿ ಫೌಂಡೇಶನ್ ಇತ್ಯಾದಿ ಹಲವು ಕಾರ್ಯಗಳಲ್ಲಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಮಾಮೂಲಿಯಂತೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

“ಈ 15 ಅವಿಸ್ಮರಣೀಯ ವರ್ಷಗಳಲ್ಲಿ ನಾವು ಜೀವಮಾನದಷ್ಟು ಅನುಭವ, ಖುಷಿ, ನಗೆಯನ್ನ ಕಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಗಟ್ಟಿಗೊಂಡಿದೆ. ಈಗ ನಮ್ಮ ಜೀವನಗಳಲ್ಲಿ ಹೊಸ ಆಧ್ಯಾಯ ಪ್ರಾರಂಭಿಸಲು ಇಚ್ಛಿಸಿದ್ದೇವೆ. ಆದರೆ, ನಾವಿಬ್ಬರೂ ಪತಿ ಮತ್ತು ಪತ್ನಿಯಾಗಿ ಹೊಸ ಆಧ್ಯಾಯ ಅಲ್ಲ, ಆದರೆ, ಪರಿಸ್ಪರರಿಗೆ ಸಹ-ಪೋಷಕರು ಮತ್ತು ಕುಟುಂಬವಾಗಿ ನಾವು ಇರಲಿದ್ದೇವೆ” ಎಂದು ಆಮೀರ್ ಮತ್ತು ಕಿರಣ್ ರಾವ್ ಜಂಟಿಯಾಗಿ ಸಹಿ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಕೆಲ ಕಾಲದ ಹಿಂದೆ ನಾವು ಯೋಜಿತವಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದೆವು. ಈಗ ಇದನ್ನು ಅಧಿಕೃತವಾಗಿ ಮಾಡುವುದು ಸುಲಭವಾಗಿದೆ. ನಾವು ಮಾಡಿಕೊಂಡಿರುವ ವ್ಯವಸ್ಥೆ ಪ್ರಕಾರ ನಾವಿಬ್ಬರೂ ಪ್ರತ್ಯೇಕವಾಗಿ ನಾವು ವಾಸಿಸಿದರೂ ವಿಸ್ತೃತ ಕುಟುಂಬದ ರೀತಿಯಲ್ಲಿ ನಮ್ಮ ಜೀವನ ಹಂಚಿಕೊಳ್ಳಲಿದ್ದೇವೆ. ನಮ್ಮ ಮಗ ಆಜಾದ್​ನಿಗೆ ನಾವಿಬ್ಬರೂ ಪೋಷಕರಾಗಿ ಉಳಿಯುತ್ತೇವೆ. ಇಬ್ಗರೂ ಸೇರಿ ಆತನನ್ನು ಬೆಳೆಸುತ್ತೇವೆ. ಸಿನಿಮಾ, ಪಾನಿ ಫೌಂಡೇಶನ್ ಹಾಗೂ ಇತರ ಕಾರ್ಯಗಳಲ್ಲಿ ನಮ್ಮಿಬ್ಬರ ಸಹಭಾಗಿತ್ವ ಯಥಾಪ್ರಕಾರ ಮುಂದುವರಿಯಲಿದೆ” ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

“ನಮ್ಮ ಸಂಬಂಧದಲ್ಲಿ ಆಗಿರುವ ಈ ಪರಿವರ್ತನೆಯನ್ನು ಅರಿತು ನಮಗೆ ನಿರಂತರವಾಗಿ ಬೆಂಬಲ ನೀಡಿದ ನಮ್ಮ ಕುಟುಂಬವರ್ಗ ಮತ್ತು ಸ್ನೇಹಿತರಿಗೆ ನಮ್ಮ ಧನ್ಯವಾದಗಳು. ಇವರ ಬೆಂಬಲ ಇಲ್ಲದಿದ್ದರೆ ನಮ್ಮ ಈ ನಿರ್ಧಾರ ಬಹಳ ಕಷ್ಟಕರವಾಗುತ್ತಿತ್ತು. ನಮ್ಮ ಹಿತೈಶಿಗಳಿಂದ ನಾವು ಶುಭ ಹಾರೈಕೆ ಮತ್ತು ಆಶೀರ್ವಾದಗಳನ್ನ ನಿರೀಕ್ಷಿಸುತ್ತೇವೆ. ಈ ವಿಚ್ಛೇದನವು ನಮ್ಮ ಸಂಬಂಧದ ಅಂತ್ಯವಲ್ಲ, ಬದಲಾಗಿ ಹೊಸ ಪಯಣದ ಆರಂಭವಾಗಿದೆ. ಇಂತಿ ಕಿರಣ್ ಮತ್ತು ಆಮೀರ್” ಎಂದು ಇಬ್ಬರೂ ಜಂಟಿಯಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: 13ನೇ ವಯಸ್ಸಿಗೆ ಬಾಯ್​ಫ್ರೆಂಡ್ ಸಿಕ್ಕಿದ, 14 ತುಂಬಿದಾಗ ಕಿಸ್ ಮಾಡಿದೆ ಎಂದ ಖ್ಯಾತ ನಿರ್ದೇಶಕನ ಮಗಳು!

ಅಮೀರ್ ಖಾನ್ ಅವರಿಗೆ ಕಿರಣ್ ರಾವ್ ಎರಡನೇ ಪತ್ನಿ. ರೀನಾ ದತ್ತ ಅವರ ಮೊದಲ ಪತ್ನಿ. ಆ ದಾಂಪತ್ಯದಲ್ಲಿ ಜುನೇದ್ ಮತ್ತು ಇರಾ ಎಂಬಿಬ್ಬರು ಮಕ್ಕಳಿದ್ಧಾರೆ. 2005ರಲ್ಲಿ ಕಿರಣ್ ರಾವ್ ಅವರನ್ನ ವಿವಾಹವಾದರು. ಕಿರಣ್ ರಾವ್ ಅವರು 2002ರಲ್ಲಿ ಲಗಾನ್ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದರು. ಕುತೂಹಲವೆಂದರೆ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತ ಆ ಚಿತ್ರದ ಸಹ-ನಿರ್ಮಾಪಕಿಯಾಗಿದ್ದರು. ಅದಾದ ಬಳಿಕ ರೀನಾಗೆ ಡಿವೋರ್ಸ್ ನೀಡಿದ ಆಮೀರ್ ಖಾನ್ ಅವರು ಕಿರಣ್ ರಾವ್​ ರನ್ನ ಮದುವೆಯಾದರು. ಬಾಡಿಗೆ ತಾಯಿ ಮೂಲಕ ಈ ದಂಪತಿಗೆ ಆಜಾದ್ ಎಂಬ ಮಗ ಜನಿಸಿದ್ದಾನೆ. ಆಮೀರ್ ಖಾನ್ ಮುಸ್ಲಿಮನಾದರೂ ತನ್ನ ಹಿಂದೂ ಧರ್ಮೀಯ ಪತ್ನಿಯ ಜೀವನಶೈಲಿಯಿಂದ ಪ್ರೇರಿತರಾಗಿ ಮಾಂಸಾಹಾರ ತ್ಯಜಿಸಿ ಸಂಪೂರ್ಣ ವೇಗನ್ ಆಗಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: