Sushma ChakreSushma Chakre
|
news18-kannada Updated:September 17, 2019, 6:06 PM IST
Kiccha sudeep
'ಪೈಲ್ವಾನ್' ಸಿನಿಮಾ ಬಿಡುಗಡೆಯಾದ ಮಾರನೇ ದಿನವೇ ಸಿನಿಮಾ ಲೀಕ್ ಆಗಿತ್ತು. ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ಪೈರಸಿಗೆ ದರ್ಶನ್ ಅಭಿಮಾನಿಗಳೇ ಕಾರಣ ಎಂಬ ಆರೋಪವನ್ನು ಕಿಚ್ಚನ ಅಭಿಮಾನಿಗಳು ಮಾಡಿದ್ದರು. ಈ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಈ ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬಿಸಿಬಿಸಿ ಚರ್ಚೆಗಳಾಗುತ್ತಿದ್ದವು. ಆದರೆ, ಇದಕ್ಕೆಲ್ಲ ಪೂರ್ಣವಿರಾಮ ಇಟ್ಟಿರುವ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.
'ನಾನು ವಾರ್ನಿಂಗ್ ಕೊಡೋದೂ ಇಲ್ಲ, ತಗೊಳೋದೂ ಇಲ್ಲ. ಕೇವಲ ಮಾತುಗಳ ಮೂಲಕ ಯುದ್ಧಗಳನ್ನು ಗೆಲ್ಲೋ ಹಾಗಿದ್ದಿದ್ದರೆ ಹಲವು ರಾಜ, ಮಹಾರಾಜರು ಇನ್ನೂ ಜೀವಂತವಾಗಿ ಇರುತ್ತಿದ್ದರು. ಆದರೆ, ನಾನು ಮಾನವೀಯ ದಾರಿಯಲ್ಲಿ ಸಾಗಲು ಇಷ್ಟ ಪಡುತ್ತೇನೆ' ಎಂದು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ದೊಡ್ಡದಾದ ಪತ್ರ ಬರೆದಿದ್ದಾರೆ. ಅದರ ಸಾರಾಂಶ ಹೀಗಿದೆ.
ನನ್ನ ಪ್ರೀತಿಯ ಗೆಳೆಯರೇ,
'ಬೇಡದ ವಿಷಯಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಸತ್ಯಕ್ಕೆ ಸದಾ ಜಯವಿದೆ. ಬೇಡದ ವಿಷಯಗಳಿಗೆ ತಲೆಹಾಕದೇ ಸುಮ್ಮನಿದ್ದುಬಿಡಿ. ನೀವು ಸುಮ್ಮನಾದ್ರಿ ಅಂದರೆ ಅದರಿಂದ ನೀವು ಸಣ್ಣವರಾದಿರಿ ಎಂದು ಅರ್ಥವಲ್ಲ. ನಾನಾಗಲೀ ಅಥವಾ ಪೈಲ್ವಾನ್ ಚಿತ್ರತಂಡವೇ ಆಗಲೀ ಪೈರಸಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಟನ ಬಗ್ಗೆ ದೂರಿಲ್ಲ. ಆದ್ರೆ ಪೈರಸಿ ಲಿಂಕ್ಗಳನ್ನು ಶೇರ್ ಮಾಡುತ್ತಿದ್ದ ಹಲವರ ಹೆಸರನ್ನು ದಾಖಲೆ ಸಮೇತ ಸೈಬರ್ ಕ್ರೈಮ್ಗೆ ನೀಡಿದ್ದೇವೆ'.
ನನ್ನ ಅಭಿಮಾನಿಗಳನ್ನು ಕೆಣಕಲು ಬರಬೇಡಿ; ವಾರ್ನಿಂಗ್ ಕೊಟ್ರು ಡಿ ಬಾಸ್!
'ಪೈರಸಿ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ, ಕೊನೆಗೆ ಸತ್ಯ ಏನು ಎಂಬುದು ಹೊರಬರುತ್ತದೆ. ಪತ್ರಗಳು ಮತ್ತು ಒಂದಷ್ಟು ಧ್ವನಿಗಳು ಇವೆಲ್ಲಕ್ಕೆ ಪೂರ್ಣವಿರಾಮ ಬೀಳುತ್ತದೆ. ಕೆಲವರು ನನ್ನನ್ನು ತಮಾಷೆ ಮಾಡುವ ಮೂಲಕ ಖುಷಿಪಡ್ತಿದ್ದಾರೆ ಅದೇನೇ ಇರಲಿ ಎಲ್ಲದಕ್ಕೂ ಕೊನೆ ಇದೆ. ನನ್ನ ಸಿನಿಮಾ ಮತ್ತು ನಿರ್ಮಾಪಕರನ್ನು ರಕ್ಷಿಸುವುದು ನನ್ನ ಜವಾಬ್ದಾರಿ. ನಾನು ಮಾಡಿದ ಟ್ವೀಟ್ ಮತ್ತು ನನ್ನ ಮಾತುಗಳನ್ನು ಇದನ್ನೇ ಸಾರುತ್ತವೆ. ನೀವೆಲ್ಲರೂ ನನ್ನ ಬೆನ್ನಿಗೆ ನಿಂತು ಒಂದೇ ಕುಟುಂಬದ ತರಹ ನೋಡಿಕೊಂಡಿದ್ದೀರಿ. ನಿಮ್ಮಿಂದ ಸಿಕ್ಕಿರುವ ಒಂದೇ ಒಂದು ಒಳ್ಳೆಯ ಮಾತನ್ನಾಗಲಿ ಸಣ್ಣ ಬೆಂಬಲವನ್ನಾಗಲಿ ನಾನು ಮರೆಯಲ್ಲ'.
'ಕೆಲವು ಸ್ಟಾರ್ಗಳು ಪ್ರಕಟಿಸಿರುವ ಬಹಿರಂಗ ಪತ್ರಗಳ ವಿಷಯವನ್ನು ಇಲ್ಲೇ ಬಿಟ್ಟುಬಿಡಿ. ಯಾರೋ ನನ್ನ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ, ಆಡಿಕೊಂಡು ಸಂತೋಷ ಅನುಭವಿಸ್ತಿದ್ದಾರೆ ಅಂದ್ರೆ ಮಾಡಲಿ ಬಿಡಿ. ಅದರಿಂದ ನಿಮಗೆ ಬೇಸರವಾಗುತ್ತದೆ ಎಂಬುದು ಸತ್ಯ. ಆದರೆ ಈ ರೀತಿಯ ಅಪಪ್ರಚಾರಗಳಿಂದ ನನ್ನನ್ನು ಕುಗ್ಗಿಸಲಾಗದು ಅನ್ನೋದು ನಿಮಗೆ ನೆನಪಿರಲಿ. ನಾನು ಚೆನ್ನಾಗಿರಬೇಕು ಅಂತ ಮತ್ತೊಬ್ಬರನ್ನು ಕೀಳಾಗಿ ನೋಡೋದಿಲ್ಲ. ಎಚ್ಚರಿಕೆ ಕೊಡೋದು ನನಗಿಷ್ಟವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ. ಈ ಹಿಂದೆ ನಾನು ಒಬ್ಬ ನಟನ ಬಗ್ಗೆ ಮಾತನಾಡಿದ್ದೆ. ಅದು ಬೇಕಿರಲಿಲ್ಲ ಅಂತ ನಂತರ ನನಗನ್ನಿಸಿತ್ತು.
ಕೆಲವರ ಜತೆ ಜಗಳಗಳಾಗಿವೆ ಎಂಬುದು ನಿಜ. ಅದಕ್ಕೆ ಅದರದೇ ಆದ ಕಾರಣಗಳೂ ಇವೆ. ಆದರೆ, ತಪ್ಪುಗಳ ಅರಿವಾದ ತಕ್ಷಣ ನಾನು ಹಿಂದೆ ಮುಂದೆ ನೋಡದೇ ಕ್ಷಮೆ ಕೇಳಿದ್ದೇನೆ. ಮತ್ತೊಬ್ಬರು ಕ್ಷಮೆ ಕೇಳಿದಾಗ ಅವರನ್ನು ಕ್ಷಮಿಸಿದ್ದೇನೆ. ನಾನು ನನ್ನ ಕೆಲಸದಿಂದ ಜನರನ್ನು ಗೆಲ್ಲಲು ಯತ್ನಿಸುತ್ತೇನೆ. ಇಷ್ಟು ದಿನ ನನ್ನ ಪರವಾಗಿ ನಿಂತಿದ್ದಕ್ಕೆ ಧನ್ಯವಾದಗಳು. ನಾವೆಲ್ಲ ಈ ಭೂಮಿ ಮೇಲೆ ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ. ಇದ್ದಷ್ಟು ದಿನ ನೆಮ್ಮದಿಯಿಂದ ಇರೋಣ. ಕಾಲ ಎಲ್ಲದಕ್ಕೂ, ಎಲ್ಲರಿಗೂ ಉತ್ತರ ಕೊಡುತ್ತದೆ.'
ನಿಮ್ಮ,
ಕಿಚ್ಚ ಸುದೀಪ
ಎಂದು ತಮ್ಮ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದಿರುವ ಕಿಚ್ಚ ಸುದೀಪ್ ತಮ್ಮ ಪತ್ರದಲ್ಲಿ ಎಲ್ಲಿಯೂ ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ. ಇಂದು ಬೆಳಗ್ಗೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ನನ್ನ ಅಭಿಮಾನಿಗಳ ತಂಟೆಗೆ ಯಾರೂ ಕೆಣಕಬೇಡಿ' ಎಂದು ಟ್ವೀಟ್ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಯಾರ ವಿರುದ್ಧವೂ ಹೇಳಿಕೆ ನೀಡದಂತೆ ಪತ್ರ ಬರೆದಿದ್ದಾರೆ.
(ವರದಿ: ಬ್ಯಾಡನೂರು ಹರ್ಷವರ್ಧನ್)
First published:
September 17, 2019, 5:45 PM IST