HOME » NEWS » Entertainment » KICHCHA SUDEEP WARNS TO WHO HAVE DESTROYED DR VISHNUVARDHAN STATUE AT BANGALORE LG

ವಿಷ್ಣು ಸರ್​​ ಪ್ರತಿಮೆ ಧ್ವಂಸ ಮಾಡಿರೋರು ದೇಶಬಿಟ್ಟು ಹೋಗ್ಬಿಡಿ, ಇಲ್ಲ ಅಂದ್ರೆ....!; ಕಿಚ್ಚ ಸುದೀಪ್​ ವಾರ್ನಿಂಗ್

ಪ್ರತಿಮೆ ಧ್ವಂಸ ಮಾಡಿರುವವರ ಉದ್ದೇಶವೇ ಅರ್ಥವಾಗುತ್ತಿಲ್ಲ.  ಆ ಪ್ರತಿಮೆ ಒಡೆಯೋಕೆ ಮುಂಚೆ ನೀವು ಒಮ್ಮೆ ಯೋಚಿಸಬೇಕಿತ್ತು. ಒಬ್ಬ ಮನುಷ್ಯ ಮಾಡಬಾರದ ಕೆಲಸ ಅದು. ನಿಮ್ಮ ಹೆಸರು ಹೊರಗೆ ಬಂದ ದಿನವೇ ದೇಶ ಬಿಟ್ಟು ಹೋಗಿಬಿಡಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

news18-kannada
Updated:December 27, 2020, 2:57 PM IST
ವಿಷ್ಣು ಸರ್​​ ಪ್ರತಿಮೆ ಧ್ವಂಸ ಮಾಡಿರೋರು ದೇಶಬಿಟ್ಟು ಹೋಗ್ಬಿಡಿ, ಇಲ್ಲ ಅಂದ್ರೆ....!; ಕಿಚ್ಚ ಸುದೀಪ್​ ವಾರ್ನಿಂಗ್
ಸುದೀಪ್​
  • Share this:
ಬೆಂಗಳೂರು(ಡಿ.27): ಅವರು ಕೋಟಿ ಕೋಟಿ ಕನ್ನಡಿಗರ ಹೃದಯಗೆದ್ದ ನಟ. ಅಭಿಮಾನಿಗಳ ಪಾಲಿನ ಸಾಹಸ ಸಿಂಹ ಎಂತಲೇ ಖ್ಯಾತಿ ಗಳಿಸಿದ್ದ ವಿಷ್ಣುವರ್ಧನ್ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನ ಗಳಿಸಿ ಮನೆ ಮಾತಾಗಿದ್ದಾರೆ. ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ಅಭಿಮಾನಿಗಳು ಪ್ರತಿಮೆ ಸ್ಥಾಪಿಸಿ ಪ್ರೀತಿ ಅಭಿಮಾನ ತೋರಿಸಿದ್ದರು. ಆದರೆ  ಶುಕ್ರವಾರ ರಾತ್ರೋರಾತ್ರಿ ಕಿಡಿಗೇಡಿಗಳ ಗುಂಪು ಡಾ. ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿ ವಿಕೃತಿ ಮರೆದಿದ್ದರು. ಈ ಕೃತ್ಯವನ್ನು ಖಂಡಿಸಿ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದರು. ಸ್ಯಾಂಡಲ್​ವುಡ್​ನ ನಟ-ನಟಿಯರು ಈ ಕೃತ್ಯ ಎಸಗಿದರ ವಿರುದ್ಧ ಕಿಡಿಕಾರಿದ್ದಾರೆ. ನಟ ಕಿಚ್ಚ ಸುದೀಪ್ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ವಿಷ್ಣು ಸರ್‌ ಪ್ರತಿಮೆ ಒಡೆದಿರುವ ಮಹಾನುಭಾವರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ.  ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ. ಪ್ರತಿಮೆ ಧ್ವಂಸ ಮಾಡಿರುವವರು ಯಾರು ಅಂತ ಗೊತ್ತಾದರೆ, ಧ್ವಂಸವಾಗಿರುವ ಪ್ರತಿಮೆಗಿಂತ ಹೀನಾಯವಾಗಿ ಅಭಿಮಾನಿಗಳು ಒಡೆಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಮೆ ಧ್ವಂಸ ಮಾಡಿರುವವರ ಉದ್ದೇಶವೇ ಅರ್ಥವಾಗುತ್ತಿಲ್ಲ.  ಆ ಪ್ರತಿಮೆ ಒಡೆಯೋಕೆ ಮುಂಚೆ ನೀವು ಒಮ್ಮೆ ಯೋಚಿಸಬೇಕಿತ್ತು. ಒಬ್ಬ ಮನುಷ್ಯ ಮಾಡಬಾರದ ಕೆಲಸ ಅದು. ನಿಮ್ಮ ಹೆಸರು ಹೊರಗೆ ಬಂದ ದಿನವೇ ದೇಶ ಬಿಟ್ಟು ಹೋಗಿಬಿಡಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಸಾಹಸ ಸಿಂಹ ಡಾ. ವಿಷ್ಣುವರ್ಧನ್​ ಪ್ರತಿಮೆ ಧ್ವಂಸ ಪ್ರಕರಣ; ಕಿಡಿಗೇಡಿಗಳ ವಿರುದ್ಧ ಎಫ್​ಐಆರ್ ದಾಖಲು

ಇನ್ನೂ ಇದೇ ವೇಳೆ ವಿಷ್ಣುವರ್ಧನ್ ಅಳಿಯ ಅನಿರುದ್ಧ್​ ಸಹ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ಥಳಿ ಧ್ವಂಸಗೊಳಿಸಿದ್ದನ್ನ ಖಂಡಿಸಿದ ಅನಿರುದ್ದ ಕೂಡಲೇ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡು, ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ವಿಷ್ಣು ಅಭಿಮಾನಿಗಳು ಶಾಂತಪ್ರಿಯರು, ತುಂಬ ನೋವುಗಳನ್ನ ಉಂಡಿದ್ದೀರಿ. ಕಷ್ಟಗಳನ್ನ ಎದುರಿಸಿದ್ದೀರಿ. ಅಭಿಮಾನಿಗಳು ಶಾಂತವಾಗಿರಿ ಎಂದು ಕರೆ ನೀಡಿದರು. ವಿಷ್ಣು ಪುತ್ಥಳಿ ಧ್ವಂಸದ ಬಗ್ಗೆ ಶಾಸಕ ಹಾಗೂ ನಿರ್ಮಾಪಕ ಮುನಿರತ್ನಂ ಸಹ ಬೇಸರ ವ್ಯಕ್ತಪಡಿಸಿದರು. ಅಂಬರೀಶ್ ಮತ್ತು ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮೇರು ನಟರು. ಅಂತವರ ಪ್ರತಿಮೆಗಳನ್ನ ಧ್ವಂಸಗೊಳಿಸುವುದು ಸರಿಯಲ್ಲ ಎಂದು ಹೇಳಿದ್ದರು.ಇನ್ನೂ ವಿಷ್ಣು ಪ್ರತಿಮೆ ಧ್ವಂಸಗೊಳಿಸಿದ ಘಟನೆ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಸ್ಥಳಕ್ಕೆ ದೌಡಾಯಿಸಿದ್ದರು. ಬಳಿಕ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಬಳಿಕ ಪ್ರತಿಭಟನೆ ನಿರತ ವಿಷ್ಣು ಅಭಿಮಾನಿಗಳ ಮನವೊಲಿಸಿದ ವಿಜಯನಗರ ಪೊಲೀಸರು ಕಿಡಿಗೇಡಿಗಳ ವಿರುದ್ಧ ದೂರು ನೀಡುವಂತೆ ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದರು.

ಟೋಲ್ ಗೇಟ್ ನ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ಡಾ. ವಿಷ್ಣುವರ್ಧನ್ ಸೇನಾ ಸಮಿತಿಯಿಂದ ಒಂದೂವರೆ ವರ್ಷದ ಹಿಂದೆ ಪ್ರತಿಮೆಯನ್ನ ಪ್ರತಿಷ್ಟಾಪಿಸಲಾಗಿತ್ತು. ಆದ್ರೆ ಪ್ರತಿಮೆ ಸ್ಥಾಪನೆ ಆದಾಗಿನಿಂದಲೂ ಒಂದಲ್ಲಾ ಒಂದು ವಿವಾದ ಪ್ರತಿಮೆ ವಿಚಾರಕ್ಕೆ ಉದ್ಭವವಾಗುತ್ತಲೇ ಇತ್ತಂತೆ. ವಿಷ್ಣು ಪ್ರತಿಮೆ ಇದ್ದ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮಿಗಳ ಪುತ್ಥಳಿ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗಿದ್ದರಂತೆ. ಅದಕ್ಕಾಗಿ ಕೆಲವು ಸಿದ್ದತೆಗಳು ಸಹ ನಡೆದಿದ್ವಂತೆ. ಈ ಬಗ್ಗೆ ಕೆಲ ಹಿರಿಯ ಜೊತೆ ಮಾತುಕತೆ ನಡೆಸಿ ವಿಷ್ಣು ಪ್ರತಿಮೆ ಅದೇ ವೃತ್ತದ ಬೇರೆಡೆ ಪ್ರತಿಷ್ಟಾಪಿಸಲು ಸಮ್ಮತಿಸಲಾಗಿತ್ತು ಎನ್ನಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪ್ರತಿಮೆ ಸ್ಥಳಾಂತರ ಮಾಡಲು ಚಿಂತನೆ ನಡೆಸಿದ್ದಾಗಲೇ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ವಿಷ್ಣುವರ್ಧನ್ ಪುತ್ಥಳಿಯನ್ನ ಧ್ವಂಸಗೊಳಿಸಿ ವಿಕೃತಿ ಮೆರೆದಿದ್ದಾರೆ.
Published by: Latha CG
First published: December 27, 2020, 2:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories