ತುಮಕೂರಿನ ಸಿದ್ಧಗಂಗಾ ಮಠಕ್ಕೆ ಇಂದ್ರಜಿತ್ ಲಂಕೇಶ್ ಹಾಗೂ ನಟ ಸುದೀಪ್ ಇಂದು ಭೇಟಿ ನೀಡಿದ್ದಾರೆ. ನಾಳೆ ಸುದೀಪ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಅವರು ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್ ಸ್ಯಾಂಡಲ್ವುಡ್ಗೆ ಅಂಟಿರುವ ಡ್ರಗ್ಸ್ ಕಳಂಕದ ಬಗ್ಗೆ ಮಾತನಾಡಿದ್ದಾರೆ. “ಕನ್ನಡ ಚಿತ್ರರಂಗ ಹಿರಿಯರು ಕೆತ್ತಿದ್ದಾರೆ. ಇಲ್ಲಿ ಸಾಕಷ್ಟು ನೋವು-ಖುಷಿಗಳನ್ನು ನುಂಗಿಯೇ ಚಿತ್ರರಂಗ ಇಲ್ಲಿಯವರೆಗೆ ಬಂದಿದೆ. ಹೀಗಾಗಿ ಇಡೀ ಚಿತ್ರರಂಗವನ್ನು ದೂರುವುದು ತಪ್ಪು,” ಎಂದಿದ್ದಾರೆ ಸುದೀಪ್.
ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸೇರಿ ಸಾಕಷ್ಟು ಹಿರಿಯ ಕಲಾವಿದರು ಸ್ಯಾಂಡಲ್ವುಡ್ನ ಕಟ್ಟಿ ಬೆಳೆಸಿದ್ದಾರೆ. ಇಂಥ ಸ್ಯಾಂಡಲ್ವುಡ್ಗೆ ಕಳಂಕ ಬಂದಿರುವುದರ ಬಗ್ಗೆ ಏನು ಹೇಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುದೀಪ್, "ಮನುಷ್ಯರು ಇಡೀ ವಿಶ್ವವನ್ನು ಕಟ್ಟಿ ಬೆಳೆಸಿದ್ದಾರೆ. ಹಾಗಂತ ಕೊರೋನಾ ಬಂದಾಗ ಕೈಚೆಲ್ಲಿ ಕೂತಿಲ್ಲ. ಅದನ್ನು ಎದುರಿಸಿದ್ದೇವೆ. ಹಾಗೆಯೇ ಡ್ರಗ್ಸ್ ವಿಚಾರವನ್ನೂ ನಾವು ಎದುರಿಸಬೇಕು,” ಎಂದರು.
ಹುಟ್ಟುಹಬ್ಬವನ್ನು ಚಿಕ್ಕದಾಗಿ ಆಚರಣೆ ಮಾಡುತ್ತೇವೆ ಎಂದಿರುವ ಸುದೀಪ್, “ಹುಟ್ಟುಹಬ್ಬವನ್ನು ನಾನು ಆಚರಿಸಿಕೊಳ್ಳುವುದು ನಿಲ್ಲಿಸಿ 18-19 ವರ್ಷ ಕಳೆದಿವೆ. ಗೆಳೆಯರು-ಅಭಿಮಾನಿಗಳು ಬಂದು ಕೇಕ್ ಕತ್ತರಿಸುತ್ತಾರೆ. ಈ ಬಾರಿ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಬೇಸರ ಇದೆ,” ಎನ್ನುತ್ತಾರೆ .
![]()
KKSFA FB Account
ಚಿರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎನ್ನುವ ವಿಚಾರ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಚಿರು ನನಗೆ ತಮ್ಮನಿದ್ದಂತೆ ಇದ್ದ. ಅವನು ಈಗ ನಮ್ಮ ಜೊತೆ ಇಲ್ಲ. ಹೀಗಿರುವಾಗ ಅವನ ಸಾವಿನ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಸಿದ್ಧಗಂಗಾ ಮಟಕ್ಕೆ ಭೇಟಿ ನಿಡಿದ್ದೇಕೆ ಎನ್ನುವ ಬಗ್ಗೆ ಮಾತನಾಡಿದ ಸುದೀಪ್, ನಾನು ಅನೇಕ ವರ್ಷಗಳ ಹಿಂದೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೆ. ಅದಾದ ಮೇಲೆ ಇಲ್ಲಿಗೆ ಬರಲು ಸಾಧ್ಯವೇ ಆಗಿರಲಿಲ್ಲ. ಆದರೆ, ಈಗ ಭೇಟಿಗೆ ಅವಕಾಶ ಒದಗಿ ಬಂತು, ಎಂದರು.
ನಟ ಚೇತನ್ಗೆ ತಿರುಗೇಟು:
ನಟ ಆದಿನಗಳು ಚೇತನ್ ಇಂದು ಟ್ವೀಟ್ ಮಾಡಿ ರಮ್ಮಿ ಹಾಗೂ ಗುಟ್ಕಾ ಆ್ಯಡ್ ನೀಡುವ ನಟರ ಬಗ್ಗೆ ಟೀಕೆ ಮಾಡಿದ್ದರು. ರಮ್ಮಿ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ಇದು ಸುದೀಪ್ ಉದ್ದೇಶಿಸಿ ನೀಡಿದ ಹೇಳಿಕೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್, ಆನ್ಲೈನ್ ರಮ್ಮಿಗೆ ಅವಕಾಶ ನೀಡಿದ ಮೋದಿ ಸರ್ಕಾರದ ಬಗ್ಗೆ ಅವರು ಮಾತನಾಡಿರಬೇಕು. ಹೇಳುವವರು ಯಾವಾಗಲೂ ನೇರವಾಗಿ ಹೇಳಬೇಕು. ನನ್ನ ತಪ್ಪುಗಳನ್ನು ಹುಡುಕುವವರು ನಾನು ಮಾಡಿರುವ ಸಮಾಜ ಸೇವೆಯ ಬಗ್ಗೆಯೂ ಗಮನ ಕೊಡಲಿ ಎಂದು ಹೇಳುವ ಮೂಲಕ ಚೇತನ್ಗೆ ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ