D Boss Darshan: ಮೆಜೆಸ್ಟಿಕ್​ ಚಿತ್ರಕ್ಕೆ ದರ್ಶನ್​ ನಾಯಕನಾಗಲು ಇವರೇ ನಿಜವಾದ ಕಾರಣ; ವಿವಾದಕ್ಕೆ ಬಿತ್ತು ತೆರೆ

 ದರ್ಶನ್ ಮತ್ತು ಕಿಚ್ಚ ಸುದೀಪ್ ಅವ್ರ ನಡುವೆ ಕಂದಕವನ್ನು ಹೆಚ್ಚಿಸಲು ಕೆಲವರು ಕುತಂತ್ರ ನಡೆಸುತ್ತಿದ್ದಾರೆ ಅನ್ನೋದು ಮೆಜೆಸ್ಟಿಕ್ ಚಿತ್ರತಂಡದ ಅಭಿಪ್ರಾಯ. ಜೊತೆಗೆ ಹಿಂದೆ ಜೊತೆಯಾಗಿದ್ದ ದಚ್ಚು ಮತ್ತು ಕಿಚ್ಚ ಇವತ್ತು ದೂರಾಗಿರಬಹುದು, ಆದ್ರೆ ಮುಂದೊಂದು ದಿನ ಇಬ್ರೂ ಮತ್ತೆ ಒಂದಾಗೇ ಆಗ್ತಾರೆ ಅನ್ನೋದು ಅವ್ರೆಲ್ಲರ ಅಭಿಮತ.

ದರ್ಶನ್​ ಸುದೀಪ್​

ದರ್ಶನ್​ ಸುದೀಪ್​

  • Share this:
‘ಮೆಜೆಸ್ಟಿಕ್’, ಇದು 17 ವರ್ಷಗಳ ಹಿಂದೆ ತೆರೆಗೆ ಅಪ್ಪಳಿಸಿದ ಸಿನಿಮಾ. ಆದರೆ, ಈಗಲೂ ಆಗೊಮ್ಮೆ ಈಗೊಮ್ಮೆ ಈ ಸಿನಿಮಾ ಹೆಸರಲ್ಲಿ ಕಾಂಟ್ರವರ್ಸಿ ಆಗುತ್ತಲೇ ಇರುತ್ತದೆ. ಅದಕ್ಕೆ ಕಾರಣ ಗೊಂದಲಮಯ ಹೇಳಿಕೆಗಳು. ಇತ್ತೀಚೆಗಷ್ಟೇ ‘ಮೆಜೆಸ್ಟಿಕ್ ‘ಸಿನಿಮಾಕ್ಕೆ ದರ್ಶನ್‍ರನ್ನು ರೆಫರ್ ಮಾಡಿದ್ದು ಕಿಚ್ಚ ಸುದೀಪ್ ಅನ್ನೋ ಸುದ್ದಿ, ಎಲ್ಲೆಡೆ ಸದ್ದು ಮಾಡುತ್ತಿತ್ತು. ಅದರ ಬೆನ್ನು ಹತ್ತಿ ಹೊರಟ ನ್ಯೂಸ್ 18 ಕನ್ನಡ ಸಂಪೂರ್ಣ ಹಿನ್ನೆಲೆಯನ್ನು ನಿಮ್ಮ ಮುಂದೆ ಅನಾವರಣ ಮಾಡುತ್ತಿದೆ.

‘ಮೆಜೆಸ್ಟಿಕ್’ 2002ರಲ್ಲಿ ರಿಲೀಸ್ ಆದ ಕನ್ನಡದ ಸೂಪರ್‍ಹಿಟ್ ಸಿನಿಮಾ. ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಕೊಟ್ಟ ದರ್ಶನ್ ಇಂದು ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

ಇಂತಹ ಮೆಜೆಸ್ಟಿಕ್ ಸಿನಿಮಾ ಪ್ರಾರಂಭವಾಗಲು ಪ್ರಮುಖ ಕಾರಣ ಮೂರು ಮಂದಿ. ನಿರ್ಮಾಪಕ ರಾಮಮೂರ್ತಿ, ನಿರ್ದೇಶಕ ಸತ್ಯು ಹಾಗೂ ಛಾಯಾಗ್ರಾಹಕ ಅಣಜಿ ನಾಗರಾಜ್. ಸತ್ಯು ಮೆಜೆಸ್ಟಿಕ್ ಕಥೆ ಮಾಡಿಕೊಂಡಿದ್ದರು. ಕಥೆ ಕೇಳಿದ ರಾಮಮೂರ್ತಿ ಹಣ ಹೂಡಲು ಮುಂದಾದ್ರು ಹಾಗೂ ಚಿತ್ರದ ಛಾಯಾಗ್ರಾಹಕ ಅಣಜಿ ನಾಗರಾಜ್ ದರ್ಶನ್‍ರನ್ನು ತಮ್ಮ ಟೀಂಗೆ ಪರಿಚಯಿಸಿದ್ದರು. ಆ ಮೂಲಕ ಮೆಜೆಸ್ಟಿಕ್ ಪ್ರಾರಂಭವಾಯ್ತು.

ಕಿಚ್ಚ ಸುದೀಪ್ ಅವ್ರೇ ದರ್ಶನ್‍ರನ್ನು ರೆಫರ್ ಮಾಡಿದ್ರಾ?:

ಕೆಲ ವರ್ಷಗಳಿಂದೀಚೆಗೆ ಆಗಾಗ ಮೆಜೆಸ್ಟಿಕ್ ಸಿನಿಮಾ ಬಗ್ಗೆ ಸುದ್ದಿಯೊಂದು ಸದ್ದು ಮಾಡುತ್ತಲೇ ಇದೆ. ಅದೇನಂದ್ರೆ, ದರ್ಶನ್‍ರನ್ನು ಮೆಜೆಸ್ಟಿಕ್ ಸಿನಿಮಾಗೆ ಕಿಚ್ಚ ಸುದೀಪ್ ಅವರೇ ರೆಫರ್ ಮಾಡಿದ್ದು ಅನ್ನೋದು. ಆದ್ರೆ 18 ವರ್ಷಗಳ ಹಿಂದೆ ಸಿನಿಮಾಗಾಗಿ ನಾಯಕನ ಹುಡುಕಾಟದಲ್ಲಿದ್ದಾಗ ಅಲ್ಲಿ ನಡೆದಿರೋದೇ ಬೇರೆ.

ಆಗಷ್ಟೇ ‘ಹುಚ್ಚ’ ಸಿನಿಮಾ ಸಕ್ಸಸ್‍ನಲ್ಲಿ ತೇಲುತ್ತಿದ್ದ ಕಿಚ್ಚ ಸುದೀಪ್ ಅವರನ್ನು ಮೆಜೆಸ್ಟಿಕ್ ಚಿತ್ರತಂಡ ಭೇಟಿ ಮಾಡಿದ್ದು ನಿಜವಂತೆ. ಆದರೆ ಆ ಭೇಟಿಯಲ್ಲಿ ಅವರು ದರ್ಶನ್‍ರ ಹೆಸರನ್ನು ಹೇಳಿಲ್ಲ ಅಂತ ಖುದ್ದು ಅಣಜಿ ನಾಗರಾಜ್ ಹೇಳುತ್ತಾರೆ. “ಮೊದಲು ನಾವು ಸುದೀಪ್​ ಸರ್​ ಹತ್ತಿರ ಹೋದೆವು. ಅವರ ಹತ್ತಿರ ಮಾತಾಡಿದೆವು. ಆದರೆ, ಅವರಿಗೆ ಇಷ್ಟವಾಗಿಲ್ಲ. ಆದರೆ, ಅವರು ದರ್ಶನ್​ ಹೆಸರೇ ಹೇಳಿಲ್ಲ. ನನಗೆ ಮೊದಲೇ ದರ್ಶನ್​ ಪರಿಚಯವಿತ್ತು. ನಂತರ ದರ್ಶನ್​ ಬಗ್ಗೆ ಸತ್ಯ ಅವರ ಬಳಿ ಮಾತುಕತೆ ನಡೆಸಿ, ಫೈನಲ್​ ಮಾಡಿದೆವು,” ಎಂದರು.

ಈ ಬಗ್ಗೆ ಮಾತನಾಡುವ ಸಹ ನಿರ್ಮಾಪಕ ರಮೇಶ್ ಕುಮಾರ್, “ಅವತ್ತು ಕಿಚ್ಚ ಸುದೀಪ್ ಅವ್ರನ್ನು ಭೇಟಿ ಮಾಡಿದ್ದ ನಿಜ. ಕಥೆ ಕುರಿತು ಡಿಸ್ಕಸ್ ಕೂಡ ಮಾಡಿದ್ದೆವು. ಆದ್ರೆ ಈಗಲೇ ಈ ಕಥೆ ಬೇಡ, ಕೆಲ ದಿನಗಳ ನಂತರ ಮಾಡ್ತೀನಿ ಅಂತ ಸುದೀಪ್ ಹೇಳಿದ್ದರು. ಆದರೆ, ದರ್ಶನ್‍ರನ್ನು ಅವ್ರು ರೆಫರ್ ಮಾಡಿಲ್ಲ,”ಎಂದು ಸ್ಪಷ್ಟನೆ ನೀಡ್ತಾರೆ. ಅಷ್ಟೇ ಯಾಕೆ ‘ಹುಚ್ಚ’ ಸಿನಿಮಾ 25 ವಾರಗಳನ್ನು ಪೂರೈಸಿದ್ದಕ್ಕೆ ಆಗಷ್ಟೇ ರಿಲೀಸ್‍ಗೆ ರೆಡಿಯಾಗಿದ್ದ ‘ಮೆಜೆಸ್ಟಿಕ್’ ಚಿತ್ರತಂಡ ಕೂಡ ಸ್ಪೆಷಲ್ ಪೋಸ್ಟರ್ ಮೂಲಕ ಶುಭಾಶಯ ಅರ್ಪಿಸಿತ್ತು.

ಚಿತ್ರತಂಡದಿಂದ ಖಡಕ್​ ವಾರ್ನಿಂಗ್​:

ಹಾಗಾದ್ರೆ ಸುದೀಪ್ ಅವ್ರೇ ದರ್ಶನ್‍ರನ್ನು ರೆಫರ್ ಮಾಡಿದ್ದು ಅನ್ನೋ ಸುದ್ದಿ ಹಬ್ಬಲು ಕಾರಣವೇನು? ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆಗಿ 17 ವರ್ಷಗಳೇ ಕಳೆದಿವೆ. ಆದ್ರೆ ಈಗಲೂ ಆಗಾಗ ‘ಮೆಜೆಸ್ಟಿಕ್’ ಸಿನಿಮಾ ಕುರಿತ ಇಲ್ಲಸಲ್ಲದ ಊಹಾಪೋಹಗಳೂ ಹಬ್ಬುತ್ತಲೇ ಇರುತ್ತವೆ. ಅದಕ್ಕಿಂತ ಹೆಚ್ಚಾಗಿ ಕೆಲವರು ಬೇಡದ ಸುದ್ದಿಗಳನ್ನು ಹಬ್ಬಿಸುತ್ತಲೇ ಇರುತ್ತದೆ. ಅಂಥವರಿಗೆ ಚಿತ್ರತಂಡ ಒಂದು ಖಡಕ್ ವಾರ್ನಿಂಗ್ ಕೊಟ್ಟಿದೆ.

‘ಮೆಜೆಸ್ಟಿಕ್’ ಈಗ ಮುಗಿದ ಅಧ್ಯಾಯ. ಸಿನಿಮಾ ರಿಲೀಸ್ ಆಗಿಯೇ 17 ವರ್ಷಗಳಾಗಿವೆ. ಈಗ ಆ ಸಿನಿಮಾ ಬಗ್ಗೆ ಯಾಕೆ ಗೊಂದಲಮಯ ಹೇಳಿಕೆ ನೀಡೋದು ಅಂತ ಖುದ್ದು ನಿರ್ಮಾಪಕ ಎಂಜಿ ರಾಮಮೂರ್ತಿ, ಸಹ ನಿರ್ಮಾಪಕ ರಮೇಶ್ ಕುಮಾರ್, ಛಾಯಾಗ್ರಾಹಕ ಅಣಜಿ ನಾಗರಾಜ್ ಹಾಗೂ ಸಹ ನಿರ್ದೇಶಕ ಮಾದೇಶ್ ಒಕ್ಕೊರಿಲಿನಿಂದ ಪ್ರಶ್ನಿಸಿದ್ದಾರೆ.

ದರ್ಶನ್ ಮತ್ತು ಕಿಚ್ಚ ಸುದೀಪ್ ಅವ್ರ ನಡುವೆ ಕಂದಕವನ್ನು ಹೆಚ್ಚಿಸಲು ಕೆಲವರು ಕುತಂತ್ರ ನಡೆಸುತ್ತಿದ್ದಾರೆ ಅನ್ನೋದು ಮೆಜೆಸ್ಟಿಕ್ ಚಿತ್ರತಂಡದ ಅಭಿಪ್ರಾಯ. ಜೊತೆಗೆ ಹಿಂದೆ ಜೊತೆಯಾಗಿದ್ದ ದಚ್ಚು ಮತ್ತು ಕಿಚ್ಚ ಇವತ್ತು ದೂರಾಗಿರಬಹುದು, ಆದ್ರೆ ಮುಂದೊಂದು ದಿನ ಇಬ್ರೂ ಮತ್ತೆ ಒಂದಾಗೇ ಆಗ್ತಾರೆ ಅನ್ನೋದು ಅವ್ರೆಲ್ಲರ ಅಭಿಮತ.

ಒಂದಾಗಲಿ ದಚ್ಚು-ಕಿಚ್ಚ:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಬಾದ್‍ಶಾ ಕಿಚ್ಚ ಸುದೀಪ್ ಇಂದು ದೂರವಾಗಲು ಮೆಜೆಸ್ಟಿಕ್ ಸಿನಿಮಾ ಕುರಿತ ವಾದ, ವಿವಾದವೂ ಒಂದು ಕಾರಣ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಅದರಲ್ಲಿ ಮೆಜೆಸ್ಟಿಕ್ ಚಿತ್ರತಂಡದ ಪಾತ್ರವಿಲ್ಲ ಅನ್ನೋದು ಅಷ್ಟೇ ಸತ್ಯ. ಹೀಗಾಗಿಯೇ ಮೆಜೆಸ್ಟಿಕ್‍ನ ಚಿತ್ರತಂಡವೇ, ಈ ಇಬ್ಬರೂ ಸೂಪರ್‍ಸ್ಟಾರ್‍ಗಳನ್ನು ಒಂದಾಗಿಸುವ ಆಶಯ ವ್ಯಕ್ತಪಡಿಸುತ್ತಿದೆ.

ಕಿಚ್ಚ, ದಚ್ಚು ಒಂದಾದ್ರೆ ಸ್ಯಾಂಡಲ್‍ವುಡ್‍ನ ಹಿಡಿಯೋರಿಲ್ಲ !:

ಕೆಲ ವರ್ಷಗಳ ಹಿಂದೆ ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್‍ಗೆ ಸುದೀಪ್ ಅವಕಾಶ ಕೊಡಿಸಿದ್ರು ಅನ್ನೋ ಸುದ್ದಿ ಹಬ್ಬಿತ್ತು. ಆ ಕುರಿತು ಖುದ್ದು ದಚ್ಚು ಹಾಗೇನೂ ಆಗಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದರು. ಆದ್ರೆ ಕಾರಣಾಂತರಗಳಿಂದ ಕಿಚ್ಚ ಮತ್ತು ದಚ್ಚು ನಡುವೆ ಮೂಡಿದ್ದ ಕಂದಕ, ಈ ಗಾಳಿ ಸುದ್ದಿಯಿಂದ ಮತ್ತಷ್ಟು ದೊಡ್ಡದಾಯ್ತು. ಅಲ್ಲಿಂದ ಕುಚಿಕು ಕುಚಿಕು ಅಂತ ಹಾಡಿ ಕುಣಿದಿದ್ದ ಬಾದ್‍ಶಾ ಮತ್ತು ಸುಲ್ತಾನ್ ದೂರಾಗಿದ್ದರು.

ಆದ್ರೆ ಇದೆಲ್ಲಾ ಕ್ಷಣಿಕ. ಇಬ್ಬರೂ ಸೂಪರ್‍ಸ್ಟಾರ್ಸ್ ಮತ್ತೆ ಒಂದಾಗ್ತಾರೆ ಅನ್ನೋ ನಿರೀಕ್ಷೆ ಅವ್ರ ಅಭಿಮಾನಿಗಳಲ್ಲಿ ಮಾತ್ರವಲ್ಲ ಕನ್ನಡ ಚಿತ್ರರಂಗದವರಲ್ಲೂ ಇದೆ. ಆದ್ರೆ ಎಷ್ಟು ಬೇಗ ಅವ್ರು ಒಂದಾಗ್ತಾರೋ ಸ್ಯಾಂಡಲ್‍ವುಡ್‍ಗೂ ಅಷ್ಟೇ ಒಳ್ಳೆಯದು ಅನ್ನೋದು ಎಲ್ಲರ ಅಭಿಪ್ರಾಯ.

(ವಿಶೇಷ ವರದಿ: ಹರ್ಷವರ್ಧನ ಬ್ಯಾಡನೂರು)

First published: