ಪವರ್ ಜುಗಲ್​ಬಂದಿಯಲ್ಲಿ ಪೈಲ್ವಾನ್ ಗಾನಬಜಾನಗೆ ಅಖಾಡ ರೆಡಿ

Pailwaan : ಈ ಹಿಂದೆ ಆಗಸ್ಟ್​ 9 ರಂದು ಬಿಡುಗಡೆಯಾಗಬೇಕಿದ್ದ ಆಡಿಯೋ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಖುದ್ದು ಚಿತ್ರದ ನಾಯಕ ನಟ ಸುದೀಪ್ ವಿಡಿಯೋ ಮೂಲಕ ತಿಳಿಸಿದ್ದರು. ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾತನಾಡಿದ ಅಭಿನಯ ಚಕ್ರವರ್ತಿ, ಎಲ್ಲರೂ ನನ್ನ ಕ್ಷಮಿಸಬೇಕು.

zahir | news18-kannada
Updated:August 15, 2019, 10:59 AM IST
ಪವರ್ ಜುಗಲ್​ಬಂದಿಯಲ್ಲಿ ಪೈಲ್ವಾನ್ ಗಾನಬಜಾನಗೆ ಅಖಾಡ ರೆಡಿ
ಸುದೀಪ್​
zahir | news18-kannada
Updated: August 15, 2019, 10:59 AM IST
ಕೋಟಿಗೊಬ್ಬ ಕಿಚ್ಚ ಸುದೀಪ್ ಅಭಿನಯ ಪೈಲ್ವಾನ್ ಆಡಿಯೋ ರಿಲೀಸ್​ಗೆ ಅಖಾಡ ರೆಡಿಯಾಗಿದೆ. ಅದರಂತೆ ಇದೇ ತಿಂಗಳ ಆಗಸ್ಟ್​ 18 ರಂದು ಬೆಂಗಳೂರಿನಲ್ಲಿ ಅಭಿನಯ ಚಕ್ರವರ್ತಿಯ ಹೊಸ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಆಗಮಿಸಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬದಂದು (ಆಗಸ್ಟ್​ 9) ಚಿತ್ರದುರ್ಗದಲ್ಲಿ ನಡೆಯ ಬೇಕಿದ್ದ ಅದ್ಧೂರಿ 'ಪೈಲ್ವಾನ್' ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕರುನಾಡ 'ರಾಜಕುಮಾರ' ಬರಲು ರೆಡಿಯಾಗಿದ್ದರು.



ಆದರೆ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಸ್ಥಿತಿ ತಲೆದೂರಿದ್ದರಿಂದ ಆಡಿಯೋ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಅದರಂತೆ ಇದೀಗ ಆಗಸ್ಟ್​ 18 ರಂದು ಡೇಟ್ ಫಿಕ್ಸ್ ಮಾಡಲಾಗಿದ್ದು, ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ 'ಪೈಲ್ವಾನ್' ಆಡಿಯೋವನ್ನು 'ಪವರ್ ಸ್ಟಾರ್' ಬಿಡುಗಡೆ ಮಾಡಲಿದ್ದಾರೆ.

ಅಭಿನಯ ಚಕ್ರವರ್ತಿಯ ಈ ಬಹುಭಾಷಾ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕಾಗಿ ಸ್ಯಾಂಡಲ್​ವುಡ್ 'ಯುವರತ್ನ' ಕೂಡ ಬಿಡುವು ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಅದರಂತೆ 'ಪೈಲ್ವಾನ್' ಹಾಗೂ 'ಅಣ್ಣಾಬಾಂಡ್' ಒಂದೇ ವೇದಿಕೆ ಮೇಲೆ ಅಭಿಮಾನಿಗಳ ಮುಂದೆ ಕಾಣಿಸಲಿದ್ದಾರೆ.

ಈ ಹಿಂದೆ 'ರಾಜಕುಮಾರ' ಚಿತ್ರದ ಅದ್ಧೂರಿ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಹಾಗೂ ಚಿತ್ರದ ನಾಯಕ ನಟ ಅಪ್ಪು ಜೊತೆಯಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಜೊತೆಯಾಗಿ ಕುಣಿದು, ಪರಸ್ಪರ ಕಾಲೆಳೆದು ಅಭಿಮಾನಿಗಳನ್ನು ರಂಜಿಸಿದ್ದರು.


ಸುದೀಪ್-ಪುನೀತ್ ಬಾಲ್ಯದ ಫೋಟೋ (ರಾಜಕುಮಾರ ಚಿತ್ರದ ಸಂಭ್ರಮದಲ್ಲಿ ಅಪ್ಪು-ಕಿಚ್ಚ)

ಇದೀಗ ಮತ್ತೊಮ್ಮೆ ಇಂತಹದೊಂದು ಕ್ಷಣಕ್ಕಾಗಿ  ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದು, ಅರ್ಜುನ್ ಜನ್ಯ ಸಂಗೀತದೊಂದಿಗೆ ಸ್ಯಾಂಡಲ್​ವುಡ್ ಇಬ್ಬರು ಪವರ್​ ಬೂಸ್ಟರ್​ಗಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳ ಆಗಸ್ಟ್ 18 ರವರೆಗೆ ಕಾಯಬೇಕಿದೆ.

ಇನ್ನು ಚಿತ್ರದುರ್ಗದಿಂದ ಪೈಲ್ವಾನ್ ಬೆಂಗಳೂರಿಗೆ ಶಿಫ್ಟ್ ಆಗಿರುವ ಕಾರಣ ತಿಳಿಸಿರುವ ನಿರ್ದೇಶಕ ಕೃಷ್ಣ, ಚಿತ್ರವು ಸೆಪ್ಟೆಂಬರ್ 12ರಂದು ಬಿಡುಗಡೆಯಾಗಲಿದೆ. ಅದಕ್ಕೂ ಒಂದು ತಿಂಗಳ ಮುನ್ನ ಆಡಿಯೋ ಜನರಿಗೆ ತಲುಪಬೇಕಿದೆ. ಸದ್ಯ ಪರಿಸ್ಥಿತಿಯಲ್ಲಿ ಧ್ವನಿ ಸುರುಳಿಯನ್ನು ಮೊದಲು ಅಂದುಕೊಂಡಂತೆ ಕೋಟೆನಾಡಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಆಗಸ್ಟ್​ 9 ರಂದು ಬಿಡುಗಡೆಯಾಗಬೇಕಿದ್ದ ಆಡಿಯೋ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಖುದ್ದು ಚಿತ್ರದ ನಾಯಕ ನಟ ಸುದೀಪ್ ವಿಡಿಯೋ ಮೂಲಕ ತಿಳಿಸಿದ್ದರು. ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾತನಾಡಿದ ಅಭಿನಯ ಚಕ್ರವರ್ತಿ, ಎಲ್ಲರೂ ನನ್ನ ಕ್ಷಮಿಸಬೇಕು. ಆಡಿಯೋ ಬಿಡುಗಡೆಯನ್ನು ನಾವು ಮುಂದೂಡಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮಕ್ಕಾಗಿ ನೀವು ಹಾಕಬೇಕಿದ್ದ ಎನರ್ಜಿಯನ್ನು ನೆರೆ ಸಂತ್ರಸ್ತರ ನೆರವಿಗೆ ಬಳಸಬೇಕೆಂದು ಮನವಿ ಮಾಡಿದ್ದರು.

ಇದು ಸಂಭ್ರಮದ ಸಮಯವಲ್ಲ ಎಂಬುದು ಎಲ್ಲರಿಗೂ ಗೊತ್ತು. ಚಿತ್ರದುರ್ಗದ ಸ್ನೇಹಿತರು ನನ್ನನ್ನು ಕ್ಷಮಿಸಿ. ಎಲ್ಲರೂ ಕಾರ್ಯಕ್ರಮದ ಪಾಸ್ ಹಾಗೂ ಇತೆರೆ ಕೆಲಸಗಳಿಗಾಗಿ ಶ್ರಮವಹಿಸಿದ್ದೀರಿ. ಆದರೆ ಈ ಒಂದು ವಿಚಾರಕ್ಕೆ ನನ್ನನ್ನು ಕ್ಷಮಿಸಿ. ಆಡಿಯೋ ಕಾರ್ಯಕ್ರಮವನ್ನು ರದ್ದು ಪಡಿಸಲಾಗುತ್ತಿಲ್ಲ. ಮುಂದೂಡಲಾಗುತ್ತಿದೆ ಎಲ್ಲರೂ ಸಹಕರಿಸಬೇಕೆಂದು ಪೈಲ್ವಾನ್ ನಟ ಕೇಳಿಕೊಂಡಿದ್ದರು.

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...