Kotigobba 3 Review: ಸತ್ಯ, ಶಿವ, ಸುಂದರ 'ಘೋಸ್ಟ್' ಈ ಕೋಟಿಗೊಬ್ಬ!

Kiccha Sudeep: ಕೋಟಿಗೊಬ್ಬ 2 ಚಿತ್ರದಂತೆಯೇ ಕೋಟಿಗೊಬ್ಬ 3 ಕೂಡ ಕಿಚ್ಚ ಸುದೀಪ್ ಅವರ ಒನ್ ಮ್ಯಾನ್ ಶೋ. ಇಂಟ್ರೊಡಕ್ಷನ್ ಸೀನ್‍ನಿಂದಲೇ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುವ ಮೂಲಕ ಅಭಿನಯ ಚಕ್ರವರ್ತಿ ಎಂಬ ಬಿರುದು ತಮಗೆ ಯಾಕೆ ಬಂತು ಎಂಬುದಕ್ಕೆ ಉತ್ತರ ನೀಡಿದ್ದಾರೆ ಕಿಚ್ಚ ಸುದೀಪ್.

ಕೋಟಿಗೊಬ್ಬ-3

ಕೋಟಿಗೊಬ್ಬ-3

  • Share this:
ಚಿತ್ರ - ಕೋಟಿಗೊಬ್ಬ 3

ನಿರ್ದೇಶಕ - ಶಿವ ಕಾರ್ತಿಕ್​

ತಾರಾಗಣ - ಕಿಚ್ಚ ಸುದೀಪ್, ರವಿಶಂಕರ್, ಮೆಡೋನ್ನಾ ಸೆಬಾಸ್ಟಿಯನ್, ಅಭಿರಾಮಿ, ಆಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್, ನವಾಬ್ ಶಾ, ರಂಗಾಯಣ ರಘು, ಆಶಿಕಾ ರಂಗನಾಥ್, ತಾರಕ್ ಪೊನ್ನಪ್ಪ, ರಾಜೇಶ್ ನಟರಂಗ, ತಬಲಾ ನಾಣಿ ಮುಂತಾದವರು

3.5*

ಕೋಟಿಗೊಬ್ಬ 2 (Kotigobba 3) ಚಿತ್ರದಲ್ಲಿ ಸತ್ಯ ಬದುಕುಳಿದು, ಶಿವ ಸಾಯುತ್ತಾನೆ. ಆದರೆ ಕೋಟಿಗೊಬ್ಬ 3 ಚಿತ್ರದ ಟೀಸರ್ (Teaser), ಟ್ರೇಲರ್ (Trailer) ಹಾಗೂ ಕಿಚ್ಚ ಸುದೀಪ್ (Kiccha Sudeep) ಅವರ ಹೊಸ ಹೊಸ ಲುಕ್‍ಗಳನ್ನ ನೋಡಿ ಇಲ್ಲಿ ಸತ್ಯ, ಶಿವನ ಜತೆ ಸುಂದರನೂ ಇರುತ್ತಾನಾ ಎಂಬ ಪ್ರಶ್ನೆಯೊಂದಿಗೆ ತಲೆಗೆ ಹುಳ ಬಿಟ್ಟುಕೊಂಡೇ ಪ್ರೇಕ್ಷಕರು ಥಿಯೇಟರ್​​ಗೆ ಬಂದಿದ್ದರು. ಇಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿರುವ ಚಿತ್ರತಂಡ, ಕ್ಲೈಮ್ಯಾಕ್ಸ್‍ನಲ್ಲಿ ಮತ್ತಷ್ಟು ತಲೆಗೆ ಹೊಸ ಹುಳಗಳನ್ನು ಬಿಟ್ಟು ಕಳುಹಿಸಿದೆ.

ಹೌದು, ದುಷ್ಟರ ಹೆಡೆಮುರಿ ಕಟ್ಟುವ ಮೂಲಕ ಪೊಲೀಸರಿಗೆ ಸಹಾಯ ಮಾಡುತ್ತಾ, ಅನಾಥಾಶ್ರಮದಲ್ಲಿ ಮಕ್ಕಳಿಗೆ ಆಸರೆಯಾಗಿರುವ ಮಾದರಿ ಯುವಕ ಸತ್ಯ (ಕಿಚ್ಚ ಸುದೀಪ್). ಆದರೆ ಆತನ ಆಶ್ರಮದ ಮುದ್ದು ಬಾಲಕಿ ಜಾನುಗೆ ಅಪರೂಪದ ಖಾಯಿಲೆಗೆ ತುತ್ತಾಗುತ್ತಾಳೆ. ಆಕೆಯನ್ನು ದೂರದ ಪೋಲ್ಯಾಂಡ್‍ಗೆ ಕರೆದೊಯ್ದು ಚಿಕಿತ್ಸೆ ನೀಡಿಸುವ ಸವಾಲು ಎದುರಾಗುತ್ತದೆ. ಪೋಲ್ಯಾಂಡ್‍ನಲ್ಲಿ ವೈದ್ಯೆಯಾಗಿರುವ ಪ್ರಿಯಾ (ಮೆಡೋನ್ನಾ ಸೆಬಾಸ್ಟಿಯನ್) ಪರಿಚಯವಾಗುತ್ತದೆ, ಕ್ರಮೇಣ ಗೆಳೆತನವಾಗಿ ನಂತರ ಪ್ರೀತಿಯ ಮೊಳಕೆಯೊಡೆಯುತ್ತದೆ. ಇನ್ನೇನು ಎಲ್ಲಾ ಸರಿಹೋಯಿತು ಎನ್ನುತ್ತಿರುವಾಗಲೇ ಪೋಲ್ಯಾಂಡ್‍ನಲ್ಲಿ ಸಾಲು ಸಾಲು ಬಾಂಬ್ ಬ್ಲ್ಯಾಸ್ಟ್‍ಗಳು, ಜತೆಗೆ ಮೆಡಿಕಲ್ ಮಾಫಿಯಾದ ಡಾನ್ ದೇವ್‍ಗೆ  (ನವಾಬ್ ಶಾ) ಸೇರಿದ ನೂರಾರು ಕೋಟಿ ಮೌಲ್ಯದ ಕಿರೀಟ ಕಳ್ಳತನವಾಗುತ್ತದೆ. ಅದರ ರೂವಾರಿ ಸತ್ಯನೇ ಇರಬಹುದು ಅಂತ ಇಂಟರ್‍ಪೋಲ್ ಪೊಲೀಸರು ಹಾಗೂ ದೇವ್ ಬೆನ್ನು ಬೀಳುತ್ತಾರೆ. ಮತ್ತೆ ಜೈಲು ಸೇರುವ ಸತ್ಯನಿಗೆ ಅಲ್ಲಿ ಎಸಿಪಿ ಕಿಶೋರ್ (ರವಿ ಶಂಕರ್) ಎದುರಾಗುತ್ತಾನೆ. ಇಬ್ಬರೂ ಜೈಲಿನಿಂದ ತಪ್ಪಿಸಿಕೊಳ್ಳುತ್ತಾರೆ. ಈ ಪ್ರಕರಣದಿಂದ ಹೇಗಾದರೂ ಹೊರಬರಬೇಕು ಎಂದು ಹೋರಾಡುತ್ತಲೇ ಒಂದೊಂದೇ ಹೊಸ ಹೊಸ ಟ್ವಿಸ್ಟ್, ಟರ್ನ್‍ಗಳು, ಜತೆಗೊಂದು ಫ್ಲ್ಯಾಶ್‍ಬ್ಯಾಕ್... ಹಾಗಾದರೆ ಸತ್ಯ ಯಾರು? ಕೋಟಿಗೊಬ್ಬ 2ನಲ್ಲಿ ಸತ್ತ ಶಿವ ಮತ್ತೆ ವಾಪಸ್ ಆಗಿದ್ದಾನಾ? ಹೊಸದಾಗಿ ಎಂಟ್ರಿ ಕೊಟ್ಟಿರೋ ಈ ಘೋಸ್ಟ್ ಯಾರು? ದೇವ್‍ಗೂ ಸತ್ಯನಿಗೂ ಇರುವ ಹಳೆಯ ದ್ವೇಷವೇನು? ಈ ಎಲ್ಲ ಪ್ರಶ್ನೆಗಳಿಗೆ ಥಿಯೇಟರ್​ನಲ್ಲಿ ಉತ್ತರ ಸಿಗಲಿದೆ!ಕೋಟಿಗೊಬ್ಬ 2 ಚಿತ್ರದಂತೆಯೇ ಕೋಟಿಗೊಬ್ಬ 3 ಕೂಡ ಕಿಚ್ಚ ಸುದೀಪ್ ಅವರ ಒನ್ ಮ್ಯಾನ್ ಶೋ. ಇಂಟ್ರೊಡಕ್ಷನ್ ಸೀನ್‍ನಿಂದಲೇ ಪ್ರೇಕ್ಷಕರನ್ನು ಸೀಟಂಚಲ್ಲಿ ಕೂರಿಸುವ ಮೂಲಕ ಅಭಿನಯ ಚಕ್ರವರ್ತಿ ಎಂಬ ಬಿರುದು ತಮಗೆ ಯಾಕೆ ಬಂತು ಎಂಬುದಕ್ಕೆ ಉತ್ತರ ನೀಡಿದ್ದಾರೆ ಕಿಚ್ಚ ಸುದೀಪ್. ಬಿಗ್‍ಬಾಸ್‍ನಂತೆಯೇ ಭಿನ್ನ, ವಿಭಿನ್ನ ಕಾಸ್ಟ್ಯೂಮ್‍ಗಳಲ್ಲಿ ಮಿಂಚಿದ್ದಾರೆ ಕಿಚ್ಚ ಸುದೀಪ್. ಅವರಿಗೆ ಜೋಡಿಯಾಗಿ ಡಾಕ್ಟರ್ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್‍ವುಡ್ ಡೆಬ್ಯೂ ಮಾಡಿರುವ ಮಲಯಾಳಿ ನಟಿ ಮೆಡೊನ್ನಾ ಸೆಬಾಸ್ಟಿಯನ್ ಕೆಲವೆಡೆ ಸುಂದರವಾಗಿ ಕಾಣಿಸಿರುವುದಲ್ಲದೇ ಅಷ್ಟೇ ಸುಂದರವಾಗಿ ನಟಿಸಿದ್ದಾರೆ ಕೂಡ.

ಇದನ್ನು ಓದಿ: Salaga Movie Review: ರೌಡಿಸಂನ ಕ’ರಾ’ಳತೆ ಬಿಚ್ಚಿಟ್ಟ ಸಲಗ, ಹೆಜ್ಜೆ ಹೆಜ್ಜೆಗೂ ಹರಿದ ನೆತ್ತರ ಕೋಡಿ

ಇನ್ನು ಕೋಟಿಗೊಬ್ಬ 2 ಚಿತ್ರದಂತೆಯೇ ಕೋಟಿಗೊಬ್ಬ 3 ಚಿತ್ರದಲ್ಲಿಯೂ ನಟ ಕಿಚ್ಚ ಸುದೀಪ್ ಹಾಗೂ ರವಿಶಂಕರ್ ಅವರ ಜುಗಲ್‍ಬಂದಿ, ಜಗಳ್‍ಬಂದಿ ಎರಡೂ ವರ್ಕೌಟ್ ಆಗಿದೆ. ಸ್ಕ್ರೀನ್ ಮೇಲೆ ರವಿಶಂಕರ್ ತಲೆಕೆಡಿಸಿಕೊಂಡು ಸೀರಿಯಸ್ ಆದಷ್ಟೂ ತೆರೆಯ ಮುಂದೆ ಪ್ರೇಕ್ಷಕರು ನಗೆಗಡಲಲ್ಲಿ ತೇಲುತ್ತಾರೆ. ಇನ್ನು ಪಟಾಕಿ ಪೋರಿ ಚಮೇಲಿಯಾಗಿ ಕಿಚ್ಚ ಸುದೀಪ್ ಜತೆ ಕುಣಿದು ಕುಪ್ಪಳಿಸುವ ಆಶಿಕಾ ರಂಗನಾಥ್, ಮತ್ತಷ್ಟು ಮೆರುಗು ನೀಡಿದ್ದಾರೆ. ಉಳಿದಂತೆ ಇಂಟರ್‍ಪೋಲ್ ಅಧಿಕಾರಿಗಳಾಗಿ ಬಾಲಿವುಡ್ ನಟ ಆಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್, ಫ್ಲ್ಯಾಶ್‍ಬ್ಯಾಕ್‍ನಲ್ಲಿ ಸತ್ಯ, ಶಿವನ ತಾಯಿಯ ಪಾತ್ರದಲ್ಲಿ ಅಭಿರಾಮಿ, ಅವರ ಅಣ್ಣನ ಪಾತ್ರದಲ್ಲಿ ರಾಜೇಶ್ ನಟರಂಗ, ಅಲ್ಲೊಮ್ಮೆ ಇಲ್ಲೊಮ್ಮೆ ಕಚಗುಳಿ ಇಡುವ ಪೊಲೀಸ್ ಅಧಿಕಾರಿಯಾಗಿ ತಬಲಾ ನಾಣಿ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ.ಹೊಸ ಹೊಸ ಟರ್ನ್, ಟ್ವಿಸ್ಟ್​ಗಳ ಮೂಲಕ ಕಥೆಯ ಕುತೂಹಲವನ್ನು ಕೊನೆಯವರೆಗೂ ಹಿಡಿದಿಡುವಲ್ಲಿ ನಿರ್ದೇಶಕ ಶಿವ ಕಾರ್ತಿಕ್ ಗೆದ್ದಿದ್ದಾರೆ. ಆದರೆ ದೂರದ ಪೋಲ್ಯಾಂಡ್‍ಗೆ ಹೋಗಿದ್ದರೂ ಕೆಲವೆಡೆ ಲಾಜಿಕ್ ಇಲ್ಲದ ಮ್ಯಾಜಿಕ್‍ನಂತೆ ಗ್ರಾಫಿಕ್ಸ್ ಬಳಸಿರುವುದನ್ನು ದೊಡ್ಡ ಪರದೆ ಮೇಲೆ ನೋಡಿ ಅಭಾಸ ಅನ್ನಿಸಬಹುದು. ಟೈಟಲ್ ಟ್ರ್ಯಾಕ್ ಹಾಗೂ ಪಟಾಕಿ ಪೋರಿಗೆ ಥಿಯೇಟರ್‍ನಲ್ಲಿ ಬೀಳುವ ಶಿಳ್ಳೆ, ಚಪ್ಪಾಳೆಗಳೇ ಅರ್ಜುನ್ ಜನ್ಯಾ ಸಂಗೀತದ ಈ ಎರಡೂ ಹಾಡುಗಳು ಹಿಟ್ ಎಂಬುದಕ್ಕೆ ಸಾಕ್ಷಿ. ಹಾಗೇ ಹಿನ್ನೆಲೆ ಸಂಗೀತ ಸಹ ಚಿತ್ರಕ್ಕೆ ಪೂರಕವಾಗಿದೆ. ಫೈಟ್‍ಗಳನ್ನು ಹೆಚ್ಚು ರಿಚ್ಚಾಗಿ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ ಶೇಖರ್ ಚಂದ್ರು.

ಇದನ್ನು ಓದಿ: Rathnan Prapancha Official Trailer: ರತ್ನಾಕರನ ಪ್ರಪಂಚದ ಸ್ಯಾಂಪಲ್​ ಹೇಗಿದೆ ನೋಡಿ…!

ಕೋಟಿಗೊಬ್ಬ 2 ಚಿತ್ರದಲ್ಲಿ ಲೋಕಲ್‍ ಆಗಿ ಆಡುವ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಕಥೆಯಲ್ಲಿ ಇಂಟರ್​​​ನ್ಯಾ ಶನಲ್ ಖಿಲಾಡಿ ಆಗಿದ್ದಾರೆ. ಕೊರೊನಾದಿಂದಾಗಿ ಒಂದೂವರೆ ವರ್ಷ ತಡವಾಗಿ ಹಲವು ಸವಾಲುಗಳನ್ನು ಎದುರಿಸಿ ಇಂದು ವಿಜಯದಶಮಿಯಂದು ರಿಲೀಸ್ ಆಗಿರುವ ಕೋಟಿಗೊಬ್ಬ 3 ಚಿತ್ರದ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಒಂದೊಳ್ಳೆ ಹಬ್ಬದೂಟ ನೀಡುವುದರಲ್ಲಿ ಸಂಶಯವಿಲ್ಲ.
First published: