ಕೊರೋನಾ ಯಾವ ರೀತಿ ಜನರ ಜೀವ ಹಾಗೂ ಜೀವನದೊಂದಿಗೆ ಆಟವಾಡುತ್ತಿದೆ ಎಂದು ತಿಳಿದೇ ಇದೆ. ಕೊರೋನಾ ಸೋಂಕು ಹರಡುವ ಭೀತಿಯಿಂದ ಆರಂಭವಾದ ಲಾಕ್ಡೌನ್ನಿಂದಾಗಿ ಸಾವಿರಾರು ಮಂದಿ ಕೆಲಸ ಕೆಳದುಕೊಳ್ಳುವುದರೊಂದಿಗೆ ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರಿದೆ. ಸಣ್ಣ ಸಣ್ಣ ಉದ್ಯಮ ನಡೆಸುತ್ತಿದ್ದವರು ತಮ್ಮ ಕಚೇರಿಯ ಬಾಗಿಲು ಮುಚ್ಚಿ ಮನೆಯಲ್ಲಿ ಕೂರುವಂತಾಗಿದೆ. ಕೊರೋನಾ ಕಾಟ ಸಿನಿರಂಗದ ಮೇಲೂ ಕಡಿಮೆಯಾಗಿಲ್ಲ. ಸುಮಾರು 7 ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳು ಈಗ ಬಾಗಿಲು ತೆರೆದಿವೆ. ಆದರೆ ನಿರೀಕ್ಷೆಗೆ ತಕ್ಕಂತೆ ಸಿನಿಪ್ರಿಯರು ಮಾತ್ರ ಸಿನಿಮಾ ನೋಡಲು ಬರುತ್ತಿಲ್ಲ. ಇದರ ಜೊತೆಗೆ ಥಿಯೇಟರ್ನಲ್ಲಿ ಶೇ 50 ಮಂದಿಗೆ ಮಾತ್ರ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿ ಸರ್ಕಾರ ಹೊರಡಿಸುವ ಆದೇಶ ಬೇರೆ. ಇವೆಲ್ಲದರಿಂದ ಚಿತ್ರ ಪ್ರದರ್ಶಕರು ಒಂದು ಕಡೆ ನಷ್ಟದಲ್ಲಿದ್ದರೆ, ಮತ್ತೊಂದು ಕಡೆ ಸಿನಿಮಾ ನಿರ್ಮಾಪಕರು ಬಿಗ್ ಬಜೆಟ್ ಹಾಗೂ ಸ್ಟಾರ್ ನಟರ ಚಿತ್ರಗಳನ್ನು ರಿಲೀಸ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ಜನರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಇದರಿಂದಾಗಿ ಚಿತ್ರಮಂದಿರಗಳ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಈ ಕಾರಣದಿಂದಾಗಿ ಸಿನಿಮಾ ಪ್ರದರ್ಶಕರು ಹೊಸ ಮಾದರಿ ಲಾಭ ಹಂಚಿಕೆಗೆ ಒತ್ತಾಯಿಸುತ್ತಿದ್ದಾರೆ. ಈ ಕುರಿತಾಗಿ ಚಿತ್ರ ಪ್ರದರ್ಶಕರು ಹಾಗೂ ಸಿನಿಮಾ ನಿರ್ಮಾಪಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ.
![After 7 months theaters reopened and not getting good response from movie lovers, Theatre Reopening Guidelines: In Kannada Film Industry Only Half of the theater will open from Friday,]()
ಸಾಂದರ್ಭಿಕ ಚಿತ್ರ
ಮಲ್ಟಿಪ್ಲೆಕ್ಸ್ಗಳಿಗೆ ನೀಡುವ ಲಾಭದ ಹಂಚಿಕೆಯಂತೆಯೇ ತಮಗೂ ನೀಡಬೇಕೆಂದು ಚಿತ್ರ ಪ್ರದರ್ಶಕರು ನಿರ್ಮಾಪಕರ ಮೇಲೆ ಒತ್ತರ ಹೇರುತ್ತಿದ್ದಾರೆ. ಆದರೆ ಚಿತ್ರಮಂದಿರಗಳ ಮಾಲೀಕರ ಒತ್ತಾಯವನ್ನು ನಿರ್ಮಾಪಕರು ಒಪ್ಪುತ್ತಿಲ್ಲವಂತೆ. ಇದರಿಂದಾಗಿ ಬಿಗ್ ಬಜೆಟ್ ಸಿನಿಮಾಗಳು ಇನ್ನು ನೇರವಾಗಿ ಒಟಿಟಿ ಮೂಲಕ ರಿಲೀಸ್ ಆದರೂ ಆಶ್ಚರ್ಯ ಪಡಬೇಕಿಲ್ಲ.
ಇದನ್ನೂ ಓದಿ: Puneeth Rajkumar: ಗೋಕರ್ಣದಲ್ಲಿ ಪುನೀತ್ ರಾಜ್ಕುಮಾರ್: ಕಡಲ ತೀರದಲ್ಲಿ ಸುತ್ತಾಡಿದ ಅಪ್ಪು..!
ಈ ಕುರಿತಂತೆ ಹೊಂಬಾಳೆ ಫಿಲಂಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ. ಎಲ್ಲ ಸರಿ ಹೋದರೆ, ಮುಂದಿನ ವಾರ ಹೊಸ ಸಿನಿಮಾಗಳ ಒಟಿಟಿ ರಿಲೀಸ್ ಬಗ್ಗೆ ಪ್ರಕಟಿಸಲಿದ್ದೇವೆ ಎಂದಿದ್ದಾರೆ.
ಚಿತ್ರ ಮಂದಿರಗಳ ಮಾಲೀಕರು ಹಾಗೂ ನಿರ್ಮಾಪಕರು ನಿನ್ನೆ ಸಭೆ ನಡೆಸಿದ್ದು, ಹೊಸ ಬೇಡಿಕೆ ವಿಚಾರವಾಗಿ ಚರ್ಚಿಸಿದ್ದಾರೆ. ಸಭೆಯಲ್ಲಿ ಕೆಜಿಎಫ್, ಯುವರತ್ನ ನಿರ್ಮಾಪಕರಾದ ವಿಜಯ್ ಕಿರಗಂದೂರ್, ಹೊಂಬಾಳೆ ಫಿಲಂಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಸಲಗ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕೋಟಿಗೊಬ್ಬ 3 ಚಿತ್ರದ ಸೂರಪ್ಪ ಬಾಬು, ರಾಬರ್ಟ್ ಚಿತ್ರದ ಉಮಾಪತಿ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.
ಸದ್ಯಕ್ಕೆ ಪುನೀತ್ ಅಭಿನಯದ ಯುವರತ್ನ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಲಾಗಿದೆ. ಉಳಿದಂತೆ ರಾಬರ್ಟ್, ಕೋಟಿಗೊಬ್ಬ 3, ಸಲಗ, ಕೆಜಿಎಫ್ ಚಾಪ್ಟರ್ 2, ಭಜರಂಗಿ 2, ಪೊಗರು ಸೇರಿದಂತೆ ಹಲವಾರು ಬಿಗ್ ಬಜೆಟ್ ಚಿತ್ರಗಳು ತೆರೆ ಕಾಣಲು ತುದಿಗಾಲಿನಲ್ಲಿವೆ. ಇವುಗಳಲ್ಲಿ ಯಾವ ಚಿತ್ರಗಳು ಒಟಿಟಿ ಮೂಲಕ ರಿಲೀಸ್ ಆಗಲಿವೆ ಎಂದು ಸದ್ಯದಲ್ಲೇ ಬಹಿರಂಗವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ