ವಿಧಾನಸಭೆ ಚುನಾವಣೆ (Assembly Election) ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷಗಳು ಭಾರೀ ಪ್ರಚಾರದಲ್ಲಿ ತೊಡಗಿಕೊಂಡಿದೆ. ರಾಜಕೀಯ ನಾಯಕರು (Political Leaders) ಜನರ ಮತ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಕಾಂತಾರ ಸಿನಿಮಾ ದೃಶ್ಯವನ್ನು ಇಟ್ಟುಕೊಂಡು ಚುನಾವಣೆ ಕುರಿತು ಜಾಗೃತಿ ಮೂಡಿಸುವಂತಹ ಒಂದು ಪ್ರಯತ್ನ ನಡೆದಿದೆ. ಪ್ರಜಾಕೀಯ ಪಕ್ಷದ ನಾಯಕರು ಚುನಾವಣೆ ಜಾಗೃತಿ (Election Awareness) ಮೂಡಿಸಲು ಕಾಂತಾರ ಸಿನಿಮಾದ (Kantara Movie) ದೈವದ ದೃಶ್ಯವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಜಾಗೃತಿ ಮೂಡಿಸಲು ಬಂದ ಕಾಂತಾರ ದೈವ
ರಾಜ್ಯದಲ್ಲಿ ಕಾಂತಾರ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ರಾಜಕೀಯ ನಾಯಕರು ಕೂಡ ಸಿನಿಮಾವನ್ನು ನೋಡಿ ಕೊಂಡಾಡಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದು, ಇಲ್ಲೂ ಕೂಡ ಕಾಂತಾರ ಸಿನಿಮಾದ ದೃಶ್ಯವೇ ಹೈಲೈಟ್ ಆಗಿದೆ. ಪ್ರಜಾಕೀಯ ಪಕ್ಷದ ನಾಯಕರು ಜನರಲ್ಲಿ ಚುನಾವಣಾ ಜಾಗೃತಿ ಮೂಡಿಸಲು ದೃಶ್ಯವನ್ನು ಎಡಿಟ್ ಮಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾಂತಾರ ಸಿನಿಮಾದಲ್ಲಿ ಬರುವ ಭೂತಕೋಲದ ದೃಶ್ಯ ಪ್ರೇಕ್ಷಕರ ಮನಗೆದ್ದಿತ್ತು. ಇದರಲ್ಲಿ ರಿಷಬ್ ಶೆಟ್ಟಿ ಅವರು ದೈವ ನರ್ತಕನ ಪಾತ್ರ ಮಾಡಿ ಭಾರೀ ಮೆಚ್ಚುಗೆ ಗಳಿಸಿದ್ರು. ಕಾಂತಾ ಸಿನಿಮಾದಲ್ಲಿ ತನ್ನ ಭೂಮಿಯನ್ನು ಊರಿನ ಜನರಿಂದ ಹಿಂದಿರುಗಿಸಿಕೊಡಿ ಎಂದು ದೈವದ ಬಳಿ ಸಾಹುಕಾರನ ಮಗ ಬೇಡಿಕೆ ಇಡುವ ದೃಶ್ಯ ಈ ಸಿನಿಮಾದಲ್ಲಿದೆ. ಆ ಬೇಡಿಕೆಗೆ ದೈವ ಒಪ್ಪದೇ ಇದ್ದಾಗ ತಾನು ಕೋರ್ಟಿಗೆ ಹೋಗುವುದಾಗಿ ಆತ ತಿಳಿಸುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ದೈವವು, ‘ಕೋರ್ಟಿಗೆ ಹೋಗ್ತಿ.. ಆದರೆ ನಿನ್ನ ತೀರ್ಮಾನ ಮೆಟ್ಟಿಲ ಮೇಲೆ ನಾನು ಮಾಡ್ತೀನಿ’ ಎಂದು ಹೇಳುತ್ತದೆ. ಇದೇ ದೃಶ್ಯವನ್ನು ಈಗ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಎಡಿಟ್ ಮಾಡಿದ ವಿಡಿಯೋದಲ್ಲಿ ಏನಿದೆ?
ಹಣ, ಸೀರೆ, ಸಾರಾಯಿ ಹಂಚಿ ಮತ ಕೇಳುವುದು ಸರಿಯಲ್ಲ ಎಂಬ ಸಂದೇಶವನ್ನು ಈ ವಿಡಿಯೋದಲ್ಲಿ ದೈವದ ಮೂಲಕ ಹೇಳಿಸಲಾಗಿದೆ. ‘ಸೀರೆ, ಸಾರಾಯಿ, ಹಣವನ್ನು ಈ ಜನರಿಗೆ ಹಂಚುತ್ತೇನೆ. ಅವರ ಮತವನ್ನು ನನಗೆ ಹಾಕಿಸಿಕೊಡಬೇಕು’ ಎಂದು ದೈವದ ಬಳಿ ರಾಜಕೀಯ ನಾಯಕ ಬೇಡಿಕೆ ಇಡುತ್ತಾನೆ.
ಅದಕ್ಕೆ ಉತ್ತರಿಸುವ ದೈವ ‘ಬಹಳ ಒಳ್ಳೆಯ ಪ್ರಾರ್ಥನೆ.. ಈ ಊರಿನವರ ಮತವನ್ನು ನಿಮಗೆ ಹಾಕಿಸಿಕೊಡುತ್ತೇನೆ. ಆದರೆ ಇಲ್ಲಿಯವರೆಗೆ ಇವರು ಕಟ್ಟಿದ ತೆರಿಗೆ ಹಣವನ್ನು ಹಿಂದಿರುಗಿಸಿಕೊಡಬಹುದಾ ರಾಜಕೀಯ ನಾಯಕರೇ?’ ಎಂದು ದೈವ ಮರುಪ್ರಶ್ನೆ ಕೇಳುತ್ತದೆ.
ಇದನ್ನೂ ಓದಿ: Urvashi Rautela-Rishab Shetty: ರಿಷಬ್ ಜೊತೆ ಊರ್ವಶಿ ರೌಟೇಲಾ! ಕಾಂತಾರ 2 ಲೋಡಿಂಗ್ ಎಂದ ಬಾಲಿವುಡ್ ಬೆಡಗಿ
ದೈವ ಹೇಳಿದ್ದಕ್ಕೆ ಆತ ಒಪ್ಪುವುದಿಲ್ಲ. ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತೇನೆ ಎಂದು ಅವನು ಹೇಳುತ್ತಾನೆ. ಅದಕ್ಕೆ ಉತ್ತರಿಸುವ ದೈವ, ‘ಸೀರೆ, ಸಾರಾಯಿ ಹಂಚ್ತಿ.. ಆದ್ರೆ ಇದರ ತೀರ್ಮಾನವನ್ನು ಮತಗಟ್ಟಲೆಯಲ್ಲಿ ನಾನು ಮಾಡುತ್ತೇನೆ. ಈ ತೆರಿಗೆ ಹಣ ಊರಿನವರದ್ದು. ಅದರ ತೀರ್ಮಾನ ಇವತ್ತಲ್ಲ. ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತದೆ’ ಎಂದು ದೈವ ನುಡಿದಂತೆ ವಿಡಿಯೋವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇನ್ನು ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಹರಿದಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ