prathima devi: ಕನ್ನಡದ ಖ್ಯಾತ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ...

88ನೇ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿದ್ದ ಪ್ರತಿಮಾ ದೇವಿ ಅವರು ತಮ್ಮ ಮೊಮ್ಮಕ್ಕಳ 'ಯಾನ' ಸಿನಿಮಾದಲ್ಲಿ ಕಡೆಯದಾಗಿ ಬಣ್ಣ ಹಚ್ಚಿದ್ದರು

ಪ್ರತಿಮಾ ದೇವಿ

ಪ್ರತಿಮಾ ದೇವಿ

 • Share this:
  ಕನ್ನಡದ ಹೆಸರಾಂತ ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ. 88 ವರ್ಷದ ಪ್ರತಿಮಾ ದೇವಿ ವಯೋಸಹಜ ಸಾವನ್ನಪ್ಪಿದ್ದಾರೆ ಎಂದು ಅವರ ಮಗ, ಖ್ಯಾತ ನಿರ್ದೇಶ ಎಸ್​ ವಿ ರಾಜೇಂದ್ರ ಸಿಂಗ್​ ಬಾಬು ತಿಳಿಸಿದ್ದಾರೆ. ಮೈಸೂರಿನ ಸರಸ್ವತಿಪುರಂನ  ನಿವಾಸದಲ್ಲಿ ನಾಳೆ  ಮಧ್ಯಾಹ್ನದವರೆಗೂ ಮೃತ ದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ವಿದ್ಯುತ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. ಕನ್ನಡ ಅಪ್ರತಿಮಾ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು, 1932ರಲ್ಲಿ ಜನಿಸಿದ್ದರು. ಸುಮಾರು 60ಕ್ಕೂ ಹೆಚ್ಚು ಚಲನಚಿತ್ರದಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಮೊದಲ ಬಾರಿಗೆ 100 ದಿನಗಳ ಯಶಸ್ವಿ ಪ್ರದರ್ಶನ ಪಡೆದ  'ಜಗನ್ಮೋಹಿನಿ' ಸಿನಿಮಾದ ನಾಯಕಿ ಇವರಾಗಿದ್ದರು.

  40 ದಶಕಗಳ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದವರು ನಟಿ ಪ್ರತಿಮಾ ದೇವಿ. 'ಜಗನ್ಮೋಹಿನಿ', 'ದಲ್ಲಾಳಿ', 'ಕೃಷ್ಣ ಲೀಲಾ', 'ನಾಗಕನ್ಯೆ', 'ಶಿವ ಪಾರ್ವತಿ', 'ಶ್ರೀ ಶ್ರೀನಿವಾಸ ಕಲ್ಯಾಣ'ದಂತಹ ಹಲವು ಜನಪ್ರಿಯ ಪಾತ್ರಗಳ ಮೂಲಕ ಇಂದಿಗೂ ಅಭಿಮಾನಿಗಳ ಮನದಲ್ಲಿ ಅಚ್ಚೋತ್ತಿದ್ದಾರೆ. 'ಪ್ರಭುಲಿಂಗ ಲೀಲೆ', 'ಮಂಗಳ ಸೂತ್ರ', 'ಧರಣಿ ಮಂಡಲ ಮಧ್ಯದೊಳಗೆ', 'ರಾಮಾ ಶಾಮಾ ಭಾಮಾ' ಮುಂತಾದ ಸುಮಾರು ಅರವತ್ತೈದು ಚಿತ್ರಗಳಲ್ಲಿ ಪ್ರತಿಮಾದೇವಿಯವರು ನಟಿಸಿದ್ದಾರೆ.

  ನಿರ್ಮಾಪಕ, ನಿರ್ದೇಶಕ ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರನ್ನು ವಿವಾಹವಾದ ಇವರ ಕುಟುಂಬ ಕಲಾ ಸೇವೆಗೆ ಜೀವನ ಮುಡುಪಾಗಿರಿಸಿದೆ. ಪ್ರತಿಮಾ ದೇವಿ  ಅವರ ಮಗ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು, ಮಗಳು ನಟಿ ವಿಜಯಲಕ್ಷ್ಮಿ ಸಿಂಗ್​. 88ನೇ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಾಗಿದ್ದ ಪ್ರತಿಮಾ ದೇವಿ ಅವರು ತಮ್ಮ ಮೊಮ್ಮಕ್ಕಳ 'ಯಾನ' ಸಿನಿಮಾದಲ್ಲಿ ಕಡೆಯದಾಗಿ ಬಣ್ಣ ಹಚ್ಚಿದ್ದರು
  Published by:Seema R
  First published: