Serial Shooting: ಮತ್ತೆ ಬೆಂಗಳೂರಿನಲ್ಲೇ ಆರಂಭವಾಗಲಿದೆ ಧಾರಾವಾಹಿಗಳ ಚಿತ್ರೀಕರಣ..!

ಇನ್ನೇನು ಲಾಕ್​ಡೌನ್​ ತೆರವುಗೊಳಿಸುವ ಸಮಯ ಹತ್ತಿರ ಬರುತ್ತಿದೆ. ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರೆಯುತ್ತಾ ಅಥವಾ ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ಧಾರಾವಾಹಿಗಳ ತಂಡಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಕನ್ನಡತಿ ಧಾರಾವಾಹಿಯ ಕಲಾವಿದರು (ಸಾಂದರ್ಭಿಕ ಚಿತ್ರ)

ಕನ್ನಡತಿ ಧಾರಾವಾಹಿಯ ಕಲಾವಿದರು (ಸಾಂದರ್ಭಿಕ ಚಿತ್ರ)

  • Share this:
ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದ ರಾಜ್ಯದಲ್ಲಿ ಲಾಕ್​ಡೌನ್​ ಜಾರಿಗೆ ತರಲಾಗಿದೆ. ಲಾಕ್​ಡೌನ್​ ಆದಾಗಿನಿಂದ ಸಿನಿಮಾ ಹಾಗೂ ಧಾರಾವಾಹಿ ಚಿತ್ರೀಕರಣಕ್ಕೆ ನಿಷೇಧ ಹೇರಲಾಗಿತ್ತು. ಕಳೆದ ಬಾರಿ ಸಲ ಲಾಕ್​ಡೌನ್​ ಆಗಿದ್ದಾಗ ಧಾರಾವಾಹಿಗಳ ರಿಪೀಟ್​ ಟೆಲಿಕಾಸ್ಟ್ ಮಾಡಲಾಗಿತ್ತು. ಆದ್ರೆ ಕಳೆದ ಬಾರಿ ಕೋವಿಡ್ ಮೊದಲನೇ ಅಲೆಯಲ್ಲಿ ಭಾರೀ ಏಟು ತಿಂದಿದ್ದ ಟಿವಿ ಸೀರಿಯಲ್ ದುನಿಯಾ, ಈ ಸಲ ಬೇರೆಯದ್ದೇ ನಿರ್ಧಾರಕ್ಕೆ ಬಂತು. ಪಕ್ಕದ ರಾಜ್ಯದಲ್ಲಿ ನಿಯಮಗಳು ಸಡಿಲವಾಗಿದ್ದು, ಅಲ್ಲಿ ಧಾರಾವಾಹಿಯ ಚಿತ್ರೀಕರಣ ಮಾಡಲು ನಿರ್ಧರಿಸಿದರು. ಕನ್ನಡದ ಪ್ರಮುಖ ಮನರಂಜನಾ ವಾಹಿನಗಳ ಮುಖ್ಯಸ್ಥರು ಸಭೆ ನಡೆಸಿ, ಈ  ಬಗ್ಗೆ ಚರ್ಚಿಸಿದ್ದರು. ಧಾರಾವಾಹಿಗಳ ಚಿತ್ರೀಕರಣವನ್ನು ಹೈದರಾಬಾದ್​ನಲ್ಲಿ ನಡೆಸಲು ನಿರ್ಧರಿಸಿದರು. ಅವರ ಈ ನಿರ್ಧಾರದಿಂದಾಗಿಯೇ ಇಲ್ಲಿಯವರೆಗೆ ಧಾರಾವಾಹಿಗಳು ಎಂದಿನಂತೆ ಮುಂದುವರೆಯುತ್ತಿವೆ. 

ಕಲರ್ಸ್ ಕನ್ನಡ ಚಾನೆಲ್​ನ ಕನ್ನಡತಿ, ಗಿಣಿರಾಮ್ ಮತ್ತು ಮಂಗಳ ಗೌರಿ ಮದುವೆ ಸೇರಿದಂತೆ ಇತರೆ ಧಾರಾವಾಹಿಗಳ ತಂಡಗಳು  ಹೈದರಾಬಾದಿನಲ್ಲಿರುವ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಚಿತ್ರೀಕರಣ ನಡೆಸುತ್ತಿವೆ. ಇನ್ನು ರಾಮೋಜಿ ಫಿಲ್ಮ್​ ಸಿಟಿಯಲ್ಲಿರುವ ಕಿರುತೆರೆಯ ನಟ-ನಟಿಯರು ಸಾಕಷ್ಟು ವಿಡಿಯೋಗಳು ಹಾಗೂ ಫೋಟೋಶೂಟ್​ ಮಾಡಿಸುತ್ತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಬೇರೆ ರಾಜ್ಯಕ್ಕೆ ಹೋಗಿ ಚಿತ್ರೀಕರಣ ನಡೆಸುವುದು ಎಂದರೆ ಸುಲಭದ ಮಾತಲ್ಲ. ಬಜೆಟ್​ ಸೇರಿದಂತೆ ಎಲ್ಲ ರೀತಿಯಲ್ಲೂ ಅದು ದುಬಾರಿಯಾಗುತ್ತದೆ. ಆದರೂ ಧಾರಾವಾಹಿಗಳ ತಂಡಗಳು ಎಲ್ಲನ್ನೂ ಭರಿಸುತ್ತಿವೆ. ಹೀಗಿರುವಾಗಲೇ ಈ ತಂಡಗಳಿಗೆ ಸಿಕ್ಕಿದೆ ಸಿಹಿ ಸುದ್ದಿ.

ಇದನ್ನೂ ಓದಿ: Actor Abbas: ಮುಸ್ತಫಾ ಮುಸ್ತಫಾ... ಎಂದು ಹೆಜ್ಜೆ ಹಾಕಿದ್ದ ನಟ ಅಬ್ಬಾಸ್​ ಈಗ ಎಲ್ಲಿ-ಹೇಗಿದ್ದಾರೆ ಗೊತ್ತಾ..?

ಹೌದು, ಇನ್ನೇನು ಲಾಕ್​ಡೌನ್​ ತೆರವುಗೊಳಿಸುವ ಸಮಯ ಹತ್ತಿರ ಬರುತ್ತಿದೆ. ರಾಜ್ಯದಲ್ಲಿ ಲಾಕ್​ಡೌನ್​ ಮುಂದುವರೆಯುತ್ತಾ ಅಥವಾ ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಸದ್ಯಕ್ಕೆ ಮಾಹಿತಿಯೊಂದು ಲಭ್ಯವಾಗಿದ್ದು, ಹಂತ ಹಂತವಾಗಿ ಲಾಕ್​ಡೌನ್​ ತೆರೆವುಗೊಳಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ ಎನ್ನಲಾಗುತ್ತಿದೆ. ಇದರ ಭಾಗವಾಗಿಯೇ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ. ಅದೂ ಕೇವಲ ಸ್ಟುಡಿಯೋಗಳಲ್ಲಿ ಮಾತ್ರ ಶೂಟಿಂಗ್​ ಮಾಡಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗವಿದೆ. ಕಳೆದ ಬಾರಿ ಅನಿವಾರ್ಯವಾಗಿ ಧಾರಾವಾಹಿಗಳ ಶೂಟಿಂಗ್ ದೀರ್ಘಕಾಲದವರಗೆ ನಿಂತು ಅದರಿಂದ ತಯಾರಕರು ಸಾಕಷ್ಟು ನಷ್ಟ ಅನುಭವಿಸಿದ್ದರು. ವೀಕ್ಷಕರು ಕೂಡಾ ನೆಚ್ಚಿನ ಸೀರಿಯಲ್ ಕತೆ ಏನಾಯ್ತು ಅನ್ನೋ ಕುತೂಹಲಕ್ಕೆ ಯಾವುದೇ ಉತ್ತರ ಸಿಗದೆ ಬೇಸರಿಸಿಕೊಂಡೇ ಸುಮ್ಮನಾಗಿದ್ದರು. ಆದರೆ ಈ ಬಾರಿ ಅಂಥಾ ದೊಡ್ಡ ಹೊಡೆತಗಳು ಬಾರದಂತೆ ತಡೆಯಲು ಚಾನೆಲ್​​ಗಳು ಹೈದರಾಬಾದಿನಲ್ಲಿವೆ.

ಇದನ್ನೂ ಓದಿ: Prema: ಪ್ರೇಮಾರ ಎರಡನೇ ಮದುವೆ ಸುದ್ದಿ: ಸ್ಪಷ್ಟನೆ ಕೊಟ್ಟ ನಟಿ..!

ಮೊದಲಿಗೆ 15 ದಿನಗಳ ಶೆಡ್ಯೂಲ್ ಪ್ಲಾನ್ ಮಾಡಿಕೊಂಡು ಧಾರಾವಾಹಿ ತಂಡಗಳು ಹೈದರಾಬಾದಿಗೆ ಹೋಗಿವೆ. 15 ದಿನಗಳ ಶೂಟಿಂಗ್​​ ಮಾಡಿದ್ರೆ ಕನಿಷ್ಟ 1 ತಿಂಗಳಿಗಾಗುಷ್ಟು ಎಪಿಸೋಡ್​ಗಳು ರೆಡಿಯಾಗುತ್ತವೆ. ಧಾರಾವಾಹಿಯ ಕತೆ ಮತ್ತು ಚಿತ್ರಕತೆಗಳನ್ನು ಇದಕ್ಕೆ ತಕ್ಕಂತೆ ಬದಲಿಸಿಕೊಳ್ಳಲಾಗಿದೆ. ತಂಡದ ಯಾರಿಗೆ ಸೋಂಕು ತಗುಲಿದೆ, ಯಾವ ಪಾತ್ರಧಾರಿಯ ಆರೋಗ್ಯ ಹೇಗಿದೆ ಎನ್ನುವುದರ ಆಧಾರದ ಮೇಲೆ ಕತೆ ಹೆಣೆಯಲಾಗುತ್ತಿದೆ.
ಅತ್ಯಂತ ಅಗತ್ಯವೆನಿಸುವ ಕೆಲವೇ ಕೆಲವು ಜನರನ್ನೊಳಗೊಂಡ ತಂಡಗಳು ಸದ್ಯ ಹೈದರಾಬಾದಿನಲ್ಲಿವೆ.

ನ್ಯೂಸ್18 ಕನ್ನಡ ಕಳಕಳಿ:

ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: