Old Monk: ವಿದೇಶದಲ್ಲೂ `ಓಲ್ಡ್​ ಮಾಂಕ್​’ನದ್ದೇ ಸದ್ದು! ಆದ್ರೆ, ಕನ್ನಡ ಸಿನಿಮಾಗೆ ಇಲ್ಲೇ ಪ್ರಾಬ್ಲಂ

‘ಓಲ್ಡ್ ಮಾಂಕ್​ ಚಿತ್ರ ಬಿಡುಗಡೆಯಾಗಿ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌ ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದೇವೆ.‌ ಅಷ್ಟೇ ಅಲ್ಲದೇ ಕೆನಡಾ, ಯುಎಸ್ ಹಾಗೂ ಆಸ್ಟ್ರೇಲಿಯಾದಲ್ಲೂ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ಶ್ರೀನಿ ತಿಳಿಸಿದ್ದಾರೆ.

ಶ್ರೀನಿ, ಅದಿತಿ ಪ್ರಭುದೇವ, ಸುಜಯ್​

ಶ್ರೀನಿ, ಅದಿತಿ ಪ್ರಭುದೇವ, ಸುಜಯ್​

  • Share this:
ಹಾಸ್ಯ ಮತ್ತು ಪ್ರಣಯ ಎರಡನ್ನೂ ಸುಂದರವಾಗಿ ಕಟ್ಟಿಕೊಟ್ಟಿರುವ ಸಿನಿಮಾ 'ಓಲ್ಡ್ ಮಾಂಕ್' (Old Monk). ಈ ಸಿನಿಮಾ (Film) ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮವಾಗಿದ್ದು, ಪ್ರೇಕ್ಷಕರ ಮನಸ್ಸನನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಂ ಜಿ ಶ್ರೀನಿವಾಸ್ (M.G. Srinivas) ಅವರ ನಿರ್ದೇಶನದ ಸಿನಿಮಾವೆಂದರೆ, ವಿಭಿನ್ನವಾದ ಏನನ್ನಾದರೂ ನಿರೀಕ್ಷಿಸಬಹುದು ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಗುಣಮಟ್ಟದ ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆ ಅವರದ್ದು. ಶ್ರೀನಿ ನಿರ್ದೇಶಿಸಿ, ನಟಿಸಿರುವ ‘ಓಲ್ಡ್ ಮಾಂಕ್’ ಚಿತ್ರ ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ‘ಎಲ್ಲರೂ ಸಕ್ಸಸ್ ಮೀಟ್ ಅಂತ ಮಾಡುತ್ತಾರೆ. ಆದರೆ ನಾವು ಚಿತ್ರ ಸಕ್ಸಸ್ ‌ಆಗಲಿ ಅಂತ ಪತ್ರಿಕಾಗೋಷ್ಠಿ ಆಯೋಜಿಸಿದ್ದೇವೆ’ ಎಂದು ನಿರ್ದೇಶಕ ಹೇಳಿದ್ದಾರೆ.

ವಿದೇಶದಲ್ಲೂ ಸದ್ದು ಮಾಡಲಿದೆ ‘ಓಲ್ಡ್​ ಮಾಂಕ್​’

‘ಓಲ್ಡ್ ಮಾಂಕ್​ ಚಿತ್ರ ಬಿಡುಗಡೆಯಾಗಿ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌ ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದೇವೆ.‌ ಅಷ್ಟೇ ಅಲ್ಲದೇ ಕೆನಡಾ, ಯುಎಸ್ ಹಾಗೂ ಆಸ್ಟ್ರೇಲಿಯಾದಲ್ಲೂ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ.
ಪರಭಾಷಾ ಚಿತ್ರಗಳನ್ನು ಆಮೇಲೆ ನೋಡಿ.‌ ಮೊದಲು ಕನ್ನಡ ಚಿತ್ರ ನೋಡಿ. ಈ ಚಿತ್ರ ನೋಡಿರುವವರನ್ನು ಒಮ್ಮೆ ಕೇಳಿ. ಅವರು ಚೆನ್ನಾಗಿದೆ ಅಂದರೆ ಮಾತ್ರ ಹೋಗಿಬನ್ನಿ ಎಂದು ಶ್ರೀನಿ ಕನ್ನಡ ಸಿನಿಪ್ರೇಕ್ಷಕರಲ್ಲಿ ಮನವಿ ಮಾಡಿದರು.

ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ ಎಂದ ಆದಿತಿ!

ಶ್ರೀನಿ ಮಾತಿಗೆ ಜೊತೆಗೂಡಿಸಿದ ನಾಯಕಿ ಅದಿತಿ ಪ್ರಭುದೇವ ಸಹ ಉತ್ತಮ ಕನ್ನಡ ಚಿತ್ರವನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು. ಚಿತ್ರದಲ್ಲಿ ಉತ್ತಮ ಪಾತ್ರ ದೊರಕಿದ್ದಕ್ಕೆ ಸಂತಸ ಪಟ್ಟರು. ನನ್ನ ಪಾತ್ರಕ್ಕೆ ಸಿಕ್ಕಿರುವ ಮನ್ನಣೆಗೆ ನಾನು ಆಭಾರಿ.‌ ಅವಕಾಶ ಕೊಟ್ಟ ಶ್ರೀನಿ ಅವರಿಗೆ ಧನ್ಯವಾದ. ಒಳ್ಳೆಯ ಚಿತ್ರ ಎಂದು ನೋಡಿದವರು ಹೇಳುತ್ತಿದ್ದಾರೆ. ಇನ್ನಷ್ಟು ಜನ ನಮ್ಮ ಚಿತ್ರ ನೋಡಿ ಗೆಲ್ಲಿಸಿ ಎಂದರು ಸುಜಯ್ ಶಾಸ್ತ್ರಿ.ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ವಿತರಕರಾದ ಅಭಿಜಿತ್ ಎಂಟರ್ ಪ್ರೈಸಸ್ ಅವರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಸಿನಿಮಾ ಚೆನ್ನಾಗಿದ್ರೂ ಸಿಕ್ತಿಲ್ಲ ಥಿಯೇಟರ್​​.. `ಓಲ್ಡ್ ಮಾಂಕ್‘ಗೆ ಪರಭಾಷೆ ಚಿತ್ರಗಳಿಂದ ಸಮಸ್ಯೆ!

ಟ್ವಿಟ್ಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ ಶ್ರೀನಿ!

‘ನನಗೆ ನಿಜವಾಗಲೂ ಬೇಜಾರಾಗೋದು, ಬೇರೆ ಭಾಷೆ ಸಿನಿಮಾ ರಿಲೀಸ್ ಆಗ್ತಿದೆ ಅನ್ನೋದಲ್ಲ. ಆದ್ರೆ ಬೇರೆ ಭಾಷೆ ಸಿನಿಮಾಗಳಿಗೆ ಸಿಗೋ ಹೆಚ್ಚಿನ ಸಂಖ್ಯೆಯ ಶೋಗಳು, ಥಿಯೇಟರ್‌ಗಳು ನಮಗೆ ಸಿಗಲ್ಲ. ಅದಕ್ಕೆ ತಕ್ಕಂತೆ ಸಾಕಷ್ಟು ಜನರು ಬೇರೆ ಭಾಷೆ ಸಿನಿಮಾ ನೋಡುವುದಕ್ಕೆ ಮೊದಲು ಪ್ರಾಮುಖ್ಯತೆ ಕೊಡುತ್ತಾರೆ. ತುಂಬಾ ಜನ ಕನ್ನಡ ಸಿನಿಮಾ ಒಂದು ಚೆನ್ನಾಗಿದೆ ಅಂತ ಹೇಳಿದ ಮೇಲೆ ನಮ್ಮ ಕನ್ನಡ ಸಿನಿಮಾ ನೋಡ್ತಾರೆ. ಆದ್ರೆ ಅಷ್ಟರಲ್ಲಿ ಶೋಗಳು ಕಡಿಮೆ ಆಗುತ್ತೆ. ಚಿತ್ರಮಂದಿರಗಳಿಂದ ಚಿತ್ರ ಎತ್ತಂಗಡಿ ಆಗುತ್ತೆ. ಎಲ್ಲರಲ್ಲೂ ಒಂದು ಮನವಿ ಏನ್ ಅಂದರೆ, ನಾವು ಕೂಡ ಒಳ್ಳೆ ಸಿನಿಮಾ ಮಾಡುವ ಎಲ್ಲಾ ಕೆಪಾಸಿಟಿ ಇದೆ. ಮೊದಲ ಪ್ರಾಮುಖ್ಯತೆ ದಯಮಾಡಿ ಕನ್ನಡ ಸಿನಿಮಾಗಳನ್ನು ನೋಡಿ’ ಎಂದು ಶ್ರೀನಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಓಲ್ಡ್​ ಮಾಂಕ್​ ಬಾಟೆಲ್​ನಲ್ಲಿ ಸಿಕ್ಕಾಪಟ್ಟೆ ಎಂಟರ್​ಟೈನ್​ಮೆಂಟ್​.. ಸಿನಿಮಾ ನೋಡ್ತಿದ್ರೆ ಏರುತ್ತೆ ಕಾಮಿಡಿ ಕಿಕ್ಕು!

ಈ ವಾರ ಆದ್ರೂ ಸಿನಿಮಾ ನೋಡಿ ಎಂದ ಶ್ರೀನಿ!

‘ಚಿತ್ರ ಮೊದಲ ವಾರದಲ್ಲೇ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅದೇ ಟೈಮ್‌ನಲ್ಲಿ ಬೇರೆ ಭಾಷೆ ಸಿನಿಮಾಗಳನ್ನ ನೋಡಿದವರಿಗೆ ಮನವಿ. ಕಡೆಪಕ್ಷ ಈವಾರ ಆದ್ರೂ ನಮ್ಮ ಸಿನಿಮಾ ನೋಡಿ, ಇನ್ನು ಹೆಚ್ಚು ಥೀಯೇಟರ್‌ಗಳಲ್ಲಿ ಒಂದು ಒಳ್ಳೆ ಕನ್ನಡ ಚಿತ್ರ ಗೆಲ್ಲಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದ್ದಾರೆ.
Published by:Vasudeva M
First published: