GGVV Movie Review: ಮಂಗಳಾದೇವಿ ಅಂಗಳದಲ್ಲಿ ರಕ್ತಸಿಕ್ತ ಚರಿತ್ರೆ, `ರಾ’ಕ್ಷಸನ ರೂಪ ತಾಳಿದ ರಾಜ್​ ಬಿ ಶೆಟ್ಟಿ!

GGVV Movie Review: ಮಂಗಳೂರಿನ ಮಂಗಳಾದೇವಿ ಏರಿಯಾದಲ್ಲಿ ಹರಿ (ರಿಷಬ್‌) ಮತ್ತು ಶಿವ (ರಾಜ್‌) ಬಾಲ್ಯ ಸ್ನೇಹಿತರು. ಹರಿ ಸಾಧು ಸ್ವಭಾವದ ವ್ಯಕ್ತಿ, ಶಿವ ಹಾಗಲ್ಲ ರಫ್​ & ಟಫ್​. ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ. ಹರಿಗೆ ಯಾರದರೂ ತೊಂದರೆ ಕೊಟ್ಟರೆ ಶಿವ ಸುಮ್ಮನೆ ಬಿಡುವುದಿಲ್ಲ.

ಗರುಡ ಗಮನ ವೃಷಭ ವಾಹನ ಸಿನಿಮಾದ ಚಿತ್ರ

ಗರುಡ ಗಮನ ವೃಷಭ ವಾಹನ ಸಿನಿಮಾದ ಚಿತ್ರ

  • Share this:
Garuda Gamana Vrishabha Vahana Review: ‘ಒಂದು ಮೊಟ್ಟೆಯ ಕಥೆ’ ಸಿನಿಮಾ(Movie) ಮೂಲಕ ಕನ್ನಡ ಚಿತ್ರರಂಗಕ್ಕೆ ನಟ, ನಿರ್ದೇಶಕ ರಾಜ್​ ಬಿ ಶೆಟ್ಟಿ(Raj B Shetty) ಎಂಟ್ರಿಯಾಗಿದ್ದರು. ಮೊದಲ ಸಿನಿಮಾದಲ್ಲೇ ಇಡೀ ಚಿತ್ರರಂಗ ಅವರತ್ತ ನೋಡುವಂತೆ ಮಾಡಿತ್ತು. ಸೈಲೆಂಟ್​ ಆಗಿಯೇ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಮತ್ತೆ ರಾಜ್​ ಬಿ ಶೆಟ್ಟಿ ತಮ್ಮ ನಿರ್ದೇಶನದ ತಾಕತ್ತು ತೋರಿಸಿದ್ದಾರೆ.  ಗರುಡ ಗಮನ ವೃಷಭ ವಾಹನ (Garuda Gamana Vrishabha Vahana Review)ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸ್ನೇಹ(Friendship)ದ ಬಗ್ಗೆ ಸಂದೇಶ ಸಾರುವ ಈ ಗರುಡ ಗಮನ ವೃಷಭ ವಾಹನ ಸಿನಿಮಾ ಜನರ ಮನಗೆದ್ದಿದ್ದೆ. ರೌಡಿಸಂ ಚಿತ್ರವನ್ನು ಹೀಗೂ ಮಾಡಬಹುದೆಂದು ರಾಜ್​ ಬಿ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಟೀಸರ್​, ಟ್ರೈಲರ್​ ಬಿಡುಗಡೆಯಾಗಿದ್ದಾಗಲೇ ಇದೊಂದು ‘ರಾ’(Raw) ಸಿನಿಮಾ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಸಿನಿಮಾದಲ್ಲಿ ಟ್ರೈಲರ್​​ನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚು ರಕ್ತಸಿಕ್ತವಾಗಿದೆ. ಸಿನಿಮಾ ನೋಡುವಾಗ ಪ್ರೇಕ್ಷಕನೂ ಪಾತ್ರಧಾರಿಯಾಗುತ್ತಾನೆ. ಕನ್ನಡ ಸಿನಿಮಾರಂಗದಲ್ಲೇ ಈ ಹಿಂದೆ ಯಾರೂ ಮಾಡಿರದ ರೀತಿ ರಾಜ್​ ಬಿ ಶೆಟ್ಟಿ ಸಿನಿಮಾ ಮಾಡಿದ್ದಾರೆ.  

'ಮಂಗಳಾದೇವಿ' ಅಂಗಳ ಸುತ್ತುವ ಕಥೆ!


ಮಂಗಳೂರಿನ ಮಂಗಳಾದೇವಿ ಏರಿಯಾದಲ್ಲಿ ಹರಿ (ರಿಷಬ್‌) ಮತ್ತು ಶಿವ (ರಾಜ್‌) ಬಾಲ್ಯ ಸ್ನೇಹಿತರು. ಹರಿ ಸಾಧು ಸ್ವಭಾವದ ವ್ಯಕ್ತಿ, ಶಿವ ಹಾಗಲ್ಲ ರಫ್​ & ಟಫ್​. ಯಾರೊಂದಿಗೂ ಹೆಚ್ಚು ಮಾತನಾಡುವುದಿಲ್ಲ. ಹರಿಗೆ ಯಾರದರೂ ತೊಂದರೆ ಕೊಟ್ಟರೆ ಶಿವ ಸುಮ್ಮನೆ ಬಿಡುವುದಿಲ್ಲ. ಈ ಸ್ನೇಹಿತರು ದೊಡ್ಡವರಾದ ಮೇಲೆ  ಗ್ಯಾಂಗ್​ಸ್ಟಾರ್​ಗಳಾಗಿ ಹೇಗೆ ಬದಲಾಗುತ್ತಾರೆ ಅನ್ನವುದೆ ಈ ಸಿನಿಮಾದ ಕಥೆ. ಹರಿ ಸಾಧು ಆದರೆ ಬುದ್ಧಿವಂತ ಎಲ್ಲಿ, ಯಾವಾಗ, ಏನು ಮಾಡಬೇಕೆಂದು ಗೊತ್ತಿರುವ ವ್ಯಕ್ತಿ. ಆದರೆ ಶಿವ ಆಗಲ್ಲ, ರಾಕ್ಷಸನ ಸ್ವಭಾವ. ಆತ ಚಾಕು ಚುಚ್ಚುವುದನ್ನ ನೋಡಿದರ ಭಯಬೀಳುವಂತಿದೆ. ಅಷ್ಟರ ಮಟ್ಟಿಗೆ ಕ್ರೂರಿ ಪಾತ್ರ. ಇವರಿಬ್ಬರ ಜುಗಲ್‌ಬಂದಿ, ಮಂಗಳಾದೇವಿ ಅಂಗಳದ ರಕ್ತದ ಹಾದಿ, ಶಿವನ ಕೋಪ, ರಕ್ಕಸತನ. ಹರಿಯ ಬುದ್ಧಿವಂತಿಕೆ. ಇವೆಲ್ಲವೂ ಎಲ್ಲಿಗೆ ಹೋಗಿ ನಿಲ್ಲುತ್ತವೆ ಅನ್ನೋದೇ ಈ ಸಿನಿಮಾದ ಅಂತ್ಯ.

ನಾಯಕಿ ಇಲ್ಲ, ಡ್ಯುಯೆಟ್ ಸಾಂಗ್ ಇಲ್ಲವೇ ಇಲ್ಲ!

'ಗರುಡ ಗಮನ ವೃಷಭ ವಾಹನ'- ಶೀರ್ಷಿಕೆಯೇ ಹೇಳುವಂತೆ ಈ ಸಿನಿಮಾದ ಮೇಲೆ ಪುರಾಣ ಕಥೆಗಳ ಪ್ರೇರಣೆ ಇದೆ. ಹರಿ-ಹರ ಹೋಲಿಕೆಗಳನ್ನು ಪಾತ್ರಗಳ ಮೇಲೆ ಪ್ರಯೋಗಿಸಿದ್ದಾರೆ ನಿರ್ದೇಶಕ ರಾಜ್‌ ಬಿ. ಶೆಟ್ಟಿ. ಕನ್ನಡದ ಮಟ್ಟಿಗೆ ಗ್ಯಾಂಗ್‌ಸ್ಟರ್‌ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, 'ಗರುಡ ಗಮನ ವೃಷಭ ವಾಹನ' ಬೇರೆಯದ್ದೇ ಥರದ ಕ್ರೈಮ್ ಸಿನಿಮಾ. ಸಿದ್ಧಸೂತ್ರಗಳಿಗೆ ಇಲ್ಲಿ ಸಂಪೂರ್ಣ ಬ್ರೇಕ್‌ ಹಾಕಲಾಗಿದೆ. ಚಿತ್ರದಲ್ಲಿ ನಾಯಕಿಯೇ ಇಲ್ಲ. ಡ್ಯುಯೆಟ್ ಸಾಂಗ್ ಇಲ್ಲವೇ ಇಲ್ಲ! ಕ್ರೈಮ್‌ ಸಿನಿಮಾ ಆಗಿದ್ದರೂ, ಡಿಶುಂ ಡಿಶುಂ ಫೈಟ್‌ಗಳಿಲ್ಲ. ನೈಜತೆಗೆ ಬಹಳ ಒತ್ತುಕೊಡಲಾಗಿದೆ.

ಇದನ್ನು ಓದಿ : ಹಲವು ಟ್ವಿಸ್ಟ್ಸ್ ಮತ್ತು ಟರ್ನ್‍ಗಳಿಂದ ಕೂಡಿರುವ 100 ಸಿನಿಮಾ

ನಟ ರಾಕ್ಷಸ ರಾಜ್​ ಬಿ ಶೆಟ್ಟಿ!

ಒಂದು ಮೊಟ್ಟೆಯ ಕಥೆ ಸಿನಿಮಾ ನೋಡಿದ ಜನ ರಾಜ್​ ಬಿ ಶೆಟ್ಟಿ ಅವರನ್ನು ಕಾಮಿಡಿ ಹೀರೋ ಎಂದುಕೊಂಡಿದ್ದರು. ಆದರೆ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ತಮ್ಮ ಮತ್ತೊಂದು ಮುಖ ತೋರಿಸಿದ್ದಾರೆ. ಅಬ್ಬಬ್ಬಾ..ಅವರ ಕ್ರೌರ್ಯ ತೋರುವ ಪ್ರತಿ ಸೀನ್​ಗಳು ಬೆಂಕಿ. ಹೌದು, ಈ ಸಿನಿಮಾಗೆ ರಾಜ್​ ಬಿ ಶೆಟ್ಟಿಯವ ನಟನೆಯೆ ಪ್ಲಸ್​. ಇಂಟರ್​ವಲ್​ಗೂ ಮುನ್ನ ಬರುವ ದೃಶ್ಯಗಳಲ್ಲಿ ರಾಜ್​ ಬಿ ಶೆಟ್ಟಿಅವರ ನಟನೆ ನೋಡುಗರ ಹೃದಯಬಡಿತವನ್ನು ಹೆಚ್ಚಿಸುತ್ತದೆ. ನಿರ್ದೇಶನದ ಜೊತೆ ನಟನೆ ಮಾಡುವುದು ತಮಾಷೆಯ ವಿಚಾರವಲ್ಲ. ಎರಡನ್ನೂ ನಿಭಾಯಿಸಿದ್ದಾರೆ ರಾಜ್​ ಬಿ ಶೆಟ್ಟಿ. ಇವರನ್ನು ಶಿವ ಪಾತ್ರದಲ್ಲಿ ನೋಡುವುದೇ ಒಂದು ಮಜಾ. ಮತ್ತೆ ಮತ್ತೆ ಅವರ ದೃಶ್ಯಗಳನ್ನೇ ನೋಡಬೇಕು ಅನ್ನುವಷ್ಟು ಅದ್ಭುತವಾಗಿ ಅಭಿನಯಿಸಿದ್ದಾರೆ.

ಇದನ್ನು ಓದಿ : ರೌಡಿಸಂನ ಕ’ರಾ’ಳತೆ ಬಿಚ್ಚಿಟ್ಟ ಸಲಗ, ಹೆಜ್ಜೆ ಹೆಜ್ಜೆಗೂ ಹರಿದ ನೆತ್ತರ ಕೋಡಿ

ಇತರೆ ಕಲಾವಿದರ ನಟನೆ ಹೇಗಿದೆ?

ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಮಿಂಚಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್ ಇದೆ. ಪೊಲೀಸ್ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಇಷ್ಟವಾಗುತ್ತಾರೆ. ಬಹುತೇಕ ಹೊಸ ಕಲಾವಿದರು ಚಿತ್ರದಲ್ಲಿ ಜಾಗ ಪಡೆದುಕೊಂಡಿದ್ದು, ಮೊದಲ ಯತ್ನದಲ್ಲಿ ಗಮನಾರ್ಹ ನಟನೆ ನೀಡಿದ್ದಾರೆ. ಕೆಲವೊಂದು ದೃಶ್ಯಗಳಲ್ಲಿ ಡೈಲಾಗ್​ ಇಲ್ಲದಿದ್ದರೂ ನಟನೆಯಲ್ಲೇ ಅರ್ಥಮಾಡಿಸುವ ಪ್ರಯತ್ನ ನಡೆದಿದೆ. ಸ್ನೇಹಿತರು ದೊಡ್ಡವರಾದ ಮೇಲೆ ಒಬ್ಬರನೊಬ್ಬರು ಕೊಲ್ಲುವಷ್ಟು ಮಟ್ಟಕ್ಕೆ ಯಾಕೆ ಹೋಗುತ್ತಾರೆ ಅನ್ನುವುದನ್ನ ನೀವು ಸಿನಿಮಾ ನೋಡಿಯೇ ತಿಳಿಯಬೇಕು.

ಹಿನ್ನಲೆ ಸಂಗೀತ, ಕ್ಲೈಮ್ಯಾಕ್ಸ್​ ಬೊಂಬಾಟ್​!

ಸಿನಿಮಾ ಶುರುವಾಗುವ ಮುನ್ನ ಟೈಟಲ್​ ಕಾರ್ಡ್​ನಲ್ಲೇ ಈ ಸಿನಿಮಾದ ಹಿನ್ನಲೆ ಸಂಗೀತ ಇಷ್ಟವಾಗುತ್ತೆ. ಹಾಲಿವುಡ್ ಬಾಂಡ್​ ಸಿನಿಮಾಗಳಲ್ಲಿ ಟೈಟಲ್​ನಲ್ಲಿ ಬಳಸುವ ಹಾಡುಗಳ ರೀತಿ ಈ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಬಳಸಲಾಗಿದೆ. ಪ್ರತಿಯೊಂದು ದೃಶ್ಯದ ಹಿನ್ನೆಲೆ ಸಂಗೀತ ನಿಮಗೆ ಮಜಾ ಕೊಡುತ್ತೆ. ಅಷ್ಟರ ಮಟ್ಟಿಗೆ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಸಂಗೀತ ಮಾಡಿದ್ದಾರೆ. ಇನ್ನೂ ಛಾಯಾಗ್ರಾಹಕ ಪ್ರವೀಣ್ ಶ್ರಿಯಾನ್  ಕರಾವಳಿಯನ್ನು ಬಹಳ ಸೊಗಸಾಗಿ ಚಿತ್ರೀಕರಿಸಿದ್ದಾರೆ ಪ್ರವೀಣ್. ಕ್ಲೈಮಾಕ್ಸ್​ನ 5 ನಿಮಿಷಗಳು ಮಾತ್ರ ಬೊಂಬಾಟ್​ ಆಗಿದೆ. ಸಿನಿಮಾ ಮುಗಿಯುವ 5 ನಿಮಿಷಗಳ ಮುನ್ನ ಬರುವ ದೃಶ್ಯ ನಿಮ್ಮನ್ನು ಚಿತ್ರಮಂದಿರದಿಂದ ಆಚೆ ಬಂದರೂ ಕಾಡುತ್ತೆ. ಇನ್ಯಾಕೆ ತಡ ನೀವು ಒಮ್ಮೆ ‘ಮಂಗಳಾದೇವಿ’ಗೆ ಹೋಗಿಬನ್ನಿ.
Published by:Vasudeva M
First published: