T.S.Nagabharana Birthday: 69ರ ಹೊಸ್ತಿಲಲ್ಲಿ ಟಿ.ಎಸ್.ನಾಗಾಭರಣ, ಕನ್ನಡದ ಗಟ್ಟಿ ದನಿಗೆ ಶುಭಾಶಯಗಳ ಮಹಾಪೂರ

ಫ್ಯಾಮಿಲಿ ಓರಿಯೆಟೆಂಡ್ ಕಥೆಗಳನ್ನೇ ನಿರ್ದೇಶಿಸೋ ನಾಗಾಭರಣ ಪಕ್ಕಾ ಫ್ಯಾಮಿಲಿ ಮ್ಯಾನ್. ಇವರ ಧರ್ಮಪತ್ನಿ ನಾಗಿಣಿ ಭರಣ. ಪುತ್ರ ಪನ್ನಗ ಭರಣ. ಇವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಿರ್ದೇಶಕನಾಗಿ ಸಕ್ರಿಯವಾಗಿದ್ದಾರೆ.

ಟಿ ಎಸ್ ನಾಗಾಭರಣ

ಟಿ ಎಸ್ ನಾಗಾಭರಣ

 • Share this:
  ಕನ್ನಡ ಚಿತ್ರರಂಗದ (Sandalwood) ಸದಭಿರುಚಿಯ ನಿರ್ದೇಶಕ, ನಟ, ಹಿರಿಯ ರಂಗಕರ್ಮಿ ಟಿ.ಎಸ್.ನಾಗಾಭರಣ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಬಂಗಾರದ ಜಿಂಕೆ, ಸಂತ ಶಿಶುನಾಳ ಶರೀಫ, ನಾಗಮಂಡಲ, ಜನುಮದ ಜೋಡಿ, ಮೈಸೂರು ಮಲ್ಲಿಗೆ, ಕಲ್ಲರಳಿ ಹೂವಾಗಿ ಸೇರಿದಂತೆ ಹಲವು ವಿಭಿನ್ನ, ವಿಶೇಷ ಚಿತ್ರಗಳ ಹಿಂದಿರುವುದು ಇದೇ ನಾಗಾಭರಣ (T.S.Nagabharana). ನಟರಾಗಿ, ನಿರ್ದೇಶಕರಾಗಿ ಅವರು ಮಾಡದ ಸಾಧನೆಯಿಲ್ಲ. ಪಡೆಯದ ಪ್ರಶಸ್ತಿಗಳಿಲ್ಲ. ಕರ್ನಾಟಕ ರಾಜ್ಯ ಸರ್ಕಾರದ 15 ಪ್ರಶಸ್ತಿ (Karnataka State Award), 7 ಫಿಲಂಫೇರ್ ಪ್ರಶಸ್ತಿ (Film fare Award), 8 ರಾಷ್ಟ್ರ ಪ್ರಶಸ್ತಿಯಷ್ಟೇ (National Award) ಅಲ್ಲದೇ ಅಂತರಾಷ್ಟ್ರೀಯ ಪ್ರಶಸ್ತಿಗೂ ಸಹ ನಾಗಾಭರಣ ಭಾಜನರಾಗಿದ್ದಾರೆ. ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಈ ಗಟ್ಟಿ ದನಿಗೆ ಇಂದು 69ನೇ ಹುಟ್ಟು ಹಬ್ಬದ ಸಂಭ್ರಮ.

  ಹುಟ್ಟು ಹಬ್ಬದ ಸಂಭ್ರಮದಲ್ಲಿ ನಾಗಾಭರಣ

  ಟಿ.ಎಸ್.ನಾಗಾಭರಣ ಇಂದು 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸರ್ಕಾರಿ ನೌಕರಿಯಲ್ಲಿ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ನಿವೃತ್ತಿಯಾಗಬೇಕಿತ್ತು. ಆದರೆ ಸದಾ ಪಾದರಸದಂತಿರುವ ಇವರಿಗೆ ನಿವೃತ್ತಿಯೆಂಬುದೇ ಇಲ್ಲ. ಸಿನಿಮಾ, ನಾಟಕ, ಧಾರಾವಾಹಿಗಳ ಜೊತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹೊಣೆಯನ್ನೂ ಹೊತ್ತಿರುವ ಇವರದ್ದು ಬಿಡುವಿಲ್ಲದ ದುಡಿಮೆ.
  ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಇವರಿಗೆ ಇಂದು ಕನ್ನಡ ಸಿನಿಮಾದ ಗಣ್ಯಾತಿಗಣ್ಯರು ಶುಭ ಕೋರಿದ್ದಾರೆ. ರಾಜಕೀಯ ರಂಗದ ದಿಗ್ಗಜರು ಹಾರೈಸಿದ್ದಾರೆ. ಜೊತೆಗೆ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಯ ಚಿತ್ರರಂಗದ ಗಣ್ಯರು, ನಾಗಾಭರಣ ಸ್ನೇಹಿತರು, ವಿವಿಧ ರಂಗಕರ್ಮಿಗಳು ಶುಭಾಶಯ ತಿಳಿಸಿದ್ದಾರೆ.

  ಹಳ್ಳಿಯಿಂದ ದಿಲ್ಲಿವರೆಗೆ

  ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು 1953, ಜನವರಿ 23ರಂದು ಜನಿಸಿದರು. ಬಾಲ್ಯದ ಜೀವನವೆಲ್ಲ ತಲಕಾಡಿನಲ್ಲೇ ಕಳೆದ ಅವರು, ಶಿಕ್ಷಣದ ದೃಷ್ಟಿಯಿಂದ ಬೆಂಗಳೂರು ಸೇರಿದರು. ಕಾಲೇಜು ದಿನಗಳಿಂದಲೇ ಸಿನಮಾ-ರಂಗಭೂಮಿ ಇವರ ಕನಸಾಗಿತ್ತು. ವಿಜ್ಞಾನ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದರು, ಒಲವೆಲ್ಲ ಕನ್ನಡ ಸಾಹಿತ್ಯ, ಸಿನಿಮಾ, ರಂಗಭೂಮಿ ಮೇಲೆಯೇ ಇತ್ತು. ಕಾಲೇಜು ದಿನಗಳಲ್ಲಿಯೇ ಹಲವು ನಾಟಕಗಳಲ್ಲಿ ನಟಿಸಿ, ರಚಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡರು. ಬೆಂಗಳೂರಿನ ಪ್ರಸಿದ್ಧ ನಾಟಕ ತಂಡ `ಬೆನಕ'ದ ಹಿಂದಿರುವ ಶಕ್ತಿ ಇವರೇ.

  ಇದನ್ನೂ ಓದಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇಂದ್ರ ಹಣಕಾಸು ಸಚಿವರ ಭೇಟಿ

  ರಂಗಭೂಮಿಯಿಂದ ಸಿನಿಮಾಕ್ಕೆ ಬದ ಇವರು, 1978ರಲ್ಲಿ ತೆರೆಕಂಡ `ಗ್ರಹಣ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. ಈ ಚಿತ್ರ ಎರಡು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ಬಳಿಕ ಇವರದ್ದೇ ನಿರ್ದೇಶನದ `ಬಂಗಾರದ ಜಿಂಕೆ',`ಅನ್ವೇಷನೆ' ಹಾಗೂ `ಬ್ಯಾಂಕರ್ ಮಾರ್ಗಯ್ಯ' ಚಿತ್ರವೂ ಕೂಡ ರಾಷ್ಟ್ರ ಪ್ರಶಸ್ತಿ ಪಡೆಯಿತು. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಸುಮಾರು 20 ಚಿತ್ರಗಳು ಅಂತರಾಷ್ಟ್ರೀಯ, ರಾಷ್ಟೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿವೆ. ನಾಗಮಂಡಲದಂತಹ ಟಿಪಿಕಲ್ ಕಥೆಯ ಸಿನಿಮಾ ನಿರ್ದೇಶನದ ಜೊತೆಗೆ ಜನುಮದ ಜೋಡಿಯಂತಹ ಮೆಗಾ ಹಿಟ್ ಸಿನಿಮಾ ಕೂಡ ಇವರ ಬತ್ತಿಳಿಕೆಯಿಂದಲೇ ಬಂದಿದ್ದು. ಹೀಗೆ ಹಳ್ಳಿಯಲ್ಲಿ ಹುಟ್ಟಿದ ಹುಡುಗ ದಿಲ್ಲಿವರೆಗೂ ಕನ್ನಡದ ಕಂಪನ್ನು ಪಸರಿಸಿದ್ದಲ್ಲದೇ, ಅಂತಾರಾಷ್ಟ್ರೀಯ ಗೌರವಕ್ಕೂ ಪಾತ್ರರಾದರು.

  ನಾಗಾರಭರಣದ್ದು ಸುಖೀ ಕುಟುಂಬ

  ಫ್ಯಾಮಿಲಿ ಓರಿಯೆಟೆಂಡ್ ಕಥೆಗಳನ್ನೇ ನಿರ್ದೇಶಿಸೋ ನಾಗಾಭರಣ ಪಕ್ಕಾ ಫ್ಯಾಮಿಲಿ ಮ್ಯಾನ್. ಇವರ ಧರ್ಮಪತ್ನಿ ನಾಗಿಣಿ ಭರಣ. ಪುತ್ರ ಪನ್ನಗ ಭರಣ. ಇವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಿರ್ದೇಶಕನಾಗಿ ಸಕ್ರಿಯವಾಗಿದ್ದಾರೆ.

  ಇದನ್ನೂ ಓದಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಭೇಟಿ

  ಸದ್ಯ 69ನೇ ವರ್ಷಕ್ಕೆ ಕಾಲಿಟ್ಟಿರುವ ನಾಗಾಭರಣ ನೂರಾರು ವರ್ಷ ನಮ್ಮೊಂದಿಗಿರಲಿ, ಮತ್ತಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಲಿ ಎನ್ನುವುದು ಎಲ್ಲರ ಹಾರೈಕೆ.

  (ಬರಹ: ಅಣ್ಣಪ್ಪ ಆಚಾರ್ಯ)
  Published by:Soumya KN
  First published: