Anitha EAnitha E
|
news18-kannada Updated:February 20, 2021, 12:55 PM IST
ಬಾಂಬೆ ಬೇಗಮ್ಸ್ ವೆಬ್ ಸರಣಿಯಲ್ಲಿ ಕನ್ನಡತಿ ಆಧ್ಯಾ ಆನಂದ್
ಕನ್ನಡದ ನೆಲದಿಂದ ಮುಂಬೈಗೆ ಹೋಗಿ ಬಿ-ಟೌನ್ನಲ್ಲಿ ಹೆಸರು ಮಾಡಿದವರಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲೂ ಕರಾವಳಿ ಪ್ರದೇಶದಿಂದ ಬಂದವರಂತೂ ಸಾಕಷ್ಟು ಮಂದಿ ಇದ್ದಾರೆ. ಈಗ ಉತ್ತರ ಕನ್ನಡ ಮೂಲದ ಯುವತಿ ಬಾಲಿವುಡ್ನಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಹೌದು, ಮಾರ್ಚ್ 8ರಂದು ಅಂದರೆ ಮಹಿಳಾ ದಿನದಂದು ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಲಿರುವ ‘ಬಾಂಬೆ ಬೇಗಮ್ಸ್' ಎಂಬ ವೆಬ್ ಸರಣಿಯಲ್ಲಿ ಸರಣಿಯಲ್ಲಿ ಕನ್ನಡತಿಯೊಬ್ಬರು ನಟಿಸಿದ್ದಾರೆ. ಇವರು ಸಿಂಗಾಪುರದಲ್ಲಿನ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟಕ್ಕೂ ಯಾರು ಈ ಕನ್ನಡತಿ ಅಂತೀರಾ..? ಉತ್ತರ ಕನ್ನಡ ಜಿಲ್ಲೆಯ ಮೂಲದವರಾದ ಈ ಕನ್ನಡದ ಯುವತಿಯ ಕುರಿತಾದ ವಿವರಗಳು ಮುಂದಿದೆ.
ಫೆ. 15ರಂದು ಬಾಂಬೆ ಬೇಗಮ್ಸ್ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಬಾಲಿವುಡ್ನ ದೊಡ್ಡ ತಾರೆಯರು ಇದರಲ್ಲಿ ನಟಿಸಿದ್ದಾರೆ.ಅವರೊಂದಿಗೆ ಉತ್ತರ ಕನ್ನಡ ಜಿಲ್ಲೆ ಮೂಲದ ಆಧ್ಯಾ ಆನಂದ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಶಾಯ್ ಇರಾನಿ’ ಎಂಬ ಪಾತ್ರದಲ್ಲಿ ಆಧ್ಯಾ ನಟಿಸಿದ್ದಾರೆ.

ಬಾಂಬೆ ಬೇಗಮ್ಸ್ ವೆಬ್ ಸರಣಿಯ ಪೋಸ್ಟರ್
'ಬಾಂಬೆ ಬೇಗಮ್ಸ್' ಮೂಲಕ ಈಕೆ ಈಗ ಭಾರತೀಯ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಿರ್ದೇಶಕಿ ಅಲಂಕೃತಾ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಬಾಂಬೆ ಬೇಗಮ್ಸ್' ವೆಬ್ ಸರಣಿಯ ಕಥೆ ಆಧುನಿಕ ಮುಂಬೈನ ವಿವಿಧ ಕ್ಷೇತ್ರಗಳಲ್ಲಿರುವ ಐವರು ಮಹಿಳೆಯರ ಸುತ್ತ ಹೆಣೆದುಕೊಂಡಿದೆ.
ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್ಠಾಕೂರ್ ಸೇರಿದಂತೆ ಐವರು ಮುಖ್ಯ ಭೂಮಿಕೆಯ 'ಬಾಂಬೆ ಬೇಗಮ್ಸ್'ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದು, ತುಂಬಾ ಚಿಕ್ಕವಳಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಆಧ್ಯಾ ಆನಂದ್
ಸಿಂಗಾಪುರದಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಮಗಳೇ ಈ ಆಧ್ಯಾ. ಹುಟ್ಟಿದ್ದು ಮಡಿಕೇರಿಯಲ್ಲಾದರೂ ಬೆಳೆದಿದ್ದು ಸಿಂಗಾಪುರದಲ್ಲಿ. 7ನೇ ವಯಸ್ಸಿನಲ್ಲೇ ಅಭಿನಯ, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್ನಲ್ಲಿ ಆಸಕ್ತಿ ತೋರಿದ ಈಕೆ, ಸಿಂಗಾಪುರದಲ್ಲಿ ರಂಗಭೂಮಿ ತರಬೇತಿ ಹಾಗೂ ಬಾಲಿವುಡ್ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್ಸ್ಟಿಟ್ಯೂಟ್ನಲ್ಲೂ ತರಬೇತಿ ಪಡೆದಿದ್ದಾರೆ. ಪ್ರತಿಷ್ಠಿತ ಕೇನ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ ‘ಎ ಯೆಲ್ಲೋ ಬರ್ಡ್' ಸಿನಿಮಾ, ‘ಒನ್ ಅವರ್ ಟು ಡೇಲೈಟ್', ‘ಸ್ಕೈಸಿಟಿ'ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರ ಸ್ಪರ್ಧೆಯ ವಿಜೇತೆಯಾಗಿರುವ ಆಧ್ಯಾ, ಸಿಂಗಾಪುರದಲ್ಲಿ ‘ವ್ಹೂಪೀಸ್ ವರ್ಲ್ಡ್’ ಸೀಸನ್ 1, 2, 3, 4, ‘ಲಯನ್ ಮಮ್ಸ್’ 2, 3, ‘ವರ್ಲ್ಡ್ ವಿಜ್ಜ್ ಸ್ಲೈಮ್ ಪಿಟ್’, ‘ಮೆನಂತು ಇಂಟರ್ನ್ಯಾಷನಲ್’ 2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ: Rashmika Mandanna: ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಟ್ರೋಲ್ ಆದ ರಶ್ಮಿಕಾ: ಕಾರಣ ಇಲ್ಲಿದೆ..!
ಝೀ ಟಿವಿಯ ಪ್ರಪ್ರಥಮ ಜೂನಿಯರ್ ನಿರೂಪಕಿಯಾಗಿ ನಡೆಸಿಕೊಟ್ಟಿದ್ದ ‘ಬ್ರೈನ್ ಬೂಸ್ಟರ್ಸ್' ಕಾರ್ಯಕ್ರಮವು 18 ದೇಶಗಳಲ್ಲಿ ಎರಡು ಸೀಸನ್ಗಳಲ್ಲಿ ಪ್ರಸಾರ ಕಂಡಿವೆ. ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ಈಕೆಗೆ ಸಿಂಗಾಪುರದ ಸಿಂಗ್ಟೆಲ್ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್ನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ ಸಿಂಗಾರ ಪುರಸ್ಕಾರಕ್ಕೆ 2016ರಲ್ಲೇ ಈಕೆ ಭಾಜನರಾಗಿದ್ದಾರೆ.
ಸಿಂಗಾಪುರದಲ್ಲಿ ನಡೆದ ಅತಿ ಹೆಚ್ಚು ‘ಮಾಡೆಲ್ಸ್ ವಾಕಿಂಗ್ ರನ್ ವೇ'ನಲ್ಲಿ ಭಾಗವಹಿಸಿದ್ದಕ್ಕಾಗಿ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲೂ ಆಧ್ಯಾ ಹೆಸರಿದೆ.
ಇದನ್ನೂ ಓದಿ: 42ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಲ್ಲಿ ಚಿರಂಜೀವಿ-ಸುರೇಖಾ: ಇಲ್ಲಿವೆ ಅಪರೂಪದ ಫೋಟೋಗಳು..!
ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ‘ಬಾಂಬೆ ಬೇಗಮ್ಸ್' ಆಡಿಷನ್ನಲ್ಲಿ ಕೊನೆಗೂ ಆಯ್ಕೆಗೊಂಡು ಅವಕಾಶ ಪಡೆದುಕೊಂಡಿರುವ ಕನ್ನಡತಿ ಆಧ್ಯಾ, ಕನ್ನಡ ಚಿತ್ರಗಳಲ್ಲೂ ನಟಿಸುವ ಆಸೆ ಹೊಂದಿದ್ದಾರೆ. ಸಿಂಗಾಪುರದಲ್ಲಿ ಕನ್ನಡದ ಕಂಪು ಹರಡಿರುವ ಈ ಹುಡುಗಿ ಈಗ ಭಾರತೀಯ ಚಿತ್ರರಂಗದಲ್ಲೂ ಇನ್ನಷ್ಟುದೊಡ್ಡ ಹೆಸರು ಮಾಡುವಂತಾಗಲಿ ಎಂದು ಹಾರೈಸೋಣ.
Published by:
Anitha E
First published:
February 20, 2021, 12:55 PM IST