ಕನ್ನಡ ಸಿನಿಮಾ ನಿರ್ದೇಶಕರ ಸಂಘದ ಅಧ್ಯಕ್ಷರ ಪಟ್ಟ ಹರಾಜು: ಏನಾಗ್ತಿದೆ ಚಂದನವನದಲ್ಲಿ?

ಕಳೆದ ವರ್ಷ ಕೊರೋನಾದಿಂದ ಚಿತ್ರರಂಗದ ಮಂದಿ ಸಂಕಷ್ಟದಲ್ಲಿದ್ದ ಸಮಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ತಲಾ ಮೂರು ಸಾವಿರ ರೂಪಾಯಿಯ ರಿಲಯನ್ಸ್ ಕೂಪನ್ ವಿತರಿಸಲಾಗಿದ್ದು, ಆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಟೇಶಿ ವೆಂಕಟೇಶ್ ಆರೋಪಿಸಿದ್ದರು. ಅದಕ್ಕೆ ಲಿಸ್ಟ್ ಜೊತೆಗೆ ಬಂದಿದ್ದ ನಿರ್ದೇಶಕ ನಾಗೇಂದ್ರ ಅರಸ್, 950 ಮಂದಿ ನಿರ್ದೇಶಕರಿಗೆ ಕೂಪನ್‌ಗಳನ್ನು ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಟೇಶಿ ವೆಂಕಟೇಶ್ ಹಾಗೂ ರೂಪಾ ಅಯ್ಯರ್

ಟೇಶಿ ವೆಂಕಟೇಶ್ ಹಾಗೂ ರೂಪಾ ಅಯ್ಯರ್

  • Share this:
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಒಂದು ಬಾಗಿಲಿನಿಂದ ಮಾಜಿ ನಿರ್ದೇಶಕರ ಸಂಘದ ಅಧ್ಯಕ್ಷ ವಿ. ನಾಗೇಂದ್ರ ಪ್ರಸಾದ್ ಹೊರ ನಡೆದರೆ, ಮತ್ತೊಂದು ಬಾಗಿಲಿನಿಂದ ನಿರ್ದೇಶಕ ಟೇಶಿ ವೆಂಕಟೇಶ್ ಅಧ್ಯಕ್ಷ ಗಾದಿಯೇರಿದ್ದಾರೆ. ಇನ್ನುಇವರಿಬ್ಬರ  ನಡುವಿನ ನಾನು ಪ್ರೆಸಿಡೆಂಟ್, ನೀನು ಪ್ರೆಸಿಡೆಂಟ್ ಆಟದ ನಡುವೆ ಮೂರನೇ ಬಾಗಿಲಿನಲ್ಲಿ ನಿಂತಿರುವ ಉಳಿದ ನಿರ್ದೇಶಕರು ಏನು ಮಾಡೋದು ಅಂತ ಗೊತ್ತಾಗದೇ ಚಿಂತಾಕ್ರಾಂತರಾಗಿದ್ದಾರೆ. ಹೌದು, ಇತ್ತೀಚೆಗಷ್ಟೇ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಸುದ್ದಿಗೋಷ್ಠಿ ನಡೆಸಿ ನಿರ್ದೇಶಕರ ಸಂಘದ ಉಪಾಧ್ಯಕ್ಷೆ ರೂಪಾ ಐಯರ್, ಮಳವಳ್ಳಿ ಸಾಯಿಕೃಷ್ಣ, ನಾಗೇಂದ್ರ ಅರಸ್ ಸೇರಿದಂತೆ ಹಲವರ ಮೇಲೆ ಆರೋಪಗಳ ಸುರಿಮಳೆಗೈದಿದ್ದರು. ಇಂದು ಆ ಎಲ್ಲ ಆರೋಪಗಳಿಗೂ ಸ್ಪಷ್ಟನೆ ನೀಡುವುದರ ಜೊತೆಗೆ ಟೇಶಿ ವೆಂಕಟೇಶ್ ಅವರ ಮೇಲೆ ಆರೋಪಗಳ ಹೊಸ ಲಿಸ್ಟ್ಅನ್ನು ಕೆಲ ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ.

ನಿರ್ದೇಶಕರಾದ ನಾಗೇಂದ್ರ ಅರಸ್, ಮಳವಳ್ಳಿ ಸಾಯಿಕೃಷ್ಣ, ನಿರ್ಮಾಪಕರಾದ ಜೆಜೆ ಶ್ರೀನಿವಾಸ್, ಕುಮಾರ್ ಹಾಗೂ ನಾಗೇಶ್ ಕುಮಾರ್ ಇಂದು ಸುದ್ದಿಗೋಷ್ಠಿ ನಡೆಸಿದರು. ಕಳೆದ ಒಂದೂವರೆ ವರ್ಷಗಳಿಂದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ನಡೆಯುತ್ತಿರುವ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲಿದರು.

kannada film directors association chairman post controversy htv ae
ಸುದ್ದಿಗೋಷ್ಠಿಯ ಚಿತ್ರ


ಹೌದು, ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೆಲ ವ್ಯವಹಾರಗಳ ಬಗ್ಗೆ ಕೆಲವರು ಪ್ರಶ್ನೆ ಕೇಳಿದ್ದರಂತೆ. ಆಗ ಇವರಿಗೆ ನಾನ್ಯಾಕೆ ಉತ್ತರಿಸಬೇಕು ಅಂತ ಅವರು ಉತ್ತರಿಸಿರಲಿಲ್ಲವಂತೆ. ಆದರೂ ಒಂದೂವರೆ ಸಾವಿರಕ್ಕೂ ಹೆಚ್ಚು ಸದಸ್ಯರಿರುವ ನಿರ್ದೇಶಕರ ಸಂಘದ ಸಮಿತಿ ಸಭೆಯಲ್ಲಿ ನಾಗೇಂದ್ರ ಪ್ರಸಾದ್ ಅವರು ನಾನು ಸಂಘಕ್ಕೆ ಎರಡು ಲಕ್ಷ ರೂಪಾಯಿ ನನ್ನ ವೈಯಕ್ತಿಕ ಹಣ ಖರ್ಚು ಮಾಡಿದ್ದೇನೆ. ಆ ಹಣವನ್ನು ಕೊಟ್ಟು ಯಾರು ಬೇಕಾದರೂ ಅಧ್ಯಕ್ಷರಾಗಬಹುದು, ನಾನು ಹೊರನಡೆಯುತ್ತೇನೆ ಎಂದುಬಿಟ್ಟರಂತೆ. ಚುನಾವಣೆ ನಡೆದು, ಮತಗಳನ್ನು ಪಡೆದು ಅಧ್ಯಕ್ಷರಾಗಿದ್ದ ನಾಗೇಂದ್ರ ಪ್ರಸಾದ್ ಅವರ ಆಫರ್ ಕೆಲವರಿಗೆ ಪ್ರಸಾದದಂತೆಯೇ ಕಂಡಿರುವುದರಲ್ಲಿ ಆಶ್ಚರ್ಯವಿಲ್ಲ.

ಇದನ್ನೂ ಓದಿ: ನಿಧಿ ಜೊತೆ ಅರವಿಂದ್​ ನಡೆದುಕೊಂಡ ರೀತಿ ಸರಿಯಿಲ್ಲ ಎಂದ ದಿವ್ಯಾ ಉರುಡುಗ: ಕಣ್ಣೀರಿಟ್ಟ ಅರವಿಂದ್​

ತಕ್ಷಣ ಸಭೆಯಿಂದ ಹೊರಬಂದು ನಾಗೇಂದ್ರ ಪ್ರಸಾದ್ ಅವರ ಜೊತೆ ಚರ್ಚಿಸಿದ ನಿರ್ದೇಶಕ ಟೇಶಿ ವೆಂಕಟೇಶ್, ನಾನೇ ಅಧ್ಯಕ್ಷ ಎಂದು ಬಿಟ್ಟರಂತೆ. ಅಲ್ಲಿಗೆ ಒಂದೂವರೆ ಸಾವಿರಕ್ಕೂ ಅಧಿಕ ಸದಸ್ಯರಿದ್ದರೂ 60 ಪ್ಲಸ್ ಸದಸ್ಯರ ಮುಂದೆ ಚುನಾವಣೆ ಇಲ್ಲದೇ ಹೊಸ ಅಧ್ಯಕ್ಷರು ನಿರ್ದೇಶಕರ ಸಂಘದ ಚುಕ್ಕಾಣಿ ಹಿಡಿದ ಬಗ್ಗೆ ನಿರ್ದೇಶಕ ಮಳವಳ್ಳಿ ಸಾಯಿಕೃಷ್ಣ ಎಳೆಎಳೆಯಾಗಿ ಬಿಚ್ಚಿಟ್ಟರು.

ಇನ್ನು ಅಧ್ಯಕ್ಷರಾಗಿ ನಿರ್ದೇಶಕರ ಸಂಘದ ಗಾದಿಯೇರಿದ ಬಳಿಕ ಸಂಘಕ್ಕಾಗಿ ಏನಾದರೂ ಮಾಡಬೇಕಲ್ಲಾ... ಅದಕ್ಕೆ ಐಷಾರಾಮಿ ಹೋಟೆಲ್ ಒಂದರಲ್ಲಿ ಟೇಶಿ ವೆಂಕಟೇಶ್ ನಿರ್ಮಾಪಕರಿಗಾಗಿಯೇ ಒಂದು ಕಾರ್ಯಕ್ರಮ ಮಾಡಿದ್ದರಂತೆ. ಅದರ ಮೂಲಕ ಓಟಿಟಿಗಳಲ್ಲಿ ಕನ್ನಡ ಸಿನಿಮಾಗಳನ್ನು ಮಾರಾಟ ಮಾಡಿಸಿಕೊಡುವೆ ಅಂತ 60 ಮಂದಿಯಿಂದ ತಲಾ ಇಂತಿಷ್ಟು ಅಂತ ಹಣವನ್ನೂ ಪಡೆದಿದ್ದರಂತೆ. ಆದರೆ ಒಬ್ಬರ ಒಂದೂ ಸಿನಿಮಾನೂ ಸೇಲ್ ಮಾಡಿಸಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ ನಿರ್ಮಾಪಕ ಜೆಜೆ ಶ್ರೀನಿವಾಸ್.

ಹಾಗೇ ಕಳೆದ ವರ್ಷ ಕೊರೋನಾದಿಂದ ಚಿತ್ರರಂಗದ ಮಂದಿ ಸಂಕಷ್ಟದಲ್ಲಿದ್ದ ಸಮಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ತಲಾ ಮೂರು ಸಾವಿರ ರೂಪಾಯಿಯ ರಿಲಯನ್ಸ್ ಕೂಪನ್ ವಿತರಿಸಲಾಗಿದ್ದು, ಆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಟೇಶಿ ವೆಂಕಟೇಶ್ ಆರೋಪಿಸಿದ್ದರು. ಅದಕ್ಕೆ ಲಿಸ್ಟ್ ಜೊತೆಗೆ ಬಂದಿದ್ದ ನಿರ್ದೇಶಕ ನಾಗೇಂದ್ರ ಅರಸ್, 950 ಮಂದಿ ನಿರ್ದೇಶಕರಿಗೆ ಕೂಪನ್‌ಗಳನ್ನು ನೀಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಹಾಗೇ ನಿರ್ದೇಶಕರ ಸಂಘದ ಮಾಜಿ ಉಪಾಧ್ಯಕ್ಷೆ ರೂಪಾ ಅಯ್ಯರ್​ ಅವರ ಮೇಲೂ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೇಶಿ ವೆಂಕಟೇಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: Yash-Radhika Pandit: ರಾಕಿಂಗ್ ದಂಪತಿಯ ಹೊಸ ಮನೆ ಗೃಹಪ್ರವೇಶ: ಹೇಗಿದೆ ಗೊತ್ತಾ ಯಶ್​-ರಾಧಿಕಾರ ಕನಸಿನ ನಿವಾಸ..!

ಚಿತ್ರರಂಗದ ಎಲ್ಲ ಸದಸ್ಯರು ಹಾಗೂ ಅವರ ಕುಟುಂಬದವರಿಗೂ ಕೊರೊನಾ ಲಸಿಕೆ ಕೊಡಿಸಬೇಕು ಎಂದು ಮುಂಚೂಣಿಯಲ್ಲಿ ನಿಂತು ಓಡಾಡಿದ್ದಾರೆ, ಸರ್ಕಾರದಿಂದ ಎಲ್ಲರಿಗೂ ದಿನಸಿ ಕಿಟ್‌ಗಳನ್ನು ಕೊಡಿಸಲು ಶ್ರಮಿಸಿದ್ದಾರೆ, ಮಾತ್ರವಲ್ಲ ತಮ್ಮದೇ ಸ್ವಂತ ಖರ್ಚಿನಲ್ಲಿ ಸಾವಿರಾರು ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್ಅನ್ನು ಉಚಿತವಾಗಿ ಮಾಡಿಸಿಕೊಟ್ಟಿದ್ದಾರೆ. ಅಂತಹ ರೂಪಾ ಅಯ್ಯರ್ ಅವರ ಮೇಲೆ ಹೇಗಾದರೂ ಸುಳ್ಳು ಆರೋಪ ಮಾಡಲು ಮನಸ್ಸಾಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.

ಮಾತ್ರವಲ್ಲ ಟೇಶಿ ವೆಂಕಟೇಶ್ ಅವರು ನಿರ್ದೇಶಕರ ಸಂಘದ ಅಧ್ಯಕ್ಷ ಗಾದಿಗೆ ಬಂದಾಗಿನಿಂದ ಬರೋಬ್ಬರಿ 30 ಲಕ್ಷ ರೂಪಾಯಿಗೂ ಅಧಿಕ ಹಣದ ಗೋಲ್‌ಮಾಲ್ ಆಗಿರುವ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ಆಗಬೇಕೆಂದು ಎಲ್ಲ ನಿರ್ದೇಶಕರು ಒತ್ತಾಯಿಸಿದ್ದಾರೆ.
Published by:Anitha E
First published: