'ಬಿಗ್​ ಬಾಸ್​' ಖ್ಯಾತಿಯ ನವೀನ್​ ಸಜ್ಜು ಈಗ ನಾಯಕ; ಫೈನಲ್​ ಆಯ್ತು ಹೊಸ ಸಿನಿಮಾ

‘ಕೆಮೆಸ್ಟ್ರಿ ಆಫ್​ ಕರಿಯಪ್ಪ’ ಚಿತ್ರ ಹಿಟ್​ ಆದ ನಂತರ ನಿರ್ದೇಶಕ ಕುಮಾರ್​ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಚಾರ್ಲಿ ಚಾಪ್ಲಿನ್​’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ನವೀನ್​ ಸಜ್ಜು ನಾಯಕನಾಗಿ ನಟಿಸುತ್ತಿದ್ದಾರೆ. 

ನವೀನ್​ ಸಜ್ಜು

ನವೀನ್​ ಸಜ್ಜು

  • News18
  • Last Updated :
  • Share this:
‘ಬಿಗ್​ ಬಾಸ್​ 6’ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದ ನವೀನ್​ ಸಜ್ಜು ಅವರು ಚಿತ್ರರಂಗಕ್ಕೆ ನಾಯಕನಾಗಿ ಕಾಲಿಡಲಿದ್ದಾರೆ ಎನ್ನುವ ಮಾತು ಗಾಂಧಿ ನಗರದ ಅಂಗಳದಲ್ಲಿ ತುಂಬಾ ದಿನಗಳಿಂದ ಹರಿದಾಡುತ್ತಲೇ ಇದೆ. ಈಗ ಈ ವಿಚಾರ ಅಧಿಕೃತವಾಗಿದೆ. ನವೀನ್​ ಸದ್ಯ ಪ್ರಾಜೆಕ್ಟ್​ ಒಂದನ್ನು ಫೈನಲ್​ ಮಾಡಿದ್ದು, ಶೀಘ್ರವೇ ಚಿತ್ರದ ಸೆಟ್​ ಸೇರಿಕೊಳ್ಳಲಿದ್ದಾರೆ.

‘ಕೆಮೆಸ್ಟ್ರಿ ಆಫ್​ ಕರಿಯಪ್ಪ’ ಚಿತ್ರ ಹಿಟ್​ ಆದ ನಂತರ ನಿರ್ದೇಶಕ ಕುಮಾರ್​ ಅವರು ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ‘ಚಾರ್ಲಿ ಚಾಪ್ಲಿನ್​’ ಎನ್ನುವ ಶೀರ್ಷಿಕೆ ಇಟ್ಟಿದ್ದಾರೆ. ಸಿನಿಮಾದಲ್ಲಿ ಹಾಸ್ಯವೇ ಪ್ರಧಾನವಾಗಿರುವ ಕಾರಣಕ್ಕೆ ಈ ಶೀರ್ಷಿಕೆ ನೀಡಲಾಗಿದೆ. ಈ ಚಿತ್ರಕ್ಕೆ ನವೀನ್​ ಸಜ್ಜು ನಾಯಕನಾಗಿ ನಟಿಸುತ್ತಿದ್ದಾರೆ.

“ಇಂದೊಂದು ಜರ್ನಿ ಸಿನಿಮಾ. ತಂಡವೊಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತದೆ. ಅಲ್ಲಿ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಒಂದೆಳೆ. ‘ಕೆಮೆಸ್ಟ್ರಿ ಆಫ್​ ಕರಿಯಪ್ಪ’ ಹಾಗೂ ‘ಚಾರ್ಲಿ ಚಾಪ್ಲಿನ್​’ ಎರಡರಲ್ಲೂ ಹಾಸ್ಯವೇ ಪ್ರಧಾನವಾಗಿದ್ದರೂ ಈ ಸಿನಿಮಾ ತುಂಬಾ ಭಿನ್ನವಾಗಿರಲಿದೆ. ‘ಚಾರ್ಲಿ ಚಾಪ್ಲಿನ್​’ನಲ್ಲಿ ಕಾಮಿಡಿ ಮಾತ್ರವಲ್ಲದೆ ಮತ್ತೊಂದು ವಿಶೇಷ ಅಂಶವಿದೆ. ಅದನ್ನು ಮುಂದಿನ ದಿನಗಳಲ್ಲಿ ರಿವೀಲ್​ ಮಾಡುತ್ತೇವೆ,” ಎನ್ನುತ್ತಾರೆ ನಿರ್ದೇಶಕ ಕುಮಾರ್​.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!

‘ಚಾರ್ಲಿ ಚಾಪ್ಲಿನ್’​ಗೆ ನವೀನ್​ ಸಜ್ಜು ನಾಯಕ. ಸಂಜನಾ ಆನಂದ್​ ನಾಯಕಿ. ತಬಲಾ ನಾಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್​​ ಕೆಲಸಗಳು ನಡೆಯುತ್ತಿದ್ದು, ಜುಲೈ ವೇಳೆಗೆ ಚಿತ್ರ ಸೆಟ್ಟೇರಲಿದೆ.

ಮೊದಲ ಬಾರಿಗೆ ನಾಯಕನಾಗಿ ತೆರೆಮೇಲೆ ಬರುತ್ತಿರುವುದಕ್ಕೆ ನವೀನ್​ ಕೂಡ ಖುಷಿಯಾಗಿದ್ದಾರೆ. ಈ ಮೊದಲು ಸಾಕಷ್ಟು ಕಥೆಗಳನ್ನು ರಿಜೆಕ್ಟ್​ ಮಾಡಿದ್ದ ಅವರು, ಈ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. “ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ನನಗೆ ಸಾಕಷ್ಟು ಆಫರ್​ಗಳು ಬಂದವು. ಆದರೆ, ಯಾವ ಕಥೆಯೂ ಇಷ್ಟವಾಗಿರಲಿಲ್ಲ. ನಾನು ‘ಕೆಮೆಸ್ಟ್ರಿ ಆಫ್​ ಕರಿಯಪ್ಪ’ ಸಿನಿಮಾ ನೋಡಿ ಇಂಪ್ರೆಸ್​ ಆಗಿದ್ದೆ. ಇದೇ ವೇಳೆ ನಿರ್ದೇಶಕ ಕುಮಾರ್  ಒಂದು ಕಥೆ ಹೇಳಿದರು ಇಷ್ಟವಾಯಿತು,” ಎಂದು ಸಿನಿಮಾ ಆಯ್ಕೆ ಬಗ್ಗೆ ಹೇಳಿಕೊಳ್ಳುತ್ತಾರೆ ನವೀನ್​.

ಇದನ್ನೂ ಓದಿ: ಬಿಗ್​ಬಾಸ್​ ಗೆದ್ದರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳಲಿದ್ದಾರೆ ನವೀನ್​ ಸಜ್ಜು

ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಡುವಾಗ ಅನೇಕರು ಮಾಸ್​ ಕಥೆಗೆ ಪ್ರಾಮುಖ್ಯತೆ  ಕೊಡುತ್ತಾರೆ. ಆದರೆ, ನವೀನ್​ ಹಾಸ್ಯ ಪ್ರಧಾನ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ ಎನ್ನುವ ಅವರು, “ನನಗೆ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಇಲ್ಲ. ಆದರೆ, ಓರ್ವ ಕಲಾವಿದನಾಗಿ  ಪರಿಚಯಗೊಳ್ಳಬೇಕು. ಇದೇ ಕಾರಣಕ್ಕೆ ಈ ಕಥೆ ಆಯ್ಕೆ ಮಾಡಿಕೊಂಡೆ. ಮುಂದೆಯೂ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಕಥೆ ಆಯ್ದುಕೊಳ್ಳುತ್ತೇನೆ,” ಎಂದಿದ್ದಾರೆ.

ಶಿವಸೀನಾ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಮಾಪಕರಿಗಾಗಿ ಮಾತುಕತೆ ನಡೆಯುತ್ತಿದೆಯಂತೆ. ಈ ಚಿತ್ರಕ್ಕೆ ನವೀನ್​ ಸಜ್ಜು ಅವರೇ ಸಂಗೀತ ಸಂಯೋಜನೆ ಮಾಡುವ ಸಾಧ್ಯತೆ ಇದೆ. ಎಲ್ಲವನ್ನೂ ಶೀಘ್ರದಲ್ಲೇ ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
First published: