ಸ್ಯಾಂಡಲ್ವುಡ್ನಲ್ಲಿ ಕನ್ನಡದ (Sandalwood Cinema) ಹಾಡು ಮತ್ತು ಅದ್ಭುತ ಸಂಗೀತ ಅಂತ ಬಂದ್ರೆ, ಅಲ್ಲಿ ಮೊದಲು ಬರುವ ಹೆಸರು ಒಂದೇ ಅದುವೇ ಹಂಸಲೇಖ ಅನ್ನೋದು ಎಲ್ಲರಿಗೂ ಗೊತ್ತಿದೆ. ಇವರ ಸಂಗೀತದಲ್ಲಿ ಮತ್ತು ಸಾಹಿತ್ಯ ರಚನೆಯಲ್ಲಿ ಅದ್ಭುತ ಹಾಡುಗಳು ಬಂದಿದೆ. 1992 ರಲ್ಲಿ ತೆರೆಗೆ ಬಂದ ಬೆಳ್ಳಿಕಾಲುಂಗುರ (Belli Kalungura Movie) ಚಿತ್ರದಲ್ಲಿ ಒಂದು ಹಾಡು ಇದೆ. "ಕೇಳಿಸದೇ ಕಲ್ಲು ಕಲ್ಲಿನಲಿ" ಅನ್ನುವ ಈ ಗೀತೆ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಇದನ್ನ ಹೆಚ್ಚು ಹೆಚ್ಚು ಎಲ್ಲೆಡೆ ಕೇಳಲಾಗಿದೆ. ವಿಶೇಷವಾಗಿ ಕನ್ನಡ ಹಬ್ಬದಂದು ಈ ಗೀತೆ ಇರಲೇಬೇಕು. ಹಂಸಲೇಖ (Hamsalekha) ಅವರ ಸಂಗೀತ ನಿರ್ದೇಶನದ ಈ ಗೀತೆಯನ್ನ ಅಸಲಿಗೆ ಬರೆದಿರೋದು ಯಾರು? ಸಾಮಾನ್ಯವಾಗಿ (Kannada Music Director) ಹಂಸಲೇಖ ತಮ್ಮ ಸಂಗೀತಕ್ಕೆ ತಾವೇ ಗೀತೆಯನ್ನ ರಚಿಸುತ್ತಲೇ ಬಂದಿದ್ದಾರೆ.
ಆ ಹಿನ್ನೆಲೆಯಲ್ಲಿ ಈ ಗೀತೆಯನ್ನು ಅವರೇ ಬರೆದಿದ್ದಾರೆ ಅನ್ನೋ ನಂಬಿಕೆ ಇದೆ. ಆದರೆ ಅಸಲಿ ಕಥೆ ಬೇರೆ ಇದೆ.
ಬೆಳ್ಳಿ ಕಾಲುಂಗುರ ಚಿತ್ರದ ಕೇಳಿಸದೇ ಹಾಡು ಹುಟ್ಟಿದ್ದು ಹೇಗೆ?
ಕನ್ನಡದ ನಾಡಿನ ಬಗ್ಗೆ ಕನ್ನಡದ ಹೋರಾಟದ ಬಗ್ಗೆ ಕನ್ನಡಿಗರು ಸದಾ ಆ್ಯಕ್ಟಿವ್ ಆಗಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಅಂತಹ ಹೋರಾಟಗಾರರು ಅನೇಕರು. ಸಾ.ರಾ.ಗೋವಿಂದು ಕೂಡ ಒಬ್ಬ ಕನ್ನಡ ಹೋರಾಟಗಾರರೇ ಆಗಿದ್ದಾರೆ. ಆದರೆ ಆಗಿನ್ನು ಇವರು ಚಿತ್ರ ನಿರ್ಮಾಪಕರು ಆಗಿರಲಿಲ್ಲ. ಕನ್ನಡದ ಕೆಲಸದಲ್ಲಿಯೇ ಬ್ಯುಸಿಯಿದ್ದರು.
ಸಾ.ರಾ.ಗೋವಿಂದು ಅವರ ಕನ್ನಡದ ಕೆಲಸದಲ್ಲಿ ಸಾಹಿತಿ ದೊಡ್ಡರಂಗೇಗೌಡರು ಇರುತ್ತಿದ್ದರು. ಕನ್ನಡದ ಮೇಲೆ ಇವರಿಗೆ ಅಪಾರ ಗೌರ ಇತ್ತು. ಈಗಲೂ ಕನ್ನಡದ ಕೆಲಸಗಳನ್ನ ದೊಡ್ಡರಂಗೇಗೌಡರು ಮಾಡ್ತಾನೇ ಇದ್ದಾರೆ. ಸಿನಿಮಾ ಸಾಹಿತ್ಯದಲ್ಲೂ ಕನ್ನಡದ ಕಂಪನ್ನ ಹರಿಸುತ್ತಲೇ ಬಂದಿದ್ದಾರೆ.
ನಿದ್ದೆ ಪಂಪರು-ಗದ್ದೆಗೆ ಬಿದ್ದ ಜೀಪು-ತಮಾಷೆ ಮಾಡಿದ ರೈತರು
ಹೀಗೆ ಕನ್ನಡದ ಕೆಲಸ ಮೇಲೆ ದೂರದ ಊರೊಂದಕ್ಕೆ ಹೋಗಿದ್ದರು. ಅಲ್ಲಿ ವೇದಿಕೆ ಮೇಲೆ ಭಾಷಣ ಮಾಡಿ ವಾಪಸ್ ಆಗುತ್ತಿದ್ದರು. ರಾತ್ರಿ ಬೇರೆ ಎಲ್ಲರಿಗೂ ನಿದ್ದೆಯ ಪಂಪರು, ಡ್ರೈವರ್ ಪಕ್ಕದಲ್ಲಿ ಕುಳಿತ ವ್ಯಕ್ತಿನೂ ನಿದ್ದೆಗೆ ಜಾರಿದ್ದರು. ಇದರಿಂದ ಡ್ರೈವರ್ ಒಂದು ಅರೆಕ್ಷಣ ನಿದ್ದೆ ಹೋದ್ರೋ ಏನೋ, ಇದರಿಂದ ಜೀಪ್ ನೀರು ಕಟ್ಟಿದ್ದ ಗದ್ದೆಗೆ ಬಿದ್ದು ಹೋಯಿತು.
ಜೀಪ್ನಲ್ಲಿದ್ದ ಸಾ.ರಾ.ಗೋವಿಂದು, ದೊಡ್ಡರಂಗೇಗೌಡರು ಹೀಗೆ ಇನ್ನಿತರರು ಆಗ ಎಚ್ಚರಗೊಂಡ್ರು, ನಸುಕಿನ ಜಾವ ಬೆಳಗ್ಗೆ 4 ಗಂಟೆ ಹೊತ್ತಿಗೆ ರೈತರು ಹೊಲಕ್ಕೆ ಬರ್ತಾ ಇದ್ದರು. ಅವರ ಸಹಾಯದಿಂದ ಜೀಪ್ ಗದ್ದೆಯಿಂದ ಮೇಲಕ್ಕೆ ಎತ್ತಲಾಯಿತು. ಅದಕ್ಕೂ ಮುಂಚೆ ರೈತರು ಜೀಪ್ಗೆ ನೀರಡಿಕೆ ಆಗಿದೆ. ಅದಕ್ಕೆ ಗದ್ದೆಗೆ ಇಳಿದಿದೆ ಅಂತಲೂ ತಮಾಷೆ ಮಾಡಿದ್ದರು ನೋಡಿ.
ನಾನು ನಿರ್ಮಾಪಕನಾದ್ರೆ ನಿಮ್ಮಿಂದ ಒಂದು ಹಾಡು ಬರೆಸುವೆ
ಜೀಪು ಬಿದ್ದ ಸಮಯದಲ್ಲಿಯೇ ಸಾ.ರಾ.ಗೋವಿಂದು ಮತ್ತು ದೊಡ್ಡರಂಗೇಗೌಡರು ಮಾತನಾಡುತ್ತಲೇ ಇದ್ದರು. ಆಗಲೇ, ಸಾ.ರಾ.ಗೋವಿಂದು ಒಂದು ಮಾತು ಹೇಳಿದ್ದರು. "ಮೇಷ್ಟ್ರೇ ನಾನು ಚಿತ್ರದ ನಿರ್ಮಾಪಕನಾದರೇ ನಿಮ್ಮಿಂದಲೇ ಕನ್ನಡದ ಹಾಡು ಬರೆಸುತ್ತೇನೆ ಎಂದು ಹೇಳಿದ್ದರು."
ಸಾ.ರಾ.ಗೋವಿಂದು ಅವರಿಗೆ ಅದೃಷ್ಟ ಕೂಡಿ ಬಂತು. ಕನ್ನಡದ ಹೋರಾಟಗಾರ ಸಾ.ರಾ.ಗೋವಿಂದು ಅವರು ನಿರ್ಮಾಪಕರಾದರು. ಮಾಲಾಶ್ರೀ, ಸುನಿಲ್ ಅಭಿನಯದ ಬೆಳ್ಳಿಕಾಲುಂಗುರ ಚಿತ್ರವನ್ನ ನಿರ್ಮಿಸಲು ಸಜ್ಜಾದರು. ಹಂಸಲೇಖ ಈ ಚಿತ್ರಕ್ಕೆ ಸಂಗೀತ ಮತ್ತು ಸಾಹಿತ್ಯ ಬರೆಯೋದು ಅಂತಲೇ ಫಿಕ್ಸ್ ಆಯಿತು.
ಆ ಒಂದು ಗೀತೆ ಬಿಟ್ಟು ಬಿಡಿ, ಉಳಿದ ಗೀತೆ ಬರೆದುಕೊಳ್ಳಿ
ಬೆಳ್ಳಿಕಾಲುಂಗುರ ಚಿತ್ರದ ಎಲ್ಲ ಹಾಡುಗಳನ್ನ ಹಂಸಲೇಖ ಬರೆದಿದ್ದಾರೆ. ಆದರೆ ಸಾ.ರಾ.ಗೋವಿಂದು ಹೇಳಿದ್ದರಿಂದಲೇ ಕೇಳಿಸದೇ ಕಲ್ಲು ಕಲ್ಲಿನಲಿ ಹಾಡನ್ನ ಮಾತ್ರ ಹಂಸಲೇಖ ಬರೆಯಲಿಲ್ಲ. ಆದರೂ ಈ ಗೀತೆಯನ್ನ ಇವರೇ ಬರೆದಿದ್ದಾರೆ ಅನ್ನೋ ನಂಬಿಕೆ ಹೆಚ್ಚಿನ ಜನಕ್ಕೆ ಇದೆ.
ಆದರೆ ಈ ಗೀತೆಯನ್ನ ಆಲೆಮನೆ ಚಿತ್ರದ "ನಮ್ಮೂರ ಮಂದಾರ ಹೂವೆ" ಹಾಡು ಬರೆದಿದ್ದ ಅದೇ ದೊಡ್ಡರಂಗೇಗೌಡರು ಬರೆದಿದ್ದಾರೆ. ಡೈರೆಕ್ಟರ್ ಕೆ.ವಿ.ರಾಜು, ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಸಾ.ರಾ.ಗೋವಿಂದು ಒಂದು ಹೋಟೆಲ್ನಲ್ಲಿ ಭೇಟಿಯಾದರು. ಭೇಟಿಯಾಗಿ ಕನ್ನಡ ನುಡಿಯ ಹಾಡು ಬರೆಯುವಂತೆ ಹೇಳಿದ್ದರು.
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಬರೆದು ಕೊಟ್ಟರು
ದೊಡ್ಡರಂಗೇಗೌಡರು ಈ ಒಂದು ಹಾಡು ಬರೆಯಲು ಒಪ್ಪಿಕೊಂಡರು. 2 ರಿಂದ 3 ದಿನಗಳ ಸಮಯದಲ್ಲಿ ಇಡೀ ಹಾಡು ರೆಡಿ ಆಯಿತು. ಹಂಸಲೇಖ ಕೊಟ್ಟ ಟ್ಯೂನ್ಗೇನೆ ದೊಡ್ಡರಂಗೇಗೌಡರು ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಹಾಡು ಬರೆದುಕೊಟ್ಟರು.
ಬೆಳ್ಳಿಕಾಲುಂಗುರ ಚಿತ್ರದಲ್ಲಿ ಈ ಗೀತೆ ವಿಶೇಷವಾಗಿಯೇ ಮೂಡಿ ಬಂತು. ಈ ಒಂದು ಗೀತೆಯನ್ನು ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದರು. ಗಾಯಕಿ ಚಿತ್ರ ಕಂಠಿಸಿರಿಯಲ್ಲೂ ಈ ಗೀತೆ ಮೂಡಿ ಬಂತು. ಕನ್ನಡದ ನಾಡಿನ ಹಬ್ಬಗಳಲ್ಲಿ ಈ ಗೀತೆ ಖಾಯಂ ಆಗಿಯೇ ಪ್ಲೇ ಆಗುತ್ತಿತ್ತು.
ಇದನ್ನೂ ಓದಿ: Real Star Uppi: ರಿಯಲ್ ಸ್ಟಾರ್ ಉಪ್ಪಿ ಕಬ್ಜ ಖದರ್! ಪ್ರತಿ ಲುಕ್ನಲ್ಲಿ ಬೇಜಾನ್ ಪವರ್!
ಈಗಲೂ ಕನ್ನಡ ನಾಡಿನ ಕುರಿತ ಹಾಡುಗಳು ಅಂತ ಬಂದ್ರೆ, ಆ ಪಟ್ಟಿಯಲ್ಲಿ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಹಾಡಿಗೆ ಮೊದಲ ಸ್ಥಾನ ಇದ್ದೇ ಇರುತ್ತದೆ. ಹಾಗೇನೆ ಇದು ಅತಿ ಹೆಚ್ಚು ಕೇಳಲ್ಪಟ್ಟ ಗೀತೆನೂ ಆಗಿದೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ