ಜಗ್ಗೇಶ್​​ ಮಾತು ನಿಜವಾಯಿತು: ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್, ಹೊಂಬಾಳೆ ಫೀಲ್ಮ್ಸ್​​ ವಿರುದ್ಧ ಆಕ್ರೋಶ

ಕನ್ನಡದಲ್ಲಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ, ಕನ್ನಡ ನಟರಿಂದಾಗಿ ಗುರುತಿಸಲ್ಪಡುತ್ತಿರುವ ಸಂಸ್ಥೆ ಹಾಗೂ ನಿರ್ದೇಶಕರು ಈಗ ಪರಭಾಷೆಯ ಖ್ಯಾತ ನಟನಿಗೆ ಮಣೆ ಹಾಕಿರುವುದು ಕನ್ನಡ ಅಭಿಮಾನಿಗಳನ್ನು ಕೆರಳಿಸಿದೆ.

ಹೊಂಬಾಳೆ ಫಿಲಂಸ್​ ನಿರ್ಮಾಣ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​

ಹೊಂಬಾಳೆ ಫಿಲಂಸ್​ ನಿರ್ಮಾಣ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​

 • Share this:
  'ಕೆಜಿಎಫ್'​ನಂತಹ ಸಿನಿಮಾ ನಿರ್ಮಿಸಿದ ಹೊಂಬಾಳೆ  ಫಿಲ್ಮ್ಸ್​ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್​ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಜಿಎಫ್​, ಯುವರತ್ನ ಸೇರಿದಂತೆ  ಕನ್ನಡದಲ್ಲಿ ಈಗಾಗಲೇ ಅತ್ಯತ್ತಮ ಚಿತ್ರ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ಂ ಈಗ ತೆಲುಗು ನಟ ಪ್ರಭಾಸ್​ ಸಿನಿಮಾ ಚಿತ್ರ ನಿರ್ಮಾಣಮಾಡುವ ಬಗ್ಗೆ ಇಂದು ಪೋಸ್ಟರ್​ ಹಂಚಿಕೊಂಡಿದೆ. ಇನ್ನು ಈ ಚಿತ್ರಕ್ಕೆ ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ.  'ಸಲಾರ್​' ಎಂಬ ಟೈಟಲ್​​ ಹೆಸರಿನ ಚಿತ್ರದ ಪೋಸ್ಟರ್​ ಅನ್ನು ಇಂದು ಹೊಂಬಾಳೆ ಫಿಲ್ಮ್ಸ್​ ಬಿಡುಗಡೆ ಮಾಡಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.  ಈ ಬೆನ್ನಲ್ಲೇ ಕಳೆದೊಂದು ವಾರದ ಹಿಂದೆ ನಟ ಜಗ್ಗೇಶ್​ ಅವರು ಆಡಿರುವ ಮಾತು ಪ್ರಸ್ತುತವಾಗಿದೆ. ಅವರು ಸರಿಯಾಗಿ ಹೇಳಿದ್ದರು ಎಂಬ ಮಾತು ಕೇಳಿ ಬಂದಿದೆ. 

  ಏನಂದಿದ್ದರೂ ಜಗ್ಗೇಶ್​

  'ಪ್ಯಾನ್​ ಇಂಡಿಯಾ ಸಿನಿಮಾ ನಮ್ಮನ್ನು ಉದ್ಧಾರ ಮಾಡಲ್ಲ. ಪ್ಯಾನ್​ ಇಂಡಿಯಾದಿಂದ ನಮ್ಮ ಕನ್ನಡಿಗರಿಗೆ ಕೆಲಸ ಇಲ್ಲ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ. ಯಾರನ್ನೊ ಮೆಚ್ಚಿಸಲು ಪ್ಯಾನ್​ ಇಂಡಿಯಾ ಸಿನಿಮಾ ಮಾಡುವ ಹಾಗಿದೆ' ಎಂದು ಚಿತ್ರಂಗದಲ್ಲಿ 40 ವರ್ಷ ಪೂರೈಸಿದ ನಟ ಜಗ್ಗೇಶ್​ ಹೇಳಿಕೆ ನೀಡಿದ್ದರು. ಆದರೆ, ಜಗ್ಗೇಶ್​ ಆಡಿದ ಈ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕನ್ನಡ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುವುದನ್ನು ವಿರೋಧಿಸಿ ನಟ ಜಗ್ಗೇಶ್​ ಮಾತನಾಡುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು.

  ನಿಜವಾಯಿತು ಜಗ್ಗೇಶ್​ ಮಾತು

  ಕೆಲವರಿಗೆ ಬೆಳೆಯುವವರೆಗೂ ಮಾತ್ರ ಕನ್ನಡ ಬೇಕು. ಬೆಳೆದಾದ ಮೇಲೆ ಕಂಡವರ ಕಾಲು ಹಿಡಿದು ಹೋಗುತ್ತಾರೆ ಎಂಬ ಮಾತನ್ನು ಈ ಹಿಂದೆ ಜಗ್ಗೇಶ್​ ಆಡಿದ್ದರು. ಆ ಮಾತು ಈಗ ಪ್ರಶಾಂತ್​ ನೀಲ್​ ಹಾಗೂ ಹೊಂಬಾಳೆ ಫಿಲ್ಮ್ಸ್​ ವಿಷಯದಲ್ಲಿ ನಿಜವಾಗಿದೆ ಎಂದು ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ.  ಕನ್ನಡದಲ್ಲಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ, ಕನ್ನಡ ನಟರಿಂದಾಗಿ ಗುರುತಿಸಲ್ಪಡುತ್ತಿರುವ ಸಂಸ್ಥೆ ಹಾಗೂ ನಿರ್ದೇಶಕರು ಈಗ ಪರಭಾಷೆಯ ಖ್ಯಾತ ನಟನಿಗೆ ಮಣೆ ಹಾಕಿರುವುದು ಕನ್ನಡ ಅಭಿಮಾನಿಗಳನ್ನು ಕೆರಳಿಸಿದೆ. ಇಲ್ಲೇ ಉತ್ತಮ ನಟರಿರಬೇಕಾದರೆ, ಯಾಕೆ ಪರಭಾಷಾ ನಟರಿಗೆ ಮಣೆ ಹಾಕುತ್ತಿದ್ದೀರಾ ಎಂಬ ಆಕ್ರೋಶ ವ್ಯಕ್ತವಾಗಿದೆ.

  ಹೊಂಬಾಳೆ ನಿರ್ಮಾಣದಲ್ಲಿ ತಯಾರಾಗುತ್ತಿರುವ ನಟ ಪುನೀತ್​ ರಾಜಕುಮಾರ್​ ಅಭಿನಯದ 'ಯುವರತ್ನ' ಚಿತ್ರದ ಬಹುನಿರೀಕ್ಷಿತ ಹಾಡು ಕೂಡ ಇಂದು ಬಿಡುಗಡೆಯಾಗಿದೆ. ಅಲ್ಲದೇ, ಪುನೀತ್​ ಹೊಂಬಾಳೆ ನಿರ್ಮಾಣದ ಸಲಾರ್​ ಚಿತ್ರದ ಪೋಸ್ಟರ್​ ಅನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಪುನೀತ್​ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂಬ ಕಾಮೆಂಟ್​ ವ್ಯಕ್ತವಾಗಿದೆ.
  Published by:Seema R
  First published: