Actress Jayanthi Death - ಅಭಿನಯ ಶಾರದೆ, ನಟಿ ಜಯಂತಿ ಅಸ್ತಂಗತ

Actress Jayanti Passed Away: ಕನ್ನಡ ಸೇರಿ ಆರು ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿನಯ ಶಾರದೆ ಎನಿಸಿದ್ದ ಜಯಂತಿ ಅವರು ಇನ್ನಿಲ್ಲವಾಗಿದ್ದಾರೆ. 76 ವರ್ಷದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ನಟಿ ಜಯಂತಿ

ನಟಿ ಜಯಂತಿ

  • Share this:
ಬೆಂಗಳೂರು (ಜುಲೈ 26): ಮನಮೋಹಕ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ನಟಿ ಜಯಂತಿ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಪ್ರಮುಖ ಕೊಂಡಿ ಕಳಚಿದೆ. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದೀರ್ಘಕಾಲದಿಂದ ಅನಾರೋಗ್ಯ ಹೊಂದಿದ್ದ ಅವರು ಮಗ ಕೃಷ್ಣಕುಮಾರ್ ಅವರನ್ನ ಅಗಲಿದ್ದಾರೆ. 1945, ಜನವರಿ 6ರಂದು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ ಆಗಿತ್ತು. 60ರಿಂದ 80ರ ದಶಕಗಳವರೆಗೆ ಸ್ಯಾಂಡಲ್​ವುಡ್​ನಲ್ಲಿ ನಾಯಕನಟಿಯಾಗಿ ಜನರನ್ನ ಪುಳಕಿತಗೊಳಿಸಿದ್ದ ಜಯಂತಿ ಅವರು ಕನ್ನಡ ಮಾತ್ರವಲ್ಲದೆ ಇನ್ನೂ ಐದು ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂಗ್ಲೀಷ್ ಭಾಷೆಯ ಒಂದು ಚಿತ್ರದಲ್ಲೂ ಅವರು ನಟಿಸಿದ್ದರು. ಅನೇಕ ಬಾರಿ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪುರಸ್ಕಾರಗಳನ್ನ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಅತ್ಯಂತ ದಿಟ್ಟ ಮತ್ತು ಸುಂದರಿ (ಬೋಲ್ಡ್ ಅಂಡ್ ಬ್ಯೂಟಿಫುಲ್) ಎಂದು ಖ್ಯಾತರಾಗಿದ್ದ ಅವರಿಗೆ ಅಭಿನಯ ಶಾರದೆ ಬಿರುದು ಕೂಡ ಚಿತ್ರರಂದವರು ನೀಡಿದ್ದರು.

1963ರಲ್ಲಿ ಬಿಡುಗಡೆಯಾದ ಜೇನು ಗೂಡು ಸಿನಿಮಾ ಜಯಂತಿ ಅವರ ಚೊಚ್ಚಲ ಕನ್ನಡ ಚಿತ್ರ. ಅದಕ್ಕೆ ಮೊದಲು ಅವರು 1960ರಲ್ಲಿ ಬಿಡುಗಡೆಯಾದ ಯಾನೈ ಪಾಗನ್ ತಮಿಳು ಚಿತ್ರ ಅವರ ಮೊದಲ ಸಿನಿಮಾ ಆಗಿದೆ. ಆ ಬಳಿಕ ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿ ಆನಂತರ ಸ್ಯಾಂಡಲ್​ವುಡ್​ನ ಜೇನುಗೂಡಿಗೆ ಕೈ ಹಾಕಿದರು. ಸ್ಯಾಂಡಲ್​ವುಡ್​ನಲ್ಲಿ ತಮ್ಮ ಅದ್ಭುತ ನಟನೆಯಿಂದ ಎರಡು ದಶಕಗಳ ಕಾಲ ಮೋಡಿ ಮಾಡಿದ್ದಾರೆ. ಎಂಬತ್ತರ ದಶಕದ ನಂತರ ಅವರು ಪೋಷಕ ಪಾತ್ರಗಳಲ್ಲಿ ನಟಿಸತೊಡಗಿದ್ದರು. 2011ರಲ್ಲಿ ಅವರು ಕೊನೆಯ ಸಿನಿಮಾ ನಟಿಸಿದ್ದು. ನಮಿತಾ ಐ ಲವ್ ಯೂ ಬಳಿಕ ಅವರು ಮತ್ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಕಿರುತೆರೆಯಲ್ಲೂ ಅವರು ಕಾಣಿಸಲಿಲ್ಲ. ಆಗಾಗ ಸಭೆ ಸಮಾರಂಭಗಳಿಗೆ ಕಾಣಿಸಿಕೊಳ್ಳುತ್ತಿದ್ದರು ಅಷ್ಟೇ.

ಪೇಕಟಿ ಶಿವರಾಮ್ ಅವರನ್ನ ವಿವಾಹವಾಗಿದ್ದ ಜಯಂತಿಗೆ ಕೃಷ್ಣ ಕುಮಾರ್ ಎಂಬ ಮಗ ಇದ್ದಾರೆ. ಅನು ಪ್ರಭಾಕರ್ ಸೊಸೆಯಾಗಿದ್ದರು. ಕುಟುಂಬದಲ್ಲಿ ಸಾಕಷ್ಟು ತೊಂದರೆ ಇದ್ದರೂ ಜಯಂತಿ ಕಷ್ಟಕಾಲದಲ್ಲೂ ನಗುನಗುತ್ತಾ ಇದ್ದರೆಂದು ಅನೇಕ ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Project K- Prabhas: ಪ್ರಭಾಸ್​-ದೀಪಿಕಾ ಅಭಿನಯದ ಸಿನಿಮಾದ ಚಿತ್ರೀಕರಣ ಆರಂಭ..!

ಜೇನು ಗೂಡು, ಕಲಾವತಿ, ಮರ್ಯಾದೆ ರಾಮಣ್ಣ. ಮಿಸ್ ಲೀಲಾವತಿ, ಎಡಕಲ್ಲು ಗುಡ್ಡದ ಮೇಲೆ, ಕಲ್ಲು ಸಕ್ಕರೆ, ಮಿಸ್ ಬೆಂಗಳೂರು, ಇಮ್ಮಡಿ ಪುಲಿಕೇಶಿ, ರೌಡಿ ರಂಗಣ್ಣ, ಶ್ರೀ ಕೃಷ್ಣ ದೇವರಾಯ, ದೇವರ ಮಕ್ಕಳು, ಕುಲ ಗೌರವ, ನಂದ ಗೋಕುಲ ಮೊದಲಾದವರು ಅವರು ನಟಿಸಿದ ಕೆಲ ಪ್ರಮುಖ ಚಿತ್ರಗಳು. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಅವರ ಅದ್ಭುತ ಅಭಿನಯಕ್ಕೆ 1973-74ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಮನಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಮಸಣದ ಹೂವು ಚಿತ್ರದಲ್ಲೂ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ಬಂದಿವೆ. ಆನಂದ್, ಟುವ್ವಿ ಟುವ್ವಿ ಟುವ್ವಿ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಪ್ರಶಸ್ತಿ ಬಂದಿದೆ. 2005ರಲ್ಲಿ ರಾಜಕುಮಾರ್ ಜೀವಿತಾವಧಿ ಸಾಧನೆ ಪ್ರಶಸ್ತಿ ಗೌರವ ಅವರಿಗೆ ಸಿಕ್ಕಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: