Sanchari Vijay: ರಾಷ್ಟ್ರ ಪ್ರಶಸ್ತಿ ಸಿಕ್ಕರೂ ಅವಕಾಶಕ್ಕಾಗಿ ಅಲೆಯುತ್ತಿದ್ದರು ಸಂಚಾರಿ ವಿಜಯ್​​

ಪ್ರಶಸ್ತಿ ಸಿಗಲಿ ಬಿಡಲಿ, ಆ ಪಟ್ಟಿಯಲ್ಲಿ ನನ್ನ ಹೆಸರಿದೆ. ಇದರಿಂದಲೇ ಹಲವು ಚಿತ್ರಗಳಲ್ಲಿ ಪಾತ್ರ ಸಂಪಾದಿಸಬಹುದು ಎಂದು ಅಂದಾಜಿಸಿಕೊಂಡಿದ್ದೆ

ಸಂಚಾರಿ ವಿಜಯ್

ಸಂಚಾರಿ ವಿಜಯ್

 • Share this:
  ಪಾತ್ರಕ್ಕಾಗಿ ಅಲೆಯುತ್ತಿದ್ದ ನಟ ಸಂಚಾರಿ ವಿಜಯ್​ಗೆ 'ನಾನು ಅವನಲ್ಲ ಅವಳು' ಚಿತ್ರ ಅವರ ಜೀವನದಲ್ಲಿ ಹೊಸ ತಿರುವು ಮೂಡಿಸಿದ್ದ ಚಿತ್ರ. ನಾಟಕಗಳ ಮೂಲಕ ಆದಾಗಲೇ ಅದ್ಭುತ ಕಲಾವಿದರಾಗಿ ಗುರುತಿಸಿಕೊಂಡಿದ್ದ ಸಂಚಾರಿ ವಿಜಯ್​ 'ಅರಿವು' ಚಿತ್ರದ ಮೂಲಕ ಚಿತ್ರರಂಗದ ಗಮನ ಸೆಳೆದಿದ್ದರು. 'ಒಗ್ಗರಣೆ' ಸಿನಿಮಾದಲ್ಲಿನ ಒಂದು ಪಾತ್ರದಿಂದ 'ನಾನು ಅವನಲ್ಲ ಅವಳು' ಪಾತ್ರಕ್ಕೆ ಆಯ್ಕೆಯಾಗಿದ್ದರು. ಬಿಎಸ್​ ಲಿಂಗದೇವರು ಅವರು ನನಗೆ ಪಾತ್ರಕ್ಕಾಗಿ ಕರೆ ಮಾಡಿದಾಗ ಚಿತ್ರದ ಹಿರೋ ನಾನೇ ಎಂದಾಗ ನಂಬಲಾಗಲಿಲ್ಲ.   ಇದೇ ಖುಷಿಯಿಂದ ನಾನು ಹೋಗಿ ಅವರ ಬಳಿ ಪಾತ್ರ ಕೇಳಿ ಒಂದು ನಿಮಿಷ ಮೌನವಾದೆ. ಇಂತಹ ಪಾತ್ರ, ಇದನ್ನು ಹೇಗೆ ಮಾಡೋದು ಎಂಬ ಆಲೋಚನೆ ಮೂಡಿತು. ಆದರೆ, ಈ ಪಾತ್ರ ಮಾಡುವುದರಿಂದ ಮನೆ ಬಾಡಿಗೆಯನ್ನು ಏಳು ಎಂಟು ತಿಂಗಳು ಕಟ್ಟುವ ಚಿಂತೆ ಇಲ್ಲ. ಮತ್ತಷ್ಟು ಸಮಸ್ಯೆ ಬಗೆಹರಿಯಲಿದೆ ಎಂಬ ಎಲ್ಲಾ ವಿಚಾರಗಳು ತಲೆಯಲ್ಲಿ ಬರಲಾರಂಭಿಸಿತು. ಬಳಿಕವೇ ಈ ಪಾತ್ರವನ್ನು ನಾನು ಒಪ್ಪಿದೆ.

  'ನಾನು ಅವನಲ್ಲ ಅವಳು' ಸಿನಿಮಾದ ಚಿತ್ರೀಕರಣದ ಮೊದಲ ದಿನ ಕೂಡ ನಿರ್ದೇಶಕರು ನನ್ನ ನಟನೆಗೆ ಓವರ್​ ಆಕ್ಟಿಂಗ್​ ಬೇಡ. ಸಹಜವಾಗಿ ನಟಿಸಿ ಎಂದು ಸಲಹೆ ನೀಡಿದರು. ಇದಾದ ಬಳಿಕ ಸಿನಿಮಾ ಹೀಗೆ ರಾಷ್ಟ್ರಪ್ರಶಸ್ತಿ ತಂದು ಕೊಡುತ್ತದೆ ಎಂಬ ಯಾವುದೇ ಆಲೋಚನೆ ನನಗೆ ಇರಲಿಲ್ಲ. ನನ್ನ ಜೀವನದಲ್ಲಿ ಇತಿಹಾಸವೇ ಸೃಷ್ಟಿಸುತ್ತದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿರುವ ನಟ ವಿಜಯ್​ ಭಾವುಕರಾಗಿದ್ದರು.

  ರಾಷ್ಟ್ರಪ್ರಶಸ್ತಿಗೆ ನಾನು ಆಯ್ಕೆಯಾಗಿದ್ದೇನೆ ಎಂಬುದೇ ನನಗೆ ದೊಡ್ಡ ಸಂತಸವಾಗಿತ್ತು. ಪ್ರಶಸ್ತಿ ಸಿಗಲಿ ಬಿಡಲಿ, ಆ ಪಟ್ಟಿಯಲ್ಲಿ ನನ್ನ ಹೆಸರಿದೆ. ಇದರಿಂದಲೇ ಹಲವು ಚಿತ್ರಗಳಲ್ಲಿ ಪಾತ್ರ ಸಂಪಾದಿಸಬಹುದು ಎಂದು ಅಂದಾಜಿಸಿಕೊಂಡಿದ್ದೆ. ಆದರೆ, ಮುಮ್ಮೂಟಿ, ಅಮಿರ್​ ಖಾನ್​ ನಂತಹರನ್ನು ಮೀರಿ ಆ ಪ್ರಶಸ್ತಿಗೆ ನಾನು ಆಯ್ಕೆಯಾದಾಗ ನಿಜಕ್ಕೂ ನಾನು ನಡುಗಿದ್ದೆ.

  ಇದನ್ನು ಓದಿ: ಸಂಚಾರಿ ವಿಜಯ್ ಇನ್ನೂ ಜೀವಂತ: ವೈದ್ಯ ಅರುಣ್ ನಾಯ್ಕ್ ಸ್ಪಷ್ಟನೆ..!

  ಪ್ರಶಸ್ತಿ ಸಿಕ್ಕ ಮೇಲೆ ಎಲ್ಲ ಬದಲಾದಂತೆ ಭಾಸವಾಯಿತು. ಎಲ್ಲರು ನನ್ನ ಪಾತ್ರ ಮೆಚ್ಚಿಕೊಂಡು ಹೊಗಳಿದರು. ನಟ ಪುನೀತ್​ ರಾಜ್​ಕುಮಾರ್​, ದರ್ಶನ್​, ಯಶ್​, ಸುದೀಪ್​ ಸೇರಿದಂತೆ ಚಿತ್ರರಂಗದ ಹಲವಾರು ನನ್ನ ನಟನೆಗೆ ತಲೆದೂಗಿ ಮಾತನಾಡಿದಾಗ ನಿಜಕ್ಕೂ ನನನಗೆ ಸಾರ್ಥಕ ಭಾವನೆ ಇತ್ತು. ಪ್ರಶಸ್ತಿ ಬಳಿಕ ಸಂದರ್ಶನ, ಕಾರ್ಯಕ್ರಮ ಹೀಗೆ ಏಳು ಎಂಟು ತಿಂಗಳು ಕಳೆದೆ. ಬಳಿಕ ನಿಧಾನವಾಗಿ ನನಗೆ ಪಾತ್ರಗಳೇ ಸಿಗದಂತೆ ಆದವು. ರಾಷ್ಟ್ರ ಪ್ರಶಸ್ತಿ ಪಡೆದ ನಟ ನಮ್ಮ ಚಿತ್ರದಲ್ಲಿ ಮಾಡುತ್ತಾನಾ ಎಂದು ಮೊದಲು ಸಿಗುತ್ತಿದ್ದ ಸಣ್ಣ ಪುಟ್ಟ ಪಾತ್ರಗಳು ಸಿಗದಂತೆ ಆದವು.

  ರಾಷ್ಟ್ರ ಪ್ರಶಸ್ತಿ ಬಳಿಕ ಸಿನಿಮಾ ಅವಕಾಶಗಳಿಲ್ಲದೇ ಕಷ್ಟ ಪಟ್ಟೆ, ಈ ವೇಳೆ ನನ್ನ ಚಿತ್ರಗಳು ಸೋಲು ಕಾಣಲಾರಂಭಿಸಿತು. ಇದರಿಂದ ಜೊತೆಗಿರುತ್ತೇನೆ ಎಂದವರೆಲ್ಲಾ ದೂರಾದರು. ಏಕಾಂಗಿಯಾದೆ. ಈ ಸೋಲು ಕಷ್ಟ ಎಲ್ಲಾ ನನಗೆ ಹೊಸದಲ್ಲ. ಕಾರಣ ಇಂತ ಅದೆಷ್ಟೋ ಕಷ್ಟ, ಸೋಲು, ನೋವು, ದುಃಖ ಕಂಡಿದೆ. ಕಷ್ಟ ಎಂದು ಇಂದು ನನ್ನ ತೊರೆದವರೆಲ್ಲಾ ಮುಂದೊಂದು ದಿನ ಸಂತೋಷದಲ್ಲಿ ಬಂದೇ ಬರುತ್ತಾರೆ ಎಂಬ ನಂಬಿಕೆ ಇತ್ತು. ಅದಕ್ಕಿಂತಲೂ ಮಿಗಿಲಾಗಿ ನಾನು ಮತ್ತೆ ಗೆಲ್ಲುತ್ತೇನೆ ಎಂಬ ಛಲ ಇದೆ ಎಂದಿದ್ದರು ನಟ ಸಂಚಾರಿ ವಿಜಯ್​​​.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:Seema R
  First published: